ಡಿಕೆ ಶಿವಕುಮಾರ್​ ನಟರಾಗಿದ್ದರೆ ಆಸ್ಕರ್ ಪ್ರಶಸ್ತಿ ಪಕ್ಕಾ: ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯ

ಡಿ.ಕೆ ಶಿವಕುಮಾರ್ ಅವರಿಗೆ ಬೈ ಬರ್ತ್ ಬಂದಿದೆ. ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದು ಬಿಟ್ಟಿದ್ದಾರೆ. ಆದರೆ ಅವರಿಗೆ ಹೀರೋ ಆಗುವ ವಯಸ್ಸು ಮುಗಿದು ಹೋಗಿದೆ. ಆದರೆ ಪ್ರಯತ್ನಪಟ್ಟರೆ ಪೋಷಕ ಪಾತ್ರಗಳು ಸಿಗುತ್ತದೆ.

ಡಿಕೆ ಶಿವಕುಮಾರ್​ ನಟರಾಗಿದ್ದರೆ ಆಸ್ಕರ್ ಪ್ರಶಸ್ತಿ ಪಕ್ಕಾ: ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯ
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ, ಬಿಜೆಪಿ ನಾಯಕ ಸಿ.ಟಿ.ರವಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Oct 02, 2022 | 4:57 PM

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ ಒಳಗಡೆ ಇಂತಹ ಕಲಾವಿದ ಇದ್ದನೆಂದು ನಾನು ಅಂದುಕೊಂಡಿರಲಿಲ್ಲ. ಅವರ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ ಕಣ್ಣೀರಿಗೆ ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ. ಬಣ್ಣ ಹಾಕದೇ, ಗ್ಲಿಸರಿನ್ ಹಾಕದೇ ಕಣ್ಣೀರು ಹಾಕುವ ನಟನೆ ಅವರಿಗೆ ಒಲಿದು ಬಂದಿದೆ. ನಟನೆ ಡಿ.ಕೆ ಶಿವಕುಮಾರ್ ಅವರಿಗೆ ಬೈ ಬರ್ತ್ ಬಂದಿದೆ. ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದು ಬಿಟ್ಟಿದ್ದಾರೆ. ಆದರೆ ಅವರಿಗೆ ಹೀರೋ ಆಗುವ ವಯಸ್ಸು ಮುಗಿದು ಹೋಗಿದೆ. ವಿಲನ್ ಆಗೋಕೂ ತಾಕತ್ತು ಇಲ್ಲದಂತಾಗಿದೆ. ಆದರೆ ಪ್ರಯತ್ನಪಟ್ಟರೆ ಪೋಷಕ ಪಾತ್ರಗಳು ಸಿಗುತ್ತದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಕಾಂಪಿಟೇಟರ್ ಹುಟ್ಕೊಂಡಿದ್ದಾರೆ. ರಿಷಬ್ ಶೆಟ್ಟಿಗೂ ಅವಕಾಶ ಸಿಗದಂತೆ ಡಿ.ಕೆ. ಶಿವಕುಮಾರ ನಟನೆ ಮಾಡಿದ್ದಾರೆ. ಇನ್ನು ಮುಂದೆ ಪ್ರಶಸ್ತಿ ಏನಿದ್ರೂ ಅವರ ಪಾಲಿಗೆ. ಲೇಟಾಗಿದೆ, ಆದರೆ ಕೂಡ ಕಡೆ ಅವಕಾಶ ಸಿಕ್ಕರೂ ಸಿಗಬಹುದು. ಸಿನಿಮಾದಲ್ಲಿ ನಟಿಸಲು ಡಿಕೆ ಶಿವಕುಮಾರ್ ಟ್ರೈ ಮಾಡೋದು ಒಳ್ಳೆಯದು ಎಂದು ಸಿಟಿ ರವಿ ವ್ಯಂಗ್ಯವಾಡಿದರು.

ಭಾರತವನ್ನು ತುಂಡು ಮಾಡುವಾಗ ಸಹಿ ಹಾಕಿದ್ದು ಕಾಂಗ್ರೆಸ್. ಕೋಟ್ಯಂತರ ಜೀವವನ್ನು ಮತಾಂಧರ ಕೈಗೆ ಕೊಟ್ಟು ಬಂದರು. ವಿಭಜಿತ ಭಾರತವನ್ನು ಹೋರಾಟಗಾರರು ನಿರೀಕ್ಷಿಸಿರಲಿಲ್ಲ. ವಿಭಜನೆಗೆ ಸಹಿ ಹಾಕಿದ್ದು ಅಪರಾಧ ಅಂತಾ ಕಾಂಗ್ರೆಸ್​ಗೆ ಅನ್ನಿಸ್ತಾ? ಈ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್​ ಪಾದಯಾತ್ರೆ ಮುಂದುವರಿಸಲಿ. ಕಾಂಗ್ರೆಸ್​ ಪಕ್ಷಕ್ಕೆ ನೀತಿ, ನಿಯತ್ತು, ನೇತೃತ್ವ ಯಾವುದೂ ಇಲ್ಲ ಎಂದು ವಾಗ್ದಾಳಿ ಮಾಡಿದರು.

ಸಿ.ಟಿ.ರವಿಗೆ ಮಾನವೀಯತೆ ಇದ್ರೆ ತಾನೇ: ಡಿ.ಕೆ.ಶಿವಕುಮಾರ್​

ಮೈಸೂರು: ಅವರಿಗೆ ನಾವು ನಿತ್ಯ ಪ್ರಶ್ನೆ ಕೇಳುತ್ತಿದ್ದೇವೆ ಅದಕ್ಕೆ ಉತ್ತರ ಕೊಡಲಿ. ಸಿ.ಟಿ.ರವಿಗೆ ಮಾನವೀಯತೆ ಇದ್ರೆ ತಾನೇ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಕೊವಿಡ್​​ ಸಂದರ್ಭದಲ್ಲಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಚಾಮರಾಜನಗರಕ್ಕೆ ಯಾವೊಬ್ಬ ಸಚಿವರು ಭೇಟಿ ನೀಡಲಿಲ್ಲ. 36 ಜನರು ಕೊವಿಡ್​ನಿಂದ ಮೃತಪಟ್ಟಿರುವ ಬಗ್ಗೆ ದಾಖಲೆ ಇದೆ. ಮೃತರ ಮನೆಗಳಿಗೆ ನಾನು ಭೇಟಿ ನೀಡಿದ್ದೇನೆ. ಕೊವಿಡ್​ನಿಂದ ಮೃತಪಟ್ಟ ಕುಟುಂಬಸ್ಥರ ನೋವು ನನಗೆ ಗೊತ್ತಿದೆ. ಬಿಜೆಪಿಯವರಿಗೆ ಕಣ್ಣು, ಕಿವಿ, ಹೃದಯ ಇಲ್ಲ. ಜನರಿಂದ ವ್ಯಕ್ತವಾಗುತ್ತಿರುವ ಸ್ಪಂದನ ನೋಡಿ ಹತಾಶರಾಗಿದ್ದಾರೆ ಎಂದು ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada