ಕೊವಿಡ್ ಕಾರಣದಿಂದ ಖರ್ಚು ಹೆಚ್ಚಾಯ್ತು, ಬಜೆಟ್ ರೂಪಿಸುವುದೇ ಸವಾಲು ಎನಿಸಿತ್ತು

ಹಣಕಾಸು ಸಂಕಷ್ಟ ಪರಿಸ್ಥಿತಿಯಿಂದ ಹಲವು ಸರ್ಕಾರಿ ಕಾರ್ಯಕ್ರಮಗಳನ್ನು ಮೊಟಕುಗೊಳಿಸಬೇಕಾಯಿತು. ಕೊವಿಡ್ ಕಾರಣದಿಂದಾಗಿ ಖರ್ಚು ಹೆಚ್ಚಾಯಿತು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕೊವಿಡ್ ಕಾರಣದಿಂದ ಖರ್ಚು ಹೆಚ್ಚಾಯ್ತು, ಬಜೆಟ್ ರೂಪಿಸುವುದೇ ಸವಾಲು ಎನಿಸಿತ್ತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 18, 2022 | 12:52 PM

ಬೆಂಗಳೂರು: ಬಜೆಟ್ ಮಂಡಿಸುವಾಗ ನನಗೆ ನನ್ನದೇ ಆದ ಆತಂಕವಿತ್ತು. ಬಜೆಟ್ ರೂಪಿಸುವುದನ್ನು ನಾನು ಪರೀಕ್ಷೆ ಎಂದುಕೊಂಡಿದ್ದೆ. ಪರೀಕ್ಷೆಯಂತೆ ಬಜೆಟ್ ನನ್ನೆದುರು ಇತ್ತು. ಹಣಕಾಸು ಸಂಕಷ್ಟ ಪರಿಸ್ಥಿತಿಯಿಂದ ಹಲವು ಸರ್ಕಾರಿ ಕಾರ್ಯಕ್ರಮಗಳನ್ನು ಮೊಟಕುಗೊಳಿಸಬೇಕಾಯಿತು. ಕೊವಿಡ್ ಕಾರಣದಿಂದಾಗಿ ಖರ್ಚು ಹೆಚ್ಚಾಯಿತು. ಸಂಕಷ್ಟ ಪರಿಸ್ಥಿತಿ ಕಣ್ಣೆದುರು ಇದ್ದಾಗಲೂ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಿಲ್ಲ. ಬಜೆಟ್ ಗಾತ್ರವನ್ನು ಕಡಿಮೆ ಮಾಡಿಕೊಳ್ಳದೆ ಸಂಪನ್ಮೂಲ ಕ್ರೋಡೀಕರಣದ ಕಡೆಗೆ ಹೆಚ್ಚು ಗಮನ ಕೊಟ್ಟೆ ಎಂದು ವಿಧಾನ ಪರಿಷತ್​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆದಾಯ ಕುಗ್ಗಿದ್ದ ಸಂದರ್ಭದಲ್ಲಿ ನಾನು ಅಧಿಕಾರ ವಹಿಸಿಕೊಂಡೆ ಎಂದು ನೆನಪಿಸಿಕೊಂಡರು. ಶ್ರೀಮಂತರಿಂದ ಅಭಿವೃದ್ಧಿ ಆಗುತ್ತದೆ ಎನ್ನುವುದು ಒಂದು ಭ್ರಮೆ. ವಾಸ್ತವದಲ್ಲಿ ರಾಜ್ಯದ ಆರ್ಥಿಕತೆಯನ್ನು ಮುನ್ನಡೆಸುವವರು ಕೂಲಿಕಾರ್ಮಿಕರು ಮತ್ತು ರೈತರು. ಬಂಡವಾಳ ಬೇಕು ಎನ್ನುವುದನ್ನು ಒಪ್ಪುವವನು ನಾನು. ಆದರೆ ರಾಜ್ಯದ ಸಮಗ್ರ ಆರ್ಥಿಕ ಪರಿವರ್ತನೆ ಮಾಡುವವರು ಯಾರು ಎಂಬುದನ್ನು ಚಿಂತನೆ ಮಾಡಿ, 2022-23ರ ಬಜೆಟ್ ಮಂಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಕಲಿ ಬಸ್ ಟಿಕೆಟ್ ಬಗ್ಗೆ ಸದಸ್ಯ ಅರವಿಂದ ಅರಳಿ ಪ್ರಶ್ನೆ ಕೇಳಿದರು. ಕೊಪ್ಪಳ ಘಟಕದ ಬಸ್​ಗಳಲ್ಲಿ ನಕಲಿ ಟಿಕೆಟ್ ವಿತರಣೆಯಾಗಿರುವ ಬಗ್ಗೆ ಅವರು ಗಮನ ಸೆಳೆದರು. ಬಸ್​ ಟಿಕೆಟ್​ಗಳಲ್ಲಿ ಬೀದರ್​ನಲ್ಲಿ ₹ 60 ಲಕ್ಷ, ಕೊಪ್ಪಳದಲ್ಲಿ ₹ 36 ಲಕ್ಷ ಅವ್ಯವಹಾರವಾಗಿದೆ. ಅವ್ಯವಹಾರದ ಹಣ ವಸೂಲಿ ಮಾಡಿಲ್ಲ, ತಪ್ಪು ಮಾಡಿದ ಸಿಬ್ಬಂದಿ ಮೇಲೆ ಕ್ರಮವೂ ಆಗಿಲ್ಲ ಎಂದು ವಿಷಾದಿಸಿದರು. ಈ ಆರೋಪವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ತಳ್ಳಿಹಾಕಿದರು. ‘ನಕಲಿ ಬಸ್ ಟಿಕೆಟ್ ಬಳಸುತ್ತಿರುವ ವರದಿ ಸತ್ಯಕ್ಕೆ ದೂರವಾದುದು. ಬೀದರ್​ನ ₹ 60 ಲಕ್ಷ ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ. ಕೊಪ್ಪಳದಲ್ಲಿ ನಡೆದಿದ್ದ ಅವ್ಯವಹಾರ ಪ್ರಕರಣದಲ್ಲಿ ₹ 36 ಲಕ್ಷ ವಸೂಲಿ ಮಾಡಿದ್ದೇವೆ. ಇಲಾಖೆ ತನಿಖೆ ಮುಗಿದ ಬಳಿಕ ಶಿಸ್ತು ಕ್ರಮ ಜರುಗಿಸುತ್ತೇವೆ’ ಎಂದರು.

ಅಮಾನತುಗೊಂಡಿರುವ ಕೆಎಸ್‌ಆರ್‌ಟಿಸಿಯ 281 ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ ಸದಸ್ಯ ಪ್ರಕಾಶ್ ರಾಥೋಡ್ ಪ್ರಶ್ನಿಸಿದರು. ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಅಮಾನತಾದ ಎಲ್ಲರನ್ನೂ ವಾಪಸ್ ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ವಜಾಗೊಂಡವರು 1,505 ಜನರಿದ್ದಾರೆ. ಮಾನವೀಯ ದೃಷ್ಟಿಯಿಂದ ಅವರನ್ನು ಕೂಡ ತೆಗೆದುಕೊಳ್ಳುತ್ತೇವೆ. ಆದರೆ, ಕಾನೂನು ಪ್ರಕಾರ ಲೋಕಅದಾಲತ್‌ಗೆ ಹೋಗಲೇಬೇಕು. ಅಲ್ಲಿ ಇತ್ಯರ್ಥ ಆದವರನ್ನು ವಾಪಸ್ ಸೇರಿಸಿಕೊಂಡಿದ್ದೇವೆ ಎಂದರು.

ಬಿಎಂಟಿಸಿ ಮತ್ತು ಕೆಎಸ್ಆರ್​ಟಿಸಿ ಮುಷ್ಕರ ನಡೆದಾಗ ಮುಂಚೂಣಿಯಲ್ಲಿ ಕಾಣಿಸಿಕೊಂಡವರನ್ನು ವಜಾ ಮಾಡಲಾಗಿದೆ. ವಜಾ ಅಥವಾ ಅಮಾನತು ಮಾಡಿದವರನ್ನು ವಾಪಸ್ ಪಡೆಯುತ್ತಿಲ್ಲ. ಸಿಬ್ಬಂದಿಯ ಕುಟುಂಬ ಸದಸ್ಯರ ಮೇಲೆಯೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಎಲ್ಲರಿಗೂ ಮತ್ತೆ ಕೆಲಸಕ್ಕೆ ಬರಲು ಅವಕಾಶ ಕೊಡಿ. ಯಾಕೆ ತಾರತಮ್ಯ ಮಾಡ್ತೀರಿ? ನೌಕರರ ಕುಟುಂಬಕ್ಕೆ ಕಷ್ಟ ಯಾಕೆ ಕೊಡ್ತೀರಿ ಎಂದು ರಾಥೋಡ್ ಕೇಳಿದರು. ವಜಾಗೊಂಡವರ ಒಟ್ಟು ಸಂಖ್ಯೆ 1505 ಇದೆ. ಮುಷ್ಕರದಲ್ಲಿ ಭಾಗಿಯಾದವರನ್ನು ಮಾನವೀಯ ದೃಷ್ಟಿಯಿಂದ ಮರು ನೇಮಕ ಮಾಡುತ್ತಿದ್ದೇವೆ. ಆದರೆ ಕ್ರಿಮಿನಲ್ ಪ್ರಕರಣ ಇರುವ ಕೆಲವರನ್ನು ವರ್ಗಾವಣೆ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿದೆ. ಈ ಕುರಿತು ಚರ್ಚಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ನಿಲುವಳಿ ಸೂಚನೆ ಮಂಡಿಸಿ, ಚರ್ಚೆಗೆ ಅವಕಾಶ ಕೋರಿದರು. ಸಭಾಪತಿ ಬಸವರಾಜ ಹೊರಟ್ಟಿ ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅನುಮತಿಸಿದರು.

ಇದನ್ನೂ ಓದಿ: ‘ಕುಟುಂಬಸ್ಥರ ಜತೆ ಚರ್ಚಿಸಿ ಪುನೀತ್​ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ದಿನಾಂಕ ಘೋಷಿಸುತ್ತೇವೆ’; ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ‌ ಸಿಹಿ ಸುದ್ದಿ: ವಸತಿ ಫಲಾನುಭವಿಗಳ ಆದಾಯದ ಮಿತಿ ಹೆಚ್ಚಳ