ಸಂತೋಷ್ ಆತ್ಮಹತ್ಯೆ ಹಿಂದೆ ಡಿಕೆಶಿ ಸಂಚು: ಕಾಳಿಮಠದ ಋಷಿಕುಮಾರ ಸ್ವಾಮೀಜಿ ಶಂಕೆ
ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಅನುಮಾನಾಸ್ಪದ ಸಾವಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈವಾಡ ಇರಬಹುದು ಎಂದು ಕಡೂರು ತಾಲ್ಲೂಕು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಶಂಕೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಅನುಮಾನಾಸ್ಪದ ಸಾವಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈವಾಡ ಇರಬಹುದು ಎಂದು ಕಡೂರು ತಾಲ್ಲೂಕು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಶಂಕೆ ವ್ಯಕ್ತಪಡಿಸಿದ್ದಾರೆ. ಸಂತೋಷ್ ಆತ್ಮಹತ್ಯೆ ಹಿಂದಿನ ಕಿಂಗ್ಪಿನ್ ಡಿ.ಕೆ.ಶಿವಕುಮಾರ್ ಏಕೆ ಆಗಿರಬಾರದು ಎಂದು ಪ್ರಶ್ನಿಸಿರುವ ಅವರು, ಈಶ್ವರಪ್ಪ ಅವರನ್ನು ಮುಗಿಸುವ ಕುತಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ಈ ಹಿಂದೆ ಜಾರಕಿಹೊಳಿ ಪ್ರಕರಣದಲ್ಲೂ ಡಿಕೆಶಿ ಕೈವಾಡವಿತ್ತು. ಯುವತಿಯನ್ನು ಬಳಸಿಕೊಂಡು ಜಾರಕಿಹೊಳಿ ರಾಜೀನಾಮೆ ಪಡೆದುಕೊಂಡಿದ್ದರು. ಹತಾಶೆಯಿಂದ ಅವರು ಇಂಥ ಕೆಲಸಗಳಿಗೆ ಮುಂದಾಗುತ್ತಿದ್ದಾರೆ ಎಂದು ಕಾಳಿಮಠದ ಸ್ವಾಮೀಜಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿವಾದದ ನಂತರ ಕಾಳಿಮಠದ ಸ್ವಾಮೀಜಿ ಹಲವು ಬಾರಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದರು. ಹಿಜಾಬ್ ಸಮರ್ಥಿಸಿಕೊಳ್ಳುವ ಭರದಲ್ಲಿ ಸಿದ್ದರಾಮಯ್ಯ ಸ್ವಾಮೀಜಿಗಳು ತಲೆಯ ಮೇಲೆ ಹಾಕಿಕೊಳ್ಳುವ ಬಟ್ಟೆಯನ್ನು ಪ್ರಶ್ನಿಸಿದ್ದರು. ಈ ಹೇಳಿಕೆಗೆ ಪ್ರತಿರೋಧ ತೋರಿದ್ದ ಕಾಳಿಮಠ ಸ್ವಾಮೀಜಿ, ಬಾಯಿಗೆ ಬಂದ ಹೇಳಿಕೆಗಳನ್ನು ಕೊಟ್ಟು ನಿಮ್ಮನ್ನು ನೀವು ಹಾಳುಮಾಡಿಕೊಳ್ಳುತ್ತಿದ್ದೀರಿ ಎಂದು ಆಕ್ಷೇಪಿಸಿದ್ದರು. ಮಾನ್ಯ ಸಿದ್ದರಾಮಯ್ಯನವರೇ ಎಂದು ಕರೆಯಬೇಕೆ ಅಥವಾ ಮಾನ ಇಲ್ಲದ ಸಿದ್ದರಾಮಯ್ಯ ಎಂದು ಕರೆಯಬೇಕೆ ಎಂದು ವ್ಯಂಗ್ಯವಾಡಿದ್ದರು.
ಇತ್ತೀಚಿನ ದಿನಗಳಲ್ಲಿ ಕಾಳಿ ಮಠದ ಋಷಿಕುಮಾರ ಸ್ವಾಮಿ ಉಗ್ರ ಹಿಂದುತ್ವ ಪ್ರತಿಪಾದನೆಯ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಮಸೀದಿಗಳಲ್ಲಿ ಮೊಳಗುವ ಆಜಾನ್ ಮಾದರಿಯಲ್ಲಿಯೇ ರಾಮಜಪ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಚುಂಚನಘಟ್ಟ ರಾಮಾಂಜನೇಯ ದೇವಾಲಯದ ಮೈಕ್ನಿಂದ ಸ್ವಾಮೀಜಿ ಆಜಾನ್ ರೀತಿಯಲ್ಲಿ ರಾಮಜಪಕ್ಕೆ ಮುಂದಾಗಿದ್ದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿತ್ತು. ನಂತರದ ದಿನಗಳಲ್ಲಿ ಇದು ದೊಡ್ಡ ವಿವಾದವಾಗಿ ಬೆಳೆಯಿತು.
ತಕ್ಷಣ 1 ಕೋಟಿ ಪರಿಹಾರ ಕೊಡಿ: ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ
ಬೆಳಗಾವಿ: ಉಡುಪಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗುತ್ತಿಗೆದಾರ ಸಂತೋಷ್ ನಿರ್ವಹಿಸಿರುವ ₹ 4 ಕೋಟಿ ಬಿಲ್ ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಡಸ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು. ಸಂತೋಷ್ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು. ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಆತ್ಮಹತ್ಯೆ ಪ್ರಕರಣದಲ್ಲಿ ಮೂವರ ವಿರುದ್ಧ ಎಫ್ಐಆರ್ ಆಗಿದ್ದರೂ, ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಮೂವರನ್ನೂ ಬಂಧಿಸಲು ಬೇಕಿರುವಷ್ಟು ಸಾಕ್ಷ್ಯಗಳು ಸಂತೋಷ್ ಮೊಬೈಲ್‌ನಲ್ಲಿ ಇದೆ. ಸಾಕ್ಷ್ಯ ತಿರುಚಲು ಹುನ್ನಾರ ನಡೆಯುತ್ತಿರುವ ಶಂಕೆಯಿಂದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಬಂಧಿಸಿ, ಶಿಕ್ಷೆ ವಿಧಿಸಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು. ಸಾಯುವಾಗಲೂ ಸಂತೋಷ್ ಪಾಟೀಲ್ ಕೇಸರಿ ಶಾಲು ಹಾಕಿದ್ದ. ಬಿಜೆಪಿ ಅಭಿಮಾನಿಯಾಗಿದ್ದ. ಆದರೂ ಬಿಜೆಪಿ ನಾಯಕರ ಮನಸ್ಸುಗಳು ಕರಗಲೇ ಇಲ್ಲವೇ? ಹೊಲಸು ರಾಜಕಾರಣ ಬಿಟ್ಟು ಅವರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಸ್ವಗ್ರಾಮ ತಲುಪಿದ ಸಂತೋಷ್ ಮೃತದೇಹ: ಬಡಸದಲ್ಲಿ ಕುಟುಂಬಸ್ಥರ ಆಕ್ರಂದನ
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ