ಕೊಬ್ಬರಿ ಬೆಲೆ ಕುಸಿತ: ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ, ಕೇಂದ್ರ ವಿರುದ್ದ ಶಾಸಕ ಶಿವಲಿಂಗೇಗೌಡ ಅಸಮಾಧಾನ
ತೆಂಗಿನ ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ ಹಾಸನದ ಜಿಲ್ಲಾಧಿಕಾರಿ ಕಚೇರಿ ಬಳಿ ಕೊಬ್ಬರಿ ಸುರಿದು ರೈತರು ಮಾಜಿ ಸಚಿವ ಹೆಚ್ಡಿ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರ ಸಮ್ಮುಖದಲ್ಲಿ ಪ್ರತಿಭಟನೆ ಮಾಡಲಾಗಿದೆ. ಈ ಕುರಿತಾಗಿ ಶಾಸಕ ಶಿವಲಿಂಗೇಗೌಡ ಮಾತನಾಡಿ, ಕೊಬ್ಬರಿ ಬೆಲೆ ಸಂಪೂರ್ಣ ಕುಸಿದು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸನ, ಡಿಸಿಂಬರ್ 02: ಕೊಬ್ಬರಿ (coconut) ಬೆಲೆ ಸಂಪೂರ್ಣ ಕುಸಿದು ಹೋಗಿದೆ. 19 ಸಾವಿರ ರೂ. ಇದ್ದ ಬೆಲೆ 7 ಸಾವಿರ ರೂ. ಕುಸಿದಿದ್ದು ಅದನ್ನು ಕೇಳೋರಿಲ್ಲ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ 11800 ರೂ. ಗೆ ಕೇಂದ್ರ ಸರ್ಕಾರ ಕೊಬ್ಬರಿ ಖರೀದಿ ಮಾಡಿತ್ತು. 1200 ರೂ. ರಾಜ್ಯ ಕೊಟ್ಟರೆ, 13 ಸಾವಿರ ರೂ. ಆಗುತ್ತೆ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆವು. ಸಿಎಂ ಕೂಡ ಇದಕ್ಕೆ ಒಪ್ಪಿ ಆದೇಶ ಮಾಡಿದ್ದರು. ಆದರೆ ಸದನ ಮುಗಿದ ಕೆಲವೇ ದಿನದಲ್ಲಿ ಕೊಬ್ಬರಿ ಖರೀದಿ ನಿಂತು ಹೋಗಿದೆ ಎಂದಿದ್ದಾರೆ.
ಬೆಂಬಲ ಬೆಲೆ ಘೋಷಣೆ ಮಾಡಬೇಕು
ಕೊಬ್ಬರಿ ಖರೀದಿಗೆ ನಫೆಡ್ ಕೇಂದ್ರ ತೆರೆಯುವುದು ಕೇಂದ್ರದ ಜವಾಬ್ದಾರಿ. ಆದರೆ ಅವರು ಖರೀದಿ ಮಾಡದೆ ಅನ್ಯಾಯ ಮಾಡಿದ್ದಾರೆ, ತಾರತಮ್ಯ ಮಾಡಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕೃಷಿ ಉತ್ಪನ್ನ ಕನಿಷ್ಠ ಬೆಲೆಗಿಂದ ಕೆಳಗೆ ಕುಸಿದರೆ ಕೇಂದ್ರ ಮಧ್ಯ ಪ್ರವೇಶ ಮಾಡಬೇಕು. ರೈತರ ಬೆಂಬಲಕ್ಕೆ ನಿಲ್ಲಬೇಕು. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎನ್ನೋದು ಕಾನೂನು.
ಇದನ್ನೂ ಓದಿ: ತಿಪಟೂರು ಕೊಬ್ಬರಿ ಬೆಂಬಲ ಬೆಲೆ ನಿಗದಿ ವಿಷಯದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ: ಕರ್ನಾಟಕ ಬೆಳೆಗಾರರು ಕಂಗಾಲು
ದೆಹಲಿಯಲ್ಲಿ ರೈತರು ಧರಣಿ ಕೂತಾಗ ಪ್ರಧಾನಿಯವರು ಬೆಂಬಲ ಬೆಲೆ ಬಗ್ಗೆ ಮಾತಾಡಿದ್ದರು. ಆಗಿಂದಾಗ್ಗೆ ಬೆಂಬಲ ಬೆಲೆ ಪರಿಷ್ಕರಣೆ ಮಾಡುವುದಾಗಿ ಹೇಳಿ ಹೋರಾಟ ನಿಲ್ಲಿಸಲು ಮನವಿ ಮಾಡಿದ್ದರು. ಕೊಬ್ಬರಿ ಬೆಲೆ ಇಷ್ಟು ಕುಸಿದರೂ ಕೇಂದ್ರ ಯಾಕೆ ಖರೀದಿ ಆರಂಭ ಮಾಡಿಲ್ಲ. ಇವರಿಗೆ ರೈತರ ಬಗ್ಗೆ ಕಾಳಜಿ ಇದೆಯಾ, ಆತ್ಮಸಾಕ್ಷಿ ಇದೆಯಾ. ಉದ್ದುದ್ದ ಭಾಷಣ ಮಾಡ್ತೀರಲ್ಲ ಯಾಕೆ ರೈತರ ರಕ್ಷಣೆ ಮಾಡುತ್ತಿಲ್ಲ. ಯಾವ ಉದ್ದೇಶಕ್ಕಾಗಿ ನೀವು ಇನ್ನು ಕೊಬ್ಬರಿ ಖರೀದಿ ಮಾಡಿಲ್ಲ. ಈ ಬಗ್ಗೆ ಕೇಂದ್ರ ಉತ್ತರ ಹೇಳಬೇಕು.
ಕೇಂದ್ರ ಕೊಬ್ಬರಿ ಖರೀದಿಗೆ ತಯಾರಿಲ್ಲ
ಈ ವಿಚಾರದಲ್ಲಿ ರಾಜ್ಯ ಸರ್ಕಾರ ದೂರುವ ಹಾಗಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಾಯ, ಒತ್ತಡ ಹೇರಬಹುದು ಅಷ್ಟೇ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಆದರೆ ರಾಜ್ಯ ಸರ್ಕಾರ 1200 ಬೆಂಬಲ ಬೆಲೆ ಕೊಡಲು ತಯಾರಿದೆ. ಆದರೆ ಕೇಂದ್ರ ಕೊಬ್ಬರಿ ಖರೀದಿಗೆ ತಯಾರಿಲ್ಲ ಏನು ಮಾಡುವುದು. ಈ ರಾಜ್ಯದ ಬಿಜೆಪಿ ಮುಖಂಡರು, ವಿಪಕ್ಷ ನಾಯಕ ಅಶೋಕ್ ಅವರೇ ಹೇಳಲಿ. ಕೂಡಲೇ ಕೊಬ್ಬರಿ ಖರೀದಿ ಮಾಡಲು ಕೇಂದ್ರ ಸರ್ಕಾರಕ್ಕೆ ಹೇಳಲಿ.
ಇದನ್ನೂ ಓದಿ: ಕೊಬ್ಬರಿ ಬೆಳೆಗಾರರ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ: ಪ್ರತಿ ಕ್ವಿಂಟಾಲ್‌ಗೆ 11,750 ರೂ. ಬೆಂಬಲ ಬೆಲೆ ನಿಗದಿ
ಜನರು ಇದನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಭಾವಿಸುತ್ತಾರೆ. ಆದರೆ ಖರೀದಿ ಮಾಡಬೇಕಿರುವುದು ಕೇಂದ್ರ ಸರ್ಕಾರ. ಸಿದ್ದರಾಮಯ್ಯ ಅವರು ಖರೀದಿ ಮಾಡಲು ಆಗಲ್ಲ. ಮೋದಿಯವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಂಕಷ್ಟ ಎದುರಿಸಲು ಕೇಂದ್ರ ಬರದಿದ್ದರೆ ಮೋದಿಯವರು ಕೇಂದ್ರ ಸರ್ಕಾರವೇ ಮುಂದೆ ಆಗುವ ಅನಾಹುತಕ್ಕೆ ಹೊಣೆ ಆಗಬೇಕಾಗುತ್ತೆ. ಕೂಡಲೆ ಕೊಬ್ಬರಿ ಖರೀದಿ ಮಾಡಲು ಮುಂದಾಗಿ ಎಂದು ಮನವಿ ಮಾಡಿದ್ದಾರೆ.
ಕೊಬ್ಬರಿ ಹಿಡಿದು ಡಿಸಿ ಕಚೇರಿಗೆ ಬಂದ ಮಾಜಿ ಸಚಿವ ಹೆಚ್ಡಿ ರೇವಣ್ಣ
ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕೊಬ್ಬರಿ ಹಿಡಿದು ಡಿಸಿ ಕಚೇರಿಗೆ ಮಾಜಿ ಸಚಿವ ಹೆಚ್ಡಿ ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಮನವಿ ನೀಡಲು ಡಿಸಿ ಚೇಂಬರ್ಗೆ ರೇವಣ್ಣ ಆಗಮಿಸಿದ್ದು, ಈ ವೇಳೆ ಡಿಸಿ ಸತ್ಯಭಾಮ ವಿಸಿಯಲ್ಲಿ ಭಾಗಿಯಾಗಿದ್ದರು. ಬಳಿಕ ವಿಸಿ ಹಾಲ್ನಿಂದ ಹೊರಬಂದು ಮನವಿ ಸ್ವೀಕಾರ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



