ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜಾಮೀನು ಮೇಲೆ ಹೊರಬಂದ ವಿಜಯಪುರದ ಆರೋಪಿಗಳಿಗೆ ಅದ್ದೂರಿ ಸ್ವಾಗತ

ಕಳೆದ 2017 ರ ಸೆಪ್ಟಂಬರ್ 5 ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿತ್ತು. ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ವಿಜಯಪುರದ ಇಬ್ಬರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಕಳೆದ 6 ವರ್ಷಗಳಿಂದ ಕಾರಾಗೃಹದಲ್ಲಿದ್ದ ಪರಶುರಾಮ್, ಮನೋಹರ್​ ವಾಪಸ್​​ ತವರಿಗೆ ಆಗಮಿಸಿದ್ದು, ಹಿಂದೂ ಸಂಘಟನೆ ಮುಖಂಡರಿಂದ ಸ್ವಾಗತ, ಸನ್ಮಾನ ಮಾಡಲಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜಾಮೀನು ಮೇಲೆ ಹೊರಬಂದ ವಿಜಯಪುರದ ಆರೋಪಿಗಳಿಗೆ ಅದ್ದೂರಿ ಸ್ವಾಗತ
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜಾಮೀನು ಮೇಲೆ ಹೊರಬಂದ ವಿಜಯಪುರದ ಆರೋಪಿಗಳಿಗೆ ಅದ್ದೂರಿ ಸ್ವಾಗತ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 12, 2024 | 5:56 PM

ವಿಜಯಪುರ, ಅಕ್ಟೋಬರ್​​ 12: 2017ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಾಹಿತಿ ಗೌರಿ ಲಂಕೇಶ್ (Gauri Lankesh) ಹತ್ಯೆ ಪ್ರಕರಣದ ಆರೋಪಿಗಳಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದಲ್ಲಿ ವಿಜಯಪುರದ ಇಬ್ಬರು ಆರೋಪಿತರನ್ನೂ ಖಾಕಿ ಪಡೆ ಅರೆಸ್ಟ್ ಮಾಡಿತ್ತು. ಸುಮಾರು ಆರುವರೆ ವರ್ಷಗಳ ಬಳಿಕ ಆ ಇಬ್ಬರು ಆರೋಪಿತರಿಗೆ ಜಾಮೀನು ಸಿಕ್ಕಿದ್ದು, ತವರಿಗೆ ಆಗಮಿಸಿದ್ಧಾರೆ. ಹಿಂದೂಪರ ಸಂಘಟನೆಗಳು ಅವರಿಬ್ಬರಿಗೂ ಅದ್ದೂರಿ ಸ್ವಾಗತ ಮಾಡಿದ್ದಾರೆ.

ಕಳೆದ 2018 ಜೂನ್ 13 ರಂದು ಜಿಲ್ಲೆಯ ಸಿಂದಗಿ ಪಟ್ಟಣದ ಬಸವನಗರ ವಾಸಿ ಪರಶುರಾಮ್ ವಾಗ್ಮೋರೆಯನ್ನು ಗೌರಿ ಲಂಕೇಶ ಹತ್ಯೆ ಆರೋಪದ ಮೇಲೆ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್​​ಐಟಿ ತಂಡ ಬಂಧಿಸಿತ್ತು. ಬಳಿಕ ಇದೇ ಆರೋಪದ ಮೇಲೆ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆಯನ್ನೂ ಬಂಧಿಸಲಾಗಿತ್ತು. ಗೌರಿ ಹತ್ಯೆಯಲ್ಲಿ ಒಟ್ಟು 25 ಜನ ಆರೋಪಿತರನ್ನು ಎಸ್​ಐಟಿ ತಂಡ ಬಂಧಿಸಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಸಹ ಆರೋಪಿತರಿಗೆ ಜಾಮೀನು ಸಿಕ್ಕಿರಲಿಲ್ಲ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು

ಗೌರಿ ಹತ್ಯೆ ಬಳಿಕ ಸುಮಾರು ಆರುವರೆ ವರ್ಷಗಳ ಬಳಿಕ 25 ಜನ ಆರೋಪಿತರಲ್ಲಿ 18 ಜನರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ನೀಡಿದ್ದು ಇನ್ನೂ 7 ಜನ ಆರೋಪಿತರಿಗೂ ಜಾಮೀನು ಸಿಗಲಿದೆ ಎನ್ನಲಾಗಿದೆ. ಇತ್ತ ವಿಜಯಪುರದ ಇಬ್ಬರು ಆರೋಪಿತರಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಎಂಬ ಇಬ್ಬರಿಗೆ ನಿನ್ನೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ನಿನ್ನೆಯೇ ಸಾಯಂಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಹೊರ ಬಂದವರು ನೇರವಾಗಿ ವಿಜಯಪುರಕ್ಕೆ ಆಗಮಿಸಿದ್ದಾರೆ.

ಗೌರಿ ಹತ್ಯೆಯ ಇಬ್ಬರು ಆರೋಪಿತರನ್ನು ಜಿಲ್ಲೆಯ ಹಿಂದೂ ಪರ ಸಂಘಟನೆಗಳ ಹಾಗೂ ಶ್ರೀರಾಮ ಸೇನೆಯ ಮುಖಂಡರು ಪದಾಧಿಕಾರಿಗಳು ಸ್ವಾಗತ ಮಾಡಿದ್ದಾರೆ. ನಗರದ ಕಾಳಿಕಾ ಮಂದಿರದಲ್ಲಿ ಇಬ್ಬರೂ ಆರೋಪಿತರು ಪೂಜೆ ಮಾಡಿ ಪ್ರಾರ್ಥಣೆ ಸಲ್ಲಿಸಿದ್ದಾರೆ. ಬಳಿಕ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಬಳಿಕ ಶಿವಾಜಿ ವೃತ್ತಕ್ಕೆ ತೆರಳಿ ಶಿವಾಜಿ ಮೂರ್ತಿಗೆ ಹಾರ ಹಾಕಿದರು. ಇದೇ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್ ಗೌರಿ ಲಂಕೇಶ ಹತ್ಯೆಯಲ್ಲಿ ಪರಶುರಾಮ ಹಾಗೂ ಮನೋಹರ್ ಭಾಗಿಯಾಗಿಲ್ಲ. ಹಿಂದೂ ಪರ ಹೋರಾಟಗಾರರನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಸಾದ್ವಿ ಪ್ರಜ್ಞಾಸಿಂಗ್​ಗೆ ವಿನಾ ಕಾರಣ ಬಂಧಿಸಲ್ಪಟ್ಟಿದ್ದರು. ಅವರಿಗೆ ಹಿಂಸೆ ನೀಡಲಾಗಿತ್ತು. ಅವರು ನಿರಪರಾಧಿಗಳಾಗಿ ಹೊರಗೆ ಬಂದಂತೆ ನಮ್ಮ ಜಿಲ್ಲೆಯ ಪರಶುರಾಮ ಹಾಗೂ ಮನೋಹರ್ ನಿರಪರಾಧಿಗಳಾಗಿ ಬಿಡುಗಡೆಯಾಗಿ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ 2017 ರ ಸಪ್ಟೆಂಬರ್ 5 ರಂದು ಗೌರಿ ಲಂಕೇಶ ಗುಂಡಿನ ದಾಳಿಗೆ ಬಲಿಯಾಗಿದ್ದರು. ಅಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಹತ್ಯೆ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆಯ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶೇಷ ತನಿಖಾ ಪೊಲೀಸ್ ತಂಡವನ್ನು ರಚಿಸಿತ್ತು. ಎಸ್​ಐಟಿ ತಂಡ 25 ಜನರನ್ನು ಗೌರಿ ಹತ್ಯೆಯ ಕೇಸ್​ನಲ್ಲಿ ಬಂಧಿಸಿತ್ತು. ಈ ಪೈಕಿ ವಿಜಯಪುರ ಜಿಲ್ಲೆ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಸಹ ಬಂಧನಕ್ಕೊಳಗಾಗಿದ್ದರು.

2018 ರಲ್ಲಿ ಇವರ ಬಂಧನವಾಗಿದ್ದು ನಾವು ಯಾವುದೇ ಕೊಲೆ ಮಾಡಿಲ್ಲ. ಎಸ್​ಐಟಿ ತಂಡದವರು ನಮಗೆ ಗೌರಿ ಹತ್ಯೆಯನ್ನು ಒಪ್ಪಿಕೊಳ್ಳಿ ಎಂದು ಬಲವಂತ ಮಾಡುತ್ತಿದ್ದಾರೆಂದು ಮಹೋಹರ್ ಹಾಗೂ ಪರಶುರಾಮ ಆರೋಪ ಮಾಡಿದ್ದರು. ಇಷ್ಟೆಲ್ಲದರ ನಡುವೆ ಗೌರಿ ಲಂಕೇಶ ಹತ್ಯೆಯ 18 ಜನ ಆರೋಪಿತರಿಗೆ ಜಾಮೀನು ಸಿಕ್ಕಿದೆ. ಸದ್ಯ ವಿಜಯಪುರದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು ತಮ್ಮೂರಿಗೆ ವಾಪಸ್ ಆಗಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೊಲೆಗೂ ಮುನ್ನ 3 ಆರೋಪಿಗಳು ಉತ್ತರ ಬೆಂಗಳೂರಿನಲ್ಲಿ ನೆಲೆಸಿದ್ದರು! ಸಾಕ್ಷ್ಯ ನುಡಿದ ಸ್ಥಳೀಯರು

ಗೌರಿ ಮರ್ಡರ್​ ಕೇಸ್​ನಲ್ಲಿ ಸುಮಾರು ಆರುವರೆ ವರ್ಷಗಳ ಕಾಲ ಸೆರೆವಾಸ ಅನುಭವಿಸಿರುವ ಮನೋಹರ್ ಯಡವೆ ಕೆಲ ಕಾಲ ಶಿವಮೊಗ್ಗ ಕಾರಾಗೃಹದಲ್ಲಿ ಹಾಗೂ ಪರಶುರಾಮ ವಾಗ್ಮೋರೆ ಕೆಲ ಕಾಲ ಬಳ್ಳಾರಿ ಕಾರಗೃಹದಲ್ಲಿ ಇದ್ದರು. ಸದ್ಯ ಇಬ್ಬರೂ ಪರಪ್ಪನ ಅಗ್ರಹಾರದಲ್ಲಿದ್ದರು, ಮೊನ್ನೆ ಜಾಮೀನು ಸಿಕ್ಕಿದ್ದು ನಿನ್ನೆ ಕಾರಾಗೃಹದಿಂದ ಬಿಡುಡಗೆಯಾಗಿದ್ದಾರೆ. ಅಲ್ಲಿಂದ ವಿಜಯಪುರಕ್ಕೆ ಆಗಮಿಸಿದ್ದಾರೆ. ಇಲ್ಲಿನ ಹಿಂದೂ ಪರ ಸಂಘಟನೆಯವರು ಇಬ್ಬರನ್ನು ಸ್ವಾಗತ ಮಾಡಿದ್ದು ಇವರೆಲ್ಲ ನಿರಪರಾಧಿಗಳು. ಮುಂದಿನ ದಿನಗಳಲ್ಲಿ ಇವರು ನಿರಪರಾಧಿಗಳಾಗಿ ಹೊರ ಬರುತ್ತಾರೆಂದು ಹಿಂದೂ ಪರ ಸಂಘಟನೆಗಳ ಮುಖಂಡರು ವಿಶ್ವಾಸ ಹೊರ ಹಾಕಿದ್ದಾರೆ. ಇಂದು ವಿಶೇಷ ಪೂಜೆ ಸಲ್ಲಿಸಿ ಸ್ವಾಗತ ಮಾಡಿದ್ದಾಗಿ ಹೇಳಿದ್ಧಾರೆ.

ಸದ್ಯ ವಿಜಯಪುರ ನಗರದಿಂದ ಸಿಂದಗಿ ಪಟ್ಟಣದಲ್ಲಿರೋ ಪೋಷಕರ ಬಳಿ ಪರಶುರಾಮ ವಾಗ್ಮೋರೆ ತೆರಳಿದರೆ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೆಯತ್ತ ಮನೋಹರ್ ಯಡವೆ ತೆರಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.