ಸತತ 7 ಗಂಟೆ 27 ಜಿಲ್ಲೆಗಳ ಶಾಸಕರ ಜೊತೆ ಸಿಎಂ ಡಿಕೆ ಶಿವಕುಮಾರ್ ಸಭೆ: ಅಭಿವೃದ್ಧಿ, ಬರ, SIR ಬಗ್ಗೆ ಮಹತ್ವದ ಚರ್ಚೆ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 27 ಜಿಲ್ಲೆಗಳ ಕಾಂಗ್ರೆಸ್ ಶಾಸಕರೊಂದಿಗೆ ಸತತ ಏಳು ಗಂಟೆಗಳ ಕಾಲ ಸಭೆ ನಡೆಸಿ, ಅಭಿವೃದ್ಧಿ, ಅನುದಾನ, ಬರ ಪರಿಸ್ಥಿತಿ, SIR ಪ್ರಕ್ರಿಯೆ ಹಾಗೂ 2028ರ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಿದರು. ಬರಪೀಡಿತ ತಾಲೂಕುಗಳಿಗೆ ಪ್ರವಾಸ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.

ಮುಖ್ಯಾಂಶಗಳು
- 27 ಜಿಲ್ಲೆಗಳ ಶಾಸಕರ ಜೊತೆ ಸಿಎಂ ಸಭೆ
- ಬರ ಪರಿಸ್ಥಿತಿ ಕುರಿತು ಮಹತ್ವದ ಚರ್ಚೆ
- 2028ರ ಚುನಾವಣೆ ಸಿದ್ಧತೆಗೆ ಶಾಸಕರಿಗೆ ಟಾಸ್ಕ್
ಬೆಂಗಳೂರು, ಆಗಸ್ಟ್ 26: ಮಳೆಗಾಲದ ವಿಧಾನಮಂಡಲ ಅಧಿವೇಶನ ಮೊಟಕುಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumr) ಜಿಲ್ಲಾ ಕಾಂಗ್ರೆಸ್ (Congress) ಶಾಸಕರೊಂದಿಗೆ ಸರಣಿ ಸಭೆ ನಡೆಸಿ, ಕ್ಷೇತ್ರಗಳ ಅಭಿವೃದ್ಧಿ, ಅನುದಾನ, ಬರ ಪರಿಸ್ಥಿತಿ, SIR ಪ್ರಕ್ರಿಯೆ ಹಾಗೂ 2028ರ ವಿಧಾನಸಭಾ ಚುನಾವಣೆ ಸಿದ್ಧತೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸತತ ಏಳು ಗಂಟೆಗಳ ಕಾಲ 27 ಜಿಲ್ಲೆಗಳ ಶಾಸಕರೊಂದಿಗೆ ಬ್ಯಾಚ್‌ವಾರು ಸಭೆ ನಡೆಸಿದ ಸಿಎಂ, ಶಾಸಕರ ಅಹವಾಲುಗಳನ್ನು ಆಲಿಸಿದ್ದಾರೆ.
27 ಜಿಲ್ಲೆಗಳ ಶಾಸಕರ ಜೊತೆ ಸರಣಿ ಸಭೆ
ಮೊದಲ ಹಂತದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಸಲಾಯಿತು. ಬಳಿಕ ಬೀದರ್, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಶಾಸಕರೊಂದಿಗೆ ಚರ್ಚೆ ನಡೆಯಿತು.
ನಂತರ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಶಾಸಕರೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು.
ಅನುದಾನದ ಕೊರತೆ ಆಗದಂತೆ ಕ್ರಮ: ಸಿಎಂ
ಕ್ಷೇತ್ರವಾರು ಕುಡಿಯುವ ನೀರು, ರಸ್ತೆ, ಮೂಲಸೌಕರ್ಯ ಹಾಗೂ ವಸತಿ ಯೋಜನೆಗಳ ಕುರಿತು ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆದರು. ಕೆಲ ಶಾಸಕರು ಅನುದಾನದ ಕೊರತೆಯ ಬಗ್ಗೆಯೂ ಪ್ರಸ್ತಾಪಿಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಡಿ.ಕೆ. ಶಿವಕುಮಾರ್, ಅನುದಾನದ ಕೊರತೆ ಉಂಟಾಗದಂತೆ ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಚರ್ಚೆ
ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ. 102 ತಾಲೂಕುಗಳಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಇದೆ ಎಂದು ಡಿಸಿಎಂ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ ಎಂದು ಸಿಎಂ ಸಭೆಯ ಬಳಿಕ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಸ್ಥಿತಿಗೆ ಸಂಬಂಧಿಸಿದ ವರದಿಗಳನ್ನು ನೀಡುತ್ತಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಅಲ್ಲದೆ, ಬರಪೀಡಿತ ತಾಲೂಕುಗಳಿಗೆ ಸ್ವತಃ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
SIR ಪ್ರಕ್ರಿಯೆ ಬಗ್ಗೆಯೂ ಶಾಸಕರಿಗೆ ಸೂಚನೆ
ಸಭೆಯಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಗ್ಗೆಯೂ ಚರ್ಚೆ ನಡೆದಿದೆ. SIR ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ. ಸುಮಾರು ಒಂದು ಕೋಟಿ ಮತದಾರರ ಹೆಸರುಗಳು ಡಿಲೀಟ್ ಆಗಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಡದಂತೆ ಶಾಸಕರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ಶಾಸಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಿಎಂ ತಿಳಿಸಿದ್ದಾರೆ.
2028ರ ಚುನಾವಣೆಗೂ ಈಗಿನಿಂದಲೇ ಸಿದ್ಧತೆ
ಅಭಿವೃದ್ಧಿಯ ಜೊತೆಗೆ ಪಕ್ಷ ಸಂಘಟನೆಗೂ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಶಾಸಕರಿಗೆ ಸೂಚನೆ ನೀಡಿದ್ದಾರೆ. ಸಚಿವರು ತಾಲೂಕು ಮಟ್ಟದಲ್ಲಿ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರಚಿಸಲು ಸೂಚಿಸಲಾಗಿದ್ದು, ಪ್ರತಿ ಸಮಿತಿಗೆ ಆರು ಸದಸ್ಯರನ್ನು ನೇಮಿಸುವ ಪ್ರಸ್ತಾಪವಿದೆ.
ಇದರ ಜೊತೆಗೆ ‘ಭಾರತ್ ಜೋಡೋ ಯುವ ಸಂಘ’ ಸ್ಥಾಪನೆಗೆ ಶಾಸಕರು ಮುಂದಾಳತ್ವ ವಹಿಸಬೇಕು ಹಾಗೂ ‘ಭಾರತ್ ಜೋಡೋ ಸಂಘ’ಕ್ಕೆ ಅರ್ಹ ವ್ಯಕ್ತಿಗಳ ಹೆಸರುಗಳನ್ನು ಶಿಫಾರಸು ಮಾಡಬೇಕು ಎಂದು ಸಿಎಂ ಸೂಚಿಸಿದ್ದಾರೆ. ಇಂತಹ ಸಂಘಟನಾ ಚಟುವಟಿಕೆಗಳು ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಸಹಕಾರಿಯಾಗಲಿವೆ ಎಂದು ಅವರು ಹೇಳಿದ್ದಾರೆ.
ಇಂದು ಕೂಡ ಶಾಸಕರ ಜೊತೆ ಸಿಎಂ ಸಭೆ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜಿಲ್ಲಾ ಶಾಸಕರೊಂದಿಗಿನ ಸಭೆ ಇಂದು ಕೂಡ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಯಲಿದೆ. ಇದಲ್ಲದೆ, ವಿಧಾನಪರಿಷತ್ ಸದಸ್ಯರೊಂದಿಗೂ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ.
ವರದಿ: ಈರಣ್ಣ ಬಸವ, ಟಿವಿ9, ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




