AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಾಂತರ ಭಕ್ತರ ಕಾಯೋ ಕೊರಗಜ್ಜನ ಮೂಲ ಸಮುದಾಯಕ್ಕೆ ಸ್ವಂತ ಭೂಮಿಯೇ ಇಲ್ಲ: 33 ಕುಟುಂಬಗಳ ಕಣ್ಣೀರಿನ ಹೋರಾಟ; ಬೆತ್ತಲೆ ಮೆರವಣಿಗೆ ಎಚ್ಚರಿಕೆ

ಮಂಗಳೂರಿನಲ್ಲಿ ಕೊರಗಜ್ಜನ ಮೂಲ ಸಮುದಾಯವಾದ ಕೊರಗ ಜನಾಂಗದ 33 ಕುಟುಂಬಗಳು ದಶಕಗಳಿಂದ ಭೂಮಿ ಮತ್ತು ಮನೆಗಾಗಿ ಹೋರಾಡುತ್ತಿವೆ. ಲಕ್ಷಾಂತರ ಭಕ್ತರಿಂದ ಪೂಜಿಸಲ್ಪಡುವ ಕೊರಗಜ್ಜನ ಜನಾಂಗಕ್ಕೇ ಭೂಮಿ ಹಕ್ಕುಪತ್ರ ಸಿಗದೆ ಅಸಲಿ ಫಲಾನುಭವಿಗಳು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಮುದಾಯವು ತೀವ್ರ ಪ್ರತಿಭಟನೆ ನಡೆಸಿದೆ.

ಕೋಟ್ಯಾಂತರ ಭಕ್ತರ ಕಾಯೋ ಕೊರಗಜ್ಜನ ಮೂಲ ಸಮುದಾಯಕ್ಕೆ ಸ್ವಂತ ಭೂಮಿಯೇ ಇಲ್ಲ: 33 ಕುಟುಂಬಗಳ ಕಣ್ಣೀರಿನ ಹೋರಾಟ; ಬೆತ್ತಲೆ ಮೆರವಣಿಗೆ ಎಚ್ಚರಿಕೆ
ಮಂಗಳೂರು Image Credit source: Tv9 kannada
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Oct 30, 2026 | 10:50 AM

Share

ಮಂಗಳೂರು, ಅ.30: ತುಳುನಾಡಿನ ಮೂಲೆ ಮೂಲೆಯಲ್ಲೂ ಭಕ್ತಿಯಿಂದ ಪೂಜಿಸಲ್ಪಡುವ, ಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ಕಾರ್ಣಿಕದ ದೈವ ಕೊರಗಜ್ಜ. ಯಾರೇ ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ಬೇಡಿಕೊಂಡರೂ ಕ್ಷಣಾರ್ಧದಲ್ಲಿ ಕಾರ್ಣಿಕ ಮೆರೆದು ಭಕ್ತರ ಕಣ್ಣೀರು ಒರೆಸುವ ದೈವ ಕೊರಗಜ್ಜನ ಮೂಲ ಸಮುದಾಯದ ಜನರ ಬದುಕಿನಲ್ಲಿ ಮಾತ್ರ ಕಣ್ಣೀರಿನ ಕಥೆ ಕೊನೆಯಾಗುತ್ತಿಲ್ಲ. ಕೋಟಿ ಕೋಟಿ ಭಕ್ತರಿಂದ ಆರಾಧಿಸಲ್ಪಡುವ ಕೊರಗಜ್ಜನ ಜನ್ಮ ತಳೆದ ಮೂಲ ‘ಕೊರಗ ಜನಾಂಗ’ದ 33 ಕುಟುಂಬಗಳಿಗೆ ಮಂಗಳೂರಿನಲ್ಲೇ ಸ್ವಂತ ತುಂಡು ಭೂಮಿಯಿಲ್ಲದೆ ತಲೆಮಾರುಗಳಿಂದ ಅನಾಥರಂತೆ ಬದುಕುವ ದುಸ್ಥಿತಿ ಎದುರಾಗಿದೆ.

ತುಳುನಾಡಿನ ಜಾನಪದ ಹಿನ್ನೆಲೆಯ ಪ್ರಕಾರ, ಸ್ವಾಮಿ ಕೊರಗಜ್ಜ ಎಂದರೆ ನೆಮ್ಮದಿ ಮತ್ತು ನ್ಯಾಯದ ಸಂಕೇತ. ಶೋಷಿತ, ಮೂಲ ಆದಿವಾಸಿ ಸಮುದಾಯವಾದ ಕೊರಗ ಜನಾಂಗದಲ್ಲಿ ತನಿಯನಾಗಿ ಜನಿಸಿದ ಕೊರಗಜ್ಜ, ಅಪ್ರತಿಮ ಭಕ್ತಿ, ತ್ಯಾಗ ಮತ್ತು ಕೌಶಲ್ಯಗಳ ಮೂಲಕ ಕಡುಬಡವರ ಕಷ್ಟಕ್ಕೆ ಓಗೊಟ್ಟು ದೈವತ್ವಕ್ಕೆ ಏರಿದ ಸಾಕ್ಷಾತ್ ಸತ್ಯ ದೈವ. ಇಂದಿಗೂ ಸಣ್ಣ ವಸ್ತು ಕಳೆದುಹೋದರೂ, ದೊಡ್ಡ ವಿವಾದಗಳು ಎದುರಾದರೂ “ಕೊರಗಜ್ಜನಿಗೆ ಅಗೆಲು ಹರಕೆ” ಹೊತ್ತುಕೊಂಡರೆ ಕ್ಷಣಾರ್ಧದಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎನ್ನುವುದು ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರ ದೃಢ ನಂಬಿಕೆ. ಆದರೆ, ಇಡೀ ನಾಡಿಗೆ ನ್ಯಾಯ ಒದಗಿಸುವ ದೈವದ ಸಮುದಾಯಕ್ಕೆ ಆಡಳಿತ ವ್ಯವಸ್ಥೆ ಮಾತ್ರ ಬರೋಬ್ಬರಿ ದಶಕಗಳಿಂದ ಕನಿಷ್ಠ ಸೂರು ನೀಂದೆ ವಂಚಿಸುತ್ತಿರುವುದು ಅತೀವ ಬೇಸರದ ಸಂಗತಿಯಾಗಿದೆ.

1930ರ ದಶಕದಲ್ಲೇ ಕೊರಗ ಸಮುದಾಯದ ಹಿರಿಯರಾದ ವೆಂಕಟೇಶ ರಾವ್ ಅವರು ತಮ್ಮ ಜನಾಂಗದ ಸವರಿಕೆಗಾಗಿ 9.20 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಆದರೆ, 1970ರ ದಶಕದಲ್ಲಿ ಮುನಿಸಿಪಾಲಿಟಿ ಆ ಭೂಮಿಯನ್ನು ವ್ಯವಸ್ಥಿತವಾಗಿ ವಶಪಡಿಸಿಕೊಂಡಿತ್ತು ಎಂಬ ಗಂಭೀರ ಆರೋಪವಿದೆ. ತಲೆಮಾರುಗಳ ಹೋರಾಟದ ಫಲವಾಗಿ 2018ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ವಾಮಂಜೂರು ಬಳಿ ಪ್ರತಿ ಕುಟುಂಬಕ್ಕೆ 2.25 ಸೆಂಟ್ಸ್‌ನಂತೆ 33 ಕುಟುಂಬಗಳಿಗೆ ಮನೆ ನಿವೇಶನ ಹಂಚಿಕೆ ಮಾಡಲು ಅಧಿಕೃತ ಆದೇಶ ಹೊರಡಿಸಿತ್ತು. ಎರಡು ವರ್ಷಗಳ ಹಿಂದೆ ಸರ್ಕಾರವು ಈ ನಿವೇಶನ ಪ್ರದೇಶದಲ್ಲಿ ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ₹2.83 ಕೋಟಿ ರೂಪಾಯಿ ಅನುದಾನ ಖರ್ಚು ಮಾಡಿದೆ. ಆದರೆ ಅಸಲಿ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ನಿವೇಶನ ಹಸ್ತಾಂತರ ಮಾಡದೇ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ.

ಇದನ್ನೂ ಓದಿ: ಭಾರತೀಯ ವಾಯುಪಡೆಯಲ್ಲಿ ಪ್ರಜ್ವಲಿಸಿದ ಪ್ರಜ್ವಲ್ ಶೆಟ್ಟಿ: ಆಕಾಶದಲ್ಲಿ ‘ನೀಲಕಂಠ’ ರಫೇಲ್ ಹಾರಿಸಿ ಶೌರ್ಯ ಮೆರೆದ ಮಂಗಳೂರಿನಲ್ಲಿ ಯುವಕ

17 ಬಾರಿ ಪ್ರತಿಭಟಿಸಿದರೂ ಡೋಂಟ್ ಕ್ಯಾರ್ : ಬೆತ್ತಲೆ ಮೆರವಣಿಗೆಯ ಎಚ್ಚರಿಕೆ:

ಹಕ್ಕುಪತ್ರಕ್ಕಾಗಿ 33 ಕುಟುಂಬಗಳು ಕಳೆದ 8 ವರ್ಷಗಳಲ್ಲಿ ಬರೋಬ್ಬರಿ 17 ಬಾರಿ ಧರಣಿ ಹಾಗೂ ಪ್ರತಿಭಟನೆ ನಡೆಸಿದ್ದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಜಾರುವ ನೀತಿ ಅನುಸರಿಸುತ್ತಿದ್ದಾರೆ. ಸಾಮಾನ್ಯವಾಗಿ ಬೇರೆ ಪ್ರದೇಶಗಳಲ್ಲಿ ಜಾಗ ಹಂಚುವಾಗ ಇರದ ನಿಯಮಗಳನ್ನು ಕೊರಗ ಸಮುದಾಯಕ್ಕೆ ಭೂಮಿ ನೀಡುವಾಗ ಅನ್ವಯಿಸಿ, ‘ಆಕ್ಷೇಪಣೆ ಸಲ್ಲಿಕೆ’ ಎಂದು ನೋಟಿಫಿಕೇಶನ್ ಹೊರಡಿಸಿ ಕಾಲಹರಣ ಮಾಡಲಾಗುತ್ತಿದೆ ಎಂದು ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ. ಸದ್ಯ ವಾಮಂಜೂರಿನ ಸಿಎಚ್‌ಎಸ್ಆರ್‌ಡಿ ಸಮೀಪದ ಪಾಳುಬಿದ್ದ ಪಾಲಿಕೆಯ ಹಳೆಯ ವಸತಿ ಗೃಹದಲ್ಲಿ ತಂಗಿರುವ ಈ ಕುಟುಂಬಗಳು, ತಕ್ಷಣವೇ ಹಕ್ಕುಪತ್ರ ವಿತರಿಸದಿದ್ದಲ್ಲಿ ‘ಬೆತ್ತಲೆ ಮೆರವಣಿಗೆ’ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಅಂತಿಮ ಎಚ್ಚರಿಕೆ ನೀಡಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Fri, 30 October 26

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More