ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿಡಿಯೋಗೆ ಪಾಕಿಸ್ತಾನ ಪರ ಹಾಡು ಬಳಕೆ: ಆರೋಪಿಗಳ ಬಂಧನಕ್ಕೆ ಎಸ್ಪಿ ವಿಶೇಷ ತಂಡ ರಚನೆ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಿನ್ನೆಲೆ ಹಾಕಲಾದ ಟಿಪ್ಪು ಸುಲ್ತಾನ್ ಕಟೌಟ್ ವಿಡಿಯೋಗೆ ಪಾಕಿಸ್ತಾನ ಪರ ಹಾಡು ಬಳಸಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಇನ್‌ಸ್ಟಾಗ್ರಾಮ್ ಖಾತೆದಾರರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದ್ದು, ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಎಚ್ಚರಿಸಿದ್ದಾರೆ.

ಮುಖ್ಯಾಂಶಗಳು
- ಟಿಪ್ಪು ಕಟೌಟ್ ವಿಡಿಯೋಗೆ ಪಾಕಿಸ್ತಾನಿ ಹಾಡು ಬಳಸಿ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಮಾಡಲಾಗಿದೆ.
- ಕೋಮು ಪ್ರಚೋದನೆ ಮತ್ತು ದೇಶವಿರೋಧಿ ಕೃತ್ಯದಡಿ ಸೌಮೋಟೋ ಎಫ್‌ಐಆರ್ ದಾಖಲು ಮಾಡಲಾಗಿದೆ.
- ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದು ಕಠಿಣ ಕ್ರಮದ ಎಚ್ಚರಿಕೆ.
ಚಿಕ್ಕಮಗಳೂರು, ಆಗಸ್ಟ್ 24: ನಗರದ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ವಿಡಿಯೋಗೆ ಪಾಕಿಸ್ತಾನ ಸೇನೆಯ (ಮುಜಾಹಿದ್) ಬೆಂಬಲಿತ ಹಾಡನ್ನು ಬಳಸಿ ವೈರಲ್ ಮಾಡಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ದೇಶವಿರೋಧಿ ಕೃತ್ಯದ ವಿರುದ್ಧ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಜೈಲಿಗಟ್ಟುವಂತೆ ಒತ್ತಾಯಿಸಿವೆ.
ಘಟನೆಗೆ ಸಂಬಂಧಿಸಿದಂತೆ ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಧನರಾಜ್ ಅವರು ನೀಡಿದ ದೂರಿನನ್ವಯ ಪೊಲೀಸರು ಸ್ವಯಂಪ್ರೇರಿತ (Suo Motu) ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಹಾಗೂ 299 ಅಡಿಯಲ್ಲಿ ಕೋಮು ಪ್ರಚೋದನೆ ಮತ್ತು ದೇಶವಿರೋಧಿ ಚಟುವಟಿಕೆಯಡಿ ಪ್ರಕರಣ ದಾಖಲಿಸಲಾಗಿದೆ.
ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಪ್ರತಿಕ್ರಿಯೆ
ಈ ಪ್ರಕರಣದ ಕುರಿತು ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯ್ಮಾ ಅವರು, “ಬೆಳಿಗ್ಗೆ 5:45ರ ಸುಮಾರಿಗೆ ಈ ವಿಡಿಯೋ ಕುರಿತು ಮಾಹಿತಿ ಲಭ್ಯವಾಯಿತು. ಇನ್‌ಸ್ಟಾಗ್ರಾಮ್ ಖಾತೆಯ ಐಪಿ (IP) ವಿಳಾಸವನ್ನು ಟ್ರೇಸ್ ಮಾಡಲಾಗುತ್ತಿದ್ದು, ವಿಡಿಯೋ ಹಂಚಿಕೊಂಡವರನ್ನು ಗುರುತಿಸಲಾಗಿದೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್!
ನಗರ ಠಾಣೆಯಲ್ಲೇ ಮೊಕ್ಕಾಂ ಹೂಡಿರುವ ಎಸ್‌ಪಿ, ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಪಡೆದು ತನಿಖೆಯನ್ನು ತೀವ್ರಗೊಳಿಸಿದ್ದಾರೆ. “ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಶಾಂತಿ ಸಭೆ ನಡೆಸಿ, ಯಾವುದೇ ಪ್ರಚೋದನಕಾರಿ ಕೃತ್ಯ ಎಸಗದಂತೆ ಸೂಚಿಸಲಾಗಿತ್ತು. ಸೋಶಿಯಲ್ ಮೀಡಿಯಾ ಮೇಲೆ ನಮ್ಮ ಪೊಲೀಸರು ನಿರಂತರ ಕಣ್ಣಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಅಥವಾ ಕೋಮು ಪ್ರಚೋದನೆ ನೀಡುವ ಯಾವುದೇ ಪ್ರಯತ್ನ ನಡೆದರೂ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಲಾಗುವುದು” ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




