ಪ್ರಜ್ವಲ್ ವಿಡಿಯೋ ಬಿಡುಗಡೆ ಮಾಡಿದ್ದು ಯಾವ ದೇಶದಿಂದ: ಎಸ್ಐಟಿಗೆ ಸಿಕ್ತು ಮಹತ್ವದ ಮಾಹಿತಿ
ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ನಂತರ ವಿದೇಶದಲ್ಲಿದ್ದ ಪ್ರಜ್ವಲ್ ಬರೋಬ್ಬರಿ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಮೊದಲಿಗೆ ಅವರು ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಎಲ್ಲಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಎಸ್ಐಟಿ ಪತ್ತೆ ಮಾಡಿದೆ. ವಿವರ ಇಲ್ಲಿದೆ.
ಬೆಂಗಳೂರು, ಮೇ 29: ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Video Case) ಭಾರತಕ್ಕೆ ವಾಪಸಾಗುವ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು ಎಲ್ಲಿಂದ ಎಂಬ ಮಹತ್ವದ ಮಾಹಿತಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಲಭ್ಯವಾಗಿದೆ. ಬೆಂಗಳೂರಿಗೆ ಬರುವುದಾಗಿ ಸೋಮವಾರವಷ್ಟೇ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರಜ್ವಲ್ ವಿಡಿಯೋ ಮಾಡಿರುವ ಸ್ಥಳವನ್ನು ಇದೀಗ ಎಸ್ಐಟಿ ಪತ್ತೆ ಮಾಡಿದೆ.
ಯೂರೋಪ್ನ ಹಂಗೇರಿಯ ಬುಡಾಪೆಸ್ಟ್ನಿಂದ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ರಿಲೀಸ್ ಆದ ಮೊಬೈಲ್ ಐಪಿ ಅಡ್ರೆಸ್ ಟ್ರೇಸ್ ಮಾಡುವ ಮೂಲಕ ಎಸ್ಐಟಿ ಈ ಮಾಹಿತಿ ಕಲೆ ಹಾಕಿದೆ. ವಿಡಿಯೋ ಹೇಳಿಕೆ ಬಿಡುಗಡೆಗೂ ಎರಡು ದಿನ ಮೊದಲೇ ರೆಕಾರ್ಡ್ ಆಗಿತ್ತು ಎಂಬುದನ್ನೂ ಎಸ್ಐಟಿಯ ಟೆಕ್ನಿಕಲ್ ಟೀಮ್ ಪತ್ತೆ ಮಾಡಿದೆ.
ಪ್ರಜ್ವಲ್ ದೇಶಕ್ಕೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲು ಎಸ್ಐಟಿ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.
ಇದನ್ನೂ ಓದಿ: ಕೊನೆಗೂ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್, ಯಾವಾಗ ಬರ್ತಾರೆ ಗೊತ್ತಾ?
ಪ್ರಕರಣ ಬೆಳಕಿಗೆ ಬಂದ ನಂತರ ವಿದೇಶದಲ್ಲಿದ್ದ ಪ್ರಜ್ವಲ್ ಬರೋಬ್ಬರಿ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಮೊದಲಿಗೆ ಅವರು ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಮೇ 31ರಂದು ಬೆಳಗ್ಗೆ 10.30ಕ್ಕೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಹೇಳಿಕೆಯಲ್ಲಿ ಪ್ರಜ್ವಲ್ ಹೇಳಿದ್ದರು. ಅಲ್ಲದೆ, ತಂದೆ- ತಾಯಿ, ತಾತನ ಕ್ಷಮೆಯಾಚಿಸಿದ್ದರು. ಅಲ್ಲದೇ ಜನರು, ಪಕ್ಷದ ಕಾರ್ಯಕರ್ತರ ಬಳಿಯೂ ಕ್ಷಮೆ ಕೋರಿದ್ದರು. ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಎಂದೂ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದರು.
ನಾಳೆ ಹಾಸನದಲ್ಲಿ ಬೃಹತ್ ಪ್ರತಿಭಟನೆ
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಾಳೆ ಹಾಸನದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಹೀಗಾಗಿ, ಹಾಸನದ ಹೇಮಾವತಿ ಪ್ರತಿಮೆ ಬಳಿ ಇಂದು ಪ್ರಚಾರ ಜಾಥಾ ನಡೆಯಲಿದೆ. ನಾಳೆ ನಡೆಯುವ ಪ್ರತಿಭಟನೆಗೆ ಸಹಕಾರ ಕೋರಿ ಜಾಥಾ ನಡೆಯಲಿದೆ. 113 ಸಂಘಟನೆಗಳಿಂದ ನಾಳಿನ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ