ಕರ್ನಾಟಕದಲ್ಲಿ ಬರದ ನಡುವೆ ವಿದ್ಯುತ್ ಬರೆ: ಲೋಡ್ ಶೆಡ್ಡಿಂಗ್ ವಿರುದ್ಧ ಸಿಡಿದೆದ್ದ ಅನ್ನದಾತ
ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ನಿಂದಾಗಿ ಸಮಸ್ಯೆಯಾಗಿದ್ದು ಚಾಮರಾಜನಗರ, ಗದಗ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆಗಳಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಗದಗ-ಹರಪ್ಪನಹಳ್ಳಿ ರಾಜ್ಯ ಹೆದ್ದಾರಿ ತಡೆದು ಹೋರಾಟ ಮಾಡಲಾಗುತ್ತಿದೆ. ಬೆಳಗ್ಗೆ 5 ಗಂಟೆಯಿಂದಲೇ ಹೆದ್ದಾರಿ ತಡೆದು ಸತತ ಎಂಟು ಗಂಟೆಯಿಂದ ಧರಣಿ ನಡೆಸುತ್ತಿದ್ದಾರೆ.

ಗದಗ, ಅ.10: ರಾಜ್ಯ ಸರಕಾರ ಅನಧಿಕೃತ ಲೋಡ್ ಶೆಡ್ಡಿಂಗ್ (Load-shedding) ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ ಕಟ್ ಮಾಡುತ್ತಿದೆ (Power Cut). ಇದರಿಂದ ರಾಜ್ಯದ ಅನೇಕ ಕಡೆಗಳಲ್ಲಿ ವಿದ್ಯುತ್ ಇಲ್ಲದೆ ಅನ್ನದಾತರು (Farmers) ಕಂಗಾಲಾಗಿದ್ದಾರೆ. ಚಾಮರಾಜನಗರ, ಗದಗ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆಗಳಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಕೂಡ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಗದಗ-ಹರಪ್ಪನಹಳ್ಳಿ ರಾಜ್ಯ ಹೆದ್ದಾರಿ ತಡೆದು ರೈತರ ಆಕ್ರೋಶ
ಬರಗಾಲದಿಂದ ಕಂಗಾಲದ ಗದಗದ ರೈತರಿಗೆ ಹೆಸ್ಕಾ ಶಾಕ್ ಕೊಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಇಲ್ಲದೇ ರೈತರು ಕಂಗಾಲಾಗಿದ್ದು ಭತ್ತದ ಬೆಳೆ ಕಾಳು ಹಿಡಿಯುವ ಸಂದರ್ಭದಲ್ಲಿ ವಿದ್ಯತ್ ಬಂದ್ ಮಾಡಿ ಹೆಸ್ಕಾ ಬರೆ ಹಾಕಿದೆ ಎಂದು ಹೆದ್ದಾರಿಯಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಕೇ ಬೇಕು ಕರೆಂಟ್ ಬೇಕು ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಗದಗ-ಹರಪ್ಪನಹಳ್ಳಿ ರಾಜ್ಯ ಹೆದ್ದಾರಿ ತಡೆದು ಹೋರಾಟ ಮಾಡಲಾಗುತ್ತಿದೆ. ಬೆಳಗ್ಗೆ 5 ಗಂಟೆಯಿಂದಲೇ ಹೆದ್ದಾರಿ ತಡೆದು ಸತತ ಎಂಟು ಗಂಟೆಯಿಂದ ಧರಣಿ ನಡೆಸುತ್ತಿದ್ದಾರೆ. ಹೆಸ್ಕಾಂ ಎಂಡಿ, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಲಿಖಿತ ಭರವಸೆ ನೀಡಿದ್ರೆ ಮಾತ್ರ ಹೋರಾಟ ಹಿಂಪಡೆಯುತ್ತೇವೆ. ಇಲ್ಲಾಂದ್ರೆ ಅಹೋರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಸಿರು ಶಾಲಿನಲ್ಲಿ ಜೋಳಿಗೆ ಹಿಡಿದು ಹಣ ಸಂಗ್ರಹ ಮಾಡಿ ಪ್ರತಿಭಟನೆ
ಇನ್ನು ಗದಗ ರೈತರು ಪ್ರತಿಭಟನೆ ನಡೆಸುತ್ತಿದ್ದು ಉರಿ ಬಿಸಿಲಲ್ಲೂ ಹೋರಾಟ ಮುಂದುವರೆಸಿದ್ದಾರೆ. ಹೊಟ್ಟೆ ಹಸಿವಿನಿಂದ ಬಳಲುತ್ತಿರೋ ರೈತರು ಅಡುಗೆ ಮಾಡಲು ಹಣ ಸಂಗ್ರಹ ಮಾಡುತ್ತಿದ್ದಾರೆ. ಹಸಿರು ಶಾಲಿನಲ್ಲಿ ಜೋಳಿಗೆ ಹಿಡಿದು ಹಣ ಸಂಗ್ರಹ ಮಾಡಿ ಹೆದ್ದಾರಿಯಲ್ಲೇ ಅಡುಗೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಗುಂಜಿಗನೂರು ಗ್ರಾಮದ ಬಳಿ ರಸ್ತೆ ತಡೆದು ರೈತರ ಧರಣಿ
ಇನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗಂಜಿಗನೂರು ಗ್ರಾಮದ ಬಳಿ ರಸ್ತೆ ತಡೆದು ರೈತರು ಧರಣಿ ನಡೆಸುತ್ತಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜಮೀನಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿದ್ದು ವಿದ್ಯುತ್ ಇಲಾಖೆ ಅಧಿಕಾರಿಗಳು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಬಿಸಿ: ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ ಎಂದ ಕುಮಾರಸ್ವಾಮಿ
ಚಾಮರಾಜನಗರ ಜಿಲ್ಲೆಯ ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್
ಪಂಪ್ ಸೆಟ್‌ಗಳಿಗೆ 7 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡುವುದಾಗಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ 7 ಗಂಟೆ ಇರಲಿ, 2 ಗಂಟೆಯು ತ್ರೀ ಫೇಸ್ ಕರೆಂಟ್ ನೀಡದ ಚೆಸ್ಕಾಂ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಯಾವುದೇ ಮುನ್ಸೂಚನೆ ನೀಡದೆ ಕಳೆದೊಂದು ವಾರದಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಈಗಾಗ್ಲೇ ಜಿಲ್ಲೆಯಲ್ಲಿರುವ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ .ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದ ವೇಳೆಯೂ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ಕೊಟ್ಟಿದ್ದರು. ಆದ್ರೆ ವಿದ್ಯುತ್ ಅಭಾವದಿಂದಾಗಿ ಚೆಸ್ಕಾಂ ವಿದ್ಯುತ್ ಪೂರೈಕೆ ಮಾಡಲಾಗ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಪರಿಸ್ಥಿತಿ ಬಂದಿದೆ ಅಂತಾ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ರೈತರ 74 ಸಾವಿರಕ್ಕೂ ಹೆಚ್ಚು ಪಂಪ್ ಸೆಟ್‌ಗಳಿದೆ. ಪಂಪ್‌ಸೆಟ್ ಅವಂಬಿಸಿ ಬಾಳೆ, ಕಬ್ಬು, ಅರಿಶಿನ, ತರಕಾರಿ ಮೊದಲಾದ ಬೆಳೆಗಳನ್ನು ಅನ್ನದಾತರು ಬೆಳೆದಿದ್ದಾರೆ. ಈಗ ಬೆಳೆದು ನಿಂತ ಬೆಳೆಗೆ ಮಳೆಯು ಇಲ್ಲ, ಅತ್ತ ಪಂಪ್‌ಸೆಟ್ ಮೂಲಕ ನೀರುಣಿಸಲು ಕರೆಂಟು ಇಲ್ಲ ಅಂತಿದ್ದಾರೆ. ಇನ್ನೂ ಅಧಿಕಾರಿಗಳ ಬಗ್ಗೆ ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿದ್ರೆ ಎರಡು ದಿನಗಳಿಂದಷ್ಟೇ ಸಮಸ್ಯೆಯಾಗಿದೆ. ಮಳೆ ಕಡಿಮೆ ಹಾಗೂ ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕೊಡಲಾಗ್ತಿಲ್ಲ ಅಂತಾ ಮಾಹಿತಿ ಕೊಡ್ತಿದ್ದಾರೆ. ಆದ್ರೆ ರೈತರು ಮಾತ್ರ ಕರೆಂಟ್ ಕೊಡದೆ ಕೈ ಕೊಟ್ಟ ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ವಿಷ ಕುಡಿಯುವ ಪರಿಸ್ಥಿತಿ ಉದ್ಬವಾಗುತ್ತೆ ಎಂದು ಅನ್ನದಾತರು ಕಣ್ಣೀರು ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ




