ಆರು ಜನರ ಬದುಕಿಗೆ ಬೆಳಕಾದ ದಾವಣಗೆರೆಯ ನರೇಶ್: ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬದವರು
ದಾವಣಗೆರೆಯ 48 ವರ್ಷದ ನರೇಶ್ ಎಚ್.ವಿ. ಅವರ ಮಿದುಳು ನಿಷ್ಕ್ರಿಯಗೊಂಡ ಬಳಿಕ, ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಎರಡು ಕಿಡ್ನಿ, ಲಿವರ್, ಹೃದಯ ಮತ್ತು ಕಣ್ಣುಗಳನ್ನು ದಾನ ಮಾಡಲಾಗಿದ್ದು, ಆರು ಜನರ ಬದುಕಿಗೆ ನೆರವಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ ಎಂಬ ಚರ್ಚೆಗಳ ನಡುವೆಯೇ ಈ ಕುಟುಂಬದ ನಿರ್ಧಾರ ಗಮನ ಸೆಳೆದಿದೆ.

ಮುಖ್ಯಾಂಶಗಳು
- ನರೇಶ್ ಅಂಗಾಂಗ ದಾನದಿಂದ ಆರು ಜನರಿಗೆ ಹೊಸ ಭರವಸೆ
- ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬದಿಂದ ಮಹತ್ವದ ನಿರ್ಧಾರ
- ಕಿಡ್ನಿ, ಲಿವರ್, ಹೃದಯ, ಕಣ್ಣುಗಳ ದಾನ
ದಾವಣಗೆರೆ, ಅಕ್ಟೋಬರ್ 27: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬವೊಂದು ಆರು ಜನರ ಬದುಕಿಗೆ ಬೆಳಕಾಗಿದೆ. ದಾವಣಗೆರೆಯ ಆಂಜನೇಯ ಬಡಾವಣೆ ನಿವಾಸಿ ನರೇಶ್ ಎಚ್.ವಿ. (48) ಅವರ ಅಂಗಾಂಗಗಳನ್ನು ಕುಟುಂಬದವರು ದಾನ ಮಾಡಲು ನಿರ್ಧರಿಸಿದ್ದು, ಅಂಗಾಂಗ ಕಸಿಗಾಗಿ ಕಾಯುತ್ತಿದ್ದ ರೋಗಿಗಳಿಗೆ ಹೊಸ ಬದುಕಿನ ಭರವಸೆ ಮೂಡಿದೆ. ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದವರಾದ ನರೇಶ್ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಅವರಿಗೆ ಪತ್ನಿ ಹಾಗೂ 12 ವರ್ಷದ ಪುತ್ರನಿದ್ದಾನೆ.
ಪಾರ್ಶ್ವವಾಯುವಿನಿಂದ ಬ್ರೈನ್ ಡೆಡ್
ನರೇಶ್ ಅವರಿಗೆ ಪಾರ್ಶ್ವವಾಯು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಕೆ ಕಂಡ ಬಳಿಕ ಕುಟುಂಬದವರು ಅವರನ್ನು ಮನೆಗೆ ಕರೆತಂದಿದ್ದರು. ಆದರೆ, ಅಕ್ಟೋಬರ್ 23ರಂದು ಮತ್ತೆ ಪಾರ್ಶ್ವವಾಯು ಕಾಣಿಸಿಕೊಂಡಿದ್ದರಿಂದ ಮತ್ತೆ ನಿಮಾನ್ಸ್‌ಗೆ ದಾಖಲಿಸಲಾಗಿತ್ತು. ಮಿದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಅವರ ಮಿದುಳು ನಿಷ್ಕ್ರಿಯಗೊಂಡು ಬ್ರೈನ್ಡೆಡ್ ಆಗಿತ್ತು.
ವೈದ್ಯರ ಸಲಹೆಯಂತೆ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ನರೇಶ್ ಅವರ ಎರಡು ಕಿಡ್ನಿಗಳನ್ನು ಬೆಂಗಳೂರಿನ ಐಸಿಯು ಆಸ್ಪತ್ರೆಗೆ, ಲಿವರ್ ಅನ್ನು ಆಸ್ಟರ್ ಆಸ್ಪತ್ರೆಗೆ, ಹೃದಯವನ್ನು ಆಸ್ಟರ್ ಸಿಎಂಐ ಆಸ್ಪತ್ರೆಗೆ ಹಾಗೂ ಕಣ್ಣುಗಳನ್ನು ಮಿಂಟೋ ಆಸ್ಪತ್ರೆಗೆ ದಾನ ಮಾಡಲಾಗಿದೆ. ಈ ಅಂಗಾಂಗಗಳು ಕಸಿ ಅಗತ್ಯವಿರುವ ರೋಗಿಗಳಿಗೆ ನೆರವಾಗಲಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಅಂಗಾಂಗಗಳ ಕೊರತೆ, ಕಸಿಗಾಗಿ ಕಾಯುತ್ತಿದ್ದಾರೆ 6,291 ಮಂದಿ! ದಾನದ ಜಾಗೃತಿ ಮೂಡಿಸಲು ಸರ್ಕಾರದ ಹೊಸ ಕಾರ್ಯತಂತ್ರ
ರಾಜ್ಯದಲ್ಲಿ ಅಂಗಾಂಗ ದಾನದ ಬಗ್ಗೆ ಜನರು ಹೆಚ್ಚಿನ ಉತ್ಸಾಹ ತೋರಿಸುತ್ತಿಲ್ಲ ಎಂಬ ಚರ್ಚೆಗಳ ನಡುವೆಯೇ ನರೇಶ್ ಕುಟುಂಬದ ಈ ನಿರ್ಧಾರ ಗಮನ ಸೆಳೆದಿದೆ. ದುಃಖದ ಸಂದರ್ಭದಲ್ಲಿಯೂ ಅಂಗಾಂಗ ದಾನಕ್ಕೆ ಮುಂದಾಗುವ ಮೂಲಕ ಕುಟುಂಬವು ಇತರರ ಬದುಕಿಗೆ ನೆರವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




