ಧಾರವಾಡದಲ್ಲೊಂದು ಮಿನಿ ವಾರಾಣಸಿ: ಇಲ್ಲಿದೆ ಹಲವು ವಿಶೇಷ
ಈ ಕಟ್ಟಿಮಠ ಮನೆತನ ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರದ್ದು. ಇವರ ಮನೆಯೂ ಬಹಳ ಹಳೆಯ ಕಾಲದ್ದೇ. ಹೀಗಾಗಿ ಇವರ ಮನೆಯಲ್ಲಿ ತಲ ತಲಾಂತರಗಳಿಂದ ನವರಾತ್ರಿ ಆಚರಿಸುತ್ತ ಬರಲಾಗುತ್ತಿದ್ದರು, ಈ ಬಾರಿ ಈ ಕುಟುಂಬದ ಕುಡಿ, ಎಲೆಕ್ಟ್ರಾನಿಕ್ ಇಂಜಿನೀಯರ್ ಕಾರ್ತಿಕ ಕಟ್ಟಿಮಠ, ಇತ್ತೀಚಿನ ವರ್ಷಗಳಲ್ಲಿ ಈ ಉತ್ಸವಕ್ಕೆ ವೈಭವದ ಮೆರಗು ನೀಡಿದ್ದಾರೆ.
ಧಾರವಾಡ, ಅಕ್ಟೋಬರ್ 19: ನವರಾತ್ರಿ ಹಬ್ಬ (Navratri Festival) ಬಂತೆಂದರೆ ನಾಡಿನೆಲ್ಲೆಡೆ ದೇವಿಯರ ಆರಾಧನೆಯ ಸಂಭ್ರಮ ಮನೆ ಮಾಡುತ್ತದೆ. ಅದರಲ್ಲಿಯೂ ಪ್ರಮುಖ ದೇವಸ್ಥಾನಗಳಲ್ಲಿಂತೂ ಜಾತ್ರಾ ಸಂಭ್ರಮವೇ ಇರುತ್ತದೆ. ಧಾರವಾಡದಲ್ಲಿ (Dharawad) ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರ ಕುಟುಂಬವಿದ್ದು, ಇವರ ಮನೆಯ ನವರಾತ್ರಿ ಸಂಭ್ರಮದ ಜೋರಾಗಿಯೇ ಇರುತ್ತೆ. ಇಂಥ ರಾಜಗುರು ಮನೆಯಲ್ಲಿ ಈ ವರ್ಷ ಮಿನಿ ವಾರಾಣಸಿಯನ್ನೇ (Mini Varanasi) ಸೃಷ್ಟಿಸಲಾಗಿದೆ. ಧಾರವಾಡ ನಗರದ ಮಂಗಳವಾರ ಪೇಟೆಯಲ್ಲಿರೋ ಈ ಮನೆಯೊಳಗೆ ಹೋಗುತ್ತಿದ್ದಂತೆಯೇ ಇದೇನು ಮನೆಯೋ ಅಥವಾ ದೇವಸ್ಥಾನವೋ ಅನ್ನೋ ಅನುಮಾನ ಶುರುವಾಗುತ್ತೆ. ಇದು ಕಟ್ಟಿಮಠ ಅನ್ನೋ ಕುಟುಂಬ ವಾಸಿಸುತ್ತಿರೋ ಮನೆ. ಪ್ರತಿವರ್ಷ ಈ ಕುಟುಂಬದವರು ನವರಾತ್ರಿ ಹಬ್ಬವನ್ನು ತೀರಾನೇ ಸಂಭ್ರಮದಿಂದ ಆಚರಿಸುತ್ತಾರೆ.
ಈ ಕಟ್ಟಿಮಠ ಮನೆತನ ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರದ್ದು. ಇವರ ಮನೆಯೂ ಬಹಳ ಹಳೆಯ ಕಾಲದ್ದೇ. ಹೀಗಾಗಿ ಇವರ ಮನೆಯಲ್ಲಿ ತಲ ತಲಾಂತರಗಳಿಂದ ನವರಾತ್ರಿ ಆಚರಿಸುತ್ತ ಬರಲಾಗುತ್ತಿದ್ದರು, ಈ ಬಾರಿ ಈ ಕುಟುಂಬದ ಕುಡಿ, ಎಲೆಕ್ಟ್ರಾನಿಕ್ ಇಂಜಿನೀಯರ್ ಕಾರ್ತಿಕ ಕಟ್ಟಿಮಠ, ಇತ್ತೀಚಿನ ವರ್ಷಗಳಲ್ಲಿ ಈ ಉತ್ಸವಕ್ಕೆ ವೈಭವದ ಮೆರಗು ನೀಡಿದ್ದಾರೆ. ಪ್ರತಿವರ್ಷ ಅದ್ಭುತ ಅಲಂಕಾರಗಳ ಮೂಲಕ ಗಮನ ಸೆಳೆಯುವ ಕಾರ್ತಿಕ, ಈ ಬಾರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ವಾರಾಣಸಿ ಸೆಟ್ನ್ನು ಮನೆಯಲ್ಲಿಯೇ ನಿರ್ಮಿಸಿದ್ದಾರೆ. ಇದಕ್ಕಾಗಿ ಅವರು ಒಂದು ವರ್ಷ ಕಾಲ ಶ್ರಮ ಹಾಕಿದ್ದಾರೆ. ಕಾರ್ತಿಕ ತಿಂಗಳುಗಟ್ಟಲೇ ವಾರಾಣಸಿಯಲ್ಲಿ ಉಳಿದು, ಅಲ್ಲಿಯೇ ವಿನ್ಯಾಸ ಸಿದ್ಧಪಡಿಸಿಕೊಂಡು ಬಂದು, ಈಗ ತಮ್ಮ ಇಡೀ ಮನೆಯನ್ನೇ ವಾರಣಾಸಿಯನ್ನಾಗಿ ಪರಿವರ್ತಿಸಿದ್ದಾರೆ.
ಇನ್ನು ಪ್ರತಿ ವರ್ಷ ಇವರ ಮನೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ನಡೆಯುವ ಅಲಂಕಾರ ನೋಡೋದಕ್ಕೆ ದೇವಸ್ಥಾನಕ್ಕೆ ಬರುವಂತೆ ಜನರು ಬರುತ್ತಾರೆ. ಇವರ ಮನೆ ರಾಜಗುರು ಮನೆತನ ಆಗಿರುವುದರಿಂದ ನವರಾತ್ರಿ ಸಮಯದಲ್ಲಿ ನಿತ್ಯವೂ ವಿವಿಧ ಮಠಾಧೀಶರುಗಳ ಸಹ ಬಂದು ದರ್ಶನ ಮಾಡಿಕೊಂಡು ಹೋಗುತ್ತಾರೆ. ಇನ್ನು ಇಡೀ ಖರ್ಚು ವೆಚ್ಚ ಎಲ್ಲವನ್ನು ಕಟ್ಟಿಮಠ ಕುಟುಂಬವೇ ನೋಡಿಕೊಳ್ಳುತ್ತ ಬಂದಿದೆ. ಹಿಂದೆ ರಾಜರ ಆಡಳಿತ ಇದ್ದಾಗ, ಪ್ರಜೆಗಳ ಹಿತಕ್ಕಾಗಿಯೇ ರಾಜಗುರುಗಳು ಕೆಲಸ ಮಾಡುತ್ತಿದ್ದರು. ಕಿತ್ತೂರು ಸಂಸ್ಥಾನದ ಅವಸಾನದ ನಂತರ ಆ ಸಂಸ್ಥಾನದ ಶರನ್ನವರಾತ್ರಿ ಆಚರಣೆಯನ್ನು ರಾಜಗುರು ಕುಟುಂಬ ಕರ್ತವ್ಯದಂತೆ ಪಾಲಿಸಿಕೊಂಡು ಬಂದಿದ್ದು, ಇದೆಲ್ಲವೂ ಪ್ರಜೆಗಳ ಹಿತಕ್ಕಾಗಿಯೇ ಮಾಡುತ್ತ ಬರಲಾಗಿದೆ ಅನ್ನುತ್ತಾರೆ ಕುಟುಂಬಸ್ಥರು. ಇನ್ನು ಈ ಬಾರಿ ಸಿದ್ಧಪಡಿಸಿದ ಎಲ್ಲ ವಾರಾಣಸಿಯಲ್ಲಿ ಇರೋ ಥರಾನೇ ಮಾಡಲಾಗಿದೆ. ಇದಕ್ಕಾಗಿ ತಿಂಗಳುಗಟ್ಟಲೇ ಕೆಲಸ ಮಾಡಲಾಗಿದೆ ಅನ್ನುತ್ತಾರೆ ಕಾರ್ತೀಕ ಕಟ್ಟಿಮಠ.
ಇದನ್ನೂ ಓದಿ: ಧಾರವಾಡ: ವಿದ್ಯುತ್ ತಂತಿಗಳನ್ನೂ ಕದ್ದೊಯ್ಯುತ್ತಿರುವ ಖದೀಮರು!
ಇನ್ನು ಮನೆಯ ಒಂದೊಂದು ಭಾಗದಲ್ಲಿ ವಾರಾಣಸಿಯ ಒಂದೊಂದು ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅಲ್ಲದೇ ಆ ದೇವಸ್ಥಾನದಲ್ಲಿನ ದೇವರನ್ನು ಸ್ವತಃ ಕಾರ್ತೀಕ್ ನಿರ್ಮಿಸಿದ್ದು ಕೂಡ ವಿಶೇಷ. ಇಂಥದ್ದೊಂದು ವಿಭಿನ್ನ ಬಗೆಯ ಕಲೆಯನ್ನು ನೋಡಲು ಉತ್ತರ ಕರ್ನಾಟಕದ ವಿವಿಧ ಕಡೆಯಿಂದ ಇಲ್ಲಿಗೆ ಪ್ರತಿ ವರ್ಷ ಅನೇಕ ಜನ ಬರ್ತಾರೆ. ಅವರೆಲ್ಲರಿಗೂ ಈ ಸಲ ವಾರಾಣಸಿಯನ್ನೇ ತಂದಿಟ್ಟು ದರ್ಶನ ಮಾಡಿಸುವುದಕ್ಕೇ ರಾಜಗುರು ಮನೆತನ ಮುಂದಾಗಿದೆ. ಕಾಶಿ ವಿಶ್ವನಾಥನನ್ನು ನೋಡಲು ಸಾಧ್ಯವಾಗದೇ ಇರೋರು ಇಲ್ಲಿಗೇ ಬಂದು ಆತನ ದರ್ಶನ ಪಡೆಯಬಹುದಾಗಿದೆ.
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕಾರ್ತಿಕ ಕಟ್ಟಿಮಠ, ಮನೆಯ ಹಿರಿಯರ ಆಶಯದಂತೆ ಈ ಬಾರಿ ವಾರಾಣಸಿ ಕಲ್ಪನೆಯಲ್ಲಿ ದೇವಿಯನ್ನು ಅಲಂಕರಿಸಿದ್ದೇನೆ. ಕಳೆದ ಒಂದು ವರ್ಷದಿಂದ ಇದಕ್ಕೆ ತಯಾರಿ ನಡೆಸಿದ್ದು, ಒಂದು ತಿಂಗಳ ಕಾಲ ಕಾಶಿಯಲ್ಲಿ ಉಳಿದುಕೊಂಡು ಕಾಶಿ ಇತಿಹಾಸ, ವಾಸ್ತುಶಿಲ್ಪ ಸೇರಿದಂತೆ ಅಲ್ಲಿನ ಮಹತ್ವ ಅರಿತು ಒಂಭತ್ತು ದೇವಿ ಅವತಾರ ಸಜ್ಜುಗೊಳಿಸಿದ್ದೇನೆ. ಭಕ್ತಿಯಿಂದ ಜನರು ಈ ದೇವಿಯ ಅವತಾರಗಳನ್ನು ಕಣ್ತುಂಬಿಸಿಕೊಳ್ಳಬೇಕು ಎನ್ನುವುದೇ ನನ್ನ ಮನವಿ ಅಂತಾ ಹೇಳಿದರು.
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕಾರ್ತಿಕ್ ಅವರ ಅತ್ತೆ ಪ್ರೊ. ವಿಜಯಲಕ್ಷ್ಮೀ ಕಟ್ಟಿಮಠ, ಬಾಲ್ಯದಿಂದಲೇ ಕಾರ್ತೀಕ ಆಧ್ಯಾತ್ಮ ಚಿಂತನೆಯಲ್ಲಿಯೇ ತೊಡಗಿಕೊಂಡಿದ್ದಾನೆ. ನಮ್ಮ ಪೂರ್ವಜರಂತೆಯೇ ಇದೀಗ ಕಾರ್ತಿಕ್ ಕೂಡ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ. ನಮ್ಮ ಕುಟುಂಬದ ಕಿರೀಟಕ್ಕೆ ಕಾರ್ತಿಕ್ ಒಂದು ಹೆಮ್ಮೆಯ ಗರಿ. ತನ್ನ ಅಭ್ಯಾಸದೊಂದಿಗೆ ಈ ಕೆಲಸ ಮಾಡುತ್ತಾ ಬಂದಿದ್ದಾನೆ. ಇದೀಗ ಖಾಸಗಿ ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರೂ ಹಿರಿಯರಿಂದ ಬಳುವಳಿಯಾಗಿ ಬಂದಿರೋ ಈ ಪರಂಪರೆಯನ್ನು ಬಿಡುತ್ತಿಲ್ಲ. ಇದು ನಮಗೆ ಹೆಮ್ಮೆಯ ವಿಚಾರ ಅಂತಾ ಹೇಳುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Thu, 19 October 23