ಚಿಕ್ಕಬಳ್ಳಾಪುರ: ಇಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಶಿವಶಂಕರ ರೆಡ್ಡಿ ಅವರು ಸುಧಾಕರ್ ಕಾಂಗ್ರೆಸ್ ನಿಂದ ತೊಲಗಿದ್ದಕ್ಕೆ ಪಕ್ಷಕ್ಕೆ ಒಳ್ಳೆಯದಾಯಿತು. ಕೆಟ್ಟ ಸಂಸ್ಕೃತಿಯ ವ್ಯಕ್ತಿ ತೊಲಗಿದ್ದು ಒಳ್ಳೆಯದಾಗಿದೆ ಎಂದಿದ್ದಾರೆ.
ಸಿದ್ದರಾಮಯ್ಯರಿಂದಲೇ ಬೆಳೆದು ಅವರಿಗೇ ದೂಷಣೆ:
ಸಿದ್ದರಾಮಯ್ಯ ಇಲ್ಲದಿದ್ರೆ ಸುಧಾಕರ್ ಅನ್ನೊ ಹೆಸರು ಭೂಪಟದಲ್ಲಿ ಇರುತ್ತಿರಲಿಲ್ಲ. ಕೆ.ಸುಧಾಕರ್ ಸಿದ್ದರಾಮಯ್ಯರಿಂದಲೇ ಬೆಳೆದು ಈಗ ಅವರ ಬಗ್ಗೆ ದೂಷಣೆ ಮಾಡುತ್ತಿದ್ದಾರೆ, ಹೀಗೆ ಮಾಡುವುದು ಸರಿಯಲ್ಲ. ಸುಧಾಕರ್ ನನ್ನು ಕೇಳಿ ಸಮ್ಮಿಶ್ರ ಸರ್ಕಾರ ರಚಿಸಬೇಕಿತ್ತಾ? ಎಂದು ಶಿವಶಂಕರ ರೆಡ್ಡಿ ಕಿಡಿಕಾಡಿದ್ದಾರೆ.
ಸುಧಾಕರ್ ಪ್ರಭಾವಿ ಕಾಂಗ್ರೆಸ್ ನಾಯಕರ ತಲೆ ಕೆಡಿಸಿದ್ದಾರೆ:
ಸುಧಾಕರ್ ತಾನೂ ಕೆಡುವುದಲ್ಲದೆ ಕೆಲವು ಪ್ರಭಾವಿ ಕಾಂಗ್ರೆಸ್ ನಾಯಕರ ತಲೆ ಕೆಡಿಸಿದ್ದಾರೆ. ಪೈವ್ ಸ್ಟಾರ್ ಹೋಟಲ್ ಗಳಲ್ಲಿ ಔತಣ ಕೂಟ ನಡೆಸುತ್ತಾ ನಾಯಕರ ತಲೆ ಕೆಡಿಸಿದ್ದಾರೆ. ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಹೆಚ್.ಕೆ.ಪಾಟೀಲರಿಗೂ ಗಾಳ ಹಾಕಿದ್ದಾರೆ. ಸುಧಾಕರ್ ಬಹಳ ಬುದ್ಧಿವಂತಿಕೆಯಿಂದ ಮಾತನಾಡುತ್ತಾನೆ ಎಂದು ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಸುಧಾಕರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
Published On - 3:48 pm, Fri, 15 November 19