ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡು ವೃದ್ಧ ತಾಯಿ ಪ್ರೇಮವ್ವ ಹವಳಣ್ಣನವರನ್ನು ಮಕ್ಕಳು ಹೊರ ಹಾಕಿದ್ದರು. ಪ್ರೇಮವ್ವ ಹವಳಣ್ಣನವರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಪತಿ ಶ್ರೀಕಾಂತ ನಿಧನರಾದ ನಂತರ ಪತಿ ಹೆಸರಿನಲ್ಲಿದ್ದ 3 ಎಕರೆ 32 ಗುಂಟೆ ಜಮೀನನ್ನು ಧನಿಕುಮಾರ ಮತ್ತು ಸಂತೋಷ ಎಂಬ ಪ್ರೇಮವ್ವಳ ಇಬ್ಬರು ಗಂಡು ಮಕ್ಕಳು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಗ್ರಾಮದಲ್ಲಿದ್ದ ಎರಡೂ ಮನೆಗಳನ್ನ ತಮ್ಮ ಹೆಸರಿಗೆ ಮಾಡಿಕೊಂಡು ಹೆತ್ತ ತಾಯಿಗೆ ಕಿರುಕುಳ ನೀಡಿ ತಾಯಿಯನ್ನ ಮನೆಯಿಂದ ಹೊರಹಾಕಿದ್ದರು. ಕಳೆದ ಮೂರು ವರ್ಷಗಳಿಂದ ವೃದ್ಧ ತಾಯಿ ಪ್ರೇಮವ್ವ ಮನೆಯಿಂದ ಹೊರಗಿದ್ದರು.
ಮಕ್ಕಳ ವಿರುದ್ಧ ಹೋರಾಟ ಮಾಡಿ ಮರಳಿ ಆಸ್ತಿ ಪಡೆದುಕೊಂಡ ವೃದ್ಧ ತಾಯಿ
ಒಂದೂವರೆ ವರ್ಷ ಅಲ್ಲಿ ಇಲ್ಲಿ ಅಲೆದಾಡಿ ನಂತರ ಒಂದೂವರೆ ವರ್ಷದಿಂದ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರ ಸೇರಿದ್ದ ವೃದ್ಧ ತಾಯಿ ಪ್ರೇಮವ್ವ ಕೊನೆಗೂ ಮಕ್ಕಳ ವಿರುದ್ಧ ಹೋರಾಡಿ ತಮ್ಮ ಆಸ್ತಿ ಪಡೆದುಕೊಂಡಿದ್ದಾರೆ. ಪ್ರೇಮವ್ವ ಸಾಂತ್ವನ ಕೇಂದ್ರದ ನೆರವಿನಿಂದ ಸವಣೂರು ಉಪವಿಭಾಗಾಧಿಕಾರಿಗೆ ಆಸ್ತಿ ಬಿಡಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಅಧಿಕಾರಿಗಳು ಮಕ್ಕಳಿಂದ ತಾಯಿಯ ಹೆಸರಿಗೆ ಜಮೀನು ಮತ್ತು ಮನೆ ಬಿಡಿಸಿಕೊಟ್ಟಿದ್ದಾರೆ. ಸದ್ಯ ಹಾನಗಲ್ ತಹಶೀಲ್ದಾರ್ ಪ್ರೇಮವ್ವಳ ಹೆಸರಿಗೆ ಮರಳಿ ಆಸ್ತಿ ಮಾಡಿಸಿದ ಜಮೀನು ದಾಖಲೆಗಳನ್ನ ವಿತರಿಸಿದ್ದಾರೆ. ತಹಶೀಲ್ದಾರ ಎರ್ರಿಸ್ವಾಮಿ.ಪಿ.ಎಸ್ ರಿಂದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸಮ್ಮುಖದಲ್ಲಿ ಪ್ರೇಮವ್ವಳಿಗೆ ದಾಖಲೆಗಳ ವಿತರಣೆ ಮಾಡಲಾಗಿದೆ. ಮಕ್ಕಳ ಕಿರುಕುಳಕ್ಕೆ ಬೇಸತ್ತು ಮಕ್ಕಳಿಂದ ಮರಳಿ ಆಸ್ತಿ ಪಡೆದುಕೊಂಡ ಎಪ್ಪತ್ತಾರು ವರ್ಷದ ಪ್ರೇಮವ್ವ ಮಕ್ಕಳ ಕಿರುಕುಳ ನೆನೆದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Ayodhya Earthquake ಉತ್ತರ ಪ್ರದೇಶದ ಅಯೋಧ್ಯೆ ಬಳಿ 4.3 ತೀವ್ರತೆಯ ಭೂಕಂಪ