ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್: 20 ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರಿಂದ ಮಹಾ ಲಾಬಿ
ಕರ್ನಾಟಕ ಕಾಂಗ್ರೆಸ್‌ನಲ್ಲಿ 20 ಸಚಿವ ಸ್ಥಾನಗಳ ಭರ್ತಿಗಾಗಿ 60ಕ್ಕೂ ಹೆಚ್ಚು ಶಾಸಕರು ಲಾಬಿ ನಡೆಸುತ್ತಿದ್ದಾರೆ. ಮಾಜಿ ಸಚಿವರು ತೀವ್ರ ಲಾಬಿ ಮಾಡುತ್ತಿದ್ದಾರೆ. ಮತ್ತೊಂದೆಡೆ, ಆಕಾಂಕ್ಷಿಗಳ ಸಂಖ್ಯೆ ನೋಡಿ ಬೆಚ್ಚಿಬಿದ್ದಿರುವ ಹೈಕಮಾಂಡ್, ವಿಧಾನ ಪರಿಷತ್ ಚುನಾವಣೆ ಮುಗಿದ ನಂತರವೇ ಸಂಪುಟ ವಿಸ್ತರಣೆಗೆ ಮುಂದಾಗುವ ಲಕ್ಷಣಗಳಿವೆ.

ಬೆಂಗಳೂರು, ಜೂನ್ 8: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಕಾಂಗ್ರೆಸ್ (Congress) ಸರ್ಕಾರ ರಚನೆಯಾಗಿ, ಮೊದಲ ಹಂತದಲ್ಲಿ 13 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ‘ಕೈ’ ಪಾಳಯದಲ್ಲಿ ಈಗ ಎರಡನೇ ಸುತ್ತಿನ ಸಂಪುಟ ಸರ್ಕಸ್ ಆರಂಭವಾಗಿದೆ. ಇತ್ತೀಚೆಗಷ್ಟೇ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಬೆಂಗಳೂರು ಅಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್ ಪಡೆದಿದ್ದು, ಜಮೀರ್ ಅಹ್ಮದ್ ಬೆಂಬಲಿಗರ ಪ್ರತಿಭಟನೆಯ ಬಿಸಿ ಸದ್ಯ ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲೇ ಹೈಕಮಾಂಡ್‌ಗೆ ಹೊಸ ತಲೆನೋವು ಶುರುವಾಗಿದೆ. ಸದ್ಯ ಸಂಪುಟದಲ್ಲಿ ಬಾಕಿ ಉಳಿದಿರುವ 20 ಸಚಿವ ಸ್ಥಾನಗಳಿಗಾಗಿ ಬರೋಬ್ಬರಿ 60ಕ್ಕೂ ಹೆಚ್ಚು ಶಾಸಕರು ಭಾರಿ ಪೈಪೋಟಿ ನಡೆಸುತ್ತಿದ್ದು, ದೆಹಲಿ ಮಟ್ಟದಲ್ಲಿ ಲಾಬಿ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಾಂಶಗಳು
- 20 ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ.
- ಹೈಕಮಾಂಡ್ ಹಂತದಲ್ಲಿ ಮಾಜಿಗಳ ತೀವ್ರ ಲಾಬಿ.
- ಪರಿಷತ್ ಚುನಾವಣೆ ಬಳಿಕವೇ ಸಂಪುಟ ವಿಸ್ತರಣೆ.
ದೆಹಲಿ ಮಟ್ಟದಲ್ಲಿ ಮಾಜಿ ಸಚಿವರ ಲಾಬಿ
ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಸ್ಥಾನ ವಂಚಿತರಾದ ಹಲವು ಹಿರಿಯ ಹಾಗೂ ಮಾಜಿ ಸಚಿವರು ಇದನ್ನು ತಮಗೆ ಆದ ಅಗೌರವ ಎಂದು ಭಾವಿಸಿ ತೀವ್ರ ಬೇಸರಗೊಂಡಿದ್ದಾರೆ. ಹೀಗಾಗಿ, ಎರಡನೇ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ಕೈತಪ್ಪಬಾರದು ಎಂದು ಪಣತೊಟ್ಟಿರುವ ಮಾಜಿಗಳು ಈಗಿನಿಂದಲೇ ದೆಹಲಿ ಮಟ್ಟದಲ್ಲಿ ಗಾಡ್‌ಫಾದರ್‌ಗಳ ಹುಡುಕಾಟ ಆರಂಭಿಸಿದ್ದಾರೆ. ಒಂದೊಂದು ಸಚಿವ ಸ್ಥಾನಕ್ಕೆ ಕನಿಷ್ಠ 3 ರಿಂದ 4 ಮಂದಿ ಶಾಸಕರು ರೇಸ್‌ನಲ್ಲಿದ್ದು, ಆಕಾಂಕ್ಷಿಗಳ ದೀರ್ಘ ಪಟ್ಟಿ ನೋಡಿ ಕಾಂಗ್ರೆಸ್ ಹೈಕಮಾಂಡ್ ತಲೆಕೆಡಿಸಿಕೊಂಡಿದೆ. ಹೀಗಾಗಿ ಜೂನ್ 18ರ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಜಾತಿ, ಜಿಲ್ಲಾವಾರು ಲೆಕ್ಕಾಚಾರ: ಖರ್ಗೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ಕದ ತಟ್ಟಿದ ಶಾಸಕರು
ಈ ಬಾರಿ ಸಂಪುಟ ಸೇರಲು ಹೊಸಬರು, ಹಳಬರು, ಹಿರಿಯರು, ವಲಸಿಗರು ಹಾಗೂ ಸಮುದಾಯದ ಮುಂದಾಳುಗಳು ತಮ್ಮದೇ ಆದ ಜಾತಿವಾರು ಲೆಕ್ಕಾಚಾರ, ಜಿಲ್ಲಾವಾರು ಕೋಟಾ ಮತ್ತು ಸಮುದಾಯದ ಪ್ರಾಬಲ್ಯದ ಕಾರ್ಡ್ ಬಳಸುತ್ತಿದ್ದಾರೆ. ಆರೇಳು ಬಾರಿ ಗೆದ್ದಿದ್ದರೂ ಇದುವರೆಗೆ ಒಮ್ಮೆಯೂ ಸಚಿವರಾಗದ ಹಿರಿಯ ಶಾಸಕರು ತಮಗೆ ಮೊದಲ ಆದ್ಯತೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.
ಮತ್ತೊಂದೆಡೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದರಿಂದ ಅವರ ಆಪ್ತ ವಲಯದ ಶಾಸಕರು ತಮಗೆ ಮಂತ್ರಿಗಿರಿ ಪಕ್ಕಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವ ಹಾಗೂ ಬೆಂಬಲ ಬಳಸಿ ಸಂಪುಟ ಸೇರಲು ಮತ್ತೊಂದು ಪ್ರಭಾವಿ ಶಾಸಕರ ಗುಂಪು ತೀವ್ರ ಕಸರತ್ತು ನಡೆಸುತ್ತಿದೆ.
ಇದನ್ನೂ ಓದಿ: ಮತ್ತೊಂದು ಸ್ವರೂಪ ಪಡೆದ ಜಮೀರ್ ಅಹ್ಮದ್ ಖಾನ್ರದ್ದು ಎನ್ನಲಾದ ಆಡಿಯೋ ಪ್ರಕರಣ
ಸದ್ಯಕ್ಕೆ 13 ಸಚಿವರ ಖಾತೆ ಹಂಚಿಕೆ ಅತೃಪ್ತಿಯನ್ನು ನಿಭಾಯಿಸುವುದರಲ್ಲೇ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಸಿಎಂ ಡಿಕೆಶಿ ಸುಸ್ತಾಗಿದ್ದು, ಮುಂಬರುವ ದಿನಗಳಲ್ಲಿ ಈ 20 ಸ್ಥಾನಗಳ ಭರ್ತಿ ಪ್ರಕ್ರಿಯೆ ಕಾಂಗ್ರೆಸ್ ಪಾಲಿಗೆ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




