ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಉತ್ತೇಜಿಸಲು ಬಹುಮಾನ ಘೋಷಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ನಿತ್ಯ ಬದುಕಿನ ಭಾಗವಾಗಿರುವ ಗಣಿತದ ಕುರಿತು ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.
ಧಾರವಾಡ: ಮಕ್ಕಳಲ್ಲಿ ಗಣಿತ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಗಣಿತ ಮೇಳ ವಿಭಿನ್ನ, ವಿಶಿಷ್ಟವಾದದ್ದು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧೆ ಕೂಡಾ ಆಯೋಜಿಸಬೇಕು. ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂಪಾಯಿ, ದ್ವಿತೀಯ ಸ್ಥಾನ 15 ಸಾವಿರ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವ ಪ್ರಹ್ಲಾದ ಜೋಶಿ(Pralhad Joshi) ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ಅಂಗವಾಗಿ ನಗರದ ಕರ್ಷ ಜ್ಞಾನ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೆ.ಇ. ಬೋರ್ಡ್ ಸಂಸ್ಥೆ ಜಂಟಿಯಾಗಿ ಕರ್ನಾಟಕ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಮೋಜಿನೊಂದಿಗೆ ಗಣಿತ ಕಲಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಇದನ್ನೂ ಓದಿ: ಸೆ. 26 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹುಬ್ಬಳ್ಳಿಗೆ ಭೇಟಿ : ಹು-ಧಾ ಮಹಾನಗರ ಪಾಲಿಕೆ ಮೇಯರ್
ನಿತ್ಯ ಬದುಕಿನ ಭಾಗವಾಗಿರುವ ಗಣಿತದ ಕುರಿತು ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು. ಭಾರತೀಯ ವೇದ, ಪುರಾಣಗಳಲ್ಲಿ ಗಣಿತದ ಉಲ್ಲೇಖವಿದ್ದು, ಗಣಿತ ಶಾಸ್ತ್ರಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿಗೆ ಸೊನ್ನೆ ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಭಾಸ್ಕರಾಚಾರ್ಯರಿಂದ ಹಿಡಿದು ಇತ್ತೀಚಿಗಿನ ಶ್ರೀನಿವಾಸ ರಾಮಾನುಜನ್ ಸೇರಿದಂತೆ ಅನೇಕ ಗಣಿತ ಶಾಸ್ತ್ರಜ್ಞರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ ಬದಲಾದ ಸಂದರ್ಭದಲ್ಲಿ ಗಣಿತ ಕಬ್ಬಿಣದ ಕಡಲೆ ಎಂದು ವಿದ್ಯಾರ್ಥಿಗಳು ಭಾವಿಸುತ್ತಿದ್ದು, ಆ ಭಯ ತೊಡೆದು ಗಣಿತದಲ್ಲಿ ಆಸಕ್ತಿ ಮೂಡಿಸಲು ಈ ಮೇಳ ಆಯೋಜಿಸಿರುವುದು ಅಭಿನಂದನೀಯ ಕಾರ್ಯ ಎಂದರು.
ರಾಜಕೀಯ ಎಂದರೆ ತಿರಸ್ಕೃತ ಎನ್ನುವ ಭಾವನೆ ಬಲವಾಗುತ್ತಿರುವ ಸಂದರ್ಭದಲ್ಲಿ, ಆ ವ್ಯವಸ್ಥೆಯಲ್ಲಿ ಪುನರಪಿ ವಿಶ್ವಾಸ ಮೂಡುವಂತೆ ಮಾಡಿದ, ಪ್ರತಿಯೊಂದರಲ್ಲೂ ಭಾರತೀಯ ಭಾವನೆಯನ್ನು ಉದ್ದೀಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಹಲವು ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ದೇಶಾದ್ಯಂತ ಆಚರಿಸಲಾಗುತ್ತಿದೆ. ಆದರೆ ಇಲ್ಲಿ ಗಣಿತವನ್ನು ಮಕ್ಕಳಿಗೆ ಸುಲಭವಾಗಿಸುವ ಮತ್ತು ಅರ್ಥೈಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಸುರೇಶ ಬೇದರೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ವಕೀಲ ಅರುಣ ಜೋಶಿ, ವಿನಾಯಕ ಜೋಶಿ, ಸಂಯೋಜಕಿ ಸುಮಂಗಲಾ ದಾಂಡೇವಾಲೆ, ಮಯೂರ ದಾಂಡೇವಾಲೆ ಸೇರಿದಂತೆ ಧಾರವಾಡ ಶಹರ ಮತ್ತು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು. ಇದನ್ನೂ ಓದಿ: ಟಿಕೆಟ್ ಅಂತಿಮ ಮಾಡೋದು ಹೈಕಮಾಂಡ್, ಯಾರೋ ಒಬ್ಬರು ಕೊಡಲು ಬರಲ್ಲ: ಡಿಕೆ ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರ ಅಸಮಾಧಾನ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:31 pm, Sun, 18 September 22