AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳಸ: ಗುಂಡಿಮಯ ರಸ್ತೆಯಲ್ಲಿ ಕೆಟ್ಟು ನಿಂತ ಆಂಬ್ಯುಲೆನ್ಸ್, ಎರಡು ಗಂಟೆ ಕಾಲ ನಡು ರಸ್ತೆಯಲ್ಲೇ ನರಳಾಡಿದ ಗರ್ಭಿಣಿ

ತುಂಬು ಗರ್ಭಿಣಿಯನ್ನು ಹೆರಿಗೆಗೆಂದು ನಿನ್ನೆ ಕೊಪ್ಪ ಆಸ್ಪತ್ರೆಗೆ ಕರೆದೊಯ್ಯುವಾಗ ಕಳಸ ಟು ಬಾಳೆಹೊನ್ನೂರು ಮಾರ್ಗದ ಹಳುವಳ್ಳಿ ಎಂಬಲ್ಲಿ ಗುಂಡಿಮಯವಾಗಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಮಹಿಳೆ ಎರಡು ಗಂಟೆ ಸಮಯ ಮಾರ್ಗ ಮಧ್ಯೆ ನರಳಾಡಿದ್ದಾರೆ.

ಕಳಸ: ಗುಂಡಿಮಯ ರಸ್ತೆಯಲ್ಲಿ ಕೆಟ್ಟು ನಿಂತ ಆಂಬ್ಯುಲೆನ್ಸ್, ಎರಡು ಗಂಟೆ ಕಾಲ ನಡು ರಸ್ತೆಯಲ್ಲೇ ನರಳಾಡಿದ ಗರ್ಭಿಣಿ
ಕೆಟ್ಟು ನಿಂತ ಆಂಬ್ಯುಲೆನ್ಸ್
TV9 Web
| Edited By: ಆಯೇಷಾ ಬಾನು|

Updated on:Feb 13, 2023 | 12:59 PM

Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮೂಲಭೂತ ಸೌಲಭ್ಯಗಳಿಂದ ಅದೆಷ್ಟೋ ಗ್ರಾಮಗಳು ಇಂದಿಗೂ ಕೂಡ ವಂಚಿತವಾಗಿವೆ. ಸಂಪರ್ಕ ರಸ್ತೆಗೆ ಆಗ್ರಹಿಸಿ ಸಾಲು ಸಾಲು ಪ್ರತಿಭಟನೆಗಳು, ಧರಣಿ ಸತ್ಯಾಗ್ರಹ ನಡೆಸಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ದಿವ್ಯ ನಿರ್ಲಕ್ಷ್ಯವನ್ನು ವಹಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎನ್ನವಂತೆ ಗುಂಡುಮಯವಾಗಿರುವ ರಸ್ತೆಯಿಂದ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಗರ್ಭಿಣಿ ಮಹಿಳೆ ಎರಡು  ಗಂಟೆಗಳ ಕಾಲ ನಡು ರಸ್ತೆಯಲ್ಲೇ ನರಳಾಟ ನಡೆಸಿರುವ ಮನಕಲಕುವ ಘಟನೆಗೆ ಸಾಕ್ಷಿ ಆಗಿದೆ.

ಎರಡು ಗಂಟೆ ಸಮಯ ಮಾರ್ಗ ಮಧ್ಯೆ ನರಳಾಟ

ತುಮಕೂರಿನಿಂದ ಬೆಂಗಳೂರಿಗೆ ಗರ್ಭಿಣಿ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಗರ್ಭಿಣಿಗೆ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾಗಿ ಹಸುಗೂಸು ಮೃತಪಟ್ಟು, ಇಂದು ಮಹಿಳೆಯೂ ಇಹಲೋಕವನ್ನು ತ್ಯಜಿಸಿರುವ ಘಟನೆ ಹಸಿಯಾಗಿರುವ ನಡುವೆಯೇ ರಸ್ತೆ ದುಸ್ಥಿತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲೂ ಗರ್ಭಿಣಿ ಮಹಿಳೆ ನರಳಾಟ ನಡೆಸಿರುವ ಘಟನೆ ನಡೆದಿದೆ. ತುಂಬು ಗರ್ಭಿಣಿಯನ್ನು ಹೆರಿಗೆಗೆಂದು ನಿನ್ನೆ ಕೊಪ್ಪ ಆಸ್ಪತ್ರೆಗೆ ಕರೆದೊಯ್ಯುವಾಗ ಕಳಸ ಟು ಬಾಳೆಹೊನ್ನೂರು ಮಾರ್ಗದ ಹಳುವಳ್ಳಿ ಎಂಬಲ್ಲಿ ಗುಂಡಿಮಯವಾಗಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಮಹಿಳೆ ಎರಡು ಗಂಟೆ ಸಮಯ ಮಾರ್ಗ ಮಧ್ಯೆ ನರಳಾಡಿದ್ದಾರೆ.ಮಹಿಳೆಯ ಸ್ಥಿತಿಯನ್ನು ಕಂಡು ಅದೇ ದಾರಿಯಲ್ಲೇ ಪ್ರಯಾಣ ಮಾಡುತ್ತಿದ್ದ ಸಹಪ್ರಯಾಣಿಕರು ಕಾರಿನಲ್ಲಿ ಬಾಳೆಹೊನ್ನೂರಿನ ತನಕ ಡ್ರಾಪ್ ಮಾಡಿದ್ದಾರೆ. ತದನಂತರ ಬಾಳೆಹೊನ್ನೂರಿನಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ತರಿಸಿ ಗರ್ಭಿಣಿಯನ್ನು ಕೊಪ್ಪಕ್ಕೆ ಕಳಿಸಲಾಯಿತು.ರಸ್ತೆ ದುಸ್ಥಿತಿಯಿಂದ‌ ಮಹಿಳೆ ಪ್ರಾಣಾಪಯದ ಸ್ಥಿತಿಗೂ ಕೂಡ ತಲುಪಿದ್ದರು. ಇದನ್ನು ಕಣ್ಣಾರೆ ಕಂಡ ಸ್ಥಳೀಯರು ಹಾಗೂ ಕುಟುಂಬ ವರ್ಗದಲ್ಲಿ ಹೆಚ್ಚಿನ ಆತಂಕ ಉಂಟಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಜೈನ್ ವಿಶ್ವವಿದ್ಯಾಲಯದಲ್ಲಿ ಬಿ.ಆರ್ ಅಂಬೇಡ್ಕರ್​​ರಿಗೆ ಅವಮಾನ: 7 ವಿದ್ಯಾರ್ಥಿಗಳ ಬಂಧನ

ಗಂಡು ಮಗುವಿಗೆ ಜನ್ಮ ನೀಡಿದ‌ ಮಹಿಳೆ

ಬಾಳೆಹೊನ್ನೂರು ಸಮೀಪದ ಮಾಗುಂಡಿಯ 26 ವರ್ಷದ ಶರಣ್ಯ ಎನ್ನುವ ಮಹಿಳೆಯನ್ನು ಹೆರಿಗೆಗೆಂದು ಕೊಪ್ಪದ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ನಲ್ಲಿ ನಿನ್ನೆ ಮಧ್ಯಾಹ್ನ ಕರೆದೊಯ್ಯಲಾಗುತ್ತಿತ್ತು. ಕಳಸ ಟು ಬಾಳೆಹೊನ್ನೂರು ಸಮೀಪದ ಹಳುವಳ್ಳಿ ಬಳಿ ಗುಂಡಿಬಿದ್ದ ರಸ್ತೆಯಲ್ಲಿ ಇಳಿದ ಆಂಬ್ಯುಲೆನ್ಸ್ ಮೇಲಕ್ಕೆ ಹತ್ತಿಲ್ಲ. ಗುಂಡಿಗೆ ಇಳಿದ ರಭಸಕ್ಕೆ ವಾಹನದ ಆಕ್ಸೆಲ್ ರಾಡ್ ತುಂಡಾಗಿದೆ. ದುರಸ್ತಿಗಾಗಿ ಆಂಬ್ಯುಲೆನ್ಸ್ ಅನ್ನು ಕಳಸಕ್ಕೆ ಎಳೆದು ತಂದು ತಕ್ಕ ಮಟ್ಟಿಗೆ ರಿಪೇರಿ ಮಾಡಿಸಿಕೊಂಡು ಮತ್ತೆ ಪ್ರಯಾಣ ಆರಂಭಿಸುವಷ್ಟರಲ್ಲಿ ಒಂದು ಗಂಟೆ ಕಳೆದಿದೆ. ರಿಪೇರಿಯಾದ ವಾಹನ ಸ್ವಲ್ಪ ದೂರ ಸಾಗುತ್ತಿದ್ದಂತೆ ಕಳಸದಲ್ಲೇ ಮತ್ತೆ ಕೆಟ್ಟುನಿಂತಿದೆ. ಕೊನೆಗೆ ಗರ್ಭಿಣಿಯನ್ನು ಬಾಳೆಹೊನ್ನೂರಿನಲ್ಲಿ ಮತ್ತೊಂದು ಆಂಬ್ಯುಲೆನ್ಸ್  ಕರೆಸಿ ಕೊಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಂಬ್ಯುಲೆನ್ಸ್ ನಲ್ಲಿ ಕೊಪ್ಪ ತಾಲ್ಲೂಕಿನ ಆಸ್ಪತ್ರೆಗೆ ದಾಖಲು ಮಾಡಿದ ತಕ್ಷಣ ಮಹಿಳೆಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದರು. ಇದರ ಪರಿಣಾಮ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದು ತಾಯಿ,  ಮಗು ಆರೋಗ್ಯವಾಗಿದ್ದಾರೆ.

ಗುಂಡಿಮಯ ರಸ್ತೆಯಲ್ಲಿ ಜನರ ಪರದಾಟ

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ರಸ್ತೆಗಳು ಗುಂಡಿಮಯವಾಗಿದ್ದು ಜನರು ನಿತ್ಯವೂ ಪರದಾಡುವ ಸ್ಥಿತಿ ಬಂದಿದೆ. ಅದರಲ್ಲೂ ಹೊರನಾಡು, ಕುದುರೆಮುಖಕ್ಕೆ ತೆರಳುವ ಪ್ರವಾಸಿಗರು, ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಧಿಗೆ ತೆರಳುವ ಭಕ್ತರು ಹಿಡಿ ಶಾಪಹಾಕುವ ಮಟ್ಟಿಗೆ ರಸ್ತೆ ದುಸ್ಥಿತಿಗೆ ತಲುಪಿದೆ. ಕನಿಷ್ಟಪಕ್ಷ ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಮುಚ್ಚುವಂತೆ ಕೆಲಸಕ್ಕೂ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ, ಇದರ ಪರಿಣಾಮ ನಿತ್ಯವೂ ಇದೇ ರಸ್ತೆಯಲ್ಲಿ ಸಂಚಾರಿಸುವ ಜನರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಕಳಸದಿಂದ ಬಾಳೆಹೊನ್ನೂರು ಮತ್ತು ಕಳಸ- ಕುದುರೆಮುಖ – ಎಸ್.ಕೆ. ಬಾರ್ಡರ್ ಹೋಗುವ ರಸ್ತೆಯ ದುಸ್ಥಿತಿ ಪ್ರಯಾಣಿಕರನ್ನು ಹೈರಾಣಾಗಿಸಿದೆ. ಕೇವಲ 12 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚಿನ ಸಮಯ ಬೇಕಿದೆ. ರಸ್ತೆ ದುಸ್ಥಿತಿಯಿಂದ ಅಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮವಾಗಿ ಮಹಿಳೆ ಎರಡು ಗಂಟೆಗೂ ಹೆಚ್ಚುಕಾಲ ಕೆಟ್ಟುನಿಂತ ವಾಹನದಲ್ಲೇ ನರಳಾಡಿದ್ದಾರೆ.ಸರ್ಕಾರ, ಜಿಲ್ಲಾಡಳಿತ ,ಜನಪ್ರತಿನಿಧಿಗಳು ಉತ್ಸವಗಳನ್ನು ಮಾಡುವಲ್ಲಿ ತೋರಿಸುವ ಆಸಕ್ತಿಯನ್ನು ಕನಿಷ್ಠ ಪಕ್ಷ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದರೆ ಇಂಥ ಸಮಸ್ಯೆಗಳಿಂದ ಮುಕ್ತಿ ಆದ್ರೂ ಕಾಣಬಹುದು ಎನ್ನುವುದು ಜನರ ಆಗ್ರಹವಾಗಿದೆ.

ವರದಿ: ಅಶ್ವಿತ್,  TV9 ಚಿಕ್ಕಮಗಳೂರು 

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:59 pm, Mon, 13 February 23

Follow Us
TV9 Web
TV9 Web

TV9 Kannada

Read More