Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಅನುಷ್ಠಾನ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರದಿಂದ ಸಂಬಳ! ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮೇಲ್ವಿಚಾರಣೆ ಸಮಿತಿಗಳನ್ನು ರಚಿಸಿ ಅದರಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರನ್ನು ನೇಮಕ ಮಾಡಿ ಅವರಿಗೆ ಸರ್ಕಾರದಿಂದ ವೇತನ ನೀಡುವ ವಿಚಾರ ಈಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಹೊರೆಯಾಗಿದೆ ಎಂದು ಆಡಳಿತ ಪಕ್ಷದ ಕೆಲವು ಮಂದಿ ನಾಯಕರೇ ಹೇಳುತ್ತಿರುವ ಈ ಹೊತ್ತಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ವೇತನದ ಹೆಸರಿನಲ್ಲಿ ತೆರಿಗೆದಾರರ ಹಣವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಗ್ಯಾರಂಟಿ ಅನುಷ್ಠಾನ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರದಿಂದ ಸಂಬಳ! ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ವಿಧಾನಸೌಧದ ಆವರಣದಲ್ಲಿ ಬಿಜೆಪಿ ಪ್ರತಿಭಟನೆ
Follow us
Ganapathi Sharma
|

Updated on: Mar 12, 2025 | 10:51 AM

ಬೆಂಗಳೂರು, ಮಾರ್ಚ್ 12: ಕಾಂಗ್ರೆಸ್ ಸರ್ಕಾರವು (Congress) ಗ್ಯಾರಂಟಿ (Guarantee Schemes) ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಸಮಿತಿಗಳನ್ನು ರದ್ದುಗೊಳಿಸಬೇಕೆಂದು ವಿರೋಧ ಪಕ್ಷದ ಶಾಸಕರು ಮಂಗಳವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು. ಇದರಿಂದಾಗಿ ಕಲಾಪದಲ್ಲಿ ಕೋಲಾಹಲ ಉಂಟಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮಧ್ಯಪ್ರವೇಶದ ಹೊರತಾಗಿಯೂ ವಿರೋಧ ಪಕ್ಷದ ನಾಯಕರು ಪಟ್ಟು ಸಡಿಲಿಸಲಿಲ್ಲ. ಈ ವಿಷಯವನ್ನು ಪ್ರಸ್ತಾಪಿಸಿದ ತುರುವೇಕೆರೆ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳ ಸದಸ್ಯರನ್ನಾಗಿ ಮಾಡಲಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರ ಸಂಬಳ ನೀಡಿದೆ ಎಂದು ಆರೋಪಿಸಿದರು. ಈ ಸಮಿತಿಗಳ ಸದಸ್ಯರಿಗೆ ವೇತನ ನೀಡಲು ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಎಂಟಿ ಕೃಷ್ಣಪ್ಪ ಆರೋಪವನ್ನು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬೆಂಬಲಿಸಿ, ಸರ್ಕಾರ ಈ ಸಮಿತಿಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಇದು ಬಿಸಿ ಚರ್ಚೆಗೆ ಕಾರಣವಾಯಿತು. ಸ್ಪೀಕರ್ ಯುಟಿ ಖಾದರ್ ಅವರು ಸದನವನ್ನು ಮುಂದೂಡಬೇಕಾಯಿತು. ಅಧಿವೇಶನ ಪುನರಾರಂಭವಾದಾಗಲೂ ಗದ್ದಲ ಮುಂದುವರೆಯಿತು. ಸದನವನ್ನು ಮತ್ತೆ ಮುಂದೂಡಿದ ಖಾದರ್ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್ ಅಶೋಕ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ನಾಯಕ ಸಿಬಿ ಸುರೇಶ್‌ಬಾಬು ಅವರೊಂದಿಗೆ ಸಮನ್ವಯ ಸಭೆ ನಡೆಸಿದರು.

ಅಧಿವೇಶನ ಪುನರಾರಂಭವಾದಾಗ, ವಿರೋಧ ಪಕ್ಷಗಳ ಶಾಸಕರು ಸ್ಪೀಕರ್ ಪೀಠದ ಬಳಿಗೆ ನುಗ್ಗಿ ಮತ್ತೆ ಧರಣಿ ನಡೆಸಿದರು. ಕಾಂಗ್ರೆಸ್ ಸರ್ಕಾರವು ತೆರಿಗೆದಾರರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ಮತ್ತೊಂದೆಡೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದರು. ಇದರಿಂದಾಗಿ ಸ್ಪೀಕರ್ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.

ಇದನ್ನೂ ಓದಿ
Image
ಮುಡಾ ಹಗರಣ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೇಂದ್ರಕ್ಕೆ ದೂರು
Image
ಮುಡಾ ಕೇಸ್​ಗೆ ಟ್ವಿಸ್ಟ್: ಸ್ನೇಹಮಯಿ ಕೃಷ್ಣರಿಂದ ಮತ್ತೊಂದು ಗಂಭೀರ ಆರೋಪ
Image
ಖಾಸಗಿ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಅಡ ಇಡುವವರೇ ಎಚ್ಚರ
Image
ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಹಿಂದೆ ಖಾವಿ ಕೃಪೆ: ಸ್ವಾಮೀಜಿ ಶಾಮೀಲು

ಇದಕ್ಕೂ ಮೊದಲು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದಾಗಲೂ ವಿರೋಧ ಪಕ್ಷಗಳ ಶಾಸಕರು ಪಟ್ಟು ಸಡಿಲಿಸಲಿಲ್ಲ.

ಆಶಾ ಕಾರ್ಯಕರ್ತೆಯರಿಗೆ ವೇತನವಿಲ್ಲ, ಕೈ ಕಾರ್ಯಕರ್ತರಿಗೆ 20 ಕೋಟಿ ರೂ: ಅಶೋಕ ಆರೋಪ

ಗ್ಯಾರಂಟಿ ಅನುಷ್ಠಾನ ಮೇಲ್ವಿಚಾರಣಾ ಸಮಿತಿ ಸದಸ್ಯರಾಗಿ ಕೆಲಸ ಮಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ಒಟ್ಟಾಗಿ ವರ್ಷಕ್ಕೆ ಸುಮಾರು 20 ಕೋಟಿ ರೂ. ಖರ್ಚು ಮಾಡಲಾಗುತ್ತದೆ ಎಂದು ಅಶೋಕ ಆರೋಪಿಸಿದರು. ಆಶಾ ಕಾರ್ಯಕರ್ತೆಯರು ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ 3,000 ರೂ. ಗೌರವಧನ ಪಾವತಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದಾಗ, ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರವು 25,000 ರಿಂದ 40,000 ರೂ.ಗಳನ್ನು ಸುಲಭವಾಗಿ ಪಾವತಿಸುತ್ತಿದೆ. ಅದೂ ಸಹ, ತಿಂಗಳಿಗೆ ಕೇವಲ ಎರಡು ಸಭೆಗಳನ್ನು ನಡೆಸುವುದಕ್ಕಾಗಿ ಎಂದು ಅಶೋಕ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ’: ಡಿವಿಜಿ ಮಂಕುತಿಮ್ಮನ ಕಗ್ಗ ಉಲ್ಲೇಖಿಸಿ ಬಿಜೆಪಿಗೆ ತಿವಿದ ಡಿಕೆ ಶಿವಕುಮಾರ್

ಜಿಲ್ಲಾ ಮಟ್ಟದಲ್ಲಿ ಸಮಿತಿಯ ಅಧ್ಯಕ್ಷರು ಮಾಸಿಕ 40,000 ರೂ., ಉಪಾಧ್ಯಕ್ಷರು 10,000 ರೂ. ಮತ್ತು ಸದಸ್ಯರು 1,000 ರೂ. ವೇತನ ಪಡೆಯುತ್ತಾರೆ ಎಂದು ಸರ್ಕಾರ ಹೇಳಿದೆ. ತಾಲ್ಲೂಕು ಮಟ್ಟದಲ್ಲಿ, ಸಮಿತಿಯ ಅಧ್ಯಕ್ಷರು 25,000 ರೂ. ಮತ್ತು ಸದಸ್ಯರು 1,000 ರೂ. ಮಾಸಿಕ ವೇತನ ಪಡೆಯುತ್ತಾರೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಮಿತಿಗಳು ಶಾಸಕರ ನೇತೃತ್ವದಲ್ಲಿರುತ್ತವೆ ಎಂದು ಅಶೋಕ ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರ ಸಮಿತಿಗೆ ಕೆಪಿಸಿಸಿ ವೇತನ ನೀಡಲಿ: ಅಶೋಕ್

ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಸಮಿತಿಗಳು ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿವೆ. ಕೆಪಿಸಿಸಿ ಅವರಿಗೆ ಸಂಬಳ ನೀಡಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಶಾಸಕರು, ಜನರಿಂದ ಆಯ್ಕೆಯಾದವರು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಾನಾಂತರ ಸಮಿತಿಗಳನ್ನು ಸ್ಥಾಪಿಸುವ ಮೂಲಕ, ನೀವು (ಸರ್ಕಾರ) ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ಸರ್ಕಾರವನ್ನು ಅಶೋಕ್ ಪ್ರಶ್ನಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ