Green Budget | ಸುಸ್ಥಿರ ಪರಿಸರದ ಕನಸು ಹೊತ್ತ ಹಸಿರು ಬಜೆಟ್: ಏನಿದು ಹೊಸ ಪರಿಕಲ್ಪನೆ?
ಪರಿಸರ ಮಾಲಿನ್ಯ ತಗ್ಗಿಸುವ ಮತ್ತು ಸುಸ್ಥಿರ ಪರಿಸರ ರೂಪಿಸುವ ಉದ್ದೇಶದಿಂದ ಇದು ಗಮನಾರ್ಹ ಪ್ರಯತ್ನ ಎಂದೇ ಪರಿಸರಾಕ್ತರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಸಿರು ಬಜೆಟ್ ಪರಿಕಲ್ಪನೆ ಕುರಿತು ಅನಂತ ಹೆಗಡೆ ಆಶೀಸರ ಈ ಬರಹದಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಜೀವವೈವಿಧ್ಯ ಮಂಡಳಿ (biodiversity board) ಮೊದಲ ಬಾರಿಗೆ ‘ಹಸಿರು ಬಜೆಟ್’ ಎಂಬ ಪರಿಕಲ್ಪನೆಯನ್ನು ಪರಿಚಯಿಸಲು ಮುಂದಾಗಿದೆ. ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಹಸಿರು ಬಜೆಟ್ ಮಾದರಿಯನ್ನು ಬುಧವಾರ (ಫೆ.10) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರಿಚಯಿಸಲಿದ್ದಾರೆ. ಪರಿಸರ ಮಾಲಿನ್ಯ ತಗ್ಗಿಸುವ ಮತ್ತು ಸುಸ್ಥಿರ ಪರಿಸರ ರೂಪಿಸುವ ಉದ್ದೇಶದಿಂದ ಇದು ಗಮನಾರ್ಹ ಪ್ರಯತ್ನ ಎಂದೇ ಪರಿಸರಾಕ್ತರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಸಿರು ಬಜೆಟ್ ಪರಿಕಲ್ಪನೆ ಕುರಿತು ಅನಂತ ಹೆಗಡೆ ಆಶೀಸರ ಈ ಬರಹದಲ್ಲಿ ವಿವರಿಸಿದ್ದಾರೆ.
ಜೀವ ವೈವಿಧ್ಯ ಸಂರಕ್ಷಣೆಯ ಉದ್ದೇಶಗಳನ್ನು ಸಾಧಿಸುವ ದೃಷ್ಟಿಯಿಂದ ಪರಿಸರವನ್ನು ಉಳಿಸಿಕೊಂಡು ಹೋಗಲು ಹಸಿರು ಬಜೆಟ್ ಪರಿಚಯಿಸಲು ಜೀವವೈವಿಧ್ಯ ಮಂಡಳಿ ಮುಂದಾಗಿದೆ. ಅರಣ್ಯ ಮತ್ತು ಪರಿಸರ ಇಲಾಖೆಯ ಸಂಶೋಧನಾ ಸಂಸ್ಥೆಯು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಯಾಧಾರಿತ ಸುಸ್ಥಿರ ಅಭಿವೃದ್ಧಿಯ ಯೋಜನೆಗಳನ್ನು ಹಾಗೂ ಮಾರ್ಗೋಪಾಯಗಳನ್ನು ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತಂದಿದೆ. ಈ ಕುರಿತಂತೆ ಬುಧವಾರ (ಫೆ.10) ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು. ಅವರು ಹಸಿರು ಬಜೆಟ್ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ.
ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಸಿರು ಬಜೆಟ್ ಶಿಫಾರಸ್ಸು ಮಾಡಲಿದೆ. ಪರಿಸರ ಸಂರಕ್ಷಣೆಗೆ, ನೈಸರ್ಗಿಕ ಸಂಪತ್ತನ್ನು ಬೆಳೆಸ ಬೇಕೆಂದರೆ ಅದಕ್ಕೆ ಪರ್ಯಾಯ ಉಪಾಯ ಬೇಕು. ಅದಕ್ಕೆ ಪೂರಕವಾಗಿ ಮಾದರಿಯನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಈ ಮೂಲಕ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕಾಪಾಡಿಕೊಂಡು ಸಾಗುವ ಉದ್ದೇಶದಿಂದ ಹಸಿರು ಬಜೆಟ್ ಮಾದರಿಯನ್ನು ರೂಪಿಸಲಾಗಿದೆ.
ಸುಸ್ಥಿಯ ಅಭಿವೃದ್ಧಿಯ ಆಶಯಗಳು ಕರ್ನಾಟಕದ 6,000 ಪಂಚಾಯತಿಗಳಲ್ಲಿ ಮಾದರಿಯಾಗಿ ಜೀವ ವೈವಿಧ್ಯ ಸಮಿತಿಯನ್ನು ರೂಪಿಸಿ, ಅದರ ಧ್ಯೇಯೋದ್ದೇಶಗಳಿಗಾಗಿ ಜೀವವೈವಿಧ್ಯ ನಿಧಿಯಿಂದ ಹಣ ವೆಚ್ಚ ಮಾಡಲಾಗುತ್ತದೆ. ಈ ಹಣವನ್ನು ನಿಸರ್ಗ ಸಂಪತ್ತಿನ ರಕ್ಷಣೆಯ ಸಲುವಾಗಿ ವೆಚ್ಚ ಮಾಡಬೇಕು. ಇದೊಂದು ಮಾದರಿ ಯೋಜನೆ. ಇಂಥ ಯೋಜನೆಯನ್ನು ಇಲ್ಲಿಯವರೆಗೆ ಜಾರಿ ಮಾಡಿಲ್ಲ. ಜೀವ ವೈವಿಧ್ಯ ಮಂಡಳಿ ಇದನ್ನು ಜಾರಿಗೆ ತರಲು ಮುಂದಾಗಿದೆ.
ಜೀವವೈವಿಧ್ಯದ ದೃಷ್ಟಿಯಿಂದ ವನದ ನಿರ್ಮಾಣವನ್ನು ಹಾಸನದ ಗೆಂಡೆಕಟ್ಟೆಯಲ್ಲಿ ಮಾಡಲು ಜೀವವೈವಿಧ್ಯ ಮಂಡಳಿ ಚಿಂತನೆ ನಡೆಸಿದೆ. ತುಮಕೂರಿನಲ್ಲಿ ಡಾ.ಶಿವಕುಮಾರ ಸ್ವಾಮೀಜಿ ನೆನಪಿನಲ್ಲಿ ಸ್ಮೃತಿವನ ಹಾಗೂ ಉಡಪಿ ಜಿಲ್ಲೆಯಲ್ಲಿ ಪೇಜಾವರ ಸ್ವಾಮೀಜಿ ಹೆಸರಿನಲ್ಲಿ ಸ್ಮೃತಿ ವನವನ್ನು ರೂಪಿಸಲು ಮುಂದಾಗಿದೆ. ಅರಣ್ಯ ಇಲಾಖೆಯ ಮೂಲಕ ಕರಾವಳಿಯ ಸಮುದ್ರ ತೀರದಲ್ಲಿ ಅಲ್ಲಿನ ಪರಿಸರಕ್ಕೆ ಸೂಕ್ತವಾದ ಪ್ರಭೇದಗಳ ಸಸಿಗಳನ್ನು ಬಳಸಿ ಗ್ರೀನ್ ವಾಲ್ ನಿರ್ಮಿಸುವುದು. ಕರಾವಳಿ ಹಸಿರು ಕವಚ ಯೋಜನೆ ರೂಪಿಸುವುದು, ಬಯಲುಸೀಮೆಯಲ್ಲಿರುವ ಖಾಲಿ ಜಾಗದಲ್ಲಿ 1000 ಗಿಡನೆಟ್ಟು ವನ ರೂಪಿಸುವ ಉದ್ದೇಶವೂ ಮಾದರಿ ಹಸಿರು ಬಜೆಟ್ಗೆ ಇದೆ.
ನದಿಯ ಮೂಲಗಳು, ಗಿಡ-ಮರಗಳು (ಪರಿಸರ), ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವ ದೃಷ್ಟಿಯಿಂದ ಯೋಜನೆಗಳು ರೂಪುಗೊಳ್ಳಲಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಸೌರವಿದ್ಯುತ್ ಬೇಲಿಯನ್ನು ಅಳವಡಿಸಲು ಶೇ 75 ರಾಯಧನವನ್ನು ರೈತರಿಗೆ ನೀಡಬೇಕು. ರಾಜ್ಯದಲ್ಲಿ 13 ಔಷಧಿಮೂಲಿಕೆ ಸಂರಕ್ಷಿತ ಕ್ಷೇತ್ರಗಳಿವೆ. ಇಲ್ಲಿಯವರೆಗೆ ಅದನ್ನು ನಿರ್ವಹಿಲು ನಿರ್ದಿಷ್ಟ ಮಂಡಳಿ ಇರಲಿಲ್ಲ. ಔಷಧಿಮೂಲಿಕೆ ಸಂರಕ್ಷಿತ ಸಂರಕ್ಷಣಾ ಯೋಜನೆಯನ್ನು ಹಸಿರು ಬಜೆಟ್ನ ಮಾದರಿಯಲ್ಲಿ ರೂಪಿಸಲಾಗಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಕೆರೆಗಳನ್ನು ರೂಪಿಸುವುದು. ನಗರಾಭಿವೃದ್ಧಿ ಇಲಾಖೆಯವರು ಅಲ್ಲಿನ ಪಟ್ಟಣಗಳಲ್ಲಿ ತ್ಯಾಜ್ಯಗಳಿಂದ ಬಯೋಗ್ಯಾಸ್ ರೂಪಿಸಿಕೊಳ್ಳುವುದು (ಬಯೋಗ್ಯಾಸ್ ಉತ್ಪಾದನಾ ಘಟಕ ಯೋಜನೆ ಜಾರಿ). ಕಾಳುಮೆಣಸು ಸೇರಿದಂತೆ ಅತಿಯಾಗಿ ಬಳಕೆಯಿರುವ ಸಂಬಾರು ಪದಾರ್ಥಗಳಿಗೆ ಶೇ 50ರಷ್ಟು ಸಬ್ಸಿಡಿ ಕೊಟ್ಟು ಇಂಥ ಕೃಷಿಯನ್ನು ಪ್ರೋತ್ಸಾಹಿಸುವುದು. ಶೇ 50 ರಷ್ಟು ಸಬ್ಸಿಡಿ ಕೊಟ್ಟು ಸೋಲಾರ್ ಘಟಕ ಯೋಜನೆಯನ್ನು ರಾಜ್ಯದ ಎಲ್ಲಾ ಕಡೆಗಳಲ್ಲಿ ರೂಪಿಸಲು ಹಸಿರು ಬಜೆಟ್ನಲ್ಲಿ ಶಿಫಾರಸ್ಸು ಮಾಡಿ ಎಂದು ಮುಖ್ಯಮಂತ್ರಿಯನ್ನು ಕೋರಲಾಗುವುದು.
ಈ ಎಲ್ಲ ವಿಷಯಗಳನ್ನು ಹಸಿರು ಬಜೆಟ್ ಅಡಿಯಲ್ಲಿ ಶಿಫಾರಸ್ಸು ಮಾಡಿ ಎಂದು ಸರ್ಕಾರಕ್ಕೆ ಮಾದರಿ ರೂಪವನ್ನು ನೀಡುತ್ತೇವೆ. ಎಲ್ಲಾ ಸೇರಿ ಒಟ್ಟು ₹ 75 ಕೋಟಿ ವೆಚ್ಚ ಬರುತ್ತದೆ. ಇದಕ್ಕೆ ಸರಕಾರ ಏನು ಹೇಳುತ್ತದೆ ಎಂಬ ಬಗ್ಗೆ ಕಾದು ನೋಡಬೇಕಿದೆ.
(ನಿರೂಪಣೆ: ಶ್ರುತಿ ಹೆಗಡೆ)
Published On - 9:14 pm, Tue, 9 February 21