ರೈತರ ಜೀವನಾಡಿ ಎತ್ತುಗಳನ್ನೂ ಕದಿಯುತ್ತಿರುವ ಖದೀಮರು: ಅನ್ನದಾತ ಕಂಗಾಲು
ಹಾವೇರಿ ಜಿಲ್ಲೆಯಲ್ಲಿ ಕಳ್ಳರ ಹಾವಳಿಯಿಂದ ಅನ್ನದಾತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ದನಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಮತ್ತು ಹಸುಗಳನ್ನು ಕದ್ದು ಮಾರಾಟ ಮಾಡುತ್ತಿದ್ದಾರೆ. ಲಕ್ಷ ಲಕ್ಷ ರುಪಾಯಿ ಸಾಲ ಮಾಡಿ ತಂದಿದ್ದ ಎತ್ತುಗಳು ಕಳ್ಳರ ಪಾಲಾಗುತ್ತಿವೆ. ಕಳ್ಳರ ಕಾಟಕ್ಕೆ ಅನ್ನದಾತರು ಬೇಸತ್ತು ಹೋಗಿದ್ದಾರೆ. ಪೊಲೀಸ್ ಇಲಾಖೆ ಎಚ್ಚತ್ತುಕೊಂಡು ಕಳ್ಳರ ಪತ್ತೆ ಹಚ್ಚಲು ಕೆಲಸ ಮಾಡಬೇಕಿದೆ.

ಹಾವೇರಿ, ಏಪ್ರಿಲ್ 30: ಹಾವೇರಿ (Haveri) ತಾಲೂಕಿನ ಕುರುಬಗೊಂಡ ಗ್ರಾಮದ ಜಮೀನೊಂದರಲ್ಲಿನ ದನದಕೊಟ್ಟಿಯಲ್ಲಿ ಕಟ್ಟಿದ್ದ ಒಂದು ಎತ್ತು (Ox) ಮತ್ತು ಗಿರಿ ತಳಿಯ ಹಸುವನ್ನು ಕಳ್ಳತನ ಮಾಡಲಾಗಿದೆ. ಒಂದು ಲಕ್ಷ ರೂಪಾಯಿ ಎತ್ತು, ಒಂದು ಲಕ್ಷ ರುಪಾಯಿ ಹಸು ಕಳ್ಳತನವಾಗಿದೆ. ಹೀಗಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಹಾವೇರಿ ತಾಲ್ಲೂಕಿನ ಬಸಾಪುರ ಗ್ರಾಮ, ಹಿರೇಕೆರೂರು ತಾಲ್ಲೂಕಿನ ಹಿರೇಮೊರಬ ಗ್ರಾಮದಲ್ಲಿ ಮೂರು ಜೊತೆ ಎತ್ತು ಮತ್ತು ಚೌಡಯ್ಯದಾನಪುರ ಗ್ರಾಮದಲ್ಲಿ ಒಂದು ಎತ್ತು ಕಳ್ಳತನವಾಗಿದೆ. ಹೀಗಾಗಿ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ ಕುರಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಅದರ ಜೊತೆಗೆ ಈಗ ಎತ್ತುಗಳು ಮತ್ತು ಹಸು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಜನವರಿಯಿಂದ ಇಲ್ಲಿಯ ವರೆಗೆ 10 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಪೊಲೀಸರು ಎರಡು ಪ್ರಕರಣಗಳನ್ನ ಪತ್ತೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಎತ್ತುಗಳು ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನ್ನದಾತರು ಆತಂಕಗೊಂಡಿದ್ದಾರೆ. ಲಕ್ಷಾಂತರ ರುಪಾಯಿ ಸಾಲ ಮಾಡಿ ಅನ್ನದಾತರು ಎತ್ತುಗಳ ಖರೀದಿಸುತ್ತಿದ್ದಾರೆ. ಆದರೆ, ಎತ್ತುಗಳು ಕಳ್ಳತನವಾಗುತ್ತಿದ್ದು, ದನಕೊಟ್ಟಿಗೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಎತ್ತುಗಳು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಕೃಷಿ ಕೆಲಸಕ್ಕೆ ಎತ್ತುಗಳು ಇಲ್ಲದೆ ರೈತರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಇನ್ನಾದರು ಪೊಲೀಸ್ ಇಲಾಖೆ ಎಚ್ಚತ್ತುಕೊಂಡು ಕಳ್ಳರ ಪತ್ತೆ ಹಚ್ಚಲು ಕೆಲಸ ಮಾಡಬೇಕಿದೆ.
ಇದನ್ನೂ ಓದಿ: ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್ನ ಕ್ರೌರ್ಯ
ದವಸ-ಧಾನ್ಯ ಕಳ್ಳತನ
ಕಳೆದ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಕಳ್ಳರು ಕದ್ದುಕೊಂಡು ಪರಾರಿ ಆಗುತ್ತಿದ್ದರು. ವರ್ಷವಿಡಿ ಕಷ್ಟಪಟ್ಟು ಬೆಳೆದಿದ್ದ ರೈತರಿಗೆ ದವಸ ಧಾನ್ಯಗಳನ್ನು ರಕ್ಷಣೆ ಮಾಡಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಮಾರ್ಚ್ 8 ರಂದು ಕಳ್ಳರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೆವರಮೆಳ್ಳಳ್ಳಿ ಗ್ರಾಮದ ರೈತ ಶಂಕ್ರಪ್ಪ ದೊಡ್ಡಮನಿ ಎಂಬುವರಿಗೆ ಸೇರಿದ ದವಸ ಧಾನ್ಯಗಳನ್ನು ಕಳ್ಳತನ ಮಾಡಿದ್ದರು.ರೈತ ಶಂಕ್ರಪ್ಪ ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Wed, 30 April 25




