ಮಂಗಳೂರಿನಲ್ಲಿ ಕಾಲೇಜಿಗೆ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು; ತರಗತಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲೆ

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದರು.

ಮಂಗಳೂರಿನಲ್ಲಿ ಕಾಲೇಜಿಗೆ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು; ತರಗತಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲೆ
ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು
TV9kannada Web Team

| Edited By: sandhya thejappa

May 28, 2022 | 2:08 PM

ಮಂಗಳೂರು: ಜಿಲ್ಲೆಯಲ್ಲಿ ಹಿಜಾಬ್ ವಿವಾದ (Hijab Controversy) ಮುಗಿಯುವಂತೆ ಕಾಣಿಸುತ್ತಿಲ್ಲ. ಈಗಾಗಲೇ ಹೈಕೋರ್ಟ್ ಶಾಲಾ- ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ತೀರ್ಮಾನ ನೀಡಿದೆ. ಆದರೂ ಮಂಗಳೂರಿನ ವಿವಿ ಘಟಕ ಕಾಲೇಜಿಗೆ ಮುಸ್ಲಿಂ ಸಮುದಾಯದ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದರು. ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿದ್ದಾರೆ.

ಹಿಜಾಬ್ ತೆಗೆದಿಟ್ಟು ತರಗತಿಗೆ ಹೋಗಿ ಅಂತ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ತಿಳಿ ಹೇಳಿದರು. ಪಟ್ಟುಬಿಡದ ವಿದ್ಯಾರ್ಥಿನಿಯರು ಕಾಲೇಜು ಲೈಬ್ರರಿ ಎದುರು ನಿಂತಿದ್ದಾರೆ.

ತರಗತಿಗಳಲ್ಲಿ ಮಾತ್ರವಲ್ಲ, ಕ್ಯಾಂಪಸ್​ನಲ್ಲೂ ಹಿಜಾಬ್​ಗೆ ಅವಕಾಶ ಕೊಡುವುದಿಲ್ಲ ಎಂದು ಟಿವಿ9ಗೆ ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲರಾದ ಅನುಸೂಯ ರೈ ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ 44 ಜನ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಈ ಆದೇಶದ ಬಗ್ಗೆ ಸಮಸ್ಯೆ ಇದೆ. ಅವರನ್ನು ಅವರ ಪೋಷಕರ ಮನವೊಲಿಸಲು ನಮಗೆ ಸಮಯ ಬೇಕು. ಅವರು ನ್ಯಾಯಾಲಯದ ಆದೇಶ ಆಡಳಿತ ಮಂಡಳಿಯಿಂದ ನಿಯಮವನ್ನು ಪಾಲಿಸಲೇ ಬೇಕು. ಆಡಳಿತ ಮಂಡಳಿ ಆದೇಶ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಅನೇಕ ಶಾಸಕರು ಕರೆ ಮಾಡಿದ್ದಾರೆ ನನಗೆ ಯಾರು ಒತ್ತಡ ಹಾಕಿಲ್ಲ. ಕೇವಲ ನಮ್ಮ ಆದೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಅನುಸೂಯ ರೈ ತಿಳಿಸಿದ್ದಾರೆ.

ಹಿಜಾಬ್ ಹಾಕಿ ಪಾಠ ಮಾಡಿದ ಪ್ರಾಧ್ಯಾಪಕಿ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತರಗತಿಗೆ ಬಾರದಂತೆ ತಡೆಯಲಾಗಿದೆ. ಆದರೆ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಿಜಾಬ್ ಹಾಕಿ ಪಾಠ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನವರಿಂದ ಹಿಂದೂ ಸಮಾಜ ಒಡೆಯುವ ಕೆಲಸ ಆಗುತ್ತಿದೆ : ಬಿ. ಸಿ ನಾಗೇಶ್

ಬಸವರಾಜ ಬೊಮ್ಮಾಯಿ ಹೇಳಿದ್ದೇನು? ಮಂಗಳೂರಿನಲ್ಲಿ ಮತ್ತೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಿಎಂ, ಮಂಗಳೂರು ವಿವಿ ಕಾಲೇಜಿನಲ್ಲಿ ಕಾನೂನು ಪಾಲನೆ ಆಗಿದೆ. ಎಲ್ಲರೂ ಕೋರ್ಟ್ ಆದೇಶ ಪಾಲನೆ ಮಾಡಬೇಕು. ಬಹುತೇಕರು ಶೇ. 99.99 ಕೋರ್ಟ್ ನಿಯಮ ಪಾಲಿಸಿದ್ದಾರೆ. ಮಂಗಳೂರು ವಿವಿ ಈ ಬಗ್ಗೆ ಸಿಂಡಿಕೇಟ್​ ಸಭೆ ನಡೆಸಿದೆ. ವಿದ್ಯಾರ್ಥಿನಿಯರು ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು ಎಂದರು.

ಅವರ ಹಣೆಬರಹ ಅಷ್ಟೇ- ಶಾಸಕ ಅಪ್ಪಚ್ಚು ರಂಜನ್: ಕೋರ್ಟ್ ಆದೇಶವನ್ನು ಯಾರು ಉಲ್ಲಂಘನೆ ಮಾಡಬಾರದು. ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಆದ್ಯತೆಯನ್ನ  ನೀಡಬೇಕು. ಹಿಜಾಬ್ ಬಿಟ್ಟು ಕೋರ್ಟ್ ಆದೇಶಕ್ಕೆ ವಿದ್ಯಾರ್ಥಿನಿಯರು ವಿಧೇಯಕರಾಗಿರಬೇಕು. ಮಧ್ಯಮ ವರ್ಗದವರಲ್ಲಿ ಈ ಹಿಜಾಬ್ ವಿವಾದ ಜಾಸ್ತಿ ಇದೆ. ಶ್ರೀಮಂತ ವರ್ಗದವರು ಬರೆ ಚಡ್ಡಿ ಹಾಕಿಕೊಂಡು ಓಡಾಡುತ್ತಾರೆ. ಈಗ ವಿದ್ಯೆಗೆ ಒತ್ತು ಕೊಡದಿದ್ದರೆ ಮುಂದೆ ಅವರೆ ಆರ್ಥಿಕವಾಗಿ ಹಿಂದುಳಿಯುತ್ತಾರೆ. ವಿದ್ಯೆ ಕಲಿಬೇಕು ಅಂದ್ರೆ ಅವರು ಕಾಲೇಜಿಗೆ ಬರಬೇಕು. ಬರಲಿಲ್ಲ ಅಂದರೆ ಅದು ಅವರ ಹಣೆಬರಹ ಅಷ್ಟೇ. ಸಂಘಟನೆಗಳ ಕುಮ್ಮಕಿನಿಂದ ಈ ರೀತಿಯ ಘಟನೆಗಳು ನಡೆಯುತ್ತಿದೆ. ಬೆರೆಯವರ ಮಕ್ಕಳನ್ನ ಬಾವಿಗೆ ತಳ್ಳಿ ತಮಾಶೆ ನೋಡುವ ಕೆಲಸವಾಗುತ್ತಿದೆ. ಪಿಎಫ್​ಐ ಸೇರಿದಂತೆ ಹಲವು ಸಂಘಟನೆಗಳ ಕೈವಾಡ ಇಲ್ಲಿ ಎದ್ದು ಕಾಣುತ್ತಿದೆ‌. ಸರ್ಕಾರ ಯಾವುದೇ ಕಾರಣಕ್ಕೂ ಈ ವಿಚಾರವನ್ನ ಬಿಡಬಾರದು. ಕೋರ್ಟ್ ಆದೇಶವನ್ನ ಯಥಾವತ್ತಾಗಿ ಪಾಲಿಸುವ ಕೆಲಸ ಆಗಬೇಕು ಎಂದು ಮಡಿಕೇರಿಯಲ್ಲಿ ಶಾಸಕ ಎಂ‌ಪಿ ಅಪ್ಪಚ್ಚು ರಂಜನ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada