ಬಿಜೆಪಿ ಯುವ ಜಿಲ್ಲಾಧ್ಯಕ್ಷನಿಂದ ಅಶ್ಲೀಲ ಪದಬಳಕೆ: ಸಿಡಿದೆದ್ದ ಮುಸ್ಲಿಂ ಸಮುದಾಯ; ಬಂಧನಕ್ಕೆ ಡೆಡ್ಲೈನ್
ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅಶ್ಲೀಲ ಪದಬಳಕೆ ಆರೋಪ ಹಿನ್ನೆಲೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ವಿರುದ್ಧ ನಗರ ಪೊಲೀಸ್ ಠಾಣೆಗೆ ಮುಸ್ಲಿಂ ಸಮುದಾಯದ ಮುಖಂಡರು ದೂರು ನೀಡಿದ್ದು, ತಕ್ಷಣ ಬಂಧನಕ್ಕೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು, ಮೇ 22: ಕಾಫಿನಾಡು ಚಿಕ್ಕಮಗಳೂರಿನಲ್ಲಿ (chikkamagaluru) ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ನಡೆದ ಗಲಾಟೆ ಇದೀಗ ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಮುಸ್ಲಿಂ ಸಮುದಾಯದ ಬಗ್ಗೆ ಅಶ್ಲೀಲ ಪದಬಳಕೆ ಮಾಡಿ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಾಗಿದೆ. ತಕ್ಷಣವೇ ಸಂತೋಷ್‌ನನ್ನು ಬಂಧಿಸಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಪಟ್ಟು ಹಿಡಿದಿದ್ದಾರೆ.
ಮುಖ್ಯಾಂಶಗಳು
- ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
- ಮುಸ್ಲಿಂ ಸಮುದಾಯದ ವಿರುದ್ಧ ನಿಂದನೆ
- ಬಿಜೆಪಿ ಯುವ ಮುಖಂಡ ಸಂತೋಷ್ ವಿರುದ್ಧ ದೂರು
ಮುಸ್ಲಿಂ ಸಮುದಾಯದ ಬಗ್ಗೆ ಅಶ್ಲೀಲ ಪದಬಳಕೆ ಆರೋಪ
ಚಿಕ್ಕಮಗಳೂರಿನ ರಾಂಪುರದ ಬಳಿ MLC ಸಿ.ಟಿ.ರವಿ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದಿದ್ದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಸಂತೋಷ್, ಸಿಟಿ ರವಿ ಸಮ್ಮುಖದಲ್ಲೇ ಮುಸ್ಲಿಂ ಸಮುದಾಯದ ವಿರುದ್ಧ ಅತ್ಯಂತ ಅಶ್ಲೀಲ ಹಾಗೂ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ
ಇನ್ನು ವಿಡಿಯೋ ವೈರಲ್ ಬೆನ್ನಲ್ಲೇ ಮುಸ್ಲಿಂ ಸಮುದಾಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಖಂಡಿಸಿ ಸಮುದಾಯದ ಪ್ರಮುಖ ಮುಖಂಡರು ಒಟ್ಟಾಗಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಸಂತೋಷ್‌ನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಸಂತೋಷ್ ಬಂಧನಕ್ಕೆ ನಾಳೆವರೆಗೆ ಗಡುವು
ಇನ್ನು ಈ ಬಗ್ಗೆ ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾ ಮಾತನಾಡಿದ್ದು, ಗಲಾಟೆಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಸಂತೋಷ್ ಮಾತನಾಡಿದ್ದಾರೆ. ಇದು ಮುಸ್ಲಿಂ ಸಮುದಾಯದ ಘನತೆಗೆ ಧಕ್ಕೆಯಾಗಿದೆ. ನಾವು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಸಿದರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಇಡೀ ಮುಸ್ಲಿಂ ಸಮುದಾಯ ನಮ್ಮನ್ನು ಪ್ರಶ್ನೆ ಮಾಡುತ್ತಿದೆ. ನಾವು ನಾಳೆವರೆಗೆ ಕಾಯುತ್ತೇವೆ, FIR ಮಾಡಿ ಬಂಧಿಸಬೇಕು. ಇಲ್ಲಾಂದರೆ ಉಗ್ರ ಹೋರಾಟವನ್ನ ಮುಸ್ಲಿಂ ಸಮುದಾಯ ಮಾಡುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆ ಹಿನ್ನೆಲೆ
ರಸ್ತೆ ಕಾಮಗಾರಿಯ ಕ್ರೆಡಿಟ್ಗಾಗಿ ಕಾಫಿನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿನ್ನೆ ಹೈ ಡ್ರಾಮಾ ನಡೆದಿದೆ. ಬಿಜೆಪಿ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಕಾಂಗ್ರೆಸ್ ಅವಧಿಯಲ್ಲಿ ವರ್ಕ್ ಆರ್ಡರ್ ಪಡೆದು ಹಣ ಬಿಡುಗಡೆಯಾಗಿತ್ತು. ನಿನ್ನೆ ವೀಕ್ಷಣೆ ಮಾಡಲು ಬಂದ ಎಂಎಲ್ಸಿ ಸಿ.ಟಿ ರವಿ ಎದುರೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಚಿಕ್ಕಮಗಳೂರು ನಗರ ಸಮೀಪದ ರಾಂಪುರ ಗ್ರಾಮದಲ್ಲಿ ಹೈಡ್ರಾಮಾವೇ ನಡೆದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.





