ಧಾರವಾಡ: ಪರೀಕ್ಷೆ ಬಂದರೂ ಸಿಗದ ಪಠ್ಯಪುಸ್ತಕ; ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು

ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಕೊರತೆ ಎದುರಾಗಿದೆ. ಶಾಲೆಗಳು ಆರಂಭವಾಗಿ 4 ತಿಂಗಳಾದರೂ, ಅರ್ಧವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದರೂ, ಧಾರವಾಡ ಸೇರಿದಂತೆ ಹಲವೆಡೆ ಸಾವಿರಾರು ಮಕ್ಕಳಿಗೆ ಇನ್ನೂ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಸದ್ಯ ಈ ವಿಚಾರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಧಾರವಾಡ: ಪರೀಕ್ಷೆ ಬಂದರೂ ಸಿಗದ ಪಠ್ಯಪುಸ್ತಕ; ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು
ವಿದ್ಯಾರ್ಥಿಗಳು
Image Credit source: tv9 kannada
Edited By:

Updated on: Sep 11, 2026 | 8:41 PM

ಹುಬ್ಬಳ್ಳಿ, ಸೆಪ್ಟೆಂಬರ್​ 11: ಶಿಕ್ಷಣಕ್ಕಾಗಿ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ ಖರ್ಚು ಮಾಡುತ್ತದೆ. ಆದರೆ ಅಧಿಕಾರಿಗಳ ಸರಿಯಾದ ಸಮನ್ವಯತೆಯ ಕೊರತೆಯಿಂದ ಇಂದಿಗೂ ಅನೇಕ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ಹೊಸ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಅರ್ಧವಾರ್ಷಿಕ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಧಾರವಾಡ ಸೇರಿದಂತೆ ಹಲವು ಕಡೆ ಕೆಲ ಮಕ್ಕಳಿಗೆ, ಕೆಲ ವಿಷಯಗಳ ಪಠ್ಯಪುಸ್ತಕಗಳು ದೊರೆತಿಲ್ಲ. ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲ ತರಗತಿಗಳ ವಿಷಯಗಳಿಗೆ ಪುಸ್ತಕಗಳೇ ಇಲ್ಲ

ಕಳೆದ ಜೂನ್ ತಿಂಗಳಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗಿವೆ. ಶಾಲೆಗಳು ಆರಂಭವಾಗಿ ಇದೀಗ ನಾಲ್ಕು ತಿಂಗಳು ಕಳೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅರ್ಧವಾರ್ಷಿಕ ಪರೀಕ್ಷೆ ಕೂಡ ಆರಂಭವಾಗಲಿದ್ದು, ಮಕ್ಕಳು ಅರ್ಧ ಶೈಕ್ಷಣಿಕ ವರ್ಷದ ಹತ್ತಿರ ಬಂದಿದ್ದಾರೆ. ಇನ್ನು ಶಾಲೆ ಆರಂಭವಾಗುತ್ತಿದ್ದಂತೆ ಸರ್ಕಾರ, ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಣೆ ಮಾಡಿದೆ. ಬಹುತೇಕ ಮಕ್ಕಳಿಗೆ ಪಠ್ಯಪುಸ್ತಕಗಳು ಸಿಕ್ಕಿದ್ದು ಅವರು ಅಧ್ಯಯನ ಕೂಡ ಮಾಡ್ತಿದ್ದಾರೆ. ಆದರೆ ಶಾಲೆಗೆ ಪ್ರವೇಶ ಪಡೆದಿರುವ ಎಲ್ಲಾ ಮಕ್ಕಳಿಗೆ ಈ ವರ್ಷದ ಪಠ್ಯಪುಸ್ತಕಗಳು ಸಿಕ್ಕಿವೆಯಾ ಅಂದರೆ ಇಲ್ಲಾ ಅಂತಿದ್ದಾರೆ ಶಿಕ್ಷಕರು.

ಇದನ್ನೂ ಓದಿ: ರಾಯಚೂರು ಆಯ್ತು ಈಗ ಯಾದಗಿರಿ ಸರದಿ: 300ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಇಬ್ಬರೇ ಖಾಯಂ ಶಿಕ್ಷಕರು!

ಧಾರವಾಡ ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೈಕಿ, ಕೆಲ ಮಕ್ಕಳಿಗೆ ಕೆಲ ವಿಷಯಗಳ ಪಠ್ಯಪುಸ್ತಕಗಳು ಇನ್ನು ಸಿಕ್ಕಿಲ್ಲ. ‘ಶಾಲೆಗಳು ಆರಂಭವಾಗಿ ಅನೇಕ ತಿಂಗಳು ಕಳೆದರೂ ಕೆಲ ಮಕ್ಕಳಿಗೆ ಪಠ್ಯಪುಸ್ತಕಗಳು ಸಿಕ್ಕಿಲ್ಲ’ ಬಹಿರಂಗವಾಗಿ ಧಾರವಾಡ ಜಿಲ್ಲೆಯ ಎಸ್​ಡಿಎಂಸಿ ಅಧ್ಯಕ್ಷರು ಹೇಳಿದ್ದಾರೆ.  ಜಿಲ್ಲೆಯ ಕೆಲ ಶಾಲೆಗಳ ಶಿಕ್ಷಕರು ಕೂಡ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದು, ವಿಶೇಷವಾಗಿ ಮೂರು, ನಾಲ್ಕು, ಆರು, ಎಂಟು ಮತ್ತು ಒಂಬತ್ತನೇ ತರಗತಿಯ ಕೆಲ ಮಕ್ಕಳಿಗೆ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಸೇರಿದಂತೆ ಕೆಲ ವಿಷಯಗಳ ಪಠ್ಯಪುಸ್ತಕಗಳು ಸಿಕ್ಕಿಲ್ಲವಂತೆ. ಹೀಗಾದರೆ ಮಕ್ಕಳು ಓದುವುದು ಹೇಗೆ, ಪರೀಕ್ಷೆ ಬರೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪಠ್ಯಪುಸ್ತಕಗಳ ಕೊರತೆಗೆ ಕಾರಣವೇನು?

ಇನ್ನು ಪ್ರತಿ ವರ್ಷದಂತೆ ಈ ವರ್ಷ ಕೂಡ ಸರ್ಕಾರ ಪಠ್ಯಪುಸ್ತಕಗಳನ್ನು ವಿತರಣೆ ಮಾಡಿದೆ. ಸರ್ಕಾರದಿಂದ ಬದಂತಹ ಪಠ್ಯಪುಸ್ತಕಗಳನ್ನು ಶಿಕ್ಷಕರು ಮಕ್ಕಳಿಗೆ ವಿತರಣೆ ಕೂಡ ಮಾಡಿದ್ದಾರೆ. ಆದರೆ ಶಾಲೆಯಲ್ಲಿ ಮಕ್ಕಳು ಪ್ರವೇಶ ಪಡೆದಷ್ಟು ಪುಸ್ತಕಗಳು ಬಂದಿಲ್ಲವಂತೆ. ಕಳೆದ ವರ್ಷದ ಮಕ್ಕಳ ದಾಖಲಾತಿಯ ಸಂಖ್ಯೆ ಆಧಾರದ ಮೇಲೆ ಪುಸ್ತಕಗಳ ವಿತರಿಸಲಾಗಿತ್ತು. ಆದರೆ ಕೆಲ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳು ಪ್ರವೇಶ ಪಡೆದಿದ್ದಾರೆ. ಅಂತಹ ಶಾಲೆಯ ಮಕ್ಕಳಿಗೆ ಪಠ್ಯಪುಸ್ತಕಗಳು ಸಿಕ್ಕಿಲ್ಲವಂತೆ.

ಅಧಿಕಾರಿಗಳ ಗಮನಕ್ಕೆ ತಂದರೂ ಸಿಗದ ಪರಿಹಾರ

ಕೆಲ ಶಾಲೆಯ ಶಿಕ್ಷಕರು, ಬೇರೆ ಕಡೆ ಇದ್ದಿದ್ದ ಪಠ್ಯಪುಸ್ತಕಗಳನ್ನು ಪಡೆದು ಮಕ್ಕಳಿಗೆ ವಿತರಣೆ ಮಾಡಿದ್ದಾರೆ. ಇನ್ನು ಪ್ರತಿಶಾಲೆಯಲ್ಲಿ ಬುಕ್ ಬ್ಯಾಂಕ್ ಅಂತ ಇದ್ದು, ಈ ಹಿಂದೆ ಓದಿದ್ದ ವಿದ್ಯಾರ್ಥಿಗಳು, ವಾರ್ಷಿಕ ಪರೀಕ್ಷೆ ನಂತರ ಪುಸ್ತಕಗಳನ್ನು ಶಾಲೆಗೆ ನೀಡಿದ್ದು, ಅಂತಹ ಪುಸ್ತಕಗಳನ್ನು ಕೂಡ ಕೆಲವೆಡೆ ನೀಡಲಾಗಿದೆಯಂತೆ. ಆದರೂ ಕೂಡ ಕೆಲ ಮಕ್ಕಳಿಗೆ ಇನ್ನು ಕೆಲ ವಿಷಯಗಳ ಪಠ್ಯಪುಸ್ತಕಗಳು ಸಿಕ್ಕಿಲ್ಲವಂತೆ. ಈ ಬಗ್ಗೆ ಶಿಕ್ಷಕರು, ಹೆಡ್ ಮಾಸ್ಟರ್​ಗಳು ಬಿಇಓ, ಡಿಡಿಪಿಐ ಗಮನಕ್ಕೆ ತಂದಿದ್ದಾರಂತೆ. ಸರ್ಕಾರದಿಂದ ಬಂದ ಕೂಡಲೇ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರಂತೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ: ಒಂದೇ ವಾರದಲ್ಲಿ ಬಯಲಾಯ್ತು ಅಸಲಿ ಗುಣಮಟ್ಟ!

ಇನ್ನು ಪಠ್ಯಪುಸ್ತಕಗಳ ಕೊರತೆ ಬಗ್ಗೆ ಧಾರವಾಡ ಜಿಲ್ಲೆಯ ಡಿಡಿಪಿಐ ಎಸ್​ಎಸ್​ ಕೆಳದಿಮಠ ಅವರನ್ನು ಕೇಳಿದರೆ ‘ತಮಗೆ ಮಾಹಿತಿ ಇಲ್ಲ. ಮಾಹಿತಿ ಪಡೆಯುತ್ತೇನೆ’ ಎಂದು ಹೇಳಿದ್ದಾರೆ. ಶಾಲೆ ಆರಂಭವಾಗಿ ನಾಲ್ಕು ತಿಂಗಳಾದರೂ ಇನ್ನು ಕೆಲ ಮಕ್ಕಳಿಗೆ ಈ ವರ್ಷದ ಕೆಲ ಪುಸ್ತಕಗಳು ಸಿಕ್ಕಿಲ್ಲ. ಹೀಗಾಗಿ ಅಧಿಕಾರಿಗಳು ಆದಷ್ಟು ಬೇಗ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆ ಮಾಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us