AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯುವ್ಯ ಸಾರಿಗೆಗೆ ಡೀಸೆಲ್ ಬೆನ್ನಲ್ಲೇ ಬಿಡಿಭಾಗಗಳ ದರ ಏರಿಕೆ ಶಾಕ್; ಸ್ಪೇರ್ ಪಾರ್ಟ್ಸ್ ಸಿಗದೆ ಸಂಕಷ್ಟ

ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ವಾಯುವ್ಯ ಸಾರಿಗೆ ನಿಗಮಕ್ಕೆ ಬಿಡಿಭಾಗಗಳ ಬೆಲೆ ಏರಿಕೆ ಹಾಗೂ ಪೂರೈಕೆ ಕೊರತೆಯ ದೊಡ್ಡ ಹೊಡೆತ ಬಿದ್ದಿದೆ. ಹಳೆಯ ದರಕ್ಕೆ ಟೈರ್ ಮತ್ತು ಸ್ಪೇರ್ ಪಾರ್ಟ್ಸ್ ನೀಡಲು ಟೆಂಡರ್‌ದಾರರು ನಿರಾಕರಿಸುತ್ತಿರುವುದರಿಂದ ಬಸ್‌ಗಳ ತಾಂತ್ರಿಕ ನಿರ್ವಹಣೆ ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ.

ವಾಯುವ್ಯ ಸಾರಿಗೆಗೆ ಡೀಸೆಲ್ ಬೆನ್ನಲ್ಲೇ ಬಿಡಿಭಾಗಗಳ ದರ ಏರಿಕೆ ಶಾಕ್; ಸ್ಪೇರ್ ಪಾರ್ಟ್ಸ್ ಸಿಗದೆ ಸಂಕಷ್ಟ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳುImage Credit source: tv9
ಸಂಜಯ್ಯಾ ಚಿಕ್ಕಮಠ
| Edited By: |

Updated on:Jun 09, 2026 | 2:38 PM

Share

ಹುಬ್ಬಳ್ಳಿ, ಜೂನ್ 9: ಕೇವಲ ಡೀಸೆಲ್ ದರ ಏರಿಕೆಯಿಂದ ಈಗಾಗಲೇ ಪ್ರತಿ ತಿಂಗಳು 4 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC)  ಈಗ ಮತ್ತೊಂದು ಬಹುದೊಡ್ಡ ಬಿಕ್ಕಟ್ಟು ಎದುರಾಗಿದೆ. ಮಾರುಕಟ್ಟೆಯಲ್ಲಿ ಬಸ್‌ಗಳ ಬಿಡಿಭಾಗಗಳ (Spare Parts) ಬೆಲೆ ಗಗನಕ್ಕೇರಿರುವುದು ಹಾಗೂ ಅಗತ್ಯ ಬಿಡಿಭಾಗಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿರುವುದು ನಿಗಮದ ದೈನಂದಿನ ಕಾರ್ಯಾಚರಣೆಯನ್ನೇ ಸಮಸ್ಯೆಗೆ ತಳ್ಳಿದೆ. ಶಕ್ತಿ ಯೋಜನೆಯ ಜನದಟ್ಟಣೆಯ ನಡುವೆ ಬಿಡಿಭಾಗಗಳ ಕೊರತೆಯಿಂದಾಗಿ ಬಸ್‌ಗಳ ರಿಪೇರಿ ಕಾರ್ಯ ಸ್ಥಗಿತಗೊಂಡಿದ್ದು, ನಿಗಮವು ಅಕ್ಷರಶಃ ಹೈರಾಣಾಗಿದೆ.

ಮುಖ್ಯಾಂಶಗಳು

  • ಬಿಡಿಭಾಗಗಳ ತೀವ್ರ ಕೊರತೆ, ಪೂರೈಕೆ ಸ್ಥಗಿತ.
  • ಹಳೆ ದರಕ್ಕೆ ಬಿಡಿಭಾಗ ನೀಡಲು ಟೆಂಡರ್‌ದಾರರ ನಿರಾಕರಣೆ.
  • ರಿಪೇರಿ ಆಗದೆ ಗ್ಯಾರೇಜ್‌ನಲ್ಲೇ ನಿಲ್ಲುತ್ತಿರುವ ಬಸ್‌ಗಳು.

ಹೊಸ ದರಕ್ಕೆ ಪಟ್ಟು: ಕೈಕೊಟ್ಟ ಟೆಂಡರ್‌ದಾರರು

ವಾಯುವ್ಯ ಸಾರಿಗೆ ನಿಗಮದ ಅಡಿಯಲ್ಲಿ ಸುಮಾರು 5000 ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇವುಗಳ ದೈನಂದಿನ ನಿರ್ವಹಣೆಗಾಗಿ ನಿಗಮವು ಪ್ರತಿ ತಿಂಗಳು 8 ಕೋಟಿ ರೂಪಾಯಿಗಳನ್ನು ಬಿಡಿಭಾಗಗಳಿಗಾಗಿಯೇ ವ್ಯಯಿಸುತ್ತಿತ್ತು. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದನ್ನೇ ನೆಪವಾಗಿಸಿಕೊಂಡಿರುವ ಟೆಂಡರ್‌ದಾರರು, ಹಳೆಯ ಒಪ್ಪಂದದ ದರದಲ್ಲಿ ಟೈರ್, ನಟ್-ಬೋಲ್ಟ್, ಸ್ಟೀಲ್ ಹಾಗೂ ಮಾಲಿನ್ಯ ನಿಯಂತ್ರಣದ ‘ಆಡ್ ಬ್ಲೂ (AdBlue)’ ತೈಲವನ್ನು ಪೂರೈಸಲು ಜಾರಿಕೊಳ್ಳುತ್ತಿದ್ದಾರೆ. ಹೆಚ್ಚಾದ ಮಾರುಕಟ್ಟೆ ದರಕ್ಕೆ ತಕ್ಕಂತೆ ತಮಗೂ ಹೆಚ್ಚಿನ ಹಣ ನೀಡಬೇಕೆಂದು ಪೂರೈಕೆದಾರರು ಪಟ್ಟು ಹಿಡಿದಿರುವುದರಿಂದ ನಿಗಮಕ್ಕೆ ಬಿಡಿಭಾಗಗಳ ಆಮದು ಸಂಪೂರ್ಣ ನಿಂತುಹೋಗಿದೆ.

ಸ್ಪೇರ್ ಪಾರ್ಟ್ಸ್ ಇಲ್ಲದೆ ರಿಪೇರಿ ಬಂದ್: ಬಸ್​ಗಳು ದಾರಿಯಲ್ಲೇ ಕೆಟ್ಟು ನಿಲ್ಲುವ ಭೀತಿ

ಈ ಬೆಳವಣಿಗೆಯ ಕುರಿತು ಮಾಹಿತಿ ನೀಡಿರುವ ವಾಯುವ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ (MD) ಪ್ರಿಯಾಂಕಾ ಎಂ., ‘ಟೈರ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಮೊದಲೇ ಟೆಂಡರ್ ಆಗಿದ್ದರೂ, ದರ ಏರಿಕೆಯ ಕಾರಣ ನೀಡಿ ಸಪ್ಲೈಯರ್ಸ್ ನಮಗೆ ವಸ್ತುಗಳನ್ನು ನೀಡುತ್ತಿಲ್ಲ. ಅವರ ಮನವೊಲಿಸಿ ಬಿಡಿಭಾಗಗಳನ್ನು ಪಡೆದುಕೊಳ್ಳುವುದೇ ನಮಗೆ ದ ದೊಡ್ಡ ಹರಸಾಹಸವಾಗಿದೆ’ ಎಂದು ಹೇಳಿದ್ದಾರೆ.

ಬಿಡಿಭಾಗಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಗ್ಯಾರೇಜ್‌ಗೆ ಬರುವ ಬಸ್‌ಗಳ ದುರಸ್ತಿ ಕಾರ್ಯ ತಡವಾಗುತ್ತಿದೆ. ಕರಾರಿನ ದರಕ್ಕೆ ವಸ್ತುಗಳು ಸಿಗುತ್ತಿಲ್ಲ, ಹೊಸ ದರಕ್ಕೆ ಖರೀದಿಸಲು ನಿಗಮದ ಬಳಿ ಹಣವಿಲ್ಲದ ಕಾರಣ ಬಸ್‌ಗಳು ಸರಿಯಾದ ಸಮಯಕ್ಕೆ ರಿಪೇರಿ ಆಗದೆ ಮಾರ್ಗ ಮಧ್ಯದಲ್ಲೇ ಕೆಟ್ಟು ನಿಲ್ಲುವ ಭೀತಿ ಎದುರಾಗಿದೆ.

ಆದಾಯ ಅಷ್ಟೇ, ಖರ್ಚು ದುಪ್ಪಟ್ಟು: ಮುಳುಗುವ ಹಂತದಲ್ಲಿ ನಿಗಮ

ಒಂದೆಡೆ ಶಕ್ತಿ ಯೋಜನೆಯಿಂದಾಗಿ ಬಸ್‌ಗಳ ಓಡಾಟ ಹೆಚ್ಚಾಗಿ ತಾಂತ್ರಿಕ ದೋಷಗಳು ದುಪ್ಪಟ್ಟಾಗುತ್ತಿವೆ. ಆದರೆ, ಅವುಗಳನ್ನು ಸರಿಪಡಿಸಲು ಬೇಕಾದ ಸ್ಪೇರ್ ಪಾರ್ಟ್‌ಗಳ ಬೆಲೆ ಏರಿಕೆಯಾಗಿರುವುದರಿಂದ ಮತ್ತು ಮಾರುಕಟ್ಟೆಯಿಂದ ಬಿಡಿಭಾಗಗಳು ಸಕಾಲಕ್ಕೆ ಸರಬರಾಜು ಆಗದ ಕಾರಣ ಸಾರಿಗೆ ಸಂಸ್ಥೆ ದಿನದಿಂದ ದಿನಕ್ಕೆ ದುಸ್ಥಿತಿಗೆ ತಲುಪುತ್ತಿದೆ. ಟಿಕೆಟ್ ದರ ಹೆಚ್ಚಳವಾಗದ ಕಾರಣ ಆದಾಯದಲ್ಲಿ ಯಾವುದೇ ಏರಿಕೆಯಾಗಿಲ್ಲ, ಆದರೆ ಬಿಡಿಭಾಗಗಳ ಅಭಾವ ಮತ್ತು ದರ ಏರಿಕೆಯಿಂದಾಗಿ ನಿಗಮದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಬಿಡಿಭಾಗಗಳ ಪೂರೈಕೆ ಬಿಕ್ಕಟ್ಟನ್ನು ತಕ್ಷಣವೇ ಬಗೆಹರಿಸದಿದ್ದರೆ ಉತ್ತರ ಕರ್ನಾಟಕದಾದ್ಯಂತ ಸಾರಿಗೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಆತಂಕ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Tue, 9 June 26

Follow Us
ಸಂಜಯ್ಯಾ ಚಿಕ್ಕಮಠ
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More