ಚರ್ಚ್ ನಿರ್ಮಾಣಕ್ಕೆ ಕೋಟ್ಯಂತರ ಬೆಲೆಯ ಜಾಗ ಧಾರವಾಡ ಪಾಲಿಕೆಯಿಂದ ದಾನ! ಮತಾಂತರದ ಉದ್ದೇಶ -ಹಿಂದೂ ಸಂಘಟನೆಗಳ ತೀವ್ರ ವಿರೋಧ
Sri Ram Sena opposition: ಕೋಟ್ಯಾಂತರ ರೂ ಮೌಲ್ಯದ ಜಾಗವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ನಿರ್ಮಾಣಕ್ಕೆ ನೀಡಲು ಉದ್ದೇಶಿಸಿದೆ. ಇದು ಹಿಂದೂಪರ ಸಂಘಟನೆಗಳ ಕಂಗೆಣ್ಣಿಗೆ ಗುರಿಯಾಗಿದೆ. ಈ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದವರೇ ಇಲ್ಲ. ಆದರೆ ಈ ಕಟ್ಟಡ ನಿರ್ಮಾಣದ ಹಿಂದೆ ಮತಾಂತರದ ಉದ್ದೇಶವಿದೆ ಎನ್ನಲಾಗಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಲ್ಪಸಂಖ್ಯಾತರನ್ನು ಓಲೈಸೋ ರಾಜಕಾರಣ ಹೆಚ್ಚಾಗುತ್ತೆ ಅನ್ನೋ ಆರೋಪ ಕೇಳಿ ಬರುತ್ತಲೇ ಇದೆ. ಅದರಲ್ಲೂ ಬಿಜೆಪಿ ಪದೇ ಪದೇ ಇದನ್ನೇ ಹೇಳುತ್ತಿದೆ. ಇದೇ ವೇಳೆ ಹಿಂದೂಪರ ಸಂಘಟನೆಗಳು ಕೂಡ ಇದನ್ನೇ ಆರೋಪಿಸುತ್ತಿವೆ. ಇಂಥ ಆರೋಪಕ್ಕೆ ಪುಷ್ಟಿ ಅನ್ನುವಂತೆ ಇದೀಗ ಧಾರವಾಡದಲ್ಲಿ ಘಟನೆಯೊಂದು ನಡೆದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಜಾಗವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ನಿರ್ಮಿಸಲು ನೀಡಲು ಉದ್ದೇಶಿಸಿರೋದು ಬೆಳಕಿಗೆ ಬಂದಿದೆ. ಇದು ಹಿಂದೂಪರ ಸಂಘಟನೆಗಳ ಕಂಗೆಣ್ಣಿಗೆ ಗುರಿಯಾಗಿದೆ.
ವಿವಾದದ ಸಮ್ಮುಖದಲ್ಲಿ ಶ್ರೀರಾಮ ಸೇನೆ ಸಂಘಟನೆ ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಇವರ ಈ ಪ್ರತಿಭಟನೆಗೆ ಕಾರಣ ಧಾರವಾಡ ನಗರದ ಸತ್ತೂರು ಬಡಾವಣೆಯಲ್ಲಿರೋ ಜಾಗವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲು ಉದ್ದೇಶಿಸಿರುವುದು. ಇದರಂಗವಾಗಿ ಇದೀಗ ಪತ್ರಿಕೆಗಳಲ್ಲಿ ಜಾಹಿರಾತನ್ನು ನೀಡಿ, ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನಿಸಿದೆ.
1496 ಚದರ ಮೀಟರ್ ಜಾಗೆಯಲ್ಲಿ ಎಲ್-ಷಡ್ಡಾಯ ಟ್ರಸ್ಟ್ ವತಿಯಿಂದ ಧಾರ್ಮಿಕ ಉದ್ದೇಶದ ಪ್ರಾರ್ಥನಾ ಭವನ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಪರವಾನಿಗೆಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಧಾರ್ಮಿಕ ಉದ್ದೇಶದ ಕಟ್ಟಡಗಳಿಗೆ ಪರವಾನಿಗೆ ನೀಡುವ ಪೂರ್ವದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಣೆ ನೀಡಲಾಗಿದೆ. ಆದರೆ ಈ ಜಾಗೆ ಸಾರ್ವಜನಿಕರ ಉಪಯೋಗಕ್ಕಾಗಿ ಇದ್ದು, ಇದನ್ನು ಒಂದು ಸಮುದಾಯದವರಿಗೆ ನೀಡಲು ವಿರೋಧ ವ್ಯಕ್ತವಾಗಿದೆ ಎಂದು ಗಂಗಾಧರ ಕುಲಕರ್ಣಿ, ಶ್ರೀರಾಮ ಸೇನೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
Also Read: Monkey park- ಮಂಗಗಳು ಊರಿನತ್ತ ಬರುತ್ತಿವೆ, ಉಡುಪಿ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ನಿರ್ಮಿಸಲು ಜನಪ್ರತಿನಿಧಿಗಳು ವಿಫಲ
ಅಚ್ಚರಿಯ ಸಂಗತಿ ಅಂದರೆ ಇದುವರೆಗೂ ಅಲ್ಲಿ ಯಾವುದೇ ಕಟ್ಟಡವೇ ಇರಲಿಲ್ಲ. ಆದರೆ ಸುಮಾರು ಐದು ತಿಂಗಳ ಹಿಂದಷ್ಟೇ ಇಲ್ಲಿ ಕಟ್ಟಡವೊಂದರ ನಿರ್ಮಾಣವಾಗಿದ್ದು, ಅದಕ್ಕೂ ಕೂಡ ಯಾವುದೇ ಅನುಮತಿಯನ್ನು ಪಡೆದಿಲ್ಲವಂತೆ. ಇದೇ ಕಾರಣಕ್ಕೆ ಇದೀಗ ಇದರ ವಿರುದ್ಧ ಹೋರಾಟಕ್ಕೆ ಇಳಿದಿರೋ ಹಿಂದೂಪರ ಸಂಘಟನೆ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಈ ಜಾಗೆಯನ್ನು ನೀಡಲು ಅವಕಾಶ ಕೊಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ನಮ್ಮ ಕರಾವಳಿ ಬೀಚ್ಗಳನ್ನು ಮಾಲ್ಡೀವ್ಸ್ಗೆ ಪರ್ಯಾಯ ಮಾಡುವ ಮೊದಲು ಸ್ಥಳೀಯರ ಅಹವಾಲು ಕೇಳಿ
ಅಲ್ಲದೇ ಈ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದವರೇ ಇಲ್ಲ. ಇಲ್ಲಿ ಕಟ್ಟಡ ನಿರ್ಮಾಣದ ಹಿಂದೆ ಮತಾಂತರದ ಉದ್ದೇಶವಿದೆ. ಈ ಕಟ್ಟಡ ನಿರ್ಮಾಣವಾದ ಬಳಿಕ ಇಲ್ಲಿ ಮತಾಂತರ ಪ್ರಕ್ರಿಯೆ ಶುರುವಾಗಲಿವೆ. ಇದೇ ಕಾರಣಕ್ಕೆ ಚರ್ಚ್ ನಿರ್ಮಿಸಲು ಯತ್ನಿಸಲಾಗುತ್ತಿದೆ ಅನ್ನೋದು ಹಿಂದೂಪರ ಕಾರ್ಯಕರ್ತರ ಆರೋಪ.
ಈ ಪ್ರಕರಣದಿಂದಾಗಿ ಧಾರವಾಡದಲ್ಲಿ ಇದೀಗ ಮತ್ತೆ ಧರ್ಮ ದಂಗಲ್ ಶುರುವಾಗೋ ಲಕ್ಷಣಗಳಿವೆ. ಏಕೆಂದರೆ ಈ ಜಾಗೆ ಸುಮಾರು 16 ಗುಂಟೆ ಇದ್ದು, ಇದು ಸಣ್ಣ ಪ್ರದೇಶವಲ್ಲ. ಹೀಗಾಗಿ ಈ ಪ್ರಕರಣ ಮತ್ತೆ ಸಂಚಲನ ಉಂಟು ಮಾಡೋದರಲ್ಲಿ ಯಾವುದೇ ಅನುಮಾನ ಇಲ್ಲ. ಇದನ್ನು ಜಿಲ್ಲಾಡಳಿತ ಹೇಗೆ ನಿಭಾಯಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 am, Sat, 9 March 24