ಕೊವಿಡ್ ಸಂಕಷ್ಟದಲ್ಲಿಯೂ ಲಾಭ ಗಳಿಸಿದ ಧಾರವಾಡದ ಕೆಎಂಎಫ್; ಬೇಡಿಕೆಗಿಂತಲೂ ಹೆಚ್ಚಿನ ಹಾಲು ಪೂರೈಕೆ
ಕೆಎಂಎಫ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಿಗೆ ಲಾಕ್‍ಡೌನ್ ಪ್ರಾರಂಭವಾದ ಮೇಲೆ ಪ್ರತಿ ದಿನ 1.03 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಲಾಕ್‍ಡೌನ್ ಪೂರ್ವದಲ್ಲಿ ಪ್ರತಿ ದಿನ 1.07 ರಿಂದ 1.08 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿತ್ತು. 4 ರಿಂದ 5 ಸಾವಿರ ಲೀಟರ್ ಹಾಲಿನ ವ್ಯಾಪಾರದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ, ಇಷ್ಟು ವ್ಯಾತ್ಯಾಸವಾದರೂ ಯಾವುದೇ ರೀತಿಯಲ್ಲಿ ನಷ್ಟಕ್ಕೆ ಕಾರಣವಾಗಿಲ್ಲ.
ಧಾರವಾಡ: ಕೊರೊನಾ ಎರಡನೇ ಅಲೆಯಿಂದಾಗಿ ಎಲ್ಲಾ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದ್ದು, ಒಂದನೇ ಅಲೆಯಿಂದಾಗಿದ್ದ ನಷ್ಟವನ್ನು ಭರಿಸಿಕೊಳ್ಳುವ ಹೊತ್ತಿಗೆ ಎರಡನೇ ಅಲೆಯ ಹಾವಳಿ ಶುರುವಾಗಿದೆ. ಹೀಗಾಗಿ ಕೊರೊನಾ ಎರಡನೇ ಅಲೆ ತೀವ್ರವಾದ ಪರಿಣಾಮ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ವ್ಯಾಪಾರ ವಹಿವಾಟುಗಳಿಗೆ ತೊಂದರೆ ಉಂಟಾಗಿದೆ. ಆದರೆ, ಧಾರವಾಡದ ಕೆಎಂಎಫ್‍ಗೆ ಮಾತ್ರ ಕ್ಷೀರ ಹರಿದು ಬರುತ್ತಿದ್ದು, ಲಾಭದತ್ತ ಸಾಗುತ್ತಿದೆ.
ಹೋಟೆಲ್ ಉದ್ಯಮ, ಚಿತ್ರೋದ್ಯಮ, ಕೈಗಾರಿಕೆಗಳು, ಬಟ್ಟೆ ವ್ಯಾಪಾರ, ಚಿನ್ನದ ವ್ಯಾಪಾರ, ಗುಡಿಕೈಗಾರಿಕೆ ಸೇರಿದಂತೆ ಅನೇಕ ಸಣ್ಣ ಪುಟ್ಟ ಉದ್ಯಮಗಳ ಮೇಲೆ ಈ ಲಾಕ್‍ಡೌನ್ ದೊಡ್ಡ ಪರಿಣಾಮ ಬೀರಿದೆ. ಆದರೆ, ಧಾರವಾಡ ಹಾಲು ಒಕ್ಕೂಟಕ್ಕೆ ಬೇಡಿಕೆಗಿಂತಲೂ ಹೆಚ್ಚಿನ ಹಾಲು ಪೂರೈಕೆಯಾಗುತ್ತಿದೆ. ಕೊರೊನಾ ಸಂದರ್ಭದಲ್ಲಿಯೂ ಇಷ್ಟೊಂದು ಹಾಲು ಹರಿದು ಬಂದರೂ ಯಾವುದೇ ಸಮಸ್ಯೆಯಾಗುತ್ತಿಲ್ಲ ಎನ್ನುವುದು ವಿಶೇಷ.
ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಧಾರವಾಡ ಕೆಎಂಎಫ್: ಧಾರವಾಡ, ಗದಗ, ಹಾವೇರಿ, ಕಾರವಾರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಧಾರವಾಡ ಹಾಲು ಒಕ್ಕೂಟ ಲಾಕ್‍ಡೌನ್ ಪೂರ್ವಕ್ಕಿಂತಲೂ ಇದೀಗ ಹೆಚ್ಚಿನ ಲಾಭದತ್ತ ಸಾಗುತ್ತಿದೆ. ಉಳಿದಂತೆ ಉತ್ಪಾದನೆಯಾಗುವ ಮೈಸೂರು ಪಾಕ್, ಫೇಡಾ, ಪನ್ನೀರ್, ತುಪ್ಪ ಸೇರಿದಂತೆ ಇತರೆ ವಸ್ತುಗಳ ಮೇಲೆಯೂ ಲಾಕ್‍ಡೌನ್ ಪರಿಣಾಮ ಬೀರಿಲ್ಲ. ಉಳಿದ ಜಿಲ್ಲೆಗಳಲ್ಲಿ ರಾಜ್ಯ ಸರಕಾರದ ಆದೇಶದಂತೆ ಹಾಲು ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಇದೆ. ಆದರೆ ಧಾರವಾಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಮಾತ್ರ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ದಿನಕ್ಕೆ ಎರಡೇ ಗಂಟೆಗಳ ಅವಧಿಯಲ್ಲಿ ಹಾಲು ಹಾಗೂ ಇತರೆ ಉತ್ಪನ್ನಗಳ ಮಾರಾಟವಾಗಿದ್ದರೂ ಕೆಎಂಎಫ್ ಇದೀಗ ಸಾಕಷ್ಟು ಲಾಭ ಗಳಿಸಿದೆ.
ಪ್ರತಿ ದಿನ 3.15 ಲಕ್ಷ ಲೀಟರ್ ಹಾಲು: ಕೆಎಂಎಫ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಿಂದ ಲಾಕ್‍ಡೌನ್ ಪ್ರಾರಂಭವಾದ ಬಳಿಕ ಪ್ರತಿ ದಿನ 3.15 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಲಾಕ್‍ಡೌನ್ ಪೂರ್ವದಲ್ಲಿ ಪ್ರತಿ ದಿನ 2.85 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿತ್ತು. ಪ್ರತಿ ದಿನ ಸರಾಸರಿ 25 ರಿಂದ 30 ಸಾವಿರ ಲೀಟರ್ ಹಾಲು ಹೆಚ್ಚಳವಾಗಿದೆ. ಇದರಿಂದ ವಾಹಿವಾಟಿನಲ್ಲಿಯೂ ವೃದ್ಧಿ ಕಂಡು ಬಂದಿದ್ದು, ಬರುವ ದಿನಗಳಲ್ಲಿಯೂ ಇದೇ ಪ್ರಮಾಣ ಉಳಿಸಿಕೊಂಡು ಹೋಗಲು ಗುರಿ ಹಾಕಿಕೊಳ್ಳಲಾಗುತ್ತಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಲೋಹಿತೇಶ್ವರ ತಿಳಿಸಿದ್ದಾರೆ.
ದಿನಕ್ಕೆ 1.03 ಲಕ್ಷ ಲೀಟರ್ ಹಾಲು ಮಾರಾಟ: ಕೆಎಂಎಫ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಿಗೆ ಲಾಕ್‍ಡೌನ್ ಪ್ರಾರಂಭವಾದ ಮೇಲೆ ಪ್ರತಿ ದಿನ 1.03 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಲಾಕ್‍ಡೌನ್ ಪೂರ್ವದಲ್ಲಿ ಪ್ರತಿ ದಿನ 1.07 ರಿಂದ 1.08 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿತ್ತು. 4 ರಿಂದ 5 ಸಾವಿರ ಲೀಟರ್ ಹಾಲಿನ ವ್ಯಾಪಾರದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ, ಇಷ್ಟು ವ್ಯಾತ್ಯಾಸವಾದರೂ ಯಾವುದೇ ರೀತಿಯಲ್ಲಿ ನಷ್ಟಕ್ಕೆ ಕಾರಣವಾಗಿಲ್ಲ. ಹಾಲು ವ್ಯಾಪಾರ ನಡೆಯದಿದ್ದರೂ ಸಹಿತ ಆ ಹಾಲನ್ನು ಪೌಡರ್ ಮಾಡಿ ಸಂಗ್ರಹಣೆ ಮಾಡಿ ಇಡಲು ಅವಕಾಶವಿರುವುದು ಲಾಭಕ್ಕೆ ಕಾರಣವಾಗಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೋಟೆಲ್, ಕ್ಯಾಂಟಿನ್, ಪಿಜಿ ಸೆಂಟರ್, ಹಾಸ್ಟೆಲ್ಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾಲು ಸರಬರಾಜಾಗುತ್ತಿತ್ತು. ಆದರೆ ಅದೀಗ ನಿಂತು ಹೋಗಿದೆ. ಅಲ್ಲದೇ ಕೇವಲ ಎರಡು ಗಂಟೆ ಮಾತ್ರ ಖರೀದಿಗೆ ಅವಕಾಶ ನೀಡಿದ ಪರಿಣಾಮದಿಂದ ಸಾಕಷ್ಟು ಪ್ರಮಾಣದಲ್ಲಿ ಹಾಲು ಮಾರಾಟವಾಗದೇ ಉಳಿಯುತ್ತಿದೆ. ಇದೀಗ ನಿತ್ಯವೂ ಉಳಿಯುತ್ತಿರುವ ಹಾಲಿನ ಪ್ರಮಾಣ 25 ರಿಂದ 30 ಸಾವಿರ ಲೀಟರ್. ಇನ್ನು ಉಳಿದಿರುವ ಹಾಲಿನಿಂದ ಯಾವುದೇ ನಷ್ಟವಾಗುತ್ತಿಲ್ಲ. ಏಕೆಂದರೆ ಹೀಗೆ ಉಳಿದ ಹಾಲಿನಿಂದ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ತಯಾರಾಗುತ್ತಿರುವ ಉತ್ಪನ್ನಗಳು ಕೂಡ ಅಷ್ಟೇ ಪ್ರಮಾಣದಲ್ಲಿ ಮಾರಾಟವಾಗುತ್ತಿರುವುದು ಲಾಭಕ್ಕೆ ಕಾರಣವಾಗಿದೆ.
ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಲೋಹಿತೇಶ್ವರ, ಲಾಕ್‍ಡೌನ್‍ನಿಂದಾಗಿ ಕೆಎಂಎಫ್‍ಗೆ ಯಾವುದೇ ರೀತಿಯ ಪರಿಣಾಮವಾಗಿಲ್ಲ. ಪ್ರತಿ ದಿನಕ್ಕಿಂತ ಈಗ ಹಾಲಿನ ಸಂಗ್ರಹಣೆ ಹೆಚ್ಚಾಗಿದೆ. ಸ್ವಲ್ಪ ಮಟ್ಟಿಗೆ ವ್ಯಾಪಾರ ಕಡಿಮೆಯಾಗಿದೆ ಅಷ್ಟೇ. ವ್ಯಾಪಾರ ಕಡಿಮೆ ಆದರೂ ಏನು ಸಮಸ್ಯೆಯಾಗುವುದಿಲ್ಲ. ಲಾಕ್‍ಡೌನ್‍ನಲ್ಲಿ ಕೆಎಂಎಫ್ ಲಾಭದತ್ತ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ತಾಯಿಗೆ ಕೊರೊನಾ ಬಂದ್ರೆ ಎಳೆಕಂದಮ್ಮಗಳಿಗೆ ಎದೆಹಾಲುಣಿಸಲಿದ್ದಾರೆ ಬೆಂಗಳೂರಿನ ಅಮ್ಮಂದಿರು
ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಹಾಲಿನ ವಾಹನ ಪಲ್ಟಿ; 1 ಸಾವಿರ ಲೀಟರ್ ಹಾಲು ರಸ್ತೆ ಪಾಲು