ಹುಬ್ಬಳ್ಳಿ: ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 500 ಕ್ಷಿಂಟಾಲ್ ಅನ್ನಭಾಗ್ಯ ಅಕ್ಕಿ ಜಪ್ತಿ, ಇಬ್ಬರ ಕಾರ್ಡ್ ರದ್ದು
ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಅನ್ನಭಾಗ್ಯ ಅಕ್ಕಿಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ದಾಳಿ ನಡೆಸಿದೆ. ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಇಬ್ಬರು ಮಹಿಳೆಯರು ಅಕ್ರಮವಾಗಿ ಅಕ್ಕಿ ಮಾರಾಟ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿದವರ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ, ಮಾರ್ಚ್ 26: ಅನ್ನಭಾಗ್ಯ (Annabhagya) ಅಕ್ಕಿಯನ್ನು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ (Old Hubballi) ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಸುಮಾರು 500 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ, ಟಾಟಾ ಏಸ್ ವಾಹನದಲ್ಲಿ ಲೋಡ್ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆಹಾರ ಅಧಿಕಾರಗಳು ಬರುತ್ತಲೇ ದಂಧೆಕೋರರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಇದೇ ಹಳೇ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಇಬ್ಬರು ಮಹಿಳೆಯರು ಮತ್ತೊಂದು ಕಡೆ ಅಕ್ರಮವಾಗಿ 50 ಕೆಜಿಯ ಎರಡು ಅನ್ನಭಾಗ್ಯ ಅಕ್ಕಿ ಮೂಟೆಗಳನ್ನು ಮಾರಾಟ ಮಾಡುತ್ತಿದ್ದರು. ಈ ವಿಚಾರ ತಿಳಿದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಮಹಿಳೆಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.
ಅಧಿಕಾರಿಗಳು, ಮಹಿಳೆಯರನ್ನು ಪ್ರಶ್ನಿಸಿದಾಗ, “ನಾವು ಮಾರಾಟ ಮಾಡಲು ಬಂದಿಲ್ಲ” ಎಂದು ವಾದಿಸಿದರು. ಕೊನೆಗೆ ಆಹಾರ ಇಲಾಖೆ ಅಧಿಕಾರಿಗಳು ಎರಡು ಅಕ್ಕಿ ಮೂಟೆಗಳನ್ನು ಸೀಜ್ ಮಾಡಿದ್ದಾರೆ.
ಪಡಿತರ ಚೀಟಿ ರದ್ದು!
ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿ ವಸುಂಧರಾ ಮಾತನಾಡಿ, ಸರ್ಕಾರ 15 ಕೆಜಿ ಅನ್ನಭಾಗ್ಯ ಕೊಟ್ಟಿದೆ. ಆದರೆ, ಕೆಲವರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮಾಹಿತಿ ಇದೆ. ಇವತ್ತು ರೆಡ್ ಹ್ಯಾಂಡ್ ಆಗಿ ಮಾರಾಟ ಮಾಡುವವರು ಸಿಕ್ಕಿಬಿದ್ದಿದ್ದಾರೆ. ಮಾರಾಟ ಮಾಡಲು ಬಂದವರ ಪಡಿತರ ಚೀಟಿಗಳನ್ನು ರದ್ದು ಮಾಡುವುದಾಗಿ ಹೇಳಿದರು.
ಲಕ್ಷಾಂತರ ರೂ. ಮೌಲ್ಯದ ಪೌಷ್ಟಿಕ ಆಹಾರದ ಪಾಕೇಟ್‌ಗಳು ಜಪ್ತಿ
ಕಳೆದ ತಿಂಗಳು ಫೆಬ್ರವರಿ 15 ರಂದು ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಗೋದಾಮಿನೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ, ಬಡ ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ವಿತರಣೆ ಮಾಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪೌಷ್ಟಿಕ ಆಹಾರದ ಪಾಕೇಟ್‌ಗಳು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ: ಧಾರವಾಡಲ್ಲಿವೆ ಪ್ಲಾಸ್ಟಿಕ್ ಮುಕ್ತ ಗ್ರಾಮಗಳು: ಕ್ಯಾನ್ಸರ್ ತಡೆಗೆ ಒಂದು ದಿಟ್ಟ ಹೆಜ್ಜೆ
ಇದೇ ಪ್ರಕರಣದಲ್ಲಿ ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರು 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 26 ಜನರನ್ನು ಬಂಧಿಸಿದ್ದರು. ಅಲ್ತಾಫ್ ಕಲಾದಗಿ, ಸಲೀಂ ಬೇಪಾರಿ, ಸಲೀಂ ಶೇಖ್, ಸಲೀಂ ಅತ್ತಾರ, ದಾಪೀರ್ ಚೌಧರಿ ಮತ್ತು ಬಸವರಾಜ ವಾಲ್ಮೀಕಿ ಎನ್ನುವ ಯುವಕರನ್ನು ಪೊಲೀಸರು ಕಂಬಿ ಹಿಂದೆ ಕಳಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Wed, 26 March 25