ಶಿಗ್ಗಾಂವಿ ಬೈ ಎಲೆಕ್ಷನ್ ವೇಳೆ ಅನುಮಾನಾಸ್ಪದ ಬ್ಯಾಲೆಟ್ ಬಾಕ್ಸ್ ಪತ್ತೆ ಕೇಸ್: ಐವರ ಬಂಧನ
ಹಾವೇರಿಯಲ್ಲಿ ಹಳೆ ಬ್ಯಾಲೆಟ್ ಬಾಕ್ಸ್ಗಳ ಕಳ್ಳತನ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 27 ಮತಪೆಟ್ಟಿಗೆಗಳು ಮತ್ತು ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎಪಿಎಂಸಿ ಗೋದಾಮಿನಿಂದ ಪೆಟ್ಟಿಗೆಗಳನ್ನು ಕಳವು ಮಾಡಿದ್ದರು. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಹಾವೇರಿ, ನವೆಂಬರ್ 17: ಹಳೆಯ ಬ್ಯಾಲೆಟ್ ಬಾಕ್ಸ್ಗಳನ್ನು (Ballot Boxes) ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸರು ಕಾರ್ಯಚರಣೆ ನಡೆಸಿ, ಸಂತೋಷ ಮಾಳಗಿ, ಗಣೇಶ ಹರಿಜನ, ಮುತ್ತಪ್ಪ ದೇವಿಹೊಸೂರು, ಕೃಷ್ಣ ಹರಿಜನ ಮತ್ತು ಮಹ್ಮದ್ ಜಾವಿದ್ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 27 ಬ್ಯಾಲೆಟ್ ಬಾಕ್ಸ್, ಕೃತ್ಯಕ್ಕೆ ಬಳಿಸಿದ 1 ಆಟೋ ಜಪ್ತಿ ಮಾಡಲಾಗಿದೆ.
ಹಾವೇರಿ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಬಳಿಯ ಕಾಲುವೆಯಲ್ಲಿ ಹಳೆಯ ಬ್ಯಾಲೆಟ್ ಬಾಕ್ಸ್ ಸಿಕ್ಕಿದ್ದರಿಂದ ಗ್ರಾಮಸ್ಥರಿಗೆ ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ನಾಲ್ಕು ದಿನಗಳ ಹಿಂದಷ್ಟೆ ಶಿಗ್ಗಾಂವಿ ಉಪಚುನಾವಣೆಯ ಮತದಾನ ಮುಕ್ತಾಯ ಆಗಿತ್ತು. ಬ್ಯಾಲೆಟ್ ಬಾಕ್ಸ್ ಕಳ್ಳತನವಾಗಿದ್ದು ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಮತದಾನ ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್‌ಗಳು ಪತ್ತೆ
ಆರೋಪಿಗಳು ಎಪಿಎಂಸಿ ಗೋಡೌನ್ನ ಬೀಗ ಮುರಿದು ಕಳ್ಳತನ ಮಾಡಿದ್ದರು. ಇದೀಗ ಐವರು ಜನ ಕಳ್ಳರನ್ನ ಪತ್ತೆ ಮಾಡಿದ್ದು, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಹಾವೇರಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಬ್ಯಾಲೆಟ್ ಬಾಕ್ಸ್‌ಗಳು ನೋಡಿ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಲ್.ರಮೇಶ್, ಸಹಾಯಕ ಆಯುಕ್ತ ಎಚ್.ಬಿ.ಚನ್ನಪ್ಪ, ತಹಶೀಲ್ದಾರ್ ಶರಣಮ್ಮ ಖಾರಿ ಸೇರಿದಂತೆ ಅಧಿಕಾರಿಗಳು ಹಾವೇರಿ ನಗರ ಪೊಲೀಸರ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಬ್ಯಾಲೆಟ್ ಬಾಕ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಬ್ಯಾಲೆಟ್ ಬಾಕ್ಸ್ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಪರಿಶೀಲನೆ ಮಾಡಿದಾಗ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾವೇರಿ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ ಮುಗಿದ ಒಂದು ದಿನದ ಬೆನ್ನೆಲ್ಲೇ ಈ ಘಟನೆ ನಡೆದಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ನಾನು ಬೆಳಗಿನ ವಾಕಿಂಗ್ ಹೋಗುತ್ತಿದ್ದಾಗ ಚರಂಡಿಯಲ್ಲಿ ಈ ಮತಪೆಟ್ಟಿಗೆಗಳು ಪತ್ತೆಯಾಗಿದ್ದು, ಕೂಡಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಯತ್ತಿನಹಳ್ಳಿ ನಿವಾಸಿ ಅಬ್ದುಲ್ ಹುಬ್ಬಳ್ಳಿ ಹೇಳಿದ್ದರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಳಸಿದ ಹಳೆಯ ಮತ್ತು ಹಾಳಾಗಿರುವ ಬಾಕ್ಸ್‌ಗಳಂತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಉಪಚುನಾವಣೆ ಅಂತ್ಯ: ಸಂಡೂರು, ಶಿಗ್ಗಾಂವಿ-ಚನ್ನಪಟ್ಟಣದಲ್ಲಿ ಎಷ್ಟು ಮತದಾನ?
ನಾಲೆಯಲ್ಲಿದ್ದ 10 ಕಬ್ಬಿಣದ ಮತಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಘಟನೆಗೂ ಶಿಗ್ಗಾಂವಿ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿ ವಿಜಯ ಮಹಾಂತೇಶ ದಾನಮ್ಮನವರ್ ಹೇಳಿದ್ದರು.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:02 pm, Sun, 17 November 24