ಚಿಕ್ಕಮಗಳೂರು ಮಳೆ ಅವಾಂತರ: ಪ್ರಪಾತಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪ ಈ ಘಟನೆ ನಡೆದಿದ್ದು, ಬಸ್ 30 ಅಡಿ ಪ್ರಪಾತಕ್ಕೆ ಉರುಳಿದೆ. 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಬಸ್‌ನಲ್ಲಿ 60 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು, ಏಪ್ರಿಲ್ 09: ಚಿಕ್ಕಮಗಳೂರು (Chikamagalur) ಜಿಲ್ಲೆಯಲ್ಲಿ ಮಳೆರಾಯನ (Rain) ಆರ್ಭಟ ಮುಂದುವರೆದಿದೆ. ಭಾರಿ ಮಳೆಯಿಂದ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮನೆಯ ಮೇಲೆ ಬಿದ್ದು 30 ಅಡಿ ಪ್ರಪಾತಕ್ಕೆ ಉರುಳಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಜಲದುರ್ಗಾ ಬಳಿ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.
ಗಾಯಾಳುಗಳನ್ನು ಕೊಪ್ಪ ಮತ್ತು ಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಬಸ್ ಬಿದ್ದ ಪರಿಣಾಮ ಪುಟ್ಟಪ್ಪ ಪೂಜಾರಿ ಅವರಿಗೆ ಸೇರಿದ ಮನೆ ಸಂಪೂರ್ಣ ಜಖಂಗೊಂಡಿದೆ. ಬಸ್‌ನಲ್ಲಿ 60 ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್ ಬೆಂಗಳೂರು ಡಿಪೋಗೆ ಸೇರಿದೆ. ಸ್ಥಳಕ್ಕೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಭೇಟಿ ನೀಡಿ ಮಾಹಿತಿ ಪಡೆದರು.
ಸರಣಿ ಅಪಘಾತದಲ್ಲಿ ಇಬ್ಬರ ಸಾವು
ವಿಜಯಪುರ: ನಿಡಗುಂದಿ ಪಟ್ಟಣದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿ ಬೈಕ್ಗೆ ಡಿಕ್ಕಿಯಾಗಿ ಬಳಿಕ ಆ್ಯಂಬುಲೆನ್ಸ್ಗೆ ಗುದ್ದಿದೆ. ಬೈಕ್ನಲ್ಲಿದ್ದ ಬಿಎಸ್ಎಫ್ ಯೋಧ ಮೌನೇಶ್ ರಾಠೋಡ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ಚಾಲಕ, ಕೇರಳದ ಕೊಟ್ಟಾಯಂ ನಿವಾಸಿ ರಿತೇಶ್ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸರಣಿ ಅಪಘಾತದಲ್ಲಿ ಆ್ಯಂಬುಲೆನ್ಸ್ ಸಹಾಯಕ, ಲಾರಿ ಚಾಲಕ, ಕ್ಲೀನರ್ಗೂ ಸಣ್ಣಪುಟ್ಟ ಗಾಯವಾಗಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ದಾಟುವ ವೇಳೆ ಬೈಕ್ಗೆ ಲಾರಿ ಡಿಕ್ಕಿಯಾಗಿದೆ. ಬೈಕ್ ಅನ್ನು ಎಳೆದುಕೊಂಡು ಹೋದ ಲಾರಿ ಎದುರಿನ ಆಂಬ್ಯುಲೆನ್ಸ್ಗೆ ಗುದ್ದಿದೆ. ಹಿಂದಿನಿಂದ ಲಾರಿ ಡಿಕ್ಕಿಯಾದ ರಭಸಕ್ಕೆ ಮುಂದೆ ಹೋಗುತ್ತಿದ್ದ ಮತ್ತೊಂದು ಲಾರಿಗೆ ಆ್ಯಂಬುಲೆನ್ಸ್ ಗುದ್ದಿದೆ. ನುಜ್ಜುಗುಜ್ಜಾದ ಆಂಬ್ಯುಲೆನ್ಸ್ನಲ್ಲಿ ಸಿಲುಕಿದ್ದ ಚಾಲಕ ಹಾಗೂ ಸಹಾಯಕನನ್ನು ಕ್ರೇನ್ ಸಹಾಯದಿಂದ ಪೊಲೀಸರು ಹೊರ ತೆಗೆದಿದ್ದಾರೆ.
ಇದನ್ನೂ ಓದಿ: ಪಕ್ಕದ ಊರಿಗೆ ಪಾತ್ರೆ ಕೊಟ್ಟಿದ್ದಕ್ಕೆ ಗ್ರಾಮದ ಮುಖ್ಯಸ್ಥನಿಗೆ ದಂಡ, ಬಹಿಷ್ಕಾರ ಶಿಕ್ಷೆ!
ಸಿಡಿಲು ಬಡಿದು ವ್ಯಕ್ತಿ ಸಾವು
ರಾಯಚೂರು: ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಸಿಡಿಲು ಬಡಿದು ರಾಮಣ್ಣ ನಾಯಕ (25) ಎಂಬುವರು ಮೃತಪಟ್ಟಿದ್ದಾರೆ. ಇನ್ನು, ಸಿಡಿಲು ಬಡಿದು ಗಾಯಗೊಂಡ ಬಸವರಾಜ್ ಎಂಬುವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Wed, 9 April 25