ರಾಹುಲ್ ಗಾಂಧಿ ಭದ್ರತೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿ ಬೈಕ್ ಅಪಘಾತ, ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಬಸವರಾಜ ಗಾಯಗೊಂಡವರು. ಕಲಘಟಗಿಯಿಂದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯತ್ತ ಬರುತ್ತಿದ್ದಾಗ ಘಟನೆ ನಡೆದಿದೆ.
ಹುಬ್ಬಳ್ಳಿ: ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮ ಮುಗಿಸಿ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದು ರಾಹುಲ್ ಗಾಂಧಿ ಭದ್ರತೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿ ಬೈಕ್ ಅಪಘಾತವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಬಸವರಾಜ ಗಾಯಗೊಂಡವರು. ಕಲಘಟಗಿಯಿಂದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯತ್ತ ಬರುತ್ತಿದ್ದಾಗ ಘಟನೆ ನಡೆದಿದೆ. ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಬೈಕ್ ಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕೀಡ್ ಆಗಿ ಬಿದ್ದು ಬಸವರಾಜ ತಲೆಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅಲ್ಲೇ ಇದ್ದ ಸ್ಥಳೀಯರು ಗಾಯಗೊಂಡಿದ್ದ ಬಸವರಾಜ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವವನ್ನು ಕಾಂಗ್ರೆಸ್ ಅದ್ದೂರಿಯಾಗಿ ಆಚರಿಸಿದೆ. ದಾವಣಗೆರೆಯಲ್ಲಿ ಸುಮಾರು 50 ಎಕರೆ ಮೈದಾನದಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಭರ್ಜರಿಯಾಗಿ ಜರುಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಇನ್ನು ಈ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ದಾವಣಗೆರೆಯಲ್ಲಿ ಕಾರ್ಯಕ್ರಮ ಮುಗಿಸಿ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸಿದ್ದು ಈ ವೇಳೆ ಘಟನೆ ನಡೆದಿದೆ. ಇನ್ನು ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಖಾದಿ ಗ್ರಾಮೋದ್ಯೋಗ ಕೇಂದ್ರದ ಸುತ್ತಮುತ್ರ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.