ಹಾವೇರಿ ದಂಪತಿಯಿಂದ ನೂತನ ವಾಗ್ದಾನ; ವಿಶೇಷ ರೀತಿಯಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಪತಿ-ಪತ್ನಿ

ಜೀವನ ಸಾರ್ಥಕತೆ ಎಂಬ ವೆಬ್ಸೈ​ಟ್​ನಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ತಮ್ಮ ಮರಣಾನಂತರ ನೇತ್ರದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ನೇತ್ರದಾನ ಮಾಡುವ ಪತಿಯ ನಿರ್ಧಾರಕ್ಕೆ ಪತ್ನಿ ಸಹ ಸಾಥ್ ನೀಡಿದ್ದಾರೆ.

ಹಾವೇರಿ ದಂಪತಿಯಿಂದ ನೂತನ ವಾಗ್ದಾನ; ವಿಶೇಷ ರೀತಿಯಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಪತಿ-ಪತ್ನಿ
ಮಾಲತೇಶ ಬೆಳಕೇರಿ ಮತ್ತು ಪವಿತ್ರಾ ಬೆಳಕೇರಿ ದಂಪತಿ
Edited By:

Updated on: Apr 17, 2021 | 9:48 AM

ಹಾವೇರಿ : ಮದುವೆ ವಾರ್ಷಿಕೋತ್ಸವ ಎಂದರೆ ದಂಪತಿ ಸೇರಿಕೊಂಡು ದೇವಸ್ಥಾನಕ್ಕೆ ಹೋಗುವುದು, ಕುಟುಂಬದವರೊಂದಿಗೆ ಸಂಭ್ರಮ ಆಚರಿಸುವುದು, ಕೇಕ್ ಕತ್ತರಿಸಿ ವಿವಾಹ ವಾರ್ಷಿಕೋತ್ಸವ ಅಚರಣೆ ಮಾಡುವುದು ಸಾಮಾನ್ಯ. ಆದರೆ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಮಾಲತೇಶ ಬೆಳಕೇರಿ ಮತ್ತು ಪವಿತ್ರಾ ಬೆಳಕೇರಿ ದಂಪತಿ ನೇತ್ರದಾನಕ್ಕೆ ವಾಗ್ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ‌.

ನೇತ್ರದಾನ ವಾಗ್ದಾನದ ಮೂಲಕ ತಮ್ಮ ಹದಿನೈದನೆಯ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿರುವ ಮಾಲತೇಶ ಬೆಳಕೇರಿ, ರಟ್ಟೀಹಳ್ಳಿ ಪಟ್ಟಣದಲ್ಲಿ ಖಾನಾವಳಿ ಇಟ್ಟುಕೊಂಡಿದ್ದಾರೆ. ಕುಸ್ತಿ ಪೈಲ್ವಾನ್​ರಾಗಿದ್ದ ಮಾಲತೇಶ, ಹಲವಾರು ಕಡೆಗಳಲ್ಲಿ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ಖಾನಾವಳಿ ನಡೆಸುತ್ತಿರುವ ಮಾಲತೇಶ, ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.

ದಂಪತಿಯಿಂದ ಆನ್ಲೈನ್ ಮೂಲಕ ನೇತ್ರದಾನ ವಾಗ್ದಾನ
ಎಲ್ಲರೂ ಕೇಕ್ ಕತ್ತರಿಸಿ ಆಡಂಬರದಿಂದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವ ಆಚರಣೆಗೆ ಮಾಲತೇಶ ಹಾಗೂ ಅವರ ಪತ್ನಿ ಪವಿತ್ರಾ ನಿರ್ಧಾರ ಮಾಡಿದ್ದರು. ಅದರಂತೆ ಆನ್ಲೈನ್​ನಲ್ಲಿ ಮಾಲತೇಶ ಮತ್ತು ಪವಿತ್ರ ದಂಪತಿ ತಮ್ಮ ಮರಣಾನಂತರ ನೇತ್ರದಾನ ಮಾಡುವ ವಾಗ್ದಾನ ಮಾಡಿದ್ದಾರೆ. ಜೀವನ ಸಾರ್ಥಕತೆ ಎಂಬ ವೆಬ್ಸೈ​ಟ್​ನಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ತಮ್ಮ ಮರಣಾನಂತರ ನೇತ್ರದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ನೇತ್ರದಾನ ಮಾಡುವ ಪತಿಯ ನಿರ್ಧಾರಕ್ಕೆ ಪತ್ನಿ ಸಹ ಸಾಥ್ ನೀಡಿದ್ದಾರೆ. ಹೀಗಾಗಿ ಇಬ್ಬರೂ ಹದಿನೈದನೇ ವಿವಾಹ ವಾರ್ಷಿಕೋತ್ಸವದ ಗಿಫ್ಟ್ ಇದು ಎಂದು ನೇತ್ರದಾನಕ್ಕೆ ವಾಗ್ದಾನ ಮಾಡಿದ್ದಾರೆ.

ನಮ್ಮ ಹದಿನೈದನೇ ವರ್ಷದ ವಿವಾಹ ವಾರ್ಷಿಕೋತ್ಸವ ಇತ್ತು. ನಾವು ಸತ್ತ ಮೇಲೆ ದೇಹ ಮಣ್ಣಾಗಿ ಹೋಗುತ್ತದೆ. ದೇಹ ಮಣ್ಣಾಗಿ ಹೋದ ಮೇಲೆ ಅದರಿಂದ ಏನೂ ಉಪಯೋಗ ಆಗುವುದಿಲ್ಲ. ಸತ್ತ ಮೇಲೆ ಇಷ್ಟು ಗಂಟೆಯೊಳಗೆ ಎಂದು ಅಂಗಾಂಗಗಳನ್ನು ತೆಗೆದುಕೊಳ್ಳುತ್ತಾರೆ. ನಾವು ಮೊದಲು ಈ ಕೆಲಸವನ್ನು ಮಾಡಿ ಸಮಾಜಕ್ಕೆ ಹೇಳಬೇಕು. ನಾವೇ ಮಾಡದೆ ಈ ರೀತಿ ಮಾಡಿ ಎಂದರೆ ಸಮಾಜ ನಮ್ಮ ಮಾತು ಕೇಳುವುದಿಲ್ಲ. ಹೀಗಾಗಿ ನಾವಿಬ್ಬರೂ ಸೇರಿಕೊಂಡು ನೇತ್ರದಾನಕ್ಕೆ ವಾಗ್ದಾನ ಮಾಡಿದ್ದೇವೆ. ಇದೊಂದು ಮಾದರಿ ಕೆಲಸ. ಸತ್ತ ಮೇಲೆ ಮಣ್ಣಾಗಿ ಹೋಗುವ ಕಣ್ಣುಗಳಿಂದ ಮತ್ತೊಬ್ಬರಿಗೆ ಅನುಕೂಲ ಆಗುತ್ತದೆ. ಈ ವಿಚಾರದಿಂದ ನಾವು ನೇತ್ರದಾನಕ್ಕೆ ವಾಗ್ದಾನ ಮಾಡಿದ್ದೇವೆ ಎಂದು ನೇತ್ರದಾನಕ್ಕೆ ವಾಗ್ದಾನ ಮಾಡಿರುವ ಮಾಲತೇಶ ಬೆಳಕೇರಿ ಹೇಳಿದ್ದಾರೆ.

ಇದನ್ನೂ ಓದಿ:

ಡಾ. ರಾಜ್ ರೀತಿ ನೇತ್ರದಾನಕ್ಕೆ ಮುಂದಾದ ಶಿವಣ್ಣ! ನಾರಾಯಣ ನೇತ್ರಾಲಯದಲ್ಲಿ ನೋಂದಣಿ

ಮನೆಯ ಯಜಮಾನನ ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬಸ್ಥರು; ನೇತ್ರದಾನದ ಮೂಲಕ ಅಂದರ ಬದುಕಿಗೆ ಬೆಳಕು

(Haveri couple celebrate their anniversary in different way)