ಇಡೀ ದೇಶಕ್ಕೆ ಹೆಚ್‌ಡಿ ಕುಮಾರಸ್ವಾಮಿ ಮಂತ್ರಿಯಾಗಿದ್ದಾರೆ, ಮಂಡ್ಯಗೆ ಸೀಮಿತವಲ್ಲ: ಚಲುವರಾಯಸ್ವಾಮಿ
ಜನತಾ ದರ್ಶನ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ರಾಷ್ಟ್ರ ತುಂಬಾ ಕೆಲಸಕೊಟ್ಟಿದ್ದರೂ ರಾಜ್ಯದಲ್ಲಿ ಏಕೆ ರಾಜಕಾರಣ ಮಾಡುತ್ತಿದ್ದಾರೆ ಅಂತಾ ಗೊತ್ತಿಲ್ಲ. ಇಡೀ ದೇಶಕ್ಕೆ ಕುಮಾರಸ್ವಾಮಿ ಮಂತ್ರಿಯಾಗಿದ್ದಾರೆ. ಅವರು ಕೇವಲ ಮಂಡ್ಯಗೆ ಸೀಮಿತವಲ್ಲ ಎಂದಿ ಟಾಂಗ್ ನೀಡಿದ್ದಾರೆ.
ಬೆಂಗಳೂರು, ಜುಲೈ 06: ಇಡೀ ದೇಶಕ್ಕೆ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಮಂತ್ರಿಯಾಗಿದ್ದಾರೆ. ಅವರು ಕೇವಲ ಮಂಡ್ಯಗೆ ಸೀಮಿತವಲ್ಲ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ (N.Chaluvarayaswamy) ಟಾಂಗ್ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹೆಚ್.ಡಿ.ಕುಮಾರಸ್ವಾಮಿಗೆ ಗೈಡ್ ಮಾಡುವಷ್ಟು ದೊಡ್ಡವರಲ್ಲ. ರಾಜಕಾರಣ ಇಷ್ಟೊಂದು ಮಾಡೋದು ಬೇಡ. ರಾಷ್ಟ್ರ ತುಂಬಾ ಕೆಲಸಕೊಟ್ಟಿದ್ದರೂ ರಾಜ್ಯದಲ್ಲಿ ಏಕೆ ರಾಜಕಾರಣ ಮಾಡುತ್ತಿದ್ದಾರೆ ಅಂತಾ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನು ಕೊಡಿಸಲಿ
ನನ್ನ ಜೊತೆ ಅಧಿಕಾರಿಗಳೂ ನಿಂತುಕೊಳ್ಳಬೇಕು ಅಂದುಕೊಳ್ಳುವುದು ತಪ್ಪು. ರಾಜಕಾರಣ ಮಾಡುವುದು ನನಗೂ ಗೊತ್ತಿದೆ. ಮೈಸೂರು ಹಾಗೂ ರಾಮನಗರ ಜಿಲ್ಲೆಯಿಂದಲೂ ಜನ ಬಂದಿದ್ದರು. ನಾಯಕರು ಜನತಾದರ್ಶನ ಮಾಡುವಾಗ ಜನ ಬರುತ್ತಾರೆ, ತಪ್ಪೇನಿಲ್ಲ. ಹೆಚ್‌ಡಿ ಕುಮಾರಸ್ವಾಮಿ ನಡೆಸಿದ ಜನತಾ ದರ್ಶನಕ್ಕೆ 3 ಸಾವಿರ ಜನ ಬಂದಿದ್ದರು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನು ಕೊಡಿಸಲಿ. ಸಿಎಂ, ಶಾಸಕರು ಮಾಡುವ ಕೆಲಸವನ್ನು ಹೆಚ್‌ಡಿ ಕುಮಾರಸ್ವಾಮಿ ಏಕೆ ಮಾಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಮುಡಾದವರೇ 62 ಕೋಟಿ ರೂ. ಹಣ ಕೊಡಬೇಕಂತೆ: ಹೆಚ್‌ಡಿ ಕುಮಾರಸ್ವಾಮಿ
ಲೋಕಸಭೆ ಸದಸ್ಯರಿಗೆ ಆಸಕ್ತಿ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಭೆ ನಡೆಸಿ ಮಾಹಿತಿ ಪಡೆಯಲಿ ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆಯೂ ನಾನು ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿ ನನಗೆ ಟಾಂಗ್ ಕೊಡಲು ಏನು ಬೇಕಾದರೂ ಮಾಡಲಿ. ನಮ್ಮಪ್ಪ ಮಾಜಿ ಪ್ರಧಾನಿ ಅಲ್ಲವಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಜನತಾದರ್ಶನ: 7 ಗಂಟೆಗಳಲ್ಲಿ ಬಂದ ಅರ್ಜಿಗಳೆಷ್ಟು? ಕುಮಾರಸ್ವಾಮಿ ಹೇಳಿದ್ದೇನು?
ಕಾವೇರಿ ವಿಚಾರದಲ್ಲಿ ಸಭೆ ಕರೆದ್ರೆ ಮಾಹಿತಿ ಕೇಳಿದ್ರೆ ನಾವು ಕೊಡುತ್ತೇವೆ. ಸಭೆ ಕರೆದರೆ ಆಗ ನಾನು ಹೋಗುತ್ತೇನೆ. ನೀರಾವರಿ ಯೋಜನೆಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿ. ರಾಷ್ಟ್ರದಲ್ಲಿ ಕೈತುಂಬಾ ಕೆಲಸ ಇದಾವೆ ಇದನ್ನು ಮಾಡೋದು ಬಿಟ್ಟು, ಕುಮಾರಸ್ವಾಮಿ ರಾಜಕಾರಣ ಮಾಡೋದು ಬಿಡಲಿ ಎಂದು ಕಿಡಿಕಾರಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು
ಮುಡಾ ಹಗರಣ ಹೊರಬರಲು ಡಿಕೆ ಶಿವಕುಮಾರ್ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅನ್ಯೋನ್ಯವಾಗಿದ್ದಾರೆ. ಪಕ್ಷದಲ್ಲಿ ಏನೇ ಇದ್ದರೂ ಸುರ್ಜೆವಾಲ ಬಗೆಹರಿಸುತ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ, ಅದರ ಅವಶ್ಯಕತೆ ಇಲ್ಲ. ಪಾಪ ಕುಮಾರಸ್ವಾಮಿ ಏನೇನೋ ಹೇಳಿಕೆ ನೀಡಿದ್ದಾರೆ. ಸಿಎಂ ವಿರುದ್ಧ ಡಿಕೆ ಸಂಚು ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಕೇಂದ್ರ ಮಂತ್ರಿ ಆದ್ಮೇಲೂ ಈ ರೀತಿಯ ರಾಜಕಾರಣ ಬೇಕಾ ಎಂದು ಪ್ರಶ್ನಿಸಿದ್ದಾರೆ.
ವಿಸಿ ನಾಲೆಗೆ 15 ದಿನ ನೀರು ಬಿಡುಗಡೆ
ಜುಲೈ 8ರ ಸಂಜೆಯಿಂದ ವಿಸಿ ನಾಲೆಗೆ 15 ದಿನ ನೀರು ಬಿಡುಗಡೆ ಮಾಡಲಾಗುವುದು. ಕುಡಿಯುವ ನೀರು, ಜಾನುವಾರುಗಳಿಗಾಗಿ ಮಾತ್ರ ನೀರು ಬಿಡುಗಡೆ ಮಾಡಲಾಗುತ್ತಿದೆ. ಅಂದುಕೊಂಡಷ್ಟು ಮಳೆ ಆಗಿಲ್ಲ, ಕೃಷಿ ಚಟುವಟಿಕೆಗೆ ಸದ್ಯಕ್ಕೆ ನೀರು ಹರಿಸಲ್ಲ. ಪ್ರತಿ ನಿತ್ಯ 3000 ಕ್ಯೂಸೆಕ್ ನೀರು ಬಿಡುಗಡೆ ಬಗ್ಗೆ ಚಿಂತನೆ ಇದೆ. ಜುಲೈ ಅಂತ್ಯಕ್ಕೆ ಪೂರ್ಣ ಪ್ರಮಾಣದ ಕ್ಲಾರಿಟಿ ಸಿಗುತ್ತೆ ಎಂದಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.