ಭ್ರಷ್ಟಾಚಾರದ ಕೂಪವಾದ ಧಾರವಾಡದ ಗ್ರಾಮ ಪಂಚಾಯತ್, ಪಿಡಿಒಗಳಿಂದ 24 ಲಕ್ಷ ರೂ ವಸೂಲಿಗೆ ಆದೇಶ
ಸುದೀರ್ಘ 4 ವರ್ಷಗಳ ಹೋರಾಟದ ಫಲವಾಗಿ ಪ್ರಭಾರ ಪಿಡಿಒ ಆರ್. ಆರ್. ಪಾಟೀಲ ಅವರಿಂದ 8,86,047 ರೂಪಾಯಿ ಹಾಗೂ ಪಿಡಿಒ ಶಕುಂತಲಾ ಭಜಂತ್ರಿ ಅವರಿಂದ 15,03,856 ರೂಪಾಯಿ ಸೇರಿ 23,89,903 ರೂ. ವಸೂಲಿ ಮಾಡುವಂತೆ ಸಿಇಒ ಡಾ. ಸುರೇಶ ಇಟ್ನಾಳ ಇತ್ತೀಚೆಗೆ ಆದೇಶಿಸಿದ್ದಾರೆ.
ಅಧಿಕಾರದ ವಿಕೇಂದ್ರೀಕರಣದ ಉದ್ದೇಶದಿಂದ ನಮ್ಮಲ್ಲಿ ಗ್ರಾಮ ಪಂಚಾಯತ್ ಗಳು ರೂಪುಗೊಂಡವು. ಅಧಿಕಾರ ಜನರ ಕೈಗೆ ಸಿಗಲಿ ಅನ್ನೋ ಮಹದುದ್ದೇಶ ಇದರ ಹಿಂದೆ ಇತ್ತು. ಆದರೆ ಇದೀಗ ಇದೇ ಗ್ರಾಮ ಪಂಚಾಯತ್ ಗಳು ಭ್ರಷ್ಟಾಚಾರದ ಕೂಪಗಳಾಗಿ ಹೋಗಿವೆ. ಅದಕ್ಕೊಂದು ಉದಾಹರಣೆ ಧಾರವಾಡದ ಗ್ರಾಮ ಪಂಚಾಯತ್. ಇದೀಗ ಏನೇನೋ ಅಕ್ರಮ ಮಾಡಿ ಹಣ ತಿಂದ ಇಬ್ಬರು ಪಿಡಿಒಗಳಿಗೆ ಅಧಿಕಾರಿಗಳು ಬರೋಬ್ಬರಿ ಶಾಸ್ತಿ ಮಾಡಿದ್ದಾರೆ. ತಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಲು ಆದೇಶ ನೀಡಿದ್ದಾರೆ.
ಕಾಮಗಾರಿಗಳಲ್ಲಿ ಅಕ್ರಮ; ನಿರ್ಮಿಸದ ಚರಂಡಿ ಇದೆ ಎಂದು ನಿರೂಪಣೆ; ಖೊಟ್ಟಿ ಕೂಲಿಕಾರರ ಸೃಷ್ಟಿ; ಪಂಪ್ ಮೋಟರ್ ದುರಸ್ತಿಗೆ ಬೇಕಾಬಿಟ್ಟಿ ಹಣ ಖರ್ಚು… ಇದೀಗ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾ.ಪಂ. ಇಂಥ ಸುದ್ದಿಗೆ ಕಾರಣವಾಗಿದೆ. ಇಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ ಅಕ್ರಮಗಳೆಲ್ಲಾ ಹೊರಗೆ ಬಂದಿದ್ದು, ಪಿಡಿಒಗಳಿಗೆ ಬರೋಬ್ಬರಿ ಬುದ್ಧಿ ಕಲಿಸಲು ನಿರ್ಧರಿಸಲಾಗಿದೆ. ಅಷ್ಟಕ್ಕೂ ಇಲ್ಲಿ ನಡೆದದ್ದು ಏನು ಅನ್ನೋದನ್ನ ಕೇಳಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ.
ಅವರ ಹೆಸರು ಮಲ್ಲಿಕಾರ್ಜುನ ರೊಟ್ಟಿಗವಾಡ್. ಸಾಮಾಜಿಕ ಹೋರಾಟಗಾರರಾಗಿರೋ ಮಲ್ಲಿಕಾರ್ಜುನ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ದೂರೊಂದನ್ನು ನೀಡುತ್ತಾರೆ. ಅದರಲ್ಲಿ ಯರಿಕೊಪ್ಪ ಗ್ರಾ.ಪಂ.ನಲ್ಲಿ 11 ಸದಸ್ಯರಿದ್ದು, ಅದರ ವ್ಯಾಪ್ತಿಯಲ್ಲಿ ನಾಯಕನ ಹುಲಿಕಟ್ಟಿ, ಕಣವಿ ಹೊನ್ನಾಪುರ ಮತ್ತು ಯರಿಕೊಪ್ಪ ಗ್ರಾಮಗಳು ಬರುತ್ತವೆ. ಖರ್ಚು- ವೆಚ್ಚಕ್ಕೆ ನಕಲಿ ವೋಚರ್ ಬಳಸುವುದು, ಸ್ವಚ್ಛತೆ ಕಾಮಗಾರಿಯಲ್ಲಿ ಅಕ್ರಮ, ಖೊಟ್ಟಿ ಕೂಲಿಕಾರರ ಬಳಕೆ, ನೀರಿನ ಪೈಪ್‌ಲೈನ್ ದುರಸ್ತಿ, ಮೋಟರ್‌ಗಳ ರಿಪೇರಿ, ನಡೆಯದ ಕಾಮಗಾರಿಗಳಿಗೆ ಹಣ ಪಾವತಿ, ಖೊಟ್ಟಿ ಬಿಲ್ ಸೃಷ್ಟಿ ಸೇರಿ ಹಲವು ಆರೋಪಗಳನ್ನು ಮಾಡಿದ್ದರು. (ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9)
ಅವ್ಯವಹಾರ ತನಿಖೆಗೆ ಆಗ್ರಹಿಸಿ ಹಲವಾರು ಬಾರಿ ಜಿ.ಪಂ. ಆವರಣದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೂಡ ನಡೆಸಿದ್ದರು. ಈ ಹಿಂದೆ ಯರಿಕೊಪ್ಪ ಗ್ರಾ.ಪಂ. ಪ್ರಭಾರ ಪಿಡಿಒ ಆಗಿದ್ದ ಆರ್. ಆರ್. ಪಾಟೀಲ ಹಾಗೂ ಹಾಲಿ ಪಿಡಿಒ ಶಕುಂತಲಾ ಭಜಂತ್ರಿ ಅವರೇ ಅಕ್ರಮವೆಸಗಿದ್ದು, ಅವರಿಂದ ಹಣ ವಸೂಲಿ ಮಾಡುವಂತೆ ಪಟ್ಟು ಹಿಡಿದಿದ್ದರು. ಸತತ 4 ವರ್ಷಗಳಿಂದ ನಡೆದ ಹೋರಾಟದ ಫಲವಾಗಿ ತನಿಖೆ ನಡೆದು, ಅದರಲ್ಲಿ ಅಕ್ರಮ ಸಾಬೀತಾಗಿದ್ದು, ಇದಕ್ಕೆ ಕಾರಣರಾದ ಇಬ್ಬರು ಪಿಡಿಒಗಳಿಂದ 24 ಲಕ್ಷ ರೂಪಾಯಿ ವಸೂಲಿ ಮಾಡುವಂತೆ ಜಿ.ಪಂ. ಸಿಇಒ ಆದೇಶಿಸಿದ್ದಾರೆ.
ಸುದೀರ್ಘ 4 ವರ್ಷಗಳ ಹೋರಾಟದ ಫಲವಾಗಿ ಪ್ರಭಾರ ಪಿಡಿಒ ಆರ್. ಆರ್. ಪಾಟೀಲ ಅವರಿಂದ 8,86,047 ರೂಪಾಯಿ ಹಾಗೂ ಪಿಡಿಒ ಶಕುಂತಲಾ ಭಜಂತ್ರಿ ಅವರಿಂದ 15,03,856 ರೂಪಾಯಿ ಸೇರಿ 23,89,903 ರೂ. ವಸೂಲಿ ಮಾಡುವಂತೆ ಸಿಇಒ ಡಾ. ಸುರೇಶ ಇಟ್ನಾಳ ಇತ್ತೀಚೆಗೆ ಆದೇಶಿಸಿದ್ದಾರೆ. ಇಬ್ಬರ ವಿರುದ್ಧದ ಆರೋಪಗಳ ಕುರಿತು ತನಿಖೆ ಕೈಗೊಂಡು ಕಡತ- ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿದೆ. ತಾಂತ್ರಿಕ ಅಂಶಗಳು ಮತ್ತು ಸ್ಥಾನಿಕ ಪರಿಶೀಲನೆಯ ನಂತರ ಇಬ್ಬರೂ ಹಣಕಾಸಿನ ದಾಖಲೆಗಳನ್ನು ಸಲ್ಲಿಸಿಲ್ಲ. ಆದ್ದರಿಂದ ಇಬ್ಬರಿಂದ ಹಣ ವಸೂಲಿ ಮಾಡುವಂತೆ ಸಿಇಒ ಡಾ. ಇಟ್ನಾಳ ಅವರು ತಾ.ಪಂ. ಇಒಗೆ ನಿರ್ದೇಶನ ನೀಡಿದ್ದಾರೆ. ಇದೀಗ ತಪ್ಪಿತಸ್ಥ ಪಿಡಿಒಗಳು ಈ ಬಗ್ಗೆ ಮತ್ತೊಮ್ಮೆ ಮನವಿ ಮಾಡಿಕೊಂಡಿರೋ ಹಿನ್ನೆಲೆಯಲ್ಲಿ ಇನ್ನೊಮ್ಮೆ ಪರಿಶೀಲಿಸಿ, ಹಣವನ್ನು ವಸೂಲಿ ಮಾಡೋದಾಗಿ ಸಿಇಒ ತಿಳಿಸಿದ್ದಾರೆ.
ಅವ್ಯವಹಾರದ ವಿರುದ್ಧ ಸತತ ಹೋರಾಟದ ಫಲವಾಗಿ ತಪ್ಪಿತಸ್ಥ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಸರ್ಕಾರಕ್ಕೆ ಹಣ ಕಟ್ಟಿಸುವಂತೆ ಆದೇಶ ಮಾಡಿರುವುದು ಸ್ವಾಗತಾರ್ಹ. ಆದರೆ, ಈ ವಸೂಲಿ ಮಾಡುವ ಕೆಲಸವನ್ನು ತಾಲೂಕಾ ಪಂಚಾಯತ್ ಇಒಗೆ ವಹಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ ಅನ್ನೋದು ದೂರುದಾರರ ಆಕ್ಷೇಪ. ಇನ್ನು ಈ ಪ್ರಕರಣದಲ್ಲಿ ಹಣವನ್ನು ವಸೂಲಿ ಮಾಡೋದಷ್ಟೇ ಅಲ್ಲ, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೂಡ ದೂರುದಾರ ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಹಣ ತಿಂದು ಹೇಗಾದರೂ ದಕ್ಕಿಸಿಕೊಳ್ಳಬಹುದು ಅಂದುಕೊಂಡವರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆ ಎಂದರೆ ತಪ್ಪಾಗಲಾರದು.