ತಜ್ಞ ವೈದ್ಯರ ಕೊರತೆಗೆ ಬ್ರೇಕ್: ತಾಲೂಕಾಸ್ಪತ್ರೆ, ಸಿಎಚ್‌ಸಿ, ಪಿಎಚ್‌ಸಿಯನ್ನ ಮೆಡಿಕಲ್ ಕಾಲೇಜುಗಳಿಗೆ ದತ್ತು ನೀಡಲು ಮುಂದಾದ ಸರ್ಕಾರ

ರಾಜ್ಯ ಸರ್ಕಾರವು ತಾಲೂಕಾಸ್ಪತ್ರೆ ಸೇರಿದಂತೆ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವೈದ್ಯಕೀಯ ಕಾಲೇಜುಗಳಿಗೆ ದತ್ತು ನೀಡಲು ನಿರ್ಧರಿಸಿದೆ. ಇದರಿಂದ ಸ್ತ್ರೀರೋಗ, ಮಕ್ಕಳ, ಅರವಳಿಕೆ ತಜ್ಞ ವೈದ್ಯರ ಸೇವೆ ಗ್ರಾಮೀಣ ಮಟ್ಟದಲ್ಲೇ ಲಭ್ಯವಾಗಲಿದೆ. ಜಿಲ್ಲಾ ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಿ, ತುರ್ತು ಚಿಕಿತ್ಸೆ ಮತ್ತು ಪ್ರಸೂತಿ ಸೇವೆಗಳನ್ನು ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ತಜ್ಞ ವೈದ್ಯರ ಕೊರತೆಗೆ ಬ್ರೇಕ್: ತಾಲೂಕಾಸ್ಪತ್ರೆ, ಸಿಎಚ್‌ಸಿ, ಪಿಎಚ್‌ಸಿಯನ್ನ ಮೆಡಿಕಲ್ ಕಾಲೇಜುಗಳಿಗೆ ದತ್ತು ನೀಡಲು ಮುಂದಾದ ಸರ್ಕಾರ
ವಿಧಾನಸೌಧ
Image Credit source: Getty images
Edited By:

Updated on: Sep 12, 2026 | 9:53 PM

ಬೆಂಗಳೂರು, ಸೆಪ್ಟೆಂಬರ್​ 12: ರಾಜ್ಯದಲ್ಲಿನ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ತೀವ್ರ ಕೊರತೆ ನೀಗಿಸಲು ಮತ್ತು ಜಿಲ್ಲಾ ಆಸ್ಪತ್ರೆಗಳ ಮೇಲಿನ ರೋಗಿಗಳ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಆರೋಗ್ಯ ಕೇಂದ್ರಗಳನ್ನು ದತ್ತು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ವೈದ್ಯಕೀಯ ಕಾಲೇಜುಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿ ವೈದ್ಯಕೀಯ ಕಾಲೇಜು ತಲಾ ಒಂದು ತಾಲೂಕು ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ಪಡೆಯಲಿವೆ.

ತಾಲೂಕು ಮಟ್ಟದಲ್ಲೇ ತಜ್ಞ ವೈದ್ಯರ ಸೇವೆ ಲಭ್ಯ 

ಈ ಯೋಜನೆಯಡಿ ಸ್ತ್ರೀರೋಗ, ಅರವಳಿಕೆ, ಮಕ್ಕಳ ತಜ್ಞರು ಹಾಗೂ ಎಲುಬು-ಕೀಲು ತಜ್ಞರು ಸೇರಿದಂತೆ ಪ್ರಮುಖ ಪರಿಣಿತ ವೈದ್ಯರ ಸೇವೆ ತಾಲೂಕು ಮಟ್ಟದಲ್ಲೇ ಜನಸಾಮಾನ್ಯರಿಗೆ ಸಿಗಲಿದೆ. ಇದರಿಂದ ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಪ್ರಸೂತಿ ಹಾಗೂ ಮಕ್ಕಳ ಚಿಕಿತ್ಸಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಲು ರೋಗಿಗಳಿಗೆ ಮುಂಚಿತ ನೋಂದಣಿ ವ್ಯವಸ್ಥೆ ಕೂಡ ಇರಲಿದೆ.

ಇದನ್ನೂ ಓದಿ: ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!

ಅಲ್ಲದೆ, 108 ಹಾಗೂ ಇತರ ಆಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಉನ್ನತ ಆಸ್ಪತ್ರೆಗೆ ಕಳುಹಿಸುವ ರೆಫರಲ್ ವ್ಯವಸ್ಥೆ ಹಾಗೂ ಟೆಲಿ-ಮೆಡಿಸಿನ್, ಡಿಜಿಟಲ್ ಸಮಾಲೋಚನೆಗೂ ಅವಕಾಶ ಕಲ್ಪಿಸಲಾಗಿದೆ.

ಮಾಸಿಕ ವೇಳಾಪಟ್ಟಿ, ಮೇಲ್ವಿಚಾರಣೆ ಹಾಗೂ ವೈದ್ಯಕೀಯ ತರಬೇತಿ

ಇನ್ನು ದತ್ತು ಪಡೆದ ಪ್ರತಿ ಆಸ್ಪತ್ರೆಯಲ್ಲಿ ವೈದ್ಯರ ಸೇವಾ ದಿನಗಳ ಮಾಸಿಕ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಲಿದ್ದು, ಆರೋಗ್ಯ ಕೇಂದ್ರಗಳ ಸೇವೆ, ಸಿಬ್ಬಂದಿಯ ಹಾಜರಾತಿ ಹಾಗೂ ಚಿಕಿತ್ಸೆಯ ಗುಣಮಟ್ಟವನ್ನು ಮಾಸಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಅನುದಾನ ಕೊರತೆಯೋ, ಅಧಿಕಾರಿಗಳ ಬೇಜವಾಬ್ದಾರಿಯೋ? ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಖಾಲಿ ಖಾಲಿ

ಇದರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳು, ಇಂಟರ್ನ್‌ಗಳು ಹಾಗೂ ಪಿಜಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಕುರಿತು ಪ್ರಾಯೋಗಿಕ ತರಬೇತಿ ನೀಡುವುದರ ಜೊತೆಗೆ, ಗ್ರಾಮೀಣ ಆರೋಗ್ಯದ ಬಗೆಗಿನ ಸಂಶೋಧನೆ ಮತ್ತು ದಾಖಲೀಕರಣಕ್ಕೂ ವಿಶೇಷ ಒತ್ತು ನೀಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us