ನಮ್ಮಲ್ಲಿ ಜಯಂತಿ ಪದ್ಧತಿಯೇ ಇಲ್ಲ, ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೇಳಿರುವುದು ತಪ್ಪು: ಸಿ. ಎಂ ಇಬ್ರಾಹಿಂ
ನಮ್ಮಲ್ಲಿ ಜಯಂತಿ ಪದ್ಧತಿಯೇ ಇಲ್ಲ, ಇಸ್ಲಾಂ ಧರ್ಮದಲ್ಲಿ ಫೋಟೋ ಇಟ್ಟು ಹಾರ ಹಾಕುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ ಹೇಳಿದ್ದಾರೆ
ಧಾರವಾಡ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ (Hubli Idgah Maidan) ಟಿಪ್ಪು ಜಯಂತಿ ಆಚರಿಸಲು ಅನುಮತಿ ಕೇಳಿರುವುದು ತಪ್ಪು. ಈ ಜಯಂತಿಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭಿಸದರು. ನಮ್ಮಲ್ಲಿ ಜಯಂತಿ ಪದ್ಧತಿಯೇ ಇಲ್ಲ ಎಂದು ಧಾರವಾಡದಲ್ಲಿ (Dharwad) ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಸ್ಲಾಂ ಧರ್ಮದಲ್ಲಿ ಫೋಟೋ ಇಟ್ಟು ಹಾರ ಹಾಕುವುದಿಲ್ಲ. ಯಾವುದಾದರೂ ಗುರುಗಳ ಫೋಟೊ ಹಾಕಿ ಕಾರ್ಯಕ್ರಮ ಮಾಡಿದ್ದು ನೋಡಿದ್ದೀರಾ? ಟಿಪ್ಪು ಸುಲ್ತಾನ್ ಹುತಾತ್ಮರು, ದೈವ ಭಕ್ತರು. ಸರ್ವ ಧರ್ಮ ಪ್ರಿಯರು. ಶೃಂಗೇರಿ ಶಾರದಾ ಪೀಠ ಉಳಿಸಿದ ಚರಿತ್ರೆ ಇದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಈಗ ಜಯಂತಿ ಅವಕಾಶ ಕೇಳಿದ್ದಾರೆ. ಕಾಂಗ್ರೆಸ್‌ನಿಂದಾಗಿ ಎಂಐಎಂಐಎ ಬರೋಕೆ ಅವಕಾಶ ಸಿಕ್ಕಿದೆ. ಹುಡುಗರಿಗೆ ಸದ್ಬುದ್ಧಿ ಹೇಳಿ ಕರೆದುಕೊಂಡು ಬರೋ ಜವಾಬ್ದಾರಿ ನನ್ನದು. ಎಂಐಎಂಐಎಗೆ ನಾವು ಬಯ್ಯೋದಿಲ್ಲ. ಆದರೆ ನಿಮ್ಮ ಗಲ್ಲಿಯಲ್ಲಿ ನೀವಿರಿ ಅಂತಾ ಹೇಳುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯಗೆ ಈಗ ವರುಣಾ ಕ್ಷೇತ್ರವೊಂದೇ ಉಳಿದಿರುವುದು
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಾಲಿಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಥೆ ಮುಗಿದಿದೆ. ಹೀಗಾಗಿ ಸಿದ್ದರಾಮಯ್ಯಗೆ ಈಗ ಇರೋದು ವರುಣಾ ಕ್ಷೇತ್ರ ಮಾತ್ರ. ಅದಕ್ಕೂ ಸಹ ಸುತ್ತೂರು ಶ್ರೀಗಳ ಕೃಪೆ ಇರಬೇಕು. ಸ್ವಾಮೀಜಿ ಕೃಪೆ ಇದ್ದರೇ ಮಾತ್ರ ವರುಣಾ, ಇಲ್ಲದಿದ್ದರೇ ಅದು ಕರುಣಾ ಎಂದು ವ್ಯಂಗ್ಯವಾಡಿದರು.
ಎರಡು ಪಕ್ಷ ನೋಡಿ ಜನ ಬೇಸತ್ತಿದ್ದಾರೆ
ಎರಡು ಪಕ್ಷದ ಆಡಳಿತ (ಬಿಜೆಪಿ ಮತ್ತು ಕಾಂಗ್ರೆಸ್) ನೋಡಿ ಜನ ಬೇಸತ್ತಿದ್ದಾರೆ. ಒಬ್ಬರು ಪಾದಯಾತ್ರೆ ಮಾಡುತ್ತಿದ್ದು, ಪಾದಯಾತ್ರೆ ಏಕೆ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಎರಡು ರಾಜಕೀಯ ಪಕ್ಷಗಳು ಅವರ ಚಿಂತೆಯಲ್ಲಿದ್ದಾರೆ. ಒಬ್ಬರಿಗೆ ಸರ್ಕಾರ ನಡೆಸೋದಕ್ಕೆ ಗೊತ್ತಿಲ್ಲ. ಸರ್ಕಾರ ನಡೆಸಲು ಬರದವರಿಗೆ ಹೇಗೆ ನಡೆಸಬೇಕು ಅಂತಾ ಹೇಳಬೇಕಾದವರಿಗೆ ಹೇಳೋದು ಗೊತ್ತಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಒಬ್ಬರಿಗೆ ವಿರೋಧ ಪಕ್ಷದಲ್ಲಿದ್ದು ಗೊತ್ತಿಲ್ಲ ಅಂಥವರು ವಿರೋಧ ಪಕ್ಷದಲ್ಲಿದ್ದಾರೆ. ಆಡಳಿತ ನಡೆಸೋಕೆ ಗೊತ್ತಿಲ್ಲದವರು ಆಡಳಿತದಲ್ಲಿದ್ದಾರೆ. ಇದು ಒಂದು ರೀತಿ ಒಬ್ಬರು ಭರತನಾಟ್ಯ ಕಲಿತು ಕ್ಯಾಬರೆ ಮಾಡಬೇಕಾಗಿದೆ. ಕ್ಯಾಬರೆ ಕಲಿತವರು ಭರತನಾಟ್ಯ ಮಾಡಬೇಕಿದೆ. ನಮ್ಮಪ್ಪ ಮೋದಿ, ನಮ್ಮವ್ವ ಸೋನಿಯಾ ಅಂತಾ ಕಪ್ಪ ಕೊಡುತ್ತಿದ್ದಾರೆ. ಅದಕ್ಕೆ ಡಿಕೆಶಿಗೆ ಇಡಿ ನೋಟಿಸ್ ಬಂದಿದೆ. ಎಲ್ಲ ಹಣ ಸೇರೋದು ದೆಹಲಿಗೆ. ಸಿದ್ದರಾಮಯ್ಯ ಕಾಲದಲ್ಲಿ ಎಲ್ಲ ಮಂತ್ರಿ ದುಡ್ಡು ಮಾಡಿದ್ದಾರೆ. ಜೈಲಿನಲ್ಲಿ ಇದ್ದು ಬಂದವರು ಊರ ಹೊರಗಡೆ ಬರ್ತಡೆ ಮಾಡುತ್ತಿದ್ದಾರೆ. ಅದಕ್ಕೆ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿನಯ ಕುಲಕರ್ಣಿ ಜನ್ಮದಿನದ ಕುರಿತು ಕಾಲೆಳೆದರು.
ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿರೋ ಎಲ್ಲರನ್ನೂ ಟೀಕೆ ಮಾಡೋದಿಲ್ಲ
ನಾನು ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿರೋ ಎಲ್ಲರನ್ನೂ ಟೀಕೆ ಮಾಡೋದಿಲ್ಲ. ಕಾಲಲ್ಲಿ ಚಪ್ಪಲಿ ಇಲ್ಲದೇ ಓಡಾಡಿದವರನ್ನು ನೋಡಿದ್ದೇನೆ. ಜಗನ್ನಾಥರಾವ್ ಜೋಶಿ ಅವರ ಹತ್ತಿರ ಆಸ್ಪತ್ರೆಗೆ ಬಿಲ್ ಕಟ್ಟೋಕೆ ದುಡ್ಡು ಇರಲಿಲ್ಲ. ಇವರನ್ನು ಆರ್‌ಎಸ್‌ಎಸ್ ಅಂದರೇ ನಾನು ಒಪ್ಪುತ್ತೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ರಾಜ್ಯ ನಡೆಸೋಕೆ ಬಂದಿದ್ದಿರೀ ಹುಚ್ಚು ಮುಂಡೆ ಮಕ್ಳಾ? ಮೊಟ್ಟೆ ವಿಚಾರ ಪಠ್ಯ ವಿಚಾರ ಇದೆಲ್ಲ ಬೇಕಾ? ಸಮಾನತೆ ಕೂಗು ಕೊಟ್ಟ ಬಸವಣ್ಣನ ನಾಡಿನಲ್ಲಿ ನಾವು ಎಲ್ಲಿ ಹೊರಟಿದ್ದೇವೆ? ಬ್ರಾಹ್ಮಣ, ಲಿಂಗಾಯತ ಈಗ ಪಂಚಮಸಾಲಿ ಮೀಸಲಾತಿ ಅಂತಾ ಹೊರಟಿದ್ದೇವೆ. ಗುರು ಮತ್ತು ಗುರಿಯೇ ಇಲ್ಲ. ಒಂದೆಡೆ ಕೇಶವ ಕೃಪ, ಮತ್ತೊಂದೆಡೆ ಬಸವ ಕೃಪ. ಇದರ ಮಧ್ಯ ಜನ ಸಂಕಷ್ಟ ಎದುರಿಸುವಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್-ಬಿಜೆಪಿ ಒಂದೇ ಬೀದಿಯಲ್ಲಿನ ವೇಶ್ಯೆಯರಂತೆ
ಕಾಂಗ್ರೆಸ್-ಬಿಜೆಪಿ ಒಂದೇ ಬೀದಿಯಲ್ಲಿನ ವೇಶ್ಯೆಯರಂತೆ. ನಿನ್ನ ಕಡೆ ಅಷ್ಟು ಗಿರಾಕಿ ನನ್ನ ಕಡೆ ಇಷ್ಟ ಗಿರಾಕಿ ಅಂತಾ ಜಗಳವಾಡುತ್ತಾರೆ. ಭ್ರಷ್ಟಾಚಾರ ಬಗ್ಗೆ ಕೇಳಿದರೇ ನಿಮ್ಮ ಕಾಲದಲ್ಲಿ ತಿಂದಿಲ್ವಾ ಅಂತಾರೆ. ಇದು ರೀತಿ ಒಂದೇ ಬೀದಿಯಲ್ಲಿರೋ ವೇಶ್ಯೆಯರಂತೆ ಜಗಳ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಮೂಲ ತತ್ವ ಅಂತಾ ಪ್ರಹ್ಲಾದ ಜೋಶಿಗೆ ಕೇಳಬೇಕಿದೆ ಎಂದು ಮಾತನಾಡಿದ್ದಾರೆ.
ಕೃಷಿಯಿಂದ ಎಲ್ಲ ಅಭಿವೃದ್ಧಿ ಎಂದು ಚಾಣಕ್ಯ ಹೇಳಿದ್ದ. ಆದರೆ ಇಂದು ಕೃಷಿಯನ್ನೇ ವಿನಾಶ ಮಾಡುತ್ತಿದ್ದಾರೆ. ಚಾಣಕ್ಯ ಯಾವ ದೇಶದ ರಾಜ್ಯ ಬೇಫಾರಿ ಇರ್ತಾರೆ ಆ ದೇಶ ಭಿಕಾರಿ ಅಂತಾ ಹೇಳಿದ್ದರು. ಈಗ ಮೋದಿ ಅದನ್ನೇ ಮಾಡುತ್ತಿದ್ದಾರೆ. ಮೋದಿ ಹುಟ್ಟಿಸಿದ್ದು ಅದಾನಿ, ಅಂಬಾನಿಯನ್ನು. ಇದನ್ನು ಕೇಳಿದರೇ ಇಡಿ ದಾಳಿ ಮಾಡಿಸುತ್ತಾರೆ. ನಮ್ಮ ಮೇಲಂತೂ ಇಡಿ ದಾಳಿ ಆಗೋದಿಲ್ಲ. ಏಕೆಂದರೆ ನಾನು ಏನೂ ಇಲ್ಲದ ಜಂಗಮ. ಅವರೇನಾದರೂ ದಾಳಿ ಮಾಡಿದರೇ ಅವರ ಇಟ್ಟು ಹೋಗಬೇಕು ಎಂದು ನುಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ