ಬಿಪಿಎಲ್ ಕಾರ್ಡ್ ಹೊಂದಿದ ಸರ್ಕಾರಿ ನೌಕರರಿಗೆ ಕಾದಿದೆ ಸಂಕಷ್ಟ; ಅನರ್ಹರ ಪಟ್ಟಿ ಗುರುತಿಸಲು ಅಭಿಯಾನ ಆರಂಭ

TV9 Digital Desk

| Edited By: preethi shettigar

Updated on: Sep 15, 2021 | 9:39 AM

ನಗರ ವ್ಯಾಪ್ತಿಯಲ್ಲಿ ಒಂದು ಸಾವಿರ ಚದರದ ಅಡಿಯಿಂದ ಹೆಚ್ಚಿನ ವಿಸ್ತೀರ್ಣದ ಮನೆ ಹೊಂದಿದ್ದರೆ, ಅವರನ್ನೂ ಅನರ್ಹಗೊಳಿಸೋ ಪ್ರಕ್ರಿಯೆ ಚಾಲನೆ ನೀಡಲಾಗುವುದು ಎಂದು ಡಿಡಿ ದೇವರಾಜ್ ತಿಳಿಸಿದ್ದಾರೆ. ಅಲ್ಲದೆ ಶೀಘ್ರವೇ ಸರ್ಕಾರಿ ಇಲಾಖೆಗಳ ಮುಖಸ್ಥರಿಗೆ ಪತ್ರ ಬರೆಯುವುದಾಗಿ ಎಂದು ಮಾಹಿತಿ ನೀಡಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿದ ಸರ್ಕಾರಿ ನೌಕರರಿಗೆ ಕಾದಿದೆ ಸಂಕಷ್ಟ; ಅನರ್ಹರ ಪಟ್ಟಿ ಗುರುತಿಸಲು ಅಭಿಯಾನ ಆರಂಭ
ಬಿಪಿಎಲ್ ಕಾರ್ಡ್

Follow us on

ಹಾಸನ: ಬಡವರಿಗೆ ಆಹಾರ ಸಾಮಗ್ರಿ ನೀಡುವ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು. ನೈಜ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಎಂದು ಸರ್ಕಾರ ಹಲವು ಕಸರತ್ತು ನಡೆಸುತ್ತಿದೆ. ಹೀಗಾಗಿ ಅನರ್ಹ ಬಿಪಿಎಲ್ ಕಾರ್ಡ್​ದಾರರರು ಪತ್ತೆಯಾಗಿದ್ದು, ನಾನಾ ಮಾನದಂಡ ವಿಧಿಸಿ ಹಲವು ವರ್ಷಗಳಿಂದ ಸರ್ಕಸ್ ನಡೆಯುತ್ತಲೇ ಇದೆ. ಆದರೆ ಇದೀಗ ಅಂತಿಮ ಹಂತದ ಡಿಜಿಟಲ್ ಹೋರಾಟ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಆರಂಭಗೊಂಡಿದೆ. ಆಧಾರ್​ ಕಾರ್ಡ್ ಲಿಂಕ್ ಆಗಿರುವುದರ ಆಧಾರದ ಮೇಲೆ ಆರ್​ಟಿಓ ಸರ್ಕಾರಿ ಇಲಾಖೆಯ ಮುಖ್ಯಸ್ಥರುಗಳಿಂದ ಮಾಹಿತಿ ಪಡೆದು ಕಾರ್ಡ್​ದಾರರಿಗೆ ಗೊತ್ತೇ ಆಗದಂತೆ ಅನರ್ಹರ ಕಾರ್ಡ್ ಬಣ್ಣ ಬದಲಾಗಲಿದೆ. ಹೀಗಾಗಿ ಬಿಪಿಎಲ್​ನಿಂದ ಕಾರ್ಡ್ ಎಪಿಎಲ್ ಆಗಿ ಬದಲಾಗುವ ಸಮಯ ಹತ್ತಿರ ಬಂದಿದೆ.

ಸರ್ಕಾರಿ ನೌಕರರೇ ಪ್ರಮುಖ ಟಾರ್ಗೇಟ್ ಹಾಸನ ಜಿಲ್ಲೆಯಲ್ಲಿ ಒಟ್ಟು 15. 62 ಲಕ್ಷ  ಜನರು ಅಂದರೆ ಒಟ್ಟು 4. 84 ಲಕ್ಷ ಕುಟುಂಬಗಳು ಸರ್ಕಾರದ ಪಡಿತರ ಪಡೆಯುತ್ತಿದ್ದಾರೆ. ಇದರಲ್ಲಿ 57 ಸಾವಿರ ಅನರ್ಹರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಎಲ್ಲರ ಶೋಧ ನಡೆಯುತ್ತಿದೆ. ಹಾಗಾಗಿಯೇ ಎಲ್ಲಾ ಬಿಪಿಎಲ್ ಕಾರ್ಡ್​ದಾರರ ಫಿಂಗರ್ ಪ್ರಿಂಟ್ ಅನ್ನು ಕೆವೈಸಿ ಮಾಡಿಸಲಾಗುತ್ತಿದೆ. ಜಿಲ್ಲೆಯಲ್ಲಿಇರುವ 15. 62 ಲಕ್ಷ  ಫಲಾನುಭವಿಗಳಲ್ಲಿ 1. 80 ಲಕ್ಷ ಜನರು ಮಾತ್ರ ಬಾಕಿಯಾಗಿದ್ದು, ಈ ತಿಂಗಳು ಪೂರ್ತಿ ಈ ಅಭಿಯಾನ ನಡೆಯಲಿದೆ ಎಂದು ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ದೇವರಾಜ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚೋ ಕಾರ್ಯ ಭರದಿಂದ ಸಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಸರ್ಕಾರಿ ಇರಲಿ ಖಾಸಗಿ ಇರಲಿ ವಾರ್ಷಿಕ 1. 20 ಲಕ್ಷ ಆದಾಯ ಹೊಂದಿದವರು, ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಹೊಂದಿದ್ದರೆ, ಮೂರು ಎಕರೆ ಒಣಭೂಮಿ ಹೊಂದಿರುವವರು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಯ ಮನೆ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಲು ಅವಕಾಶ ಇಲ್ಲ. ಹಾಗಾಗಿಯೇ ಇದುವರೆಗೆ ಈ ಮಾರ್ಗಸೂಚಿ ಪ್ರಕಾರ ಯಾರು ಬಿಪಿಎಲ್ ಕಾರ್ಡ್ ಹೊಂದಿದ್ದರೂ ಅವರು ಸರ್ಕಾರಕ್ಕೆ ಹಿಂದಿರುಗಿಸಿ ಎಂದು ಮನವಿ ಮಾಡಲಾಗಿತ್ತು. ಅದರಂತೆ ಕೆಲವರು ಕಾರ್ಡ್​ ಹಿಂದಿರುಗಿಸಿದ್ದರೂ, ಇನ್ನೂ ದೊಡ್ಡ ಸಂಖ್ಯೆಯಲ್ಲಿ ಅನರ್ಹರು ಕಾರ್ಡ್ ಹೊಂದಿದ್ದಾರೆ. ಹಾಗಾಗಿ ಈಗ ಇಲಾಖೆಯೇ ಆಪರೇಷನ್ ಶುರುಮಾಡಲಿದೆ ಎಂದು ಆಹಾರ ಇಲಾಖೆ ಡಿಡಿ ದೇವರಾಜ್ ಮಾಹಿತಿ ನೀಡಿದ್ದಾರೆ.

ಸರ್ಕಾರದ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು ಅವರ ಇಲಾಖೆಯಲ್ಲಿ ಯಾರಾದರೂ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಮಾಹಿತಿ ಪಡೆಯುವುದು, ಆರ್​ಟಿಓ ಇಲಾಖೆಯಿಂದ ಕಾರ್ ನೊಂದಣಿ ಮಾಹಿತಿ ಪಡೆದು ಅದರ ಮೂಲಕ ವೈಟ್ ಬೋರ್ಡ್ ಕಾರ್ ಹೊಂದಿದವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಅವರ ಕಾರ್ಡ್ ರದ್ದು ಮಾಡೋದು, ಜೊತೆಗೆ ನಗರ ವ್ಯಾಪ್ತಿಯಲ್ಲಿ ಒಂದು ಸಾವಿರ ಚದರದ ಅಡಿಯಿಂದ ಹೆಚ್ಚಿನ ವಿಸ್ತೀರ್ಣದ ಮನೆ ಹೊಂದಿದ್ದರೆ, ಅವರನ್ನೂ ಅನರ್ಹಗೊಳಿಸೋ ಪ್ರಕ್ರಿಯೆ ಚಾಲನೆ ನೀಡಲಾಗುವುದು ಎಂದು ಡಿಡಿ ದೇವರಾಜ್ ತಿಳಿಸಿದ್ದಾರೆ. ಅಲ್ಲದೆ ಶೀಘ್ರವೇ ಸರ್ಕಾರಿ ಇಲಾಖೆಗಳ ಮುಖಸ್ಥರಿಗೆ ಪತ್ರ ಬರೆಯುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಕಾರ್ಡ್ ಹಿಂದಿರುಗಿಸದಿದ್ದರೆ ಕಾದಿದೆ ದಂಡನೆ ಇದುವರೆಗೆ ಸರ್ಕಾರಿ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಹಿಂದಿರುಗಿಸಿ ಎಂದು ಮನವಿ ಮಾಡಿತ್ತು. ನೈಜ ಫಲಾನುಭವಿ ಅಲ್ಲದಿದ್ದರೂ ಕಾರ್ಡ್ ಹೊಂದಿದ್ದರೆ ಅವರೇ ಹಿಂದಿರುಗಿಸಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲಾಖೆಯೇ ಗುರುತಿಸಿ ರದ್ದುಮಾಡಿದರೆ ಆಗ ಕಾರ್ಡ್ ಬಿಪಿಎಲ್​ನಿಂದ ಎಪಿಎಲ್​ಗೆ ಬದಲಾಗಲಿದೆ. ಅಷ್ಟೇ ಅಲ್ಲಾ ಅವರು ಬಿಪಿಎಲ್ ಕಾರ್ಡ್​ನಿಂದ ಎಷ್ಟು ವರ್ಷಗಳಿಂದ ರೇಷನ್ ಪಡೆದಿದ್ದಾರೋ ಅಷ್ಟೂ ವರ್ಷಗಳ ಅಹಾರ ಸಾಮಗ್ರಿಯ ಮೌಲ್ಯದ ದಂಡನೆ ಕಟ್ಟಬೇಕಾಗುತ್ತದೆ.

ಜಿಲ್ಲೆಯಲ್ಲಿ ಇದುವರೆಗೆ 8 ಪ್ರಕರಣಗಳಲ್ಲಿ ಅನರ್ಹ ಕಾರ್ಡ್ ಅನ್ನು ಬಿಪಿಎಲ್​ನಿಂದ ಎಪಿಎಲ್​ಗೆ ರದ್ದುಮಾಡಿದ್ದು, ಅರಸೀಕೆರೆ 3, ಚನ್ನರಾಯಪಟ್ಟಣ 2 ಹಾಗೂ ಬೇಲೂರಿನಲ್ಲಿ 3 ಪ್ರಕರಣಗಳಲ್ಲಿ ದಂಡ ವಿಧಿಸಿ 1.35 ಲಕ್ಷ  ದಂಡ ವಸೂಲಿ ಮಾಡಲಾಗಿದೆ. ಇದಿಷ್ಟೇ ಅಲ್ಲದೆ ಜಿಲ್ಲೆಯ 94 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಲಾಗಿದೆ. ಈಗ ಪ್ರಥಮ ಹಂತದಲ್ಲಿ ಅರ್ಕಾರಿ ಇಲಾಖೆ, ಆರ್​ಟಿಓ ಹಾಗೂ ನಗರಸಭೆಗಳ ಮೂಲಕ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ರದ್ದುಪಡಿಸೋ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಇದಕ್ಕೆ ಈಗ ನಡೆಯುತ್ತಿರುವ ಕೆವೈಸಿ ಅಭಿಯಾನ ನೆರವಾಗಲಿದೆ ಎಂದು ದೇವರಾಜ್ ಹೇಳಿದ್ದಾರೆ.

ಒಂದೆಡೆ ಕಾರ್ಡ್ ರದ್ದು ಇನ್ನೊಂದೆಡೆ ಸಾವಿರಗಟ್ಟಲೆ ಅರ್ಜಿ ಹಾಸನ ಜಿಲ್ಲೆಯಲ್ಲಿ ಒಟ್ಟು 4. 84 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿವೆ. ಇದರಲ್ಲಿ 57 ಸಾವಿರದಷ್ಟು ಅನರ್ಹರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇವುಗಳನ್ನು ಶೋಧಿಸಿ ರದ್ದುಪಡಿಸುವ ಕಾರ್ಯ ಶುರುವಾಗಲಿದೆ. ಆದರೆ  ಇನ್ನೊಂದೆಡೆ ಬಿಪಿಎಲ್ ಕಾರ್ಡ್​ಗಾಗಿ ಬರುತ್ತಿರೋ ಅರ್ಜಿಗಳ ಸಂಖ್ಯೆಯೂ ದೊಡ್ಡದಿದೆ. ಇದುವರೆಗೆ ಹಾಸನ ಜಿಲ್ಲೆ ಒಂದರಲ್ಲೆ 21,022 ಹೊಸ ಬಿಪಿಎಲ್ ಕಾರ್ಡ್ ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲನೆಗಾಗಿ ಕಾಯ್ದಿರಿಸಲಾಗಿದೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ಯಾವುದಾದರು ಪ್ರಕರಣ ವೈದ್ಯಕೀಯ ಚಿಕಿತ್ಸೆಯ ಕಾರಣಕ್ಕೆ ಬಿಪಿಎಲ್ ಕಾರ್ಡ್​ಗಾಗಿ ಅರ್ಜಿ ಬಂದಿದ್ದರೆ, ಅದನ್ನು ತುರ್ತಾಗಿ ಪರಿಶೀಲಿಸಿ ಅರ್ಹತೆ ಇದ್ದರೆ ಕೂಡಲೆ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದರ ಅಡಿಯಲ್ಲಿ 9 ಜನರಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 13509 ಅರ್ಜಿಗಳು ಬಂದಿದ್ದರೆ, 2020-21 ರಲ್ಲಿ 7513 ಅರ್ಜಿಗಳು ಬಂದಿವೆ. ಈ ಎಲ್ಲವುಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿದ ಬಳಿಕವೇ ಕಾರ್ಡ್ ನೀಡಲು ಇಲಾಖೆ ಕ್ರಮ ವಹಿಸಲಿದೆ.

ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್​ದಾರರು ಪತ್ತೆ ಕಾರ್ಯ ನಡೆಯುತ್ತಲೆ, ಇದೆ. ಇದುವರೆಗೆ ಸರ್ಕಾರಿ ನೌಕರರ 94 ಕಾರ್ಡ್​ ರದ್ದುಮಾಡಲಾಗಿದೆ. ಇಲಾಖೆಯೇ ಪತ್ತೆಹಚ್ಚಿದ 8 ಪ್ರಕರಣದಲ್ಲಿ 1.35 ಲಕ್ಷ ದಂಡ ವಸೂಲಿಮಾಡಲಾಗಿದ್ದು, ಯಾರಾದರೂ ಅನರ್ಹರು ಕಾರ್ಡ್ ಹೊಂದಿದ್ದರೆ, ಸ್ವಯಂ ಸ್ಪೂರ್ತಿಯಿಂದ ಹಿಂದಿರುಗಿಸಿದರೆ ಅವರು ದಂಡನೆಯಿಂದ ಪಾರಾಗಬಹುದಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ದೇವರಾಜ್.ಆರ್.ಕೆ ತಿಳಿಸಿದ್ದಾರೆ.

ವರದಿ: ಮಂಜುನಾಥ್ ಕೆ.ಬಿ

ಇದನ್ನೂ ಓದಿ: ಫ್ರಿಡ್ಜ್, ಟಿವಿ ಇರುವ ಬಡವರಿಗೆ ಸರ್ಕಾರದಿಂದ ಬಿಗ್ ಶಾಕ್! ಅನೇಕರ ಬಿಪಿಎಲ್ ಕಾರ್ಡ್ ರದ್ದು

ಬಿಪಿಎಲ್ ಕಾರ್ಡ್​ದಾರರಿಗೆ ನೀಡುವ ಅಕ್ಕಿಯ ಪ್ರಮಾಣ 5ರಿಂದ 10 ಕೆ.ಜಿಗೆ ಹೆಚ್ಚಳ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada