ಕೋಲಾರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ: ನೋಡ ನೋಡುತ್ತಿದ್ದಂತೆಯೇ ಕರಗಿ ಹೋದ ಬೆಟ್ಟ
ಕೆಜಿಎಫ್ ನಗರಕ್ಕೆ ಕೇವಲ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ನಾಚಂಡ್ಲಹಳ್ಳಿ ಗ್ರಾಮದ ಬಳಿ ಕಳೆದ ಕೆಲವು ವರ್ಷಗಳಿಂದ ಈ ಗ್ರಾಮದ ಬಳಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ. ಅಕ್ಕ ಪಕ್ಕದ ಜಮೀನಿನವರು ಪ್ರಶ್ನೆ ಮಾಡಿದರೂ ಜೀವ ಬೆದರಿಕೆ ಹಾಕುತ್ತಿರುವ ಅಕ್ರಮ ಗಣಿ ಕುಳಗಳು, ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕೋಲಾರ, ಜುಲೈ 25: ಜಿಲ್ಲೆಯ ಕೆಜಿಎಫ್ (KGF) ತಾಲ್ಲೂಕು ನಾಚಂಡ್ಲಹಳ್ಳಿ ಗ್ರಾಮದ ಬಳಿ ಕಳೆದ ಕೆಲವು ವರ್ಷಗಳಿಂದ ಅಕ್ರಮ ಕಲ್ಲುಗಣಿಗಾರಿಕೆ (stone mining) ನಡೆಸಲಾಗುತ್ತಿದೆ. ಈ ಕಲ್ಲು ಗಣಿಗಾರಿಕೆಗೆ ಯಾರ ಅನುಮತಿ ಪಡೆಯದಿದ್ದರೂ ನೂರಾರು ಎಕರೆ ಪ್ರದೇಶದಲ್ಲಿ ಇಂದಿಗೂ ರಾಜರೋಷವಾಗಿ ಹಗಲಲ್ಲೇ ಅಕ್ರಮ ಕಲ್ಲುಗಣಿಗಾರಿಕೆ ಮಾಡಲಾಗುತ್ತಿದೆ. ಕೆಲವು ಪ್ರಭಾವಿ ವ್ಯಕ್ತಿಗಳು ಯಾರ ಭಯವೂ ಇಲ್ಲದೆ ಇಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಕೆಜಿಎಫ್ ನಗರಕ್ಕೆ ಕೇವಲ ಕೂಗಳತೆ ದೂರಲದಲ್ಲಿದೆ. ಇಲ್ಲಿ ಹಗಲು, ರಾತ್ರಿ ನಿರಂತರವಾಗಿ ಕಲ್ಲು ದಿಮ್ಮಿಗಳನ್ನು ತೆಗೆಯುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಮಾಡುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಅಕ್ಕ ಪಕ್ಕದ ಜಮೀನಿನವರು ಪ್ರಶ್ನೆ ಮಾಡಿದರೂ ಅವರಿಗೆ ಜೀವ ಬೆದರಿಕೆ ಹಾಕುತ್ತಿರುವ ಅಕ್ರಮ ಗಣಿ ಕುಳಗಳು, ಅಧಿಕಾರಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಅನುಮತಿ ಪಡೆಯದೆ ಗಣಿಗಾರಿಕೆ: ಅಧಿಕಾರಿಗಳು ಹೇಳಿದ್ದೇನು?
ಹಗಲಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಒಂದೇ ಒಂದು ಕಾಗದದಲ್ಲಿ ಅನುಮತಿ ಪತ್ರ ಇಲ್ಲದೆ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಗಣಿಗಾರಿಕೆ ಮಾಡುತ್ತಿದ್ದಾರೆಂದರೆ ಇವರಿಗೆ ಅಧಿಕಾರಿಗಳ ಶ್ರೀರಕ್ಷೆ ಎಷ್ಟಿರಬೇಕು ಹೇಳಿ. ಇನ್ನು ಈ ಬಗ್ಗೆ ಕೋಲಾರ ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿ ರಾಜೇಶ್ರನ್ನು ಪ್ರಶ್ನೆ ಮಾಡಿದರೆ ಅಲ್ಲಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಿಲ್ಲ, ಅವರಿಗೆ ನೋಟೀಸ್ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಗರಣಗಳ ಸುಳಿಯಲ್ಲಿ ಕೋಲಾರ ಡಿಸಿಸಿ ಬ್ಯಾಂಕ್: ತನಿಖೆಯ ನಂತರವೇ ಚುನಾವಣೆ? ಕಾಂಗ್ರೇಸ್ನಲ್ಲೇ ಪರ-ವಿರೋಧ ಬ್ಯಾಟಿಂಗ್!
ಕೆಜಿಎಫ್ ನಗರದಿಂದ ಕೂಗಳತೆ ದೂರದಲ್ಲಿರುವ ಆಂದ್ರದ ಗಡಿಯ ಸಮೀಪದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಬಿಳಿ ಕಲ್ಲು ಸಿಗುತ್ತಿದೆ, ಒಂದೊಮ್ಮೆ ಈ ಬೆಟ್ಟದ ಮೇಲೆ ನಾಚಂಡ್ಲಹಳ್ಳಿ ಗ್ರಾಮದ ಜನರು ಯುಗಾದಿ, ಸಂಕ್ರಾಂತಿ ಹಬ್ಬಗಳಂದು ಬಂದು ಪೂಜೆ ಮಾಡಿ ದೀಪ ಹಚ್ಚುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಹಬ್ಬದಂದು ಬೆಟ್ಟದ ಮೇಲೆ ದೀಪ ಹಚ್ಚೋದಿರಲಿ, ಸಾಮಾನ್ಯ ದಿನಗಳಲ್ಲೂ ಈ ಬೆಟ್ಟದತ್ತ ಬೇರೆ ಜನರು ಓಡಾಡಲು ಬಿಡುವುದಿಲ್ಲ. ಅಷ್ಟೇ ಅಲ್ಲದೆ ಇಲ್ಲಿ ತೆಗೆಯುವ ಕಲ್ಲು ದಿಮ್ಮಿಗಳನ್ನು ಸಾಗಿಸುವ ವೇಳೆ ಅಕ್ಕ ಪಕ್ಕದ ರೈತರ ಜಮೀನಿಗೆ ತೊಂದರೆಯಾಗುತ್ತಿದೆ, ಹೀಗಿದ್ದರೂ ಕೂಡಾ ಯಾರೊಬ್ಬರು ಇಲ್ಲಿ ನಡೆಯುವ ಅಕ್ರಮದ ವಿರುದ್ದ ಧ್ವನಿಎತ್ತಲು ಸಿದ್ದರಿಲ್ಲ, ಕಾರಣ ಅಕ್ರಮ ಗಣಿ ಕುಳಗಳ ವಿರುದ್ದ ಧ್ವನಿ ಎತ್ತಿದರೆ ನಮ್ಮ ಪ್ರಾಣಕ್ಕೆ ಕಂಟಕ ಅನ್ನೋ ಭಯ ಇಲ್ಲಿನ ಜನರನ್ನು ಕಾಡುತ್ತಿದೆ.
ಇನ್ನು ಅಧಿಕಾರಿಗಳು ಇಲ್ಲಿ ಅನುಮತಿ ಕೊಟ್ಟಿಲ್ಲ, ಅಕ್ರಮ ಗಣಿಗಾರಿಕೆ ಬಗ್ಗೆ ದೂರು ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ ಅಂದರೆ ಅದರ ಅರ್ಥ ಅದೊಂದು ವ್ಯವಸ್ಥಿತ ಅಕ್ರಮ ಗಣಿಗಾರಿಕೆ ಅನ್ನೋದು ತಿಳಿದು ಬರುತ್ತದೆ. ನಾಚಂಡ್ಲಹಳ್ಳಿ ದೊಡ್ಡ ಮಟ್ಟದಲ್ಲಿ ಅಕ್ರಮ ಗಣಿಗಾರಿಕೆ ಇದ್ದರೆ, ಬೀರನಕುಪ್ಪ, ಮತ್ತು ಕಣ್ಣೂರು ಗ್ರಾಮಗಳ ಬಳಿಯು ಅಕ್ರಮವಾಗಿ ಕಲ್ಲು ತೆಗೆಯಲಾಗುತ್ತಿದೆ. ಇನ್ನು ಜಿಲ್ಲೆಯಲ್ಲೂ ಹಲವೆಡೆ ಇದೇ ರೀತಿಯ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರಿಗಳು ಮಾತ್ರ ತಮಗೆ ಸಂಬಂಧ ಇಲ್ಲ ಎಂಬಂತೆ ಉತ್ತರ ನೀಡುತ್ತಿದ್ದಾರೆ.
ಇದನ್ನೂ ಓದಿ: ಕೋಲಾರ: ದೂರ-ದೂರವಾಗಿದ್ದ ಗಂಡ ಹೆಂಡತಿಯನ್ನು ಒಂದುಗೂಡಿಸಿದ ಅದಾಲತ್
ಅಕ್ರಮ ಕಲ್ಲುಗಣಿಗಾರಿಕೆಗೆ ದೊಡ್ಡ ಬೆಟ್ಟವೇ ನೆಲಸಮವಾಗಿ ಹೋಗಿದ್ದರೆ ಇಲ್ಲಿ ಅಕ್ರಮವೇ ತಲೆ ಎತ್ತಿ ನಿಂತಿದೆ. ಅಧಿಕಾರಿಗಳಿಗಾಗಲೀ ಗ್ರಾಮಸ್ಥರಿಗಾಗಲೀ ಯಾರೊಬ್ಬರೂ ತಮ್ಮೂರಿನ ಪ್ರಕೃತಿ ಸಂಪತ್ತು ಲೂಟಿ ಮಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅನ್ನೋದು ದುರಂತ. ಅಕ್ರಮ ಕುಳಗಳಿಗೆ ಇಲಾಖೆ ಅಧಿಕಾರಿಗಳು ಚುರುಕು ಮುಟ್ಟಿಸದಿದ್ರೆ ಮತ್ತಷ್ಟು ಪ್ರಕೃತಿ ಸಂಪತ್ತು ಲೂಟಿಯಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:01 pm, Thu, 25 July 24