ತಿಂಗಳಲ್ಲಿ 15 ದಿನ ಅರಣ್ಯದಲ್ಲಿ ವಾಸ್ತವ್ಯ ಹೂಡಲು ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ತಾಕೀತು
ಆಗ್ರೋ ಫಾರೆಸ್ಟರಿ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ತಳಮಟ್ಟದಲ್ಲಿದೆ. ಅದಕ್ಕೆ ಆದ್ಯತೆ ನೀಡಬೇಕು. ರೈತ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ. ಭೂಮಿಯ ಜೊತೆಗೆ ನಿರಂತರವಾಗಿ ಸಂಪರ್ಕವಿರುವವನು ರೈತ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಗ್ರೋ ಫಾರೆಸ್ಟರಿಯತ್ತ ಗಮನ ಹರಿಸಬೇಕು. ಮಣ್ಣಿನ ಸಂರಕ್ಷಣೆಗೆ ಆಗ್ರೋ ಫಾರೆಸ್ಟರಿ ಯಿಂದ ಸಾಧ್ಯ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಎಲ್ಲಾ ಹಂತದ ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ತಿಂಗಳಿಗೆ 15 ದಿನ ಅರಣ್ಯದಲ್ಲಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು. ಅವರು ಇಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ನಿಗಮದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದೀರಿ. ಕಚೇರಿ ಬಿಟ್ಟು ಹೊರಗೇ ಬರ್ತಿಲ್ಲ. ಅರಣ್ಯಕ್ಕೆ ಹೋಗಿ. ತಿಂಗಳಲ್ಲಿ 15 ದಿನ ಅರಣ್ಯದಲ್ಲಿ ಇದ್ಧರೆ ಉಳಿದ ಸಿಬ್ಬಂದಿಗೆ ಆತ್ಮಸ್ಥೈರ್ಯ ಬರುತ್ತದೆ. ಅವರಿಗೆ ಮಾರ್ಗದರ್ಶನ ಸಿಗುತ್ತದೆ. ಹಿರಿಯ ಅಧಿಕಾರಿಗಳು ಅರಣ್ಯ ಕಾಪಾಡುವ ಕೆಲಸದಲ್ಲಿ ಇದ್ದಾರೆ ಎಂಬ ಭಾವನೆ ಬರುತ್ತದೆ. ಹೀಗಾಗಿ 15 ದಿನ ಅರಣ್ಯದಲ್ಲಿ ವಾಸ್ತವ್ಯ ಹೂಡಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಪರಿಸರ ಸಮತೋಲನಕ್ಕೆ ಪರಿಸರ ವಿಸ್ತರಣೆ ಅಗತ್ಯ
ಪ್ರಸ್ತುತ ಶೇ 23 ರಷ್ಟಿರುವ ಅರಣ್ಯ ಪ್ರದೇಶವನ್ನು ಐದು ವರ್ಷಗಳಲ್ಲಿ ಕನಿಷ್ಠ ಶೇ 30ಕ್ಕೆ ಹೆಚ್ವಿಸಲು ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಂಸ್ಥೆಯೊಂದು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಾಧನೆಯ ಸಂಕೇತ. ವಿಶೇಷವಾಗಿ ಪರಿಸರ ರಕ್ಷಣೆ ಮಾಡಿ , ಅರಣ್ಯ ಉತ್ಪನ್ನಗಳನ್ನು ನಾಗರಿಕ ಸಮಾಜಕ್ಕೆ ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ಮಾಡುವ ದೊಡ್ಡ ಹೊಣೆಗಾರಿಕೆ ನಿಗಮಕ್ಕಿದೆ. ನಿಗಮ ಪ್ರಾರಂಭವಾದ ಸಂದರ್ಭದಲ್ಲಿ ಕರ್ನಾಟಕದ ಜನಸಂಖ್ಯೆ ಇಷ್ಟಿರಲಿಲ್ಲ. ಅರಣ್ಯ ಹಾಗೂ ಮನುಷ್ಯನ ಸಂಬಂಧ, ಅರಣ್ಯ ಹಾಗೂ ನಾಗರಿಕತೆಯ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಅರಣ್ಯ ಉತ್ಪಾದನೆ ಗಳನ್ನು ನಾಗರಿಕರ ಉಪಯೋಗಕ್ಕಾಗಿ ಯಾವ ರೀತಿ ಬಳಸಿಕೊಳ್ಳಬಹುದು, ಆ ರೀತಿಯ ಅರಣ್ಯವನ್ನು ಯಾವ ರೀತಿ ಬೆಳೆಸಬಹುದೆಂಬ ಚಿಂತನೆಯಿಂದ ಇದನ್ನು ಮಾಡಲಾಗಿದೆ.
ಈಗ ಜನಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶ ಕಡಿಮೆಯಾಗಿದೆ. ನಮ್ಮ ಮುಂದಿರುವ ಸವಾಲು ಪರಿಸರ ಸಮತೋಲನವಾಗಬೇಕಾದರೆ ನಮ್ಮ ನಿಸರ್ಗದತ್ತ ಸಂಪತನ್ನು ಇನ್ನಷ್ಟು ವಿಸ್ತರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಮನುಷ್ಯ ಮತ್ತು ನಿಸರ್ಗ ಕೂಡಿ ಬಾಳಿದರೆ ವಾತಾವರಣ ಪರಿಸರ ಬದುಕು, ಜೀವನ ಗುಣಮಟ್ಟ ಉತ್ತಮವಾಗಿರುತ್ತದೆ. ನಿಸರ್ಗಕ್ಕೆ ವಿರುದ್ಧವಾಗಿ ನಮ್ಮ ಚಟುವಟಿಕೆ ಗಳನ್ನು ಮಾಡಿದಾಗ ಅದು ದೊಡ್ಡ ಪ್ರಮಾಣದ ಅನಾಹುತಗಳಿಗೆ ಕಾರಣವಾಗಿರುವುದನ್ನು ಕಾಣುತ್ತಿದ್ದೇವೆ. ಹವಾಮಾನ ಬದಲಾವಣೆಯಾಗುತ್ತಿದೆ. ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಈ ನಿಗಮದ ಧ್ಯೇಯ ಉದ್ದೇಶಗಳನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡುವ ಅಗತ್ಯವಿದೆ. ನೀಲಗಿರಿ ಮರಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ, ಕಾಗದ ಮಾಡಲು ಬಳಕೆ ಮಾಡಲಾಗುತ್ತಿತ್ತು. ಅದರಿಂದ ಲಾಭವೂ ಆಗುತ್ತಿತ್ತು.ಆ ರೀತಿಯ ಲಾಭದ ಅವಶ್ಯಕತೆ ಇಲ್ಲ. ಅರಣ್ಯ ಬೆಳೆಸುವುದರ ಜೊತೆಗೆ ಅದರ ಚಕ್ರದಲ್ಲಿ ಅರಣ್ಯ ಉತ್ಪನ್ನಗಳನ್ನು ತಯಾರಿಸಲು ನೀಲಗಿರಿ, ಅಕೇಶಿಯಾ ಬಿಟ್ಟು, ಹೊಸ ತಳಿಗಳನ್ನು ಬೆಳೆಸಲು ಚಿಂತನೆ ಮಾಡಬೇಕು. ನೀಲಗಿರಿಯ ದುಷ್ಪರಿಣಾಮ ಭೂಮಿಯ ಮೇಲಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಎಂದರು.
ಪರಿಸರ ಆಯವ್ಯಯ
ಈ ಬಾರಿಯ ಬಜೆಟ್ ನಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪರಿಸರ ಆಯವ್ಯಯವನ್ನು ರೂಪಿಸಲಾಗಿದೆ. ಪ್ರತಿ ವರ್ಷ ಪರಿಸರ ಹಾನಿಯಾಗುತ್ತದೆ.ಅರಣ್ಯ, ಗಾಳಿ, ಭೂಮಿ, ನೀರು, ಮಣ್ಣು, ಹಾನಿಯಾದಾಗ ಮಾನವನ ಜೀವನ ಸಂಕಷ್ಟಕ್ಕೆ ಈಡಾಗುತ್ತದೆ. ಪ್ರತಿ ವರ್ಷ ಉಂಟಾಗುವ ಹಾನಿಯನ್ನು ಅದೇ ವರ್ಷದಲ್ಲಿ ಸರಿದೂಗಿಸುವ ಕೆಲಸವನ್ನು ಮಾಡಲಾಗುತ್ತದೆ. ಇದನ್ನು ನಿರಂತರವಾಗಿ ಮಾಡಿದಾಗ ಮಾತ್ರ ನಮ್ಮ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ಈ ಮೂಲಕ ಉತ್ತಮ ಪರಿಸರ ನಿರ್ಮಾಣ ಸಾಧ್ಯವಿದೆ.
ಈ ದೂರದೃಷ್ಟಿ ಇಟ್ಟುಕೊಂಡು ಸುಮಾರು 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅರಣ್ಯಗಳ ಸರ್ವೆ ಕೈಗೊಂಡು ನಿರ್ದಿಷ್ಟ ಕಾರ್ಯಕ್ರಮವನ್ನು ಅನುಷ್ಠಾನ ಮಾಡಬೇಕು. ಅನುದಾನವಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದು ಮಾತ್ರವಲ್ಲ, ಪರಿಸರ ಉಳಿಸುವ, ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಭೂಮಿಗೆ ಒಳಿತಾಗುವ ಕಾರ್ಯಕ್ರಮ ಗಳ ರೂಪಿಸಿದರೆ ಅಗತ್ಯ ನೆರವನ್ನು ಸರ್ಕಾರ ನೀಡುತ್ತದೆ. ಈ ವರ್ಷ ಒದಗಿಸಿರುವ 100 ಕೋಟಿ ರೂ. ಗಳನ್ನು ಸಮರ್ಪಕವಾಗಿ ಬಳಸಿದರೆ ಇನ್ನು 100 ಕೋಟಿಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.
ನಿಗಮದ ಆರ್ಥಿಕ ಸಬಲೀಕರಣ
ನಿಗಮ ತನ್ನ ಗುರಿ ಧ್ಯೇಯೋದ್ದೇಶಗಳನ್ನು ಇಂದಿನ ಅವಶ್ಯಕತೆ ಮತ್ತು ಸವಾಲುಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ನಿಗಮವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಸಿದ್ಧವಿದ್ದು, ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.
ಅರಣ್ಯ ಸಂಪತ್ತನ್ನು ಗಳಿಸಲು ಮೊದಲ ಆದ್ಯತೆ ನೀಡಬೇಕು. ಬಂಜರು ಭೂಮಿಯಲ್ಲಿ, ವಿಶೇಷವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಹಸಿರು ಬೆಳಸಬೇಕು. ಹಸಿರು ಪದರವನ್ನು ಹೆಚ್ವಿಸುವುದರಿಂದ ಮಣ್ಣು ಹಾಗೂ ಪರಿಸರವನ್ನು ರಕ್ಷಿಸಬಹುದು. ಈ ಬಗ್ಗೆ ಹೆಚ್ಚಿನ ಗಮನ ನೀಡಲು ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಗಂಧದ ಮರ ಬೆಳೆಸಲು ರೈತರನ್ನು ಉತ್ತೇಜಿಸಲು ಕಟ್ಟುಪಾಡುಗಳನ್ನು ಸಡಿಲಗೊಳಿಸಬೇಕು. ಗಂಧದ ಮರಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ರೈತರು ಬೆಳೆದು ಅದರಿಂದ ಆದಾಯ ಪಡೆದುಕೊಳ್ಳಯುವಂತಾಗಬೇಕು. ಗಂಧದ ಮರ ಕಳ್ಳತನ ನಿಲ್ಲಿಸಲು ಹೆಚ್ಚಾಗಿ ಬೆಳೆಯಬೇಕು ಹಾಗೂ ಹಲವಾರು ವರ್ಷಗಳಿಂದ ಇರುವ ಕಟ್ಟುಪಾಡುಗಳನ್ನು ಸಡಿಲಗೊಳಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದರು.
ಆಗ್ರೋ ಫಾರೆಸ್ಟರಿಗೆ ಅತಿ ಹೆಚ್ಚಿನ ಆದ್ಯತೆ ನೀಡಿ
ಆಗ್ರೋ ಫಾರೆಸ್ಟರಿ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ತಳಮಟ್ಟದಲ್ಲಿದೆ. ಅದಕ್ಕೆ ಆದ್ಯತೆ ನೀಡಬೇಕು. ರೈತ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ. ಭೂಮಿಯ ಜೊತೆಗೆ ನಿರಂತರವಾಗಿ ಸಂಪರ್ಕವಿರುವವನು ರೈತ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಗ್ರೋ ಫಾರೆಸ್ಟರಿಯತ್ತ ಗಮನ ಹರಿಸಬೇಕು. ಮಣ್ಣಿನ ಸಂರಕ್ಷಣೆಗೆ ಆಗ್ರೋ ಫಾರೆಸ್ಟರಿ ಯಿಂದ ಸಾಧ್ಯ. ವನಮಹೋತ್ಸವಕ್ಕೆ 13 ಲಕ್ಷ ಸಸಿಗಳನ್ನು ನೆಡಲಾಗುತ್ತಿರುವುದು ಸ್ವಾಗತಾರ್ಹ. ಇದನ್ನು ಇನ್ನಷ್ಟು ಹೆಚ್ಚಿಸಬೇಕು. ಸಸಿಗಳ ಉತ್ಪಾದನೆಯೂ ರಾಜ್ಯದಲ್ಲಿ ಹೆಚ್ಚಾಗಬೇಕು. ಆಗ ಮಾತ್ರ ಅರಣ್ಯ ಪ್ರದೇಶವನ್ನು ಹೆಚ್ಚಿಸಬಹುದು. ಸಸಿಗಳ ಸಂಖ್ಯೆ ಹೆಚ್ಚಾದಾಗ ಅವುಗಳನ್ನು ನೆಟ್ಟು ಉಳಿಸಲು ಅಗತ್ಯವಿರುವ ಯೋಜನೆಯನ್ನು ರೂಪಿಸೋಣ. ಎನ್.ಆರ್. ಇ. ಜಿ.ಎ ಯೋಜನೆಗಳನ್ನು ಸಂಯೋಜಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ಅರಣ್ಯ ಇಲಾಖೆ ಹಾಗೂ ಅರಣ್ಯ ಸಂರಕ್ಷಕರ ಸೇವಾ ವಿಚಾರಗಳನ್ನು ಪರಿಗಣಿಸಿ ಅಗತ್ಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಅರಣ್ಯ ಸಂರಕ್ಷಣೆಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ
ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆವುಳ್ಳ ಪ್ರದೇಶವಾಗಿದ್ದು ಅದನ್ನು ವಿಸ್ತರಣೆ ಮಾಡಬೇಕು. ಅರೆಮಲೆನಾಡು ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕು. 50 ವರ್ಷಗಳ ಸಾಧನೆಯನ್ನು ಮೆಲುಕು ಹಾಕಲು ಹಾಗೂ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಮುಂದಿನ 50 ವರ್ಷಗಳು ಹೇಗಿರಬೇಕೆಂದು ಚಿಂತನೆ ಮಾಡಿ. ಒಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.