ಮಾರ್ಚ್ 22 ವಿಶ್ವ ಜಲ ದಿನ: ‘ನಮ್ಮ ಊರು ನಮ್ಮ ಕೆರೆ’ ಯೋಜನೆಯ ಯಶೋಗಾಥೆ
ಧಾರವಾಡ ಜಿಲ್ಲೆಯಲ್ಲಿ ‘ನಮ್ಮ ಊರು ನಮ್ಮ ಕೆರೆ’ ಯೋಜನೆ ಮೂಲಕ ಕೆರೆಗಳ ಅಭಿವೃದ್ಧಿ ಮಾಡಲಾಗಿದ್ದು, ಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಡಿಮೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 23 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ರೈತರು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಧಾರವಾಡ, ಮಾರ್ಚ್ 21: ನೀರು – ಅದು ಜೀವ ಜಲ. ನದಿ ಮೂಲವೇ ಇಲ್ಲದ ಧಾರವಾಡದಂಥ ಜಿಲ್ಲೆಯಲ್ಲಿ ಪ್ರತಿ ಬೇಸಿಗೆ (Summer) ಸಂದರ್ಭದಲ್ಲಿ ಜನರು, ರೈತರು, ಪ್ರಾಣಿ-ಪಕ್ಷಿ ಸಂಕುಲ ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತವೆ. ಬೇಸಿಗೆಯಲ್ಲಿ ಇರೋ ಜಲಮೂಲಗಳೆಲ್ಲ ಬತ್ತಿ ಹೋಗಿ ಬಿಡುತ್ತವೆ. ಹಳ್ಳಿಗಳ ರೈತರ ಪಾಲಿಗೆ ಜಲ ಸಂಜೀವಿನಿ ಆಗಿರೋ ಕೆರೆಗಳ (lake) ನೀರಂತೂ ಈ ಸಂದರ್ಭದಲ್ಲಿ ಖಾಲಿಯಾಗಿ ಹೋಗುತ್ತೆ. ಹೀಗಾಗಿ ಬೇಸಿಗೆ ಬಂದರೆ ಸಾಕು ರೈತರಿಗೆ ಕೃಷಿ ಮತ್ತು ಜಾನುವಾರುಗಳದ್ದೇ ದೊಡ್ಡ ಚಿಂತೆಯಾಗಿ ಬಿಡುತ್ತೆ. ಆದರೆ ಧಾರವಾಡ ಜಿಲ್ಲೆಯ ಕೆಲವೆಡೆ ಮಾತ್ರ ಈ ಬೇಸಿಗೆಯಲ್ಲಿಯೂ ಕೆರೆಗಳು ತುಂಬಿ ನಿಂತಿವೆ. ಕೊಳವೆ ಬಾವಿಯಲ್ಲಿ ನೀರು ಚಿಮ್ಮಿ ಬರುತ್ತಿದೆ. ಇದಕ್ಕೆಲ್ಲ ಕಾರಣವಾಗಿದ್ದು ‘ನಮ್ಮ ಊರು ನಮ್ಮ ಕೆರೆ’ ಅನ್ನೋ ಯೋಜನೆ.
ಒಂದು ದಶಕದ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹೊಸದೊಂದು ಯೋಜನೆಯನ್ನು ಆರಂಭಿಸಿತ್ತು. ಕೆರೆಗಳು ರೈತರ ಜೀವನಾಡಿ ಅನ್ನೋದನ್ನು ರೈತರಿಗೇ ತಿಳಿಸೋ ಮೂಲಕ ರೈತರಲ್ಲಿ ಕೆರೆಗಳ ಬಗ್ಗೆ ಅರಿವು ಮೂಡಿಸೋ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಧಾರವಾಡ ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದರೂ ಹೂಳು ಸೇರಿದಂತೆ ಅನೇಕ ಸಮಸ್ಯೆಗಳಿಂದಾಗಿ ಅವರು ಹೆಸರಿಗಷ್ಟೇ ಕೆರೆಯಾಗಿ ಉಳಿದಿವೆ. ಎಷ್ಟೋ ಕೆರೆಗಳು ಒತ್ತುವರಿ ಸಮಸ್ಯೆಯಿಂದ ಬಳಲುತ್ತಿವೆ. ಈ ವೇಳೆಯಲ್ಲಿ ಜನರಿಗೆ ಕೆರೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು, ಅದರೊಂದಿಗೆ ಸಂಘದ ಖರ್ಚಿನಲ್ಲಿಯೇ ಕೆರೆ ಅಭಿವೃದ್ಧಿಗೆ ನಿರ್ಧರಿಸಿದರು. ಆರಂಭದಲ್ಲಿ ಜನರಿಗೆ ಈ ಬಗ್ಗೆ ಹೆಚ್ಚಿನ ನಂಬಿಕೆ ಬರಲಿಲ್ಲ. ಆದರೆ ತಮ್ಮ ನಿರ್ಧಾರವನ್ನು ಬದಲಿಸಲ ಸಂಘದ ಸದಸ್ಯರು ಕೆಲಸವನ್ನು ಮುಂದುವರೆಸಿದರು. 2016 ರಲ್ಲಿ ಆರಂಭವಾದ ಈ ‘ನಮ್ಮ ಊರು ನಮ್ಮ ಕೆರೆ’ ಯೋಜನೆಯ ಫಲ ಒಂದೆರಡು ವರ್ಷಗಳಲ್ಲಿ ಫಲ ನೀಡಲು ಶುರು ಮಾಡಿತು. ಕೆಲ ಗ್ರಾಮಗಳಲ್ಲಿನ ಕೆರೆಗಳು ಅಭಿವೃದ್ಧಿಯಾಗಿ, ಅಲ್ಲಿ ಬೇಸಿಗೆಯ ವೇಳೆಯಲ್ಲಿಯೂ ನೀರು ಸಂಗ್ರಹವಾಗಿರೋದನ್ನು ಉಳಿದ ಗ್ರಾಮಗಳ ಜನರು ಕೂಡ ನೋಡಿದರು. ಇದರಿಂದಾಗಿ ನಿಧಾನವಾಗಿ ಈ ‘ನಮ್ಮ ಊರು ನಮ್ಮ ಕೆರೆ’ ಯೋಜನೆಯತ್ತ ಗ್ರಾಮೀಣ ಪ್ರದೇಶದ ಜನರು ವಾಲಿದರು. ಇದರ ಫಲವಾಗಿ ಇವತ್ತು ಧಾರವಾಡ ಜಿಲ್ಲೆಯೊಂದರಲ್ಲಿಯೇ 9 ವರ್ಷಗಳ ಅವಧಿಯಲ್ಲಿ 23 ಕೆರೆಗಳು ಅಭಿವೃದ್ಧಿಗೊಂಡಿದ್ದು, ಬಿರು ಬೇಸಿಗೆಯಲ್ಲಿಯೂ ಕೆರೆಯಲ್ಲಿ ಭಾರೀ ನೀರು ಇರೋದು ಕಂಡು ಬರುತ್ತಿದೆ.
ಇದನ್ನೂ ಓದಿ: ಕೆಜಿಎಫ್ನಲ್ಲಿವೆ ಸಾಕಷ್ಟು ಚಿನ್ನದ ನಿಕ್ಷೇಪಗಳು! ಸಂಶೋಧನೆಗಳಿಂದ ತಿಳಿದುಬಂತು ಅಚ್ಚರಿಯ ಅಂಶ
ಈ ಯೋಜನೆಯಡಿ ಅಭಿವೃದ್ಧಿಗೊಂಡಿರೋ ಕೆರೆಗಳ ಪೈಕಿ ಧಾರವಾಡ ತಾಲೂಕಿನ ಹಳೆ ತೇಗೂರ ಗ್ರಾಮದ ಜೋಗಿ ಕೆರೆಯೂ ಒಂದು. ಈ ಗ್ರಾಮದ ಜನರಿಗೆ ಪ್ರತಿ ಬೇಸಿಗೆಯಲ್ಲಿ ನೀರಿನ ಕಂಟಕ ಎದುರಾಗಿ ಬಿಡುತ್ತಿತ್ತು. ಇದರಿಂದಾಗಿ ಇಲ್ಲಿನ ರೈತರ ಜಾನುವಾರುಗಳಿಗೆ ಕುಡಿಯುವ ನೀರು ಕೂಡ ಸಿಗುತ್ತಿರಲಿಲ್ಲ. ಅಲ್ಲದೇ ಕೊಳವೆಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಕಳೆದ ವರ್ಷ ಈ ಜೋಗಿ ಕೆರೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು. ಗ್ರಾಮಸ್ಥರೊಂದಿಗೆ ಚರ್ಚಿಸಿ, ಇದಕ್ಕಾಗಿ 5.20 ಲಕ್ಷ ರೂಪಾಯಿ ಯೋಜನೆ ಸಿದ್ಧಗೊಂಡು, ಕೆಲಸವೂ ಶುರುವಾಯಿತು. ಒಂದು ತಿಂಗಳ ಕಾಲ ನಿರಂತರವಾಗಿ ಕೆಲಸ ನಡೆದು, ಮಳೆಗಾಲದಲ್ಲಿ ನೀರು ಹರಿದು ಬಂದು ಕೆರೆ ಒಡಲನ್ನು ಸೇರಿತು. ಇದರ ಫಲವಾಗಿ ಈ ಬಾರಿ ಬೇಸಿಗೆಯಲ್ಲೂ ಕೂಡ ಕೆರೆಯಲ್ಲಿ ಸಾಕಷ್ಟು ಪ್ರಮಾಣದ ನೀರಿದೆ. ಇತ್ತೀಚೆಗೆ ಕೆರೆಯ ಭಾಗದಲ್ಲಿರೋ ರೈತರ ಜಮೀನಿನ ವಿದ್ಯುತ್ ಸಂಪರ್ಕದ ಟ್ರಾನ್ಸ್ಫಾರ್ಮರ್ ಕೆಟ್ಟಿತ್ತು. ಹೀಗಾಗಿ ಕೊಳವೆ ಬಾವಿಯಿಂದ ನೀರೆತ್ತಲು ಸಾಧ್ಯವಾಗದೇ ರೈತರು ತಮ್ಮ ಬೆಳೆ ಒಣಗಿ ಹೋಗುತ್ತೆ ಅನ್ನೋ ಆತಂಕಕ್ಕೆ ಸಿಲುಕಿದ್ದರು. ಇದೇ ವೇಳೆ ಹೊಸ ಟ್ರಾನ್ಸ್ಫಾರ್ಮರ್ ಬರೋದು ಕೂಡ ತುಂಬಾ ವಿಳಂಬವಾಯಿತು. ಆಗ ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಇದೇ ಕೆರೆಗೆ ಪಂಪ್ಸೆಟ್ ಹಚ್ಚಿ ಹೊಲಗಳಿಗೆ ನೀರುಣಿಸಿಕೊಂಡರು. ಇದರಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಉಳಿದು, ರೈತರ ಆತಂಕ ದೂರವಾಯಿತು. ಅಲ್ಲದೇ ಈ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕೊಳವೆ ಬಾವಿಯಲ್ಲಿನ ನೀರಿನ ಪ್ರಮಾಣವೂ ಹೆಚ್ಚಾಗಿರೋದು ರೈತರ ಆತಂಕವನ್ನು ಕಡಿಮೆ ಮಾಡಿದೆ. ಇದು ಕೇವಲ ಉದಾಹರಣೆಯಷ್ಟೇ. ಇದೇ ರೀತಿ ಜಿಲ್ಲೆಯಲ್ಲಿ ಒಟ್ಟು 23 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಇದಕ್ಕಾಗಿ ಸಂಘ 1.23 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರಲ್ಲಿ ರೈತರಿಂದ ಅಥವಾ ಗ್ರಾಮಸ್ಥರಿಂದ ಯಾವುದೇ ಹಣವನ್ನು ಕೂಡ ಪಡೆದಿಲ್ಲ. ಕರೆಗಳು ಉಳಿದರೆ ರೈತರು ಉಳಿದಂತೆ ಅನ್ನೋ ಪರಿಕಲ್ಪನೆಯಡಿ ಈ ಯೋಜನೆ ಕೆಲಸ ಮಾಡುತ್ತಿದೆ.
ಈ ಯೋಜನೆಯ ಮೂಲಕ ಕೆರೆಗಳ ಹೂಳೆತ್ತಿ, ಅಭಿವೃದ್ಧಿ ಮಾಡುವ ಕಾರ್ಯ ಮೊದಲು ಆರಂಭವಾಗಿದ್ದೇ ಧಾರವಾಡ ಜಿಲ್ಲೆಯಿಂದ. ಈಗ ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಉತ್ತರ ಕರ್ನಾಟಕ ಮಾತ್ರವಲ್ಲ, ರಾಜ್ಯಾದ್ಯಂತ ಒಟ್ಟು 845 ಕೆರೆಗಳನ್ನು ಇದೇ ರೀತಿ ಅಭಿವೃದ್ಧಿಗೊಳಿಸಲಾಗಿದೆ. ಇವುಗಳಲ್ಲಿ ಧಾರವಾಡ ಜಿಲ್ಲೆಯ 23 ಕೆರೆಗಳೂ ಇವೆ. ಕಳೆದ ಬೇಸಿಗೆ ಸಂದರ್ಭದಲ್ಲಿ ಗ್ರಾಮಸ್ಥರ ಸಹಕಾರದಿಂದ ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಲಾಯಿತು. ಇದರ ಪರಿಣಾಮವನ್ನು ಇವತ್ತು ಎಲ್ಲರೂ ನೋಡುತ್ತಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿಯೇ ನೀರು ಬತ್ತಿ ಹೋಗುತ್ತಿದ್ದ ಕೆರೆ ಈಗ ತನ್ನ ಒಡಲು ತುಂಬ ನೀರು ತುಂಬಿಕೊಂಡು ರೈತರ ಕಣ್ಣಿಗೆ ಆನಂದವನ್ನು ನೀಡುತ್ತಿದೆ.
ಧಾರವಾಡ ಜಿಲ್ಲೆಯೊಂದರಲ್ಲೇ 23 ಕೆರೆಗಳ ಅಭಿವೃದ್ಧಿ ಮಾಡಲಾಗಿದ್ದು, ಅದಕ್ಕಾಗಿ ಒಟ್ಟು 1 ಕೋಟಿ 23 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಇನ್ನು ಈ ಯೋಜನೆಯಡಿ ಕಳೆದ 9 ವರ್ಷಗಳಲ್ಲಿ ಉತ್ತರ ಕರ್ನಾಟಕದ ನೂರಾರು ಕೆರೆಗಳ ಹೂಳೆತ್ತಿ, ಅಭಿವೃದ್ಧಿಪಡಿಸಲಾಗಿದೆ. ಹೀಗೆ ಹೂಳೆತ್ತಲಾದ ಎಲ್ಲ ಕೆರೆಗಳು ಮಾರ್ಚ್ ತಿಂಗಳ ಮೂರನೇ ವಾರಕ್ಕೆ ಬಂದರೂ ಅರ್ಧದಷ್ಟಾದರೂ ಖಾಲಿಯಾಗಿಲ್ಲ. ದಶಕದ ಹಿಂದೆ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡಿರೋ ಈ ನಮ್ಮೂರು ನಮ್ಮ ಕೆರೆ ಅಭಿಯಾನ ಈಗ ರಾಜ್ಯಾದ್ಯಂತ ವ್ಯಾಪಿಸಿದೆ. ಪ್ರಮುಖವಾಗಿ ರೈತರ ಪಾಲಿಗಂತೂ ಬೇಸಿಗೆಯಲ್ಲಿ ಜಲ ಸಂಜೀವಿನಿಯಾಗಿದೆ. ಅದೆಷ್ಟೋ ಗ್ರಾಮಗಳ ನೀರಿನ ಬವಣೆ ದೂರವಾಗಿದ್ದು, ಅವರೆಲ್ಲರೂ ಈ ಯೋಜನೆಯಿಂದ ನೆಮ್ಮದಿಯ ಜೀವನ ನಡೆಸುವಂತಾಗಿದೆ.
ಒಂದೇ ವರ್ಷದಲ್ಲಿ ರಾಜ್ಯದಲ್ಲಿ 160 ಕೆರೆಗಳಿಗೆ ಪುನಶ್ಚೇತನ ಭಾಗ್ಯ:
2024-25ನೇ ಸಾಲಿನಲ್ಲಿ ರಾಜ್ಯಾದ್ಯಂತ 160 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದೆ. ಈ ವರ್ಷದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಕೆರೆಗಳ ಪುನಶ್ಚೇತನ ಕಾರ್ಯ ತುಸು ವಿಳಂಬವಾಗಿ ಪ್ರಾರಂಭಿಸಲಾಗಿತ್ತು. ಕೆರೆಗಳ ಪುನಶ್ಚೇತನಕ್ಕಾಗಿ ಸುಮಾರು 1760 ರೈತರು, ಮಹಿಳೆಯರನ್ನೊಳಗೊಂಡ 160 ಕೆರೆ ಸಮಿತಿಗಳನ್ನು ರಚಿಸಲಾಗಿತ್ತು. ಜನಸಹಭಾಗಿತ್ವದೊಂದಿಗೆ ಕೈಗೊಂಡ ಬೃಹತ್ ಕಾರ್ಯದಲ್ಲಿ ಸಂಸ್ಥೆಯ 160 ನೋಡೆಲ್ ಅಧಿಕಾರಿಗಳು, 7 ಜನ ನುರಿತ ಇಂಜಿನಿಯರ್‌ಗಳ ತಂಡ ಅವಿರತವಾಗಿ ಶ್ರಮಿಸಿದೆ. ಅಲ್ಲದೇ ಕೆರೆ ಸಮಿತಿ ಪದಾಧಿಕಾರಿಗಳು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಸುಮಾರು 242 ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳು, 4304 ಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು 12.50 ಲಕ್ಷ ಲೋಡ್ ಕೆರೆಯ ಹೂಳನ್ನು ತಮ್ಮ ಕೃಷಿ ತೋಟಗಳಿಗೆ ಉತ್ಸಾಹದಿಂದ ಸಾಗಾಟ ಮಾಡಿದ್ದಾರೆ. ಹೂಳು ತೆಗೆಯುವುದು, ಏರಿ ಭದ್ರಪಡಿಸುವುದು, ಕಾಲುವೆ ಹಾಗೂ ಕೋಡಿಗಳ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳ ಮೂಲಕ ಕೆರೆಗಳು ವೈಜ್ಞಾನಿಕವಾಗಿ ಹಾಗೂ ಸುಂದರವಾಗಿ ಮರುನಿರ್ಮಾಣಗೊಂಡಿವೆ.
ವನ್ಯ ಜೀವಿಗಳಿಗಾಗಿಯೂ ಕೆರೆಗಳ ನಿರ್ಮಾಣ:
ಕೆರೆಗಳು ಮಾನವರಂತೆ ಜಾನುವಾರುಗಳಿಗೂ ಕುಡಿಯುವ ನೀರಿನ ಬಹುಮುಖ್ಯ ಮೂಲವಾಗಿದೆ. ಇದಕ್ಕಾಗಿಯೇ ಶಿವಮೊಗ್ಗದ ತಾವರಕೆರೆ ಹುಲಿ ಮತ್ತು ಸಿಂಹಧಾಮದಲ್ಲಿ 10 ಕೆರೆಗಳನ್ನು ಈ ವರ್ಷ ಪುನಶ್ಚೇತನಗೊಳಿಸಲಾಗಿದೆ. ಇಲ್ಲಿಯ ಸುಮಾರು 400 ವನ್ಯಜೀವಿಗಳಿಗೆ ಈ ಕೆರೆಗಳ ಮೂಲಕ ಜೀವಜಲ ಒದಗಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲೂ ವನ್ಯಜೀವಿಗಳಿಗಾಗಿ ಒಂದು ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ.
ಪುನಶ್ಚೇತನಗೊಂಡ ಕೆರೆಗಳ ಹಸ್ತಾಂತರ:
ಸುಂದರವಾಗಿ ಪುನರ್ ನಿರ್ಮಾಣಗೊಂಡ ಕೆರೆಗಳನ್ನು ಮತ್ತೆ ಮುಂದಿನ ನಿರ್ವಹಣೆಗಾಗಿ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಸಮಿತಿಗೆ ಹಸ್ತಾಂತರಿಸಲಾಗುತ್ತದೆ. ಈ ಕೆರೆಗಳನ್ನು ಮುಂದೆ ಸಂರಕ್ಷಿಸುವ, ಅಭಿವೃದ್ಧಿಪಡಿಸುವ, ಅತಿಕ್ರಮಣವಾಗದಂತೆ ತಡೆಗಟ್ಟುವ, ಸ್ವಚ್ಛತೆ ಕಾಪಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುತ್ತದೆ. ಇದಕ್ಕಾಗಿ ಕಾಲಕಾಲಕ್ಕೆ ಕೆರೆ ಸಮಿತಿ ಪದಾಧಿಕಾರಿಗಳ ಕಾರ್ಯಾಗಾರ ನಡೆಸಿ ಪ್ರೇರಣೆ ನೀಡಲಾಗುತ್ತಿದೆ. ಮುಂದಿನ ಮಳೆಗಾಲ ಆರಂಭವಾಗುತ್ತಿದ್ದಂತೆ ಪುನಶ್ಚೇತನಗೊಂಡ ಕೆರೆಗಳ ಸುತ್ತಲೂ ಗಿಡಗಳನ್ನು ನೆಡಲಾಗುತ್ತದೆ.
ಇದನ್ನೂ ಓದಿ: ರೇಷ್ಮೆ ನಾಡು ಕೋಲಾದಲ್ಲಿ ರೇಷ್ಮೆ ಬೆಳೆಗೆ ಸಂಕಷ್ಟ: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಬೆಳೆಗಾರರ ಸಂಖ್ಯೆ
ಗ್ರಾಮ ಪಂಚಾಯತ್ ಹಾಗೂ ಸಮಿತಿಯ ಸಹಭಾಗಿತ್ವದೊಂದಿಗೆ ಹೂವು, ಹಣ್ಣು ಹಾಗೂ ನೆರಳು ಕೊಡುವ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತದೆ. ಇದರಂತೆ ಸಮೃದ್ಧ ಕೆರೆಯ ಸುತ್ತ ಹಸಿರು ಬೆಳೆದು ಪ್ರಾಣಿ ಪಕ್ಷಿಗಳಿಗೆ ಹಣ್ಣು, ನೆರಳು, ನೀರು ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. 2024-25ನೇ ಸಾಲಿನಲ್ಲಿ 160 ಕೆರೆಗಳು ಸುಂದರವಾಗಿ ಪುನರ್ ನಿರ್ಮಾಣಗೊಂಡು ತನ್ನೊಡಲಲ್ಲಿ ನೀರು ತುಂಬಿಸಿಕೊಳ್ಳಲು ಅಣಿಯಾಗಿ ನಿಂತಿವೆ. ಸಂಸ್ಥೆಯ ವತಿಯಿಂದ ಇದುವರೆಗೆ ಪುನಶ್ಚೇತನಗೊಂಡ ಒಟ್ಟು 889 ಕೆರೆಗಳು ತುಂಬಿ ಸಮೃದ್ಧಗೊಂಡು ಜನ, ಜಾನುವಾರುಗಳಿಗೆ ನೀರು ಬವಣೆ ನೀಗಿಸಿವೆ. ಮುಂದಿನ ಒಂದೆರಡು ತಿಂಗಳಲ್ಲಿ ಪುನಶ್ಚೇತನಗೊಳ್ಳಲಿರುವ ಕೆರೆಗಳ ಸಂಖ್ಯೆ 1000 ಗಡಿ ದಾಟಲಿದೆ.
ರಾಜ್ಯದಲ್ಲಿ ಇದುವರೆಗೆ ನಮ್ಮ ಊರು ನಮ್ಮ ಕೆರೆ ಯೋಜನೆಯ ಸಾಧನೆ:
- ಪುನಶ್ಚೇತನಗೊಂಡ ಒಟ್ಟು ಕೆರೆಗಳು : 889
- ತೆಗೆದ ಹೂಳಿನ ಪ್ರಮಾಣ : 240.13 ಲಕ್ಷ ಕ್ಯೂಬಿಕ್ ಮೀಟರ್
- ಹೆಚ್ಚಳಗೊಂಡಿರುವ ನೀರಿನ ಸಂಗ್ರಹಣ ಸಾಮರ್ಥ್ಯ : 530 ಕೋಟಿ ಗ್ಯಾಲನ್
- ಪ್ರಯೋಜನವಾಗಲಿರುವ ಕೃಷಿ ಭೂಮಿ : 2,58,095 ಎಕರೆ
- ಪ್ರಯೋಜನ ಪಡೆದ ಕುಟುಂಬಗಳ ಸಂಖ್ಯೆ : 4,05,830
- ಒತ್ತುವರಿ ತೆರವುಗೊಳಿಸಲಾದ ಪ್ರದೇಶ : 366 ಎಕರೆ
- ಬಳಸಿದ ಯೋಜನೆಯ ಅನುದಾನ : ರೂ. 69.05 ಕೋಟಿ
ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಿಷ್ಟು
ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆ, ಜನಸಹಭಾಗಿತ್ವದೊಂದಿಗೆ ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಇಂತಹ ಕಾರ್ಯಗಳಿಗೆ ಜನ ಕೈ ಜೋಡಿಸುತ್ತಿದ್ದಾರೆ. ಕ್ರಿಕೆಟ್ ಮೈದಾನದಂಥ ಕೆರೆಗಳು ಪುನಶ್ಚೇತನಗೊಂಡು ಜಲ ಸಮೃದ್ಧಿಗೊಂಡಿವೆ. ಅವುಗಳಲ್ಲಿ ಮತ್ತೆ ಹೂಳು ತುಂಬಿ ಕೆರೆಗಳು ಹಾಳಾಗದಂತೆ ರಕ್ಷಿಸಿಕೊಳ್ಳಬೇಕಿದೆ ಅನ್ನುತ್ತಾರೆ.
ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದ ದಯಾಶೀಲಾ
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲಾ, ಕೆರೆಗಳ ಬಗ್ಗೆ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅರಿವು, ಜಾಗೃತೆ ಮೂಡುತ್ತಿದೆ. ತಮ್ಮೂರಿನ ಪಕ್ಕದ ಊರಿನಲ್ಲಿ ಕೆರೆ ಅಭಿವೃದ್ಧಿಯನ್ನು ನೋಡಿ ಆ ಗ್ರಾಮದ ಜನರು ಬಂದು ನಮಗೆ ತಮ್ಮೂರಿನ ಕೆರೆಯನ್ನೂ ಅಭಿವೃದ್ಧಿಪಡಿಸುವಂತೆ ಕೇಳುತ್ತಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅಭಿವೃದ್ಧಿಗೊಂಡ ಕೆರೆಯ ಅಕ್ಕಪಕ್ಕದ ರೈತರು ತಮ್ಮ ಹೊಲಗಳಲ್ಲಿನ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರೋದನ್ನು ಕಂಡು ಸಂತಸಪಡುತ್ತಿದ್ದಾರೆ. ಆ ಸಂತಸದಲ್ಲಿ ನಾವು ಕೂಡ ಭಾಗಿಯಾಗೋದೇ ನಮ್ಮೆಲ್ಲರ ಭಾಗ್ಯ. ಈ ಭಾಗ್ಯದಲ್ಲಿ ಭಾಗಿಯಾಗಲು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನಮಗೆಲ್ಲ ಅವಕಾಶ ಕೊಟ್ಟಿದ್ದು ನಮ್ಮ ಸುದೈವ ಎನ್ನುತ್ತಾರೆ.
ಮತ್ತಷ್ಟು ಕೆರೆಗಳ ಅಭಿವೃದ್ಧಿ ಮಾಡುತ್ತೇವೆ: ಎಸ್.ಎಸ್. ಅನಿಲ್ ಕುಮಾರ್
ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್, ಜನರು ಸಹಕಾರ ನೀಡಿದರೆ ಎಂಥ ದೊಡ್ಡ ಕೆಲಸಗಳನ್ನು ನಿರಾಸಾಯವಾಗಿ ಮಾಡಿ ಮುಗಿಸಬಹುದು ಅನ್ನುವುದು ಈ ಕೆರೆಗಳ ಅಭಿವೃದ್ಧಿ ಯೋಜನೆಯಿಂದ ಗೊತ್ತಾಗುತ್ತೆ. ಇಂಥ ಕೆಲಸಗಳನ್ನು ಮಾಡೋ ಮೂಲಕ ನಮಗೂ ಜನರ ಕಣ್ಣಲ್ಲಿ ಆನಂದವನ್ನು ನೋಡುವ ಭಾಗ್ಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಸಾಹ, ಸ್ಪೂರ್ತಿಯಿಂದ ಮತ್ತಷ್ಟು ಕೆರೆಗಳ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:11 pm, Fri, 21 March 25