ಧಾರವಾಡ : ಕಳೆದೊಂದು ವರ್ಷದಿಂದ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಷ್ಟಪಟ್ಟು ಬೆಳೆ ಬೆಳೆದು ಅದು ಫಸಲು ನೀಡುತ್ತದೋ ಇಲ್ಲವೋ ಎನ್ನುವ ಗೊಂದಲದಲ್ಲಿರುವ ರೈತರು ಬಳಿಕ ಕೈಗೆ ಬಂದ ಫಸಲನ್ನು ಮಾರುಕಟ್ಟೆಗೆ ಕಳಿಸುವುದು ಹೇಗೆ ಎನ್ನುವ ಆತಂಕಕ್ಕೆ ಗುರಿಯಾಗಿದ್ದಾರೆ. ಈ ಆತಂಕ್ಕೆ ಕಾರಣ ಕೊರೊನಾ ಎಂಬ ಸಾಂಕ್ರಾಮಿಕ ಕಾಯಿಲೆ ಪ್ರಾರಂಭವಾಗಿರುವುದು. ಇದು ಕೇವಲ ಜನರ ಪ್ರಾಣವನ್ನಷ್ಟೇ ಅಲ್ಲ ಬದುಕುವ ಉತ್ಸಾಹವನ್ನು ಕಸಿದುಕೊಳ್ಳುತ್ತಿದೆ. ಇಂತಹದ್ದೇ ಪರಿಸ್ಥಿತಿ ಸದ್ಯ ಧಾರವಾಡದಲ್ಲಿ ಪೇರಲೆ ಹಣ್ಣು ಬೆಳೆದ ರೈತರದ್ದಾಗಿದ್ದು, ಬೆಳೆದ ಬೆಳೆಗೆ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ.
ಮಾವಿನ ಬೀಡಿನಲ್ಲಿ ಪೇರಲೆ ಬೆಳೆಯಲಾಗುತ್ತದೆ ಧಾರವಾಡ ಜಿಲ್ಲೆ ಎಂದರೆ ಮಾವಿಗೆ ಹೆಸರುವಾಸಿ. ಇಲ್ಲಿ ಬೆಳೆಯಲಾಗುವ ಆಪೋಸ ಮಾವು ದೇಶ-ವಿದೇಶದಲ್ಲಿಯೂ ಪ್ರಸಿದ್ಧ. ಈ ಬಾರಿ ಕಳೆದ ಬಾರಿಯಂತೆಯೇ ಮಾವು ರಫ್ತು ಆಗದೇ ರೈತರು ಬಹಳಷ್ಟು ನಷ್ಟ ಅನುಭವಿಸಿದರು. ಜಿಲ್ಲೆಯಲ್ಲಿ ಮಾವು ಬೆಳೆದ ರೈತರಂತೆಯೇ ಪೇರಲೆ ಬೆಳೆದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಪೇರಲೆ ಫಸಲು ನೀಡುವ ಸಮಯ. ಗಿಡಗಳು ಮೈತುಂಬಾ ಪೇರಲೆ ಹಣ್ಣು ಹೊತ್ತು ನಿಂತಿವೆ. ಹಣ್ಣು ಕಿತ್ತು ಇದೀಗ ರೈತರು ಮಾರುಕಟ್ಟೆಗೆ ಕಳಿಸಬೇಕಿತ್ತು. ಆದರೆ ಲಾಕ್ಡೌನ್ನಿಂದಾಗಿ ಮಾರುಕಟ್ಟೆ ಲಭ್ಯವಿಲ್ಲದೇ ಹಣ್ಣೆಲ್ಲಾ ಕೊಳೆತು ಹೋಗುವಂತಾಗಿದೆ.
ಜಿಲ್ಲೆಯಲ್ಲಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಪೇರಲೆ ಬೆಳೆಯಲಾಗಿದೆ. ಅದರಲ್ಲೂ ಧಾರವಾಡ, ನವಲಗುಂದ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೇರಲೆ ಬೆಳೆಯಲಾಗಿದೆ. ಆದರೆ ಇದೀಗ ಪೇರಲೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಫಸಲು ಚೆನ್ನಾಗಿ ಬಂದಿದೆ. ಆದರೆ ಲಾಕ್ಡೌನ್ನಿಂದಾಗಿ ಹಣ್ಣಿಗೆ ಮಾರುಕಟ್ಟೆ ಸಿಗದೇ ಗಿಡದಲ್ಲಿಯೇ ಕೊಳೆತು ಹೋಗುವಂತಾಗಿದೆ. ಇದರಿಂದಾಗಿ ರೈತರಿಗೆ ಬಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಯೋಗ್ಯ ಮಾರುಕಟ್ಟೆ ಲಭ್ಯವಾದರಷ್ಟೇ ಲಾಭ ಪ್ರತಿವರ್ಷ ಈ ವೇಳೆಗೆ ಫಸಲು ಕೈಗೆ ಬರುತ್ತದೆ. ಸರಿಯಾದ ಮಾರುಕಟ್ಟೆ ಲಭ್ಯವಾದರೆ ಉತ್ತಮ ಪ್ರಮಾಣದ ಆದಾಯ ಬರುತ್ತದೆ. ಆದರೆ ಕಳೆದ ಬಾರಿಯೂ ಇದೇ ವೇಳೆಗೆ ಲಾಕ್ಡೌನ್ ಸಮಸ್ಯೆಯಿಂದಾಗಿ ರೈತರು ನಷ್ಟವನ್ನು ಅನುಭಿಸಿದ್ದರು. ಆದರೆ ಈ ಬಾರಿಯಾದರೂ ಪೇರಲೆ ಕೊಂಚ ಕೈ ಹಿಡಿಯಬಹುದು ಅಂದುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ. ಮಾರುಕಟ್ಟೆ ಇಲ್ಲದ್ದಕ್ಕೆ ರೈತರು ಹಣ್ಣನ್ನು ಕೀಳುವುದನ್ನೇ ಬಿಟ್ಟಿದ್ದಾರೆ. ಹಣ್ಣನ್ನು ಕಿತ್ತರೂ ಅದನ್ನು ಎಲ್ಲಿಗೆ ಒಯ್ಯಬೇಕು ಎನ್ನುವ ಗೊಂದಲ ಸೃಷ್ಟಿಸಿದೆ. ಅಲ್ಲದೇ ಹಣ್ಣನ್ನು ಕೀಳಿಸಿದ ಕೂಲಿಯ ಖರ್ಚು ಕೂಡ ಹೆಚ್ಚಾಗಿದೆ. ಹೀಗಾಗಿ ರೈತರು ಗಿಡದಲ್ಲಿಯೇ ಹಣ್ಣನ್ನು ಬಿಡುತ್ತಿದ್ದಾರೆ.
ಪ್ರತಿವರ್ಷ ಗಿಡಗಳ ನಿರ್ವಹಣೆ ಮಾಡಲೇಬೇಕು ಈ ಗಿಡಗಳ ನಿರ್ವಹಣೆಗೆ ಪ್ರತಿವರ್ಷ ರೈತರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಗಿಡಗಳಿಗೆ ಗೊಬ್ಬರ ಕಟ್ಟುವುದರಿಂದ ಹಿಡಿದು ಕೀಟನಾಶಕದವರೆಗೆ ಎಲ್ಲವನ್ನು ನಿರ್ವಹಿಸಬೇಕು. ಆಗ ಮಾತ್ರ ಗಿಡಗಳು ಚೆನ್ನಾಗಿ ಇರುವುದಲ್ಲದೇ ಉತ್ತಮ ಫಸಲನ್ನು ನೀಡುತ್ತವೆ. ಇದಕ್ಕಾಗಿ ರೈತರು ಗೊಬ್ಬರ, ಕೀಟನಾಶಕ, ಕಾರ್ಮಿಕರಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಒಂದು ವೇಳೆ ಸರಿಯಾದ ಮಾರುಕಟ್ಟೆ ಸಿಗದೇ ಹಣ್ಣು ಮಾರಾಟವಾಗದೇ ಇದ್ದರೆ, ನಿರ್ವಹಣೆಗೆ ಮಾಡಿರುವ ಖರ್ಚಾದರೂ ಸಿಗಲಿ ಎನ್ನುವುದು ರೈತರ ನೋವು. ಆದರೆ ಇದೀಗ ಲಾಕ್ಡೌನ್ನಿಂದಾಗಿ ಆ ಹಣ ಕೂಡ ಸಿಗುತ್ತಿಲ್ಲ.
ಕಳೆದ ಬಾರಿಯೂ ಕೊರೊನಾ ಹೊಡೆತದಿಂದಾಗಿ ಮಾರುಕಟ್ಟೆ ಸಿಗದೇ ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸಿದ್ದೆವು. ಈ ಬಾರಿಯೂ ಅಂಥದ್ದೇ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅದಕ್ಕೂ ಮುಂಚೆ ಪ್ರವಾಹದಿಂದಾಗಿ ಎಲ್ಲ ಹಾಳಾಗಿ ಹೋಗಿತ್ತು. ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲಾ ಒಂದು ಸಮಸ್ಯೆಯಿಂದ ನಾವು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದೇವೆ ಎಂದು ನವಲಗುಂದ ತಾಲೂಕಿನ ಶಿರೂರು ಗ್ರಾಮದ ರೈತ ರಾಯನಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಲಾಕ್ಡೌನ್ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ
ಲಾಕ್ಡೌನ್ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ; ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ