ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮುದ್ರಣ ಕಾಶಿ ಗದಗ: ಮಹಾತ್ಮ ಗಾಂಧಿ ಒಡನಾಡಿ ಶತಾಯುಷಿ ಅಜ್ಜಿಗೆ ಬಿಜೆಪಿ ಮುಖಂಡರಿಂದ ಸನ್ಮಾನ
1930ರ ಸಮಯದಲ್ಲಿ ಅಜ್ಜಿ ಶಾಂತಾಬಾಯಿ ವರ್ಣೇಕರ್ ಕೇವಲ 13 ವರ್ಷದ ಬಾಲಕಿಯಾಗಿದ್ದರು. ಈ ಸಂದರ್ಭದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ಕರ ಹಾಕಿದ್ದಕ್ಕೆ ಗಾಂಧೀಜಿಯವ್ರು ಉಪ್ಪಿನ ಚಳುವಳಿ ಮಾಡಿದ್ದರು.
ಗದಗ: ಮುದ್ರಣ ಕಾಶಿ ಗದಗ ಜಿಲ್ಲೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. 103 ವರ್ಷ ವಯಸ್ಸಿನ ಶತಾಯುಷಿ ಅಜ್ಜಿ ಅಂದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಕದ್ದುಮುಚ್ಚಿ ಮಹಾತ್ಮಾ ಗಾಂಧೀಜಿ ಅವ್ರಿಗೆ ಅನ್ನ, ನೀರು ನೀಡುತ್ತಿದ್ದರಂತೆ. ಆ ಬಾಲಕಿ ಈಗ 103 ವರ್ಷದ ಶತಾಯುಷಿ ಅಜ್ಜಿಯಾಗಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಆ ಅಜ್ಜಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಮಹಾತ್ಮ ಗಾಂಧಿ ಒಡನಾಡಿ ಶತಾಯುಷಿ ಅಜ್ಜಿಗೆ ಸನ್ಮಾನ ಮಾಡಲಾಗಿದೆ.
103 ವರ್ಷದ ಶತಾಯುಷಿ ಅಜ್ಜಿ ಹೆಸರು ಶಾಂತಾಬಾಯಿ ವರ್ಣೇಕರ್. ಮೂಲತಃ ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಅಡಿಗೋಡ ಗ್ರಾಮದ ಹೋರಾಟಗಾರ್ತಿ. ಸುಮಾರು 60 ವರ್ಷಗಳಿಂದ ಗದಗ ನಗರದ ಬೆಟಗೇರಿಯ ಟರ್ನಲ್ ಪೇಠೆಯಲ್ಲಿ ವಾಸವಾಗಿದ್ದಾರೆ. 1930ರ ಸಮಯದಲ್ಲಿ ಅಜ್ಜಿ ಶಾಂತಾಬಾಯಿ ವರ್ಣೇಕರ್ ಕೇವಲ 13 ವರ್ಷದ ಬಾಲಕಿಯಾಗಿದ್ದರು. ಈ ಸಂದರ್ಭದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ಕರ ಹಾಕಿದ್ದಕ್ಕೆ ಗಾಂಧೀಜಿಯವ್ರು ಉಪ್ಪಿನ ಚಳುವಳಿ ಮಾಡಿದ್ದರು. ಆಗ ಅವರು ಅಂಕೋಲಾ ತಾಲೂಕಿನ ಅಡಿಗೋಡ ಗ್ರಾಮದ ಅನಂತ ಸೇಠ ಮನೆಗೆ ಆಗಮಿಸಿದ್ರು. ತೋಟದ ಮನೆಯಲ್ಲಿ ಗಾಂಧೀಜಿ ಹಾಗೂ ಸಂಗಡಿಗರು ಆರು ದಿನಗಳ ಕಲಾ ವಾಸ್ತವ್ಯ ಮಾಡಿದ್ದರು. ಆದ್ರೆ ಗಾಂಧೀಜಿಗೆ ಸಹಾಯ ಮಾಡಿದ್ರೆ ಬ್ರಿಟಿಷ್ ಅಧಿಕಾರಿಗಳು ಸುಮ್ಮನೆ ಬಿಡ್ತಾಯಿರಲಿಲ್ಲ. ಗಾಂಧೀಜಿಯವರಿಗೆ ಸಹಾಯ ಮಾಡುವವರು ಶಿಕ್ಷೆಗೆ ಗುರಿಯಾಗುತ್ತಿದ್ದರು. ಹೀಗಾಗಿ ಶಾಂತಾಬಾಯಿ ಹಾಗೂ ಕುಟುಂಬದ ಸದಸ್ಯರು ಗಾಂಧೀಜಿ ಅವರು ಉಳಿದಿದ್ದ ತೋಟಕ್ಕೆ ಕದ್ದುಮುಚ್ಚಿ ಚಹಾ, ಉಪಹಾರ ಹಾಗೂ ಊಟವನ್ನು ನೀಡುತ್ತಿದ್ದರಂತೆ. ಈಗ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಶಾಂತಾಬಾಯಿ ವರ್ಣೀಕರ್ ಭಾಗಿಯಾಗಿದ್ದಾರೆ. ಅಂದಿನ ಗಾಂಧೀಜಿ ಅವ್ರ ಒಡನಾಟ, ಹೋರಾಟದ ಕ್ಷಣಗಳ ಬಗ್ಗೆ ಅಜ್ಜಿ ಶಾಂತಾಬಾಯಿ ಹೇಳಿಕೊಂಡಿದ್ದಾರೆ.
ಅಜ್ಜಿಗೆ 103 ವರ್ಷ ವಯಸ್ಸಾದ್ರೂ ಮಹಾತ್ಮ ಗಾಂಧೀಜಿಯವರ ಒಡನಾಟದ ಯಾವುದನ್ನು ಮರೆತಿಲ್ಲ. ಎಲ್ಲವೂ ಇವತ್ತು ಎಳೆಎಳೆಯಾಗಿ ಮೆಲಕು ಹಾಕಿದ್ರು. ಸ್ವಾತಂತ್ರ್ಯ ಹೋರಾಟದ ವೇಳೆ ಅಜ್ಜಿ ಸಹೋದರರಿಗೆ ಬ್ರಿಟಿಷರು ಸಾಕಷ್ಟು ಹಿಂಸೆ ನೀಡಿದ್ದರಂತೆ. ಗಾಂಧೀಜಿ ಆಗಮನದ ಬಗ್ಗೆ ಹಳ್ಳಿ ಹಳ್ಳಿಗೆ ಚೀಟಿ ಮೂಲಕ ಮಾಹಿತಿ ರವಾನಿಸುವಾಗ ಬ್ರಿಟಿಷರ ಕೈಗೆ ಸಿಕ್ಕಿಬಿದ್ದಿದ್ದ ಸಹೋದರ ನಾರಾಯಣ ವರ್ಣೇಕರಗೆ ಬ್ರಿಟಿಷ್ ಅಧಿಕಾರಿಗಳು ಸಾಕಷ್ಟು ಹಿಂಸೆ ನೀಡಿದ್ದರಂತೆ. ಗುದುದ್ವಾರಕ್ಕೆ ಮೊಳೆ ಹೊಡೆದು ಚಿತ್ರಹಿಂಸೆ ನೀಡಿದ್ದರಂತೆ ಅಂತ ಸಹೋದರ ನಾರಾಯಣ್ ಗೆ ಹಿಂಸೆ ನೀಡಿದ್ದನ್ನು ಅಜ್ಜಿ ನೆನಪಿಸಿಕೊಂಡ್ರು. ಇಂದು ಅಜ್ಜಿ ಮನೆಯಲ್ಲಿ ಅಮೃತ ಮಹೋತ್ಸವ ಸಂಭ್ರಮ ಮನೆ ಮಾಡಿತ್ತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಭೇಟಿ ಮಾಡಿ ಶತಾಯುಷಿ ಶಾಂತಾಬಾಯಿಯನ್ನು ಸನ್ಮಾನಿಸಿ ಗೌರವಿಸಿದ್ರು. ಅಜ್ಜಿಗೆ ನಮಸ್ಕರಿಸಿ ಆಶೀರ್ವಾದ ಪಡೆದ್ರು.
Published On - 6:42 pm, Sun, 14 August 22