ಧಾರವಾಡ: ಜೈಲಿಗಾಗಿ ಹಾಕಿದ ಜಾಮರ್ನಿಂದ ಊರಿನ ಜನರಿಗೆ ಶಿಕ್ಷೆ! ಸ್ಥಳೀಯರ ಸಮಸ್ಯೆ ಒಂದೇ ಎರಡೇ…
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಸಿಗ್ನಲ್ ಜಾಮರ್ ಸುತ್ತಮುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ. ಮೊಬೈಲ್ ಸಂಪರ್ಕ ಕಡಿತದಿಂದ ವಿದ್ಯಾರ್ಥಿಗಳು, ರೋಗಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜಾಮರ್‌ನಿಂದಾಗಿ ಜೈಲಿನ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಹ ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಧಾರವಾಡ, ಮಾರ್ಚ್ 8: ಜೈಲುಗಳಲ್ಲಿ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಬಗೆ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದರಲ್ಲೂ ಕೇಂದ್ರ ಕಾರಾಗೃಹ (Central Jail) ಎಂದರೆ ನಟೋರಿಯಸ್ ಕೈದಿಗಳು ಇರುವುದರಿಂದ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ. ಇದರಲ್ಲಿ, ಜೈಲಿನೊಳಗೆ ಸಿಗ್ನಲ್ ಜಾಮರ್ ಅಳವಡಿಕೆ ಕೂಡ ಒಂದು. ಆದರೆ ಇಂಥ ವ್ಯವಸ್ಥೆಯಿಂದಾಗಿ ಅಕ್ರಮಗಳು ಕಡಿಮೆಯಾಗುತ್ತಿವೆಯಾದರೂ ಇದರಿಂದಾಗಿ ಸುತ್ತಮುತ್ತಲಿನ ಜನರು ಶಿಕ್ಷೆಗೆ ಒಳಗಾಗುವಂತೆ ಆಗುತ್ತಿದೆ. ಇದಕ್ಕೆ ಉದಾಹರಣೆ ಅಂದರೆ, ಧಾರವಾಡದ ಕೇಂದ್ರ ಕಾರಾಗೃಹದ (Dharawad Central Jail) ಸುತ್ತಮುತ್ತಲಿನ ಬಡಾವಣೆಗಳ ಜನರ ಬದುಕು.
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನೂರಾರು ಜನ ಕೈದಿಗಳಿದ್ದಾರೆ. ಅದರಲ್ಲಿ ಅನೇಕರು ನಟೋರಿಯಸ್ ಕೈದಿಗಳು. ಮತ್ತೆ ಕೆಲವರು ಭಯೋತ್ಪಾದನೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದವರು ಕೂಡ ಇದ್ದಾರೆ. ಇಂಥ ಜೈಲಿನಲ್ಲಿ ಅಕ್ರಮ ನಡೆಯದಂತೆ ಮತ್ತು ಮೊಬೈಲ್ ಬಳಕೆಗೆ ಅವಕಾಶವಿಲ್ಲದಂತೆ ಮಾಡಲು ಜಾಮರ್ ಅಳವಡಿಕೆ ಮಾಡಲಾಗಿದೆ. ಆದರೆ, ಇತ್ತೀಚಿಗೆ ಇದು ಸುತ್ತಮುತ್ತಲಿನ ಜನರ ಬದುಕಿಗೆ ತೊಂದರೆ ಮಾಡುತ್ತಿದೆ. ಏಕೆಂದರೆ ಕೆಲ ದಿನಗಳ ಹಿಂದೆ ಜಾಮರ್ನ ರೇಡಿಯೇಶನ್ ಹೆಚ್ಚಳ ಮಾಡಿರುವುದರಿಂದ ಈ ಜೈಲಿನ ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ. ಇದರಿಂದಾಗಿ ದಿನನಿತ್ಯದ ಬದುಕಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ವಿದ್ಯಾರ್ಥಿಗಳ ಕಲಿಕೆಗೂ ಸಮಸ್ಯೆ
ಇನ್ನು ಈ ಬಡಾವಣೆಯಲ್ಲಿರುವ ವಿದ್ಯಾರ್ಥಿಗಳ ಸ್ಥಿತಿಯಂತೂ ಹೇಳತೀರದು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಈ ಜಾಮರ್‌ನಿಂದಾಗಿ ಮೊಬೈಲ್ ಸಿಗ್ನಲ್ ಸಿಗದೇ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.
ನರ್ಸಿಂಗ್ ವಿದ್ಯಾರ್ಥಿಗಳು, ರೋಗಿಗಳಿಗೆ ಸಮಸ್ಯೆ
ಈ ಜೈಲಿಗೆ ಹತ್ತಿರದಲ್ಲೇ ಡಿಮ್ಹಾನ್ಸ್ ಆಸ್ಪತ್ರೆ ಇದೆ. ಇಲ್ಲಿ ನೂರಾರು ನರ್ಸಿಂಗ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೇ, ನಿತ್ಯವೂ ನೂರಾರು ಜನ ರೋಗಿಗಳು ಹಾಗೂ ಅವರ ಸಹವರ್ತಿಗಳು ಇಲ್ಲಿಗೆ ಬರುತ್ತಾರೆ. ಒಂದು ಬಾರಿ ಡಿಮ್ಹಾನ್ಸ್ ಆಸ್ಪತ್ರೆ ಒಳಹೊಕ್ಕರೆ ಸಾಕು, ಅವರ ಮೊಬೈಲ್ ಸಿಗ್ನಲ್ ಬಂದ್ ಆಗಿ ಹೋಗುತ್ತೆ. ಇದರಿಂದಾಗಿ ತಮ್ಮವರ ಸಂಪರ್ಕಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ಕಾಲಕ್ಕೆ, ಈ ಜೈಲು ನಗರದ ಹೊರಭಾಗದಲ್ಲಿ ಇತ್ತಾದರೂ ಇದೀಗ ನಗರ ಬೆಳೆದಿದ್ದರಿಂದ ನಗರದ ನಡುವೆ ಬಂದಾಗಿದೆ. ಹೀಗಾಗಿ ಇದೀಗ ಈ ಜೈಲನ್ನು ನಗರದಿಂದ ಹೊರಗಡೆಗೆ ಶಿಫ್ಟ್ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಜೈಲಿನ ಅಧಿಕಾರಿಗಳಿಗೂ ಸಂವಹನ ಸಮಸ್ಯೆ, ಲ್ಯಾಂಡ್ಲೈನ್ ಕೂಡ ಇಲ್ಲ
ಈ ಬಗ್ಗೆ ಮಾಹಿತಿಗಾಗಿ ಜೈಲಿನ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೇ ಸಿಗುತ್ತಿಲ್ಲ. ಅದಕ್ಕೂ ಕಾರಣ ಜಾಮರ್! ಈ ಸಮಸ್ಯೆಯಿಂದ ಬಚಾವ್ ಆಗಲು ಜೈಲು ಸಿಬ್ಬಂದಿ ಲ್ಯಾಂಡ್ ಲೈನ್ ಆದರೂ ಬಳಸಬಹುದಿತ್ತು. ಆದರೆ ಇರುವ ಲ್ಯಾಂಡ್ ಲೈನ್ ಫೋನನ್ನೂ ತೆಗೆದು ಹಾಕಲಾಗಿದೆ. ಹೀಗಾಗಿ ಅವರಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಗುತ್ತಲೇ ಇಲ್ಲ.
ಇದನ್ನೂ ಓದಿ: ಕಾಂಗ್ರೆಸ್ನವರೇ ಆಗಿರಲಿ, ನಮ್ಮ ಕುಟುಂಬದವರೇ ಆಗಿರಲಿ ಅಂತವರನ್ನ ಕ್ಷಮಿಸಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ
ಒಟ್ಟಿನಲ್ಲಿ, ಜೈಲಿನಲ್ಲಿ ಅಕ್ರಮಗಳನ್ನು ತಡೆಯಲು ಅಳವಡಿಸಲಾಗಿರುವ ಜಾಮರ್ ಸುತ್ತಮುತ್ತಲಿನ ಜನರ ಬದುಕಿನೊಂದಿಗೆ ಆಟವಾಡುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Sat, 8 March 25