ಜೋಳಿಗೆ ಹಿಡಿದು ಹೊರಟ ಸರ್ಕಾರಿ ಅಧಿಕಾರಿಗಳು.. ವಿದ್ಯಾಕಾಶಿಯಲ್ಲೊಂದು ಪುಸ್ತಕ ಪ್ರೇಮ ಕಹಾನಿ
ಧಾರವಾಡ ಬಿಇಓ ಉಮೇಶ ಬೊಮ್ಮಕ್ಕ ಇದನ್ನು ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ವಿದ್ಯಾಕಾಶಿಯ ಜನರು ತಾವೇ ಮುಂದೆ ಬಂದು ಸಾವಿರಾರು ಪುಸ್ತಕಗಳನ್ನು ನೀಡುತ್ತಿದ್ದಾರೆ. ತಮ್ಮ ತಮ್ಮ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಿ, ಅಲ್ಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ, ಪುಸ್ತಕಗಳನ್ನು ನೀಡುತ್ತಿದ್ದಾರೆ.
ಧಾರವಾಡ: ಕೊರೊನಾ ಹಾವಳಿ ಆರಂಭವಾಗಿದ್ದಾಗಿನಿಂದ ಶಾಲೆಗಳು ಏನಾಗಿವೆ? ಈಗ ಅವುಗಳ ಸ್ಥಿತಿ ಹೇಗಿದೆ ಎನ್ನುವುದು ಕೂಡ ಮಕ್ಕಳಿಗೆ ಮರೆತು ಹೋಗಿದೆ. ತಿಂಗಳುಗಳು ಉರುಳಿದರೂ ಶಾಲೆಗಳು ಆರಂಭವಾಗದ ಹಿನ್ನೆಲೆ ಸಿಟಿಯ ಮಕ್ಕಳು ಆನ್ ಲೈನ್ ಪಾಠ ಹಾಗೂ ಮತ್ತಿತರರ ಚಟುವಟಿಕೆಗಳಿಂದ ಕಾಲ ಕಳೆಯುತ್ತಿದ್ದಾರೆ.
ಆದರೆ ಗ್ರಾಮೀಣ ಪ್ರದೇಶದ ಮಕ್ಕಳ ಪರಿಸ್ಥಿತಿ ಮಾತ್ರ ತುಂಬಾನೇ ಕಳವಳಕಾರಿಯಾಗಿದೆ. ಆರ್ಥಿಕವಾಗಿ ಚೆನ್ನಾಗಿ ಇರುವವರು ತಮ್ಮ ಮಕ್ಕಳಿಗೆ ಮನರಂಜನೆ ಹಾಗೂ ಜ್ಞಾನ ವೃದ್ಧಿಗೆ ಅವಕಾಶಗಳನ್ನು ಮಾಡಿಕೊಟ್ಟಿರುತ್ತಾರೆ. ಆದರೆ ಎಲ್ಲಾ ಮಕ್ಕಳಿಗೂ ಇಂಥ ಅವಕಾಶ ಸಿಗುವುದು ಕಷ್ಟ.
ಗ್ರಾಮ ಪಂಚಾಯತಿಯ ಮಕ್ಕಳು ಇದೆಲ್ಲವನ್ನು ಮೀರಿ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರೆ ಅಂತಹ ಮಕ್ಕಳು ಓದಲು ಕೂಡ ಸರಿಯಾದ ವ್ಯವಸ್ಥೆ ಇಲ್ಲ. ಇನ್ನು ಮಕ್ಕಳೇನಾದರೂ ಓದಲೇ ಬೇಕು ಎಂದು ಪಣತೊಟ್ಟಿದ್ದರೆ ಅವರು ಹೋಗಬೇಕಾಗಿರುವುದು ತಮ್ಮೂರ ಗ್ರಾಮ ಪಂಚಾಯತಿಯಲ್ಲಿರುವ ಗ್ರಂಥಾಲಯಕ್ಕೆ.
ಆದರೆ ಅಲ್ಲಿರುವ ಪುಸ್ತಕಗಳಾದರೂ ಎಷ್ಟು? ಹೀಗಾಗಿ ಓದುವ ಹವ್ಯಾಸ ಇರುವ ಮಕ್ಕಳಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ಸರಕಾರ ಓದುವ ಬೆಳಕು ಎನ್ನುವ ಕಾರ್ಯಕ್ರಮ ಆರಂಭಿಸಿದೆ. ಈ ಯೋಜನೆಯಲ್ಲಿಯೇ ಪುಸ್ತಕ ಜೋಳಿಗೆ ಎನ್ನುವ ಮತ್ತೊಂದು ಯೋಜನೆಗಾಗಿ ಸರಕಾರಿ ಅಧಿಕಾರಿಯೊಬ್ಬರು ಸಾರ್ವಜನಿಕರಿಂದ ಪುಸ್ತಕಗಳನ್ನು ಸಂಗ್ರಹಿಸಿ, ಮಕ್ಕಳಿಗೆ ತಲುಪಿಸುತ್ತಿದ್ದಾರೆ.
ಯೋಜನೆಯಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಪಾತ್ರವೇನು? ಈ ಯೋಜನೆಯಡಿ ಎಲ್ಲಾ ರವಿವಾರ, 2 ಮತ್ತು 4ನೇ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರು ಮನೆ ಮನೆಗೆ ತೆರಳಿ ಪುಸ್ತಕಗಳನ್ನು ಪಡೆಯಬೇಕು. ಎಷ್ಟೋ ಜನರ ಮನೆಯಲ್ಲಿ ಅವರು ಓದಿ ಮುಗಿಸಿರುವ ಪುಸ್ತಕಗಳು ಇರುತ್ತವೆ. ಅವುಗಳನ್ನು ಮನೆಯಿಂದ ಹೊರಗೆ ಹಾಕುವ ಹಾಗೆಯೂ ಇಲ್ಲ, ಅವುಗಳನ್ನು ಇಟ್ಟುಕೊಳ್ಳುವಂತೆಯೂ ಇಲ್ಲ.
ಈ ಸಂದರ್ಭದಲ್ಲಿ ಇಂತಹ ಪುಸ್ತಕಗಳನ್ನು ಏನು ಮಾಡಬೇಕು? ಎಂದು ಚಿಂತಿಸುವ ಮನಸ್ಸುಗಳಿಗೆ ಈ ಯೋಜನೆ ತುಂಬಾನೇ ಸಹಕಾರಿ. ಇಲ್ಲಿ ಪುಸ್ತಕಗಳನ್ನು ನೀಡಿದರೆ, ಅವುಗಳನ್ನು ನೇರವಾಗಿ ಗ್ರಾಮ ಪಂಚಾಯತಿಗೆ ನೀಡಲಾಗುತ್ತದೆ. ಅಲ್ಲಿ ವಿದ್ಯಾರ್ಥಿಗಳಿಗೆ ಓದಲು ಈ ಪುಸ್ತಕಗಳನ್ನು ನೀಡಲಾಗುತ್ತದೆ. ಆ ಮೂಲಕ ಅವರ ಜ್ಞಾನ ವೃದ್ಧಿಗೆ ಈ ಯೋಜನೆ ನೆರವಾಗಿದೆ.
ಒಂದೊಂದು ಗ್ರಾಮ ಪಂಚಾಯತಿಗೆ ಒಂದು ಸಾವಿರ ಪುಸ್ತಕಗಳು: ಉಳಿದ ಜಿಲ್ಲೆಯಲ್ಲಿ ಈ ಯೋಜನೆಗೆ ಹೇಗೆ ಸ್ಪಂದನೆ ಸಿಕ್ಕಿದೆಯೋ ಗೊತ್ತಿಲ್ಲ. ಆದರೆ ವಿದ್ಯಾಕಾಶಿ ಧಾರವಾಡದಲ್ಲಂತೂ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನವರಿ 25 ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ಅಷ್ಟರಲ್ಲಿ ಆಯಾ ತಾಲೂಕುಗಳ ಬಿಇಓಗಳು ಪ್ರತಿ ಗ್ರಾಮ ಪಂಚಾಯತಿಗೆ 1000ದಂತೆ ಪುಸ್ತಕಗಳನ್ನು ಸಂಗ್ರಹಿಸಿ ನೀಡಬೇಕು. ಧಾರವಾಡ ಗ್ರಾಮೀಣ ಬಿಇಓ ಅವರ ವ್ಯಾಪ್ತಿಗೆ 39000 ಗ್ರಾಮ ಪಂಚಾಯತಿಗಳು ಬರುತ್ತವೆ.
ಇಲ್ಲಿನ ಬಿಇಓ ಉಮೇಶ ಬೊಮ್ಮಕ್ಕ ಇದನ್ನು ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ವಿದ್ಯಾಕಾಶಿಯ ಜನರು ತಾವೇ ಮುಂದೆ ಬಂದು ಸಾವಿರಾರು ಪುಸ್ತಕಗಳನ್ನು ನೀಡುತ್ತಿದ್ದಾರೆ. ತಮ್ಮ ತಮ್ಮ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಿ, ಅಲ್ಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ, ಪುಸ್ತಕಗಳನ್ನು ನೀಡುತ್ತಿದ್ದಾರೆ.
ಯೋಜನೆ ಆರಂಭವಾಗಿ ಕೆಲವೇ ದಿನಗಳಲ್ಲಿ 12000 ಪುಸ್ತಕಗಳು ಸಂಗ್ರಹವಾಗಿದ್ದು, ಪ್ರತಿ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ತಮ್ಮ ಸಿಬ್ಬಂದಿಯೊಂದಿಗೆ ಬ್ಯಾಗು ಹಿಡಿದು ಮನೆ ಮನೆ ಸುತ್ತಾಡುತ್ತಿರುವುದರಿಂದ ಇಷ್ಟೊಂದು ಪ್ರಮಾಣದಲ್ಲಿ ಪುಸ್ತಕ ಸಂಗ್ರಹಿಸಲು ಸಾಧ್ಯವಾಗಿದೆ ಎನ್ನುವುದು ವಿಶೇಷ.
ಯಾರು ಎಷ್ಟೆಷ್ಟು ಪುಸ್ತಕ ಕೊಟ್ಟರು? ಈ ಬಗ್ಗೆ ಕೊಂಚ ಹೆಚ್ಚಿಗೆ ಮುತುವರ್ಜಿ ವಹಿಸಿರೋ ಧಾರವಾಡದ ಸಾರ್ವಜನಿಕ ಸಿಬ್ಬಂದಿ, ಯಾವ ಮನೆಯಲ್ಲಿ ಹೆಚ್ಚು ಪುಸ್ತಕಗಳಿವೆ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಅವರ ಮನೆಗೆ ಹೋಗಿ ಚರ್ಚಿಸಿ, ಪುಸ್ತಕ ಸಂಗ್ರಹಿಸಿಕೊಂಡು ಬರುತ್ತಿದ್ದಾರೆ. ಹೀಗೆ ಪುಸ್ತಕ ನೀಡಿದವರು ಮತ್ತೆ ತಮ್ಮ ಆಪ್ತರ ಹೆಸರುಗಳನ್ನು ಹೇಳಿ, ಅವರಿಗೂ ಈ ಯೋಜನೆಯ ಮಾಹಿತಿ ನೀಡುತ್ತಿರುವುದರಿಂದ ಊಹೆಗಿಂತಲೂ ಹೆಚ್ಚಿನ ಪುಸ್ತಕಗಳು ಸಂಗ್ರಹವಾಗುತ್ತಿವೆ.
ಸಾಹಿತಿ ಶಂಕರ ಹಲಗತ್ತಿ ಅವರು 1000 ಪುಸ್ತಕ ನೀಡಿದರೆ, ನಿವೃತ್ತ ಶಿಕ್ಷಕಿ ಲೂಸಿ ಸಲ್ಡಾನಾ 500 ಪುಸ್ತಕಗಳನ್ನು ನೀಡಿದ್ದಾರೆ. ಇನ್ನು ನಿವೃತ್ತ ಶಿಕ್ಷಕ ಕೆ.ಎಚ್.ನಾಯಕ್ 500, ಶಿಕ್ಷಕ ಎಲ್.ಐ.ಲಕ್ಕಮ್ಮನವರ್ 200 ಪುಸ್ತಕಗಳನ್ನು ನೀಡಿದರೆ, ಹೊನ್ನಾಪುರ ಗ್ರಾಮದ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಆಕ್ಷು ಮುಲ್ಲಾ 200 ಪುಸ್ತಕಗಳನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಇದರಲ್ಲಿ ಕೆಲವರು ತಮ್ಮ ಬಳಿ ಇದ್ದ ಪುಸ್ತಕಗಳನ್ನು ನೀಡಿದರೆ, ಮತ್ತೆ ಕೆಲವರು ಹೊಸ ಪುಸ್ತಕ ಖರೀದಿಸಿ ನೀಡಿದ್ದಾರೆ ಎನ್ನುವುದು ವಿಶೇಷ.
ಇಂದಿನ ಮಕ್ಕಳೇ ದೇಶದ ನಾಳಿನ ಸಂಪತ್ತು. ಅವರ ಭವಿಷ್ಯ ಉಜ್ವಲವಾಗಬೇಕಾದರೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು. ಹೀಗೆ ಪುಸ್ತಕಗಳು ಸಂಗ್ರಹವಾಗಿ, ಅವರ ಕೈಗೆ ಸಿಕ್ಕು, ಅವರು ಓದುವ ಹವ್ಯಾಸ ಬೆಳೆಸಿಕೊಂಡರೆ ಸಹಜವಾಗಿ ಅವರ ಜ್ಞಾನವೂ ವೃದ್ಧಿಯಾಗುತ್ತದೆ. ಆ ಮೂಲಕ ಮಕ್ಕಳ ಆತ್ಮವಿಶ್ವಾಸ ಹೆಚ್ಚಾಗಿದ್ದು, ಅವರ ಮುಂದಿನ ಭವಿಷ್ಯವೂ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ಗಮನಾರ್ಹ.