ಕ್ರಿಕೆಟ್ ಆಟದಲ್ಲಿ ಮುನಿಸು, ಬುದ್ಧಿವಾದ ಹೇಳಿದ್ದಕ್ಕೆ ದ್ವೇಷ; ಕೊಲೆಗೆ ಯತ್ನಿಸಿ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ

ಹೆಡದಾಳು ಗ್ರಾಮದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭ ಯುವಕರ ನಡುವೆ ಸಣ್ಣ ಗಲಾಟೆ ನಡೆದಿದೆ. ಈ ವೇಳೆ ಕೆಲ ಯುವಕರು ಹುಡುಗನೊಬ್ಬನಿಗೆ ಹಲ್ಲೆ ಮಾಡಿದ್ದಾರೆ. ಇದನ್ನು ಕಂಡ ಚೇತನ್‍ ಕುಮಾರ್ ಗಲಾಟೆ ಬಿಡಿಸಲು ಮುಂದಾಗಿದ್ದು, ಹುಡುಗನಿಗೆ ಹಲ್ಲೆ ಮಾಡದಂತೆ ಬುದ್ದಿವಾದ ಹೇಳಿದ್ದಾರೆ.

ಕ್ರಿಕೆಟ್ ಆಟದಲ್ಲಿ ಮುನಿಸು, ಬುದ್ಧಿವಾದ ಹೇಳಿದ್ದಕ್ಕೆ ದ್ವೇಷ;  ಕೊಲೆಗೆ ಯತ್ನಿಸಿ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ
ಗುಂಡಿನ ದಾಳಿ ನಡೆಸಿಸುವ ಸ್ಥಳ ಪರಿಶೀಲಿಸಿದ ಪೊಲೀಸ್ ಸಿಬ್ಬಂದಿ

ಚಿಕ್ಕಮಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹತ್ಯೆಯ ಉದ್ದೇಶದಿಂದ ಮನೆಯ ಮೇಲೆ ಬಂದೂಕಿನಿಂದ ಗುಂಡಿನ ಸುರಿಮಳೆಗೈದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಡದಾಳು ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೆಡದಾಳು ಗ್ರಾಮದಲ್ಲಿ ಈ ಸಿನೀಮೀಯ ರೀತಿಯ ಘಟನೆ ನಡೆದಿದ್ದು, ಗ್ರಾಮದಲ್ಲಿ ಕಾಫಿ ಬೆಳೆಗಾರರಾಗಿರುವ ಚೇತನ್‍ ಕುಮಾರ್ ಎಂಬುವರ ಮನೆ ಮೇಲೆ ಅದೇ ಗ್ರಾಮದ ಹೋಮ್‍ಸ್ಟೇ ಒಂದರ ಮಾಲೀ ಕಿರಣ್ ಎಂಬಾತ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಧ್ಯರಾತ್ರಿ ಬಂದೂಕನ್ನು ತಂದು ಮನೆಯಿಂದ ಹೊರಗಡೆ ಬರುವಂತೆ ಆರೋಪಿ ಕಿರಣ್, ಚೇತನ್ ಮನೆಯವರಿಗೆ ಅವಾಜ್ ಹಾಕಿದ್ದರು ಎನ್ನಲಾಗಿದೆ. ಆದರೆ ಕಿರಣ್ ಕೈಯಲ್ಲಿ ಬಂದೂಕು ಇರೋದನ್ನು ನೋಡಿದ ಚೇತನ್ ಕುಟುಂಬ, ಮನೆಯಿಂದ ಹೊರಗಡೆ ಬರೋ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಈ ವೇಳೆ ಮನಸೋ ಇಚ್ಚೇ ಮನೆ ಬಾಗಿಲಿನ ಮೇಲೆ ಗುಂಡು ಹಾರಿಸಿ, ಮದ್ಯದ ನಶೆಯಲ್ಲಿದ್ದ ಕಿರಣ್ ಮನೆಯ ಒಳಗಡೆ ಇರೋರು ಸತ್ತಿದ್ದಾರೆಂದು ಭಾವಿಸಿ ಪರಾರಿಯಾಗಿದ್ದ ಎಂಬದು ಹೇಳಲಾಗಿದೆ.

ಹೆಡದಾಳು ಗ್ರಾಮದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭ ಯುವಕರ ನಡುವೆ ಸಣ್ಣ ಗಲಾಟೆ ನಡೆದಿದೆ. ಈ ವೇಳೆ ಕೆಲ ಯುವಕರು ಹುಡುಗನೊಬ್ಬನಿಗೆ ಹಲ್ಲೆ ಮಾಡಿದ್ದಾರೆ. ಇದನ್ನು ಕಂಡ ಚೇತನ್‍ ಕುಮಾರ್ ಗಲಾಟೆ ಬಿಡಿಸಲು ಮುಂದಾಗಿದ್ದು, ಹುಡುಗನಿಗೆ ಹಲ್ಲೆ ಮಾಡದಂತೆ ಬುದ್ದಿವಾದ ಹೇಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕಿರಣ್, ಚೇತನ್‍ ಕುಮಾರ್ ಜೊತೆ ಜಗಳವಾಗಿದೆ. ಅಲ್ಲದೇ ಈ ಘಟನೆ ಸಂಬಂಧ ಕಿರಣ್‍ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ ಚೇತನ್‍ ಕುಮಾರ್ ಅವರ ಸಹೋದರನೂ ಪೋಸ್ಟ್, ಕಾಮೆಂಟ್ ಹಾಕಿದ್ದಾರೆ. ಇದು ಕಿರಣ್‍ನನ್ನು ಕೆರಳಿಸಿದ್ದು, ಚೇತನ್‍ ಕುಮಾರ್ ಕುಟುಂಬಸ್ಥರಿಗೆ ಕರೆ ಮಾಡಿ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆಂದು ತಿಳಿದು ಬಂದಿದೆ.

ಪರಿಚಿತ ಬಂದೂಕಿನಿಂದ ಗುಂಡಿನ ದಾಳಿ
ಇದೇ ವಿಚಾರ ಸಂಬಂಧ 12ರ ಹೊತ್ತಿನಲ್ಲಿ ಮದ್ಯ ಸೇವಿಸಿದ್ದ ಕಿರಣ್‍ ಕುಮಾರ್ ತಮ್ಮ ಸಂಬಂಧಿ ನಾಗೇಶ್‍ ಗೌಡ ಎಂಬವರಲ್ಲಿ ಶಿಕಾರಿಗೆಂದು ಸಿಂಗಲ್ ಬ್ಯಾರಲ್‍ನ ಬಂದೂಕನ್ನು ಕೇಳಿ ಪಡೆದಿದ್ದಾರೆ. ಬಂದೂಕು ಪಡೆದವನೇ ಸೀದಾ ಚೇತನ್‍ ಕುಮಾರ್ ಮನೆ ಎದುರು ಆಗಮಿಸಿ ಮನೆಯಲ್ಲಿದ್ದವರನ್ನು ಹೊರಗೆ ಬರುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಕಿರಣ್ ಕೈಯಲ್ಲಿ ಬಂದೂಕು ಇರುವುದನ್ನು ಗಮನಿಸಿದ ಚೇತನ್ ಕುಮಾರ್ ಹಾಗೂ ಅವರ ತಂದೆ ಮಂಜನಾಥ್‍ಗೌಡ, ತಾಯಿ, ಸಹೋದರ, ಪತ್ನಿ ಹಾಗೂ ಮಗ ಮನೆಯಿಂದ ಹೊರಬಾರದೇ ಬಾಗಿಲು ಹಾಕಿಕೊಂಡು ಮನೆಯೊಳಗೆ ಉಳಿದುಕೊಂಡಿದ್ದಾರೆ.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕಿರಣ್ ಬಂದೂಕು ಎತ್ತಿಕೊಂಡು ಸಿನಿಮೀಯ ರೀತಿಯಲ್ಲಿ ಮನೆಯ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗರೆದಿದ್ದಾನೆ. ಮನೆ ಮುಂದೆ ನಿಂತಿದ್ದ ಕಾರಿನ ಮೇಲೂ ಗುಂಡು ಹಾರಿಸಿದ್ದಾನೆ. ಮನೆಯ ಬಾಗಿಲಿಗೆ ಗುರಿ ಇಟ್ಟು ಪದೇ ಪದೇ ಗುಂಡು ಹಾರಿಸಿದ್ದಾರೆ. ಬಾಗಿಲು ಸೀಳಿಕೊಂಡು ಬಂದ ಬಂದೂಕಿನ ಗುಂಡೊಂದು ಮನೆಯ ಹಿಂಬದಿಯ ಗೋಡೆಗೆ ಬಿದ್ದಿದ್ದು, ಈ ವೇಳೆ ಕಿಟಕಿ ಬಳಿ ನಿಂತಿದ್ದ ಚೇತನ್ ಅವರ ತಾಯಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮನೆಯಲ್ಲಿನ ಕಿರುಚಾಟ ಕೇಳಿಸಿಕೊಂಡ ಕಿರಣ್ ಗುಂಡೇಟಿನಿಂದ ಮನೆಯಲ್ಲಿದ್ದವರು ಸತ್ತಿದ್ದಾರೆಂದು ಭಾವಿಸಿ ರಾತ್ರೋರಾತ್ರಿ ಗ್ರಾಮ ತೊರೆದಿದ್ದಾನೆಂದು ತಿಳಿದು ಬಂದಿದೆ.

ಪೊಲೀಸರಿಗೆ ಕರೆ
ಬಳಿಕ ಚೇತನ್ ಕುಮಾರ್ ಪೊಲೀಸರಿಗೆ ಕರೆ ಮಾಡಿದ್ದರಿಂದ ಚಿಕ್ಕಮಗಳೂರು ಡಿವೈಎಸ್ಪಿ ಪ್ರಭು ಸೇರಿದಂತೆ ಮಲ್ಲಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಿರಣ್‍ಗೆ ಕರೆ ಮಾಡಿದ್ದಾರೆ. ಕಿರಣ್ ಅಷ್ಟರಲ್ಲಾಗಲೇ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ. ಚೇತನ್‍ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರಣ್‍ನನ್ನು ಬಂಧಿಸಲು ಬಲೆ ಬೀಸಿದ್ದು, ಸದ್ಯ ಆರೋಪಿ ಕಿರಣ್ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಲ್ಲಂದೂರು ಪೊಲೀಸರು ಹೆಮ್ಮಕ್ಕಿ ಗ್ರಾಮದ ಲೋಹಿತ್ ಎಂಬಾತನನ್ನು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಬಂಧಿಸಿದ್ದಾರೆ. ಬಂದೂಕು ನೀಡಿದ್ದ ನಾಗೇಶ್‍ಗೌಡ ಎಂಬವರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

“ಕ್ರಿಕೆಟ್ ಪಂದ್ಯಾವಳಿ ಸಂದರ್ಭ ನಡೆದ ಗಲಾಟೆಯಲ್ಲಿ ಜಗಳ ಬಿಡಿಸಲು ನಾವು ಹೋಗಿದ್ದೆವು. ಈ ಸಂದರ್ಭ ಕಿರಣ್ ನನ್ನ ಬಳಿ ಜಗಳಕ್ಕೆ ಬಂದಿದ್ದ. ಈ ವಿಚಾರ ಸಂಬಂಧ ತನ್ನ ಕುಟುಂಬಸ್ಥರ ವಿರುದ್ಧ ದ್ವೇಷ ಸಾಧಿಸಿದ್ದಾನೆ. ಫೇಸ್‍ಬುಕ್, ವಾಟ್ಸಪ್ ಗಳಲ್ಲಿ ಅವಾಚ್ಯ ಶಬ್ಧ ಬಳಸಿ ಪೋಸ್ಟ್, ಕಮೆಂಟ್ ಹಾಕಿದ್ದ. ನಾವು ಇದನ್ನು ಪ್ರಶ್ನಿಸಿದಾಗ ಕೊಲೆ ಬೆದರಿಕೆ ಹಾಕಿದ್ದ. ಆದರೆ ನಾವು ಕೊಲೆ ಮಾಡುವಷ್ಟು ಮುಂದುವರಿಯುತ್ತಾನೆಂದು ಊಹೆ ಮಾಡಿರಲಿಲ್ಲ. ನಾವು ಮನೆ ಬಾಗಿಲು ತೆರೆಯದಿದ್ದಾಗ ಮನೆ ಮೇಲೆ ಗುಂಡು ಹಾರಿಸಿದ್ದಾನೆ. ಮನೆಯ ಬಳಿ ಇದ್ದ ಕಾರಿಗೂ ಗುಂಡು ಹಾರಿಸಿದ್ದಾನೆ. ಮನೆ ಬಾಗಿಲಿಗೆ ಹೊಡೆದ ಗುಂಡೊಂದು ಮನೆಯ ಹಿಂಬದಿಯಿಂದ ಹೊರ ಹೋಗಿದೆ. ಮನೆಯಲ್ಲಿ ನಮ್ಮ ಮನೆಯ ಎಲ್ಲ ಸದಸ್ಯರೂ ಇದ್ದೆವು. ನಾವು ಸ್ಪಲ್ಪ ಯಾಮಾರಿದ್ದರೂ ಮನೆಯಲ್ಲಿ ಐದು ಹೆಣ ಬೀಳುತ್ತಿತ್ತು. ಮಲ್ಲಂದೂರು ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮನೆಯ ಮೇಲೆ ಗುಂಡು ಹಾರಿಸುವುದನ್ನು ಸಿನಿಮಾದಲ್ಲಿ ನೋಡಿದ್ದೆವು. ಈಗ ಕಣ್ಣೆದುರೇ ನಡೆದಿರುವುದರಿಂದ ನಮ್ಮ ಮನೆಯವರು ಮಾನಸಿಕವಾಗಿ ಕುಗ್ಗಿದ್ದಾರೆ. ಶಾಕ್‍ನಿಂದ ಇನ್ನೂ ಹೊರ ಬಂದಿಲ್ಲ. ಈ ಕೃತ್ಯ ಎಸಗಿದ ಕಿರಣ್ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮವಹಿಸಬೇಕು” ಎಂದು ಚೇತನ್‍ ಕುಮಾರ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Explainer: ದೇಶದಲ್ಲಿ ಕೊವಿಡ್ ಸಾವಿನ ಸಂಖ್ಯೆ ಏಕಾಏಕಿ ಏರಲು ಕಾರಣವೇನು?

Work From Home: ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಂ ಅವಕಾಶ ನೀಡಿದ ಫೇಸ್​ಬುಕ್
(Man starts gun fires in Chikmagaluru for silly reason police take action)