ಅಂತಿಂಥದ್ದಲ್ಲ ಈ ಇಡ್ಲಿ; 2ನೇ ಮಹಾಯುದ್ಧಕ್ಕೂ ರವೆ ಇಡ್ಲಿಗೂ ಇದೆ ಸಂಬಂಧ

ರವಾ ಇಡ್ಲಿ ಅಥವಾ ರವೆ ಇಡ್ಲಿ ಬೆಂಗಳೂರಿನಲ್ಲಿ ಬೇಡಿಕೆಯ ತಿಂಡಿಗಳಲ್ಲೊಂದು. ರವೆ ಇಡ್ಲಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಹೆಸರೇ ಸೂಚಿಸುವಂತೆ ಸಾಮಾನ್ಯ ಇಡ್ಲಿಗಿಂತ ಭಿನ್ನವಾಗಿರುವ ಈ ಇಡ್ಲಿಯನ್ನು ರವೆಯಿಂದ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಅಕ್ಕಿಯಿಂದ ಮಾಡಿದ ಇಡ್ಲಿಗೆ ಹೋಲಿಸಿದರೆ ಆರೋಗ್ಯಕರವಾದುದು. ಈ ಇಡ್ಲಿಯ ಇತಿಹಾಸ ತಿಳಿಯೋಣ ಬನ್ನಿ

ಅಂತಿಂಥದ್ದಲ್ಲ ಈ ಇಡ್ಲಿ; 2ನೇ ಮಹಾಯುದ್ಧಕ್ಕೂ ರವೆ ಇಡ್ಲಿಗೂ ಇದೆ ಸಂಬಂಧ
ರವಾ ಇಡ್ಲಿ
Follow us
ರಶ್ಮಿ ಕಲ್ಲಕಟ್ಟ
|

Updated on: May 25, 2024 | 12:09 PM

ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಬೆಳಗ್ಗಿನ ತಿಂಡಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಇಡ್ಲಿ, ದೋಸೆಗೆ ವಿಶೇಷ ಸ್ಥಾನ. ತಮಿಳುನಾಡು, ಕರ್ನಾಟಕ,ಕೇರಳ, ಆಂಧ್ರ ಪ್ರದೇಶ ಎಲ್ಲೇ ಹೋದರೂ ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿಯಂತೂ ಇದ್ದೇ ಇರುತ್ತದೆ. ತಯಾರಿಸಲು ಸುಲಭ ಮತ್ತು ಬೇಗನೆ ಜೀರ್ಣವಾಗುವ ಆಹಾರ ಇಡ್ಲಿ. ಅಷ್ಟೇ ಯಾಕೆ ಮಾರ್ಚ್ 30 ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಇಡ್ಲಿಗಳಲ್ಲಿ ಮಲ್ಲಿಗೆ ಇಡ್ಲಿ, ಮಸಾಲೆ ಇಡ್ಲಿ, ತಟ್ಟೆ ಇಡ್ಲಿ, ಶ್ಯಾವಿಗೆ ಇಡ್ಲಿ, ಸಾಬುದಾನ ಇಡ್ಲಿ, ರವೆ ಇಡ್ಲಿ ಹೀಗೆ ಹಲವಾರು ವಿಧಗಳಿವೆ. ಅದರಲ್ಲೂ ರವೆ ಇಡ್ಲಿಗೂ 2ನೇ ಮಹಾಯುದ್ಧಕ್ಕೂ ಸಂಬಂಧ ಇದೆ ಎಂದರೆ ನೀವು ನಂಬಲೇ ಬೇಕು. ಈ ಜನಪ್ರಿಯ ಉಪಾಹಾರ ಖಾದ್ಯವನ್ನು ನೂರು ವರ್ಷಗಳ ಹಿಂದೆ ಬೆಂಗಳೂರಿನ ಐಕಾನಿಕ್ ಮಾವಳ್ಳಿ ಟಿಫಿನ್ ರೂಮ್‌ (MTR)ನಲ್ಲಿ ಮಾಡಲಾಗಿತ್ತು. ಎಂಟಿಆರ್ ಎಂದು ಪ್ರಸಿದ್ಧವಾಗಿರುವ ಮಾವಳ್ಳಿ ಟಿಫಿನ್ ರೂಮ್ ಅನ್ನು ಪರಂಪಳ್ಳಿ ಯಜ್ಞನಾರಾಯಣ ಮಯ್ಯಾ ಮತ್ತು ಅವರ ಸಹೋದರರು 1924 ರಲ್ಲಿ ಸ್ಥಾಪಿಸಿದರು.  ಇಲ್ಲಿ ರವಾ ಇಡ್ಲಿ ತಯಾರಾಗಿದ್ದು ಹೇಗೆ? ಅದರ ಇತಿಹಾಸವೇನು ಎಂಬುದನ್ನು ನೋಡೋಣ.

ರವಾ ಇಡ್ಲಿ ಅಥವಾ ರವೆ ಇಡ್ಲಿ ಬೆಂಗಳೂರಿನಲ್ಲಿ ಬೇಡಿಕೆಯ ತಿಂಡಿಗಳಲ್ಲೊಂದು. ರವೆ ಇಡ್ಲಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಹೆಸರೇ ಸೂಚಿಸುವಂತೆ ಸಾಮಾನ್ಯ ಇಡ್ಲಿಗಿಂತ ಭಿನ್ನವಾಗಿರುವ ಈ ಇಡ್ಲಿಯನ್ನು ರವೆಯಿಂದ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಅಕ್ಕಿಯಿಂದ ತಯಾರಿಸಿದ ಇಡ್ಲಿಗೆ ಹೋಲಿಸಿದರೆ ಆರೋಗ್ಯಕರವಾದುದು. 2ನೇ ಮಹಾಯುದ್ಧದ ಸಮಯದಲ್ಲಿ, ಉಪ-ಖಂಡದಲ್ಲಿ ಅತಿದೊಡ್ಡ ಅಕ್ಕಿ ಉತ್ಪಾದಕ ಬರ್ಮಾದ ಮೇಲೆ ಜಪಾನ್ ಆಕ್ರಮಣ ಮಾಡಿತ್ತು. ಆಗಲೇ ಅಕ್ಕಿಗೆ ಕೊರತೆ ಆಗಿದ್ದು. ಈ ವೇಳೆ ಅಕ್ಕಿಯ ಬೆಲೆಯಲ್ಲಿಯೂ ಭಾರಿ ಏರಿಕೆ ಕಂಡು ಬಂತು. ಅಕ್ಕಿಯೇ ಪ್ರಧಾನ ಆಹಾರವಾಗಿರುವ ದಕ್ಷಿಣ ಭಾರತೀಯರ ಮೇಲೆ ಇದು ಭಾರೀ ಪ್ರಭಾವ ಬೀರಿತ್ತು. ಎಂಟಿಆರ್‌ಗೂ ಇಡ್ಲಿ ತಯಾರಿಕೆ ಕಷ್ಟವಾಗಿತ್ತು. ಹೇಗಾದರೊಂದು ಪರ್ಯಾಯ ಮಾರ್ಗ ಕಂಡು ಹಿಡಿಯಬೇಕು ಎಂದು ಯೋಚಿಸಿದಾಗ ಹೊಳೆದದ್ದೇ ರವೆ ಇಡ್ಲಿ.

ಮನೆಯಲ್ಲೇ ಮಾಡಿ ರವೆ ಇಡ್ಲಿ

ಅಕ್ಕಿ, ಉದ್ದಿನ ಬೇಳೆ ನೆನೆ ಹಾಕಿ ರುಬ್ಬಿ ಹುದುಗು ಬರಿಸುವ ಅಗತ್ಯವಿಲ್ಲ. ಫಟಾಫಟ್ ಆಗಿ ಮಾಡಬಹುದು ಈ ರವೆ ಇಡ್ಲಿ. ಮೊದಲಿಗೆ ಕಾದ ಬಾಣಲೆಗೆ ಒಂದೂವರೆ ಟೀ ಸ್ಪೂನ್ ಅಡುಗೆ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ,ಜೀರಿಗೆ ಚಟ್ ಪಟ್ ಅದ ಕೂಡಲೇ ಒಂದು ಟೀ ಸ್ಪೂನ್ ಸಾಸಿವೆ ಹಾಕಿ ಅದು ಸಿಡಿದ ಕೂಡಲೇ ಸಣ್ಣದಾಗಿ ಹೆಚ್ಚಿದ ಹಸಿಮೆಣಸು, ತುರಿದ ಕ್ಯಾರೆಟ್, ಕರಿಬೇವು ಹಾಕಿ ಎಲ್ಲವನ್ನೂ ಬಾಡಿಸಿಕೊಳ್ಳಬೇಕು. ನಂತರ ಅದಕ್ಕೆ 1 ಕಪ್ ಸಣ್ಣ ರವೆ ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ರೋಸ್ಟ್ ಮಾಡಿಕೊಂಡು ಬಾಣಲೆಯಿಂದ ತೆಗೆದು ಆರಲು ಬಿಡಿ. ಈ ಮಿಶ್ರಣ ತಣ್ಣಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪು ಹಾಕಿ. 1 ಕಪ್ ಹುಳಿ ಮೊಸರು ಹಾಕಿ. ಇಡ್ಲಿ ಸಾಫ್ಟ್ ಆಗುವುದಕ್ಕೆ ಫ್ರೂಟ್ ಸಾಲ್ಟ್ (Eno) ಬಳಸಬಹುದು. ಈ ಮಿಶ್ರಣವನ್ನು 15 ನಿಮಿಷಕಾಲ ನೆನೆಯಲು ಬಿಟ್ಟು ಆನಂತರ ಇಡ್ಲಿ ಹಿಟ್ಟು ಹದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಇಡ್ಲಿ ಪಾತ್ರೆ ಅಥವಾ ಇಡ್ಲಿ ಕುಕ್ಕರ್ ನಲ್ಲಿ ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಿಟ್ಟು ಹೊಯ್ದು 15 ನಿಮಿಷಗಳ ಕಾಲ ಬೇಯಿಸಿ. ಬಿಸಿ ಬಿಸಿ ರವೆ ಇಡ್ಲಿಯನ್ನು ಕಾಯಿ ಚಟ್ನಿಯೊಂದಿಗೆ ತಿಂದರೆ ರುಚಿ ಜಾಸ್ತಿ.

ಇಡ್ಲಿಯ ಮೂಲ

ಹೆಸರಾಂತ ಪೌಷ್ಟಿಕತಜ್ಞ, ಆಹಾರ ಇತಿಹಾಸಕಾರ ಮತ್ತು ಆಹಾರ ವಿಜ್ಞಾನಿ ಕೆ ಟಿ ಅಚಾಯಾ ಅವರ ಅಧ್ಯಯನಗಳ ಪ್ರಕಾರ, ಇಂಡೋನೇಷ್ಯಾದಲ್ಲಿ ಏಳನೇ ಮತ್ತು ಹನ್ನೆರಡನೇ ಶತಮಾನದ ನಡುವೆ ಇಡ್ಲಿ ಹುಟ್ಟಿಕೊಂಡಿತು. ಆ ದಿನಗಳಲ್ಲಿ, ಭಕ್ಷ್ಯವನ್ನು ಕೆಡ್ಲಿ ಅಥವಾ ಕೇದಾರಿ ಎಂದು ಕರೆಯಲಾಗುತ್ತಿತ್ತು. ಈ ಅವಧಿಯಲ್ಲಿ ಇಂಡೋನೇಷ್ಯಾವನ್ನು ಹಲವಾರು ಹಿಂದೂ ರಾಜರು ಆಳಿದ್ದರು. ಈ ರಾಜರು ಆಗಾಗ್ಗೆ ತಮ್ಮ ರಾಜಮನೆತನದ ಅಡುಗೆಯವರೊಂದಿಗೆ ಧಾರ್ಮಿಕ ಹಬ್ಬಗಳು ಮತ್ತು ಮದುವೆಗಳಂತಹ ವಿಶೇಷ ಸಂದರ್ಭಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದರು. ಈ ರಾಜಮನೆತನದ ಭೇಟಿಗಳಲ್ಲಿ ಇಂಡೋನೇಷಿಯಾದ ಖಾದ್ಯ “ಕೆಡ್ಲಿ” ಅನ್ನು ಭಾರತಕ್ಕೆ “ಇಡ್ಲಿ” ಎಂದು ಪರಿಚಯಿಸಲಾಗಿದೆ ಎಂದು ಊಹಿಸಲಾಗಿದೆ.

‘ಎನ್‌ಸೈಕ್ಲೋಪೀಡಿಯಾ ಆಫ್ ಫುಡ್ ಹಿಸ್ಟರಿ’ ಮತ್ತು ‘ಸೀಡ್ ಟು ಸಿವಿಲೈಸೇಶನ್ – ದಿ ಸ್ಟೋರಿ ಆಫ್ ಫುಡ್’ ಪುಸ್ತಕ ಪ್ರಕಾರ ಅರಬ್ಬೀಗಳು ಈ ಖಾದ್ಯವನ್ನು ಭಾರತಕ್ಕೆ ಪರಿಚಯಿಸಿರಬಹುದು ಎಂದು ಸೂಚಿಸುತ್ತವೆ. ಭಾರತದಲ್ಲಿ ನೆಲೆಸಿದಾಗ, ಅರಬ್ಬೀಗಳು ಹಲಾಲ್ ಭಕ್ಷ್ಯಗಳು ಮತ್ತು ಅಕ್ಕಿ ಉಂಡೆಯನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.

ಇತಿಹಾಸದಲ್ಲಿ ಇಡ್ಲಿ

ವಿದೇಶಿ ಮೂಲದ ಹೊರತಾಗಿಯೂ, ಇಡ್ಲಿ ಭಾರತೀಯರ ಹೃದಯ ಗೆದ್ದ ಭಕ್ಷ್ಯ. ಪ್ರಾಚೀನ ಐತಿಹಾಸಿಕ ಗ್ರಂಥಗಳಲ್ಲಿ ಇಡ್ಲಿಯ ಉಲ್ಲೇಖಗಳನ್ನು ಕಾಣಬಹುದು. ಏಳನೇ ಶತಮಾನದ ಕನ್ನಡ ಗದ್ಯ ಕೃತಿಯಾದ ‘ವಡ್ಡಾರಾಧನೆ’ಯಲ್ಲಿ ‘ಇಡ್ಡಲಿಗೆ’ ಪಾಕವಿಧಾನವನ್ನು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಹತ್ತನೇ ಶತಮಾನದ ತಮಿಳು ಕೃತಿ ‘ಪೆರಿಯ ಪುರಾಣಂ’ನಲ್ಲಿ ಇಡ್ಲಿಯನ್ನು ಉಲ್ಲೇಖಿಸಲಾಗಿದೆ.  ಪ್ರಸಿದ್ಧ ಸೋಮನಾಥ ದೇವಾಲಯದ ಮೇಲೆ ಘಜ್ನಿಯ ಮುಹಮ್ಮದ್ ದಾಳಿಯ ನಡುವೆ ಸೌರಾಷ್ಟ್ರದ ವ್ಯಾಪಾರಿಗಳು ಹತ್ತನೇ ಶತಮಾನದಲ್ಲಿ ದಕ್ಷಿಣ ಭಾರತಕ್ಕೆ ಇಡ್ಲಿ ಪರಿಚಯಿಸಿದರು ಎಂಬ ದಂತ ಕತೆಯೂ ಇದೆ.

ವಿಶ್ವ ಇಡ್ಲಿ ದಿನ

ವಿಭಿನ್ನ ಮೂಲಗಳ ಕಥೆಗಳ ಹೊರತಾಗಿಯೂ, ಇಡ್ಲಿಯು ಜಾಗತಿಕವಾಗಿ ಅತ್ಯಂತ ಪ್ರಸಿದ್ಧವಾದ ದಕ್ಷಿಣ ಭಾರತೀಯ ಭಕ್ಷ್ಯವಾಗಿಯೇ ಉಳಿದಿದೆ.ಅಷ್ಟೇ ಅಲ್ಲದೆ ಮಾರ್ಚ್ 30 ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಚೆನ್ನೈ ಮೂಲದ ಜನಪ್ರಿಯ ಇಡ್ಲಿ ಕ್ಯಾಟರರ್‌ಗಳಾದ ಎನಿಯವನ್ ಪ್ರಾರಂಭಿಸಿದ್ದಾರೆ. ಮಾರ್ಚ್ 30, 2015 ರಂದು, ಎನಿಯವನ್ ಅವರು 1,328 ವಿಧದ ಇಡ್ಲಿಗಳನ್ನು ತಯಾರಿಸಿ ಈ ರುಚಿಕರವಾದ ಮತ್ತು ಪೌಷ್ಟಿಕಾಂಶ ಉಪಾಹಾರಕ್ಕೆ ಗೌರವ ಸಲ್ಲಿಸಿದ್ದರು. ಇವರು 44-ಕಿಲೋಗ್ರಾಂಗಳಷ್ಟು ಬೃಹತ್ ಇಡ್ಲಿಯನ್ನು ತಯಾರಿಸಿದ್ದು, ಮಾರ್ಚ್ 30 ಅನ್ನು ವಿಶ್ವ ಇಡ್ಲಿ ದಿನವೆಂದು ಗುರುತಿಸಲು ಕಾರಣವಾಯಿತು.

ಒಂದೊಂದು ಊರಲ್ಲಿ ಒಂದೊಂದು ರೀತಿ

ತಮಿಳುನಾಡು: ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆ ರುಬ್ಬಿ ಹುದುಗು ಬರಿಸಿ ತಯಾರಿಸಲಾಗುತ್ತದೆ. ಈ ಇಡ್ಲಿಗಳು ಸಾಮಾನ್ಯವಾಗಿ ಚಿಕ್ಕದಾಗಿ ಮೃದುವಾಗಿರುತ್ತದೆ. ತೆಂಗಿನಕಾಯಿ ಚಟ್ನಿ, ಸಾಂಬಾರ್ ಮತ್ತು ವಿವಿಧ ಪೊಡಿ (ಮಸಾಲೆ ಮಿಶ್ರಣಗಳು) ನೊಂದಿಗೆ ಬಡಿಸಲಾಗುತ್ತದೆ.

ಕರ್ನಾಟಕ: ಕರ್ನಾಟಕದಲ್ಲಿ, ತಮಿಳುನಾಡಿನ ಇಡ್ಲಿಗಳಿಗೆ ಹೋಲಿಸಿದರೆ ಇಡ್ಲಿಗಳು ಹೆಚ್ಚು ಮೃದುವಾಗಿರುತ್ತವೆ ಮತ್ತು ಸ್ವಲ್ಪ ದೊಡ್ಡದಾಗಿರುತ್ತವೆ. ಹಿಟ್ಟಿಗೆ ಅವಲಕ್ಕಿ ಸೇರಿಸುವುದು ಕರ್ನಾಟಕ ಶೈಲಿಯ ಇಡ್ಲಿಗಳ ವಿಶಿಷ್ಟ ಲಕ್ಷಣವಾಗಿದೆ. ಅವುಗಳನ್ನು ಸಾಮಾನ್ಯವಾಗಿ ಚಟ್ನಿ, ಸಾಂಬಾರ್ ಮತ್ತು “ಚಟ್ನಿ ಪುಡಿ” ಎಂಬ ವಿಶಿಷ್ಟವಾದ ಮಸಾಲೆ ಪುಡಿಯೊಂದಿಗೆ ಬಡಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಟ್ಟೆ ಕಡುಬು ಮಾಡುವುದಕ್ಕೂ ಇಡ್ಲಿ ಹಿಟ್ಟನ್ನೇ ಬಳಸಲಾಗುತ್ತದೆ. ಹಲಸಿನ ಎಲೆಗಳನ್ನು  ಜೋಡಿಸಿ  ಸಣ್ಣ ಕೊಟ್ಟೆ (ಚಿಕ್ಕ ಪಾತ್ರೆ)ಯಂತೆ ಮಾಡಿ ಅದನ್ನು ಇಡ್ಲಿ ಪಾತ್ರೆಯೊಳಗಿಟ್ಟು ಈ ಕೊಟ್ಟೆಯೊಳಗೆ ಹಿಟ್ಟನ್ನು ಸುರಿದು ಹಬೆಯಲ್ಲಿ ಬೇಯಿಸಿ ಕೊಟ್ಟೆಕಡುಬು ಮಾಡಲಾಗುತ್ತದೆ. ಹಲಸಿನ ಎಲೆಯಲ್ಲಿ ಬೇಯಿಸುವುದರಿಂದ ಇದರ ರುಚಿಯೇ ಬೇರೆ ಇರುತ್ತದೆ.

ಕೇರಳ: “ವಟ್ಟಯಪ್ಪಂ” ಎಂದು ಕರೆಯಲ್ಪಡುವ ಕೇರಳ ಶೈಲಿಯ ಇಡ್ಲಿಗಳನ್ನು ಅಕ್ಕಿ ಮತ್ತು ತೆಂಗಿನಕಾಯಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ಈ ಇಡ್ಲಿಯನ್ನು ಬಾಳೆ ಎಲೆಗಳಿಂದ ಮಾಡಿದ ಸಣ್ಣ ಕಪ್‌ಗಳಲ್ಲಿ ಬೇಯಿಸಲಾಗುತ್ತದೆ. ಅವುಗಳಿಗೆ ವಿಶಿಷ್ಟವಾದ ಪರಿಮಳವಿರುತ್ತದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣ: “ಸನ್ನಾಸ್” ಎಂದು ಕರೆಯಲ್ಪಡುವ ಈ ಪ್ರದೇಶಗಳಲ್ಲಿನ ಇಡ್ಲಿಗಳು ಸಾಮಾನ್ಯವಾಗಿ ಮೃದುವಾಗಿ ಹೆಚ್ಚು ಸ್ಪಂಜಿನಂತಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ಅಕ್ಕಿ ಮತ್ತು ಇಡ್ಲಿ ರವಾ ಮಿಶ್ರಣದೊಂದಿಗೆ ತಯಾರಿಸಲಾಗುತ್ತದೆ. ಚಟ್ನಿ ಅಥವಾ ಟೊಮೆಟೊ ಪದಾರ್ಥ ಜತೆ ಇದನ್ನು ಬಡಿಸಲಾಗುತ್ತದೆ.

ಗಡಿ ಮೀರಿದ ಇಡ್ಲಿ ಇಡ್ಲಿ ದಕ್ಷಿಣ ಭಾರತದ ತಿಂಡಿಯಾಗಿದ್ದರೂ, ಅದರ ಜನಪ್ರಿಯತೆಯು ಪ್ರಾದೇಶಿಕ ಗಡಿಗಳನ್ನು ಮೀರಿ ಜಾಗತಿಕ ಮಟ್ಟ ತಲುಪಿದೆ. ಭಾರತದಾದ್ಯಂತ ಮೆಟ್ರೋಪಾಲಿಟನ್ ನಗರಗಳಲ್ಲಿ ಮತ್ತು ಪ್ರಪಂಚದಾದ್ಯಂತದ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ, ಇಡ್ಲಿಯು ಜನಪ್ರಿಯ ಉಪಹಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಇಡ್ಲಿಯು ಸೃಜನಾತ್ಮಕ ರೂಪಾಂತರಗಳು ಮತ್ತು ಆಧುನಿಕ ತಿರುವುಗಳನ್ನು ಸಹ ಕಂಡಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವ್ಯಕ್ತಿಗಳಿಗಾಗಿ ರಾಗಿ ಇಡ್ಲಿ ಮತ್ತು ಓಟ್ಸ್ ಇಡ್ಲಿ, ನವಣೆ ಇಡ್ಲಿಗಳಿವೆ. ಇಡ್ಲಿ ಬರೀ ಇಡ್ಲಿಯಾಗಿ ಉಳಿದಿಲ್ಲ, ಕಾಲದೊಂದಿಗೆ ಇದೂ ಬದಲಾಗುತ್ತಾ ಬಂದಿದ್ದು, “ಇಡ್ಲಿ ಫ್ರೈಸ್” ಮತ್ತು “ಇಡ್ಲಿ ಮಂಚೂರಿಯನ್” ಹೀಗೆ ಹಲವು ಹೊಸತನದೊಂದಿಗೆ ಇದು ಜನರ ಹೊಟ್ಟೆ ತುಂಬುತ್ತಿದೆ.