ಸಿದ್ದರಾಮಯ್ಯ ನಮ್ಮ ನಾಯಕ, ಎಲ್ಲಾ ಚುನಾವಣೆಗೆ ಬೇಕು: ಸಿದ್ದು ಹೆಸರು ದುರ್ಬಳಕೆ ಬೇಡ ಎಂದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ, ಅವರೇ ನಮ್ಮ ನಾಯಕ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಸಿದ್ದು ಆಪ್ತ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದು ಆಪ್ತ ಸಚಿವರ ಹೇಳಿಕೆಗಳನ್ನೇ ದಾಳವಾಗಿ ತಿರುಗೇಟು ನೀಡಿರುವ ಅವರು, ರಾಜ್ಯ ಕಾಂಗ್ರೆಸ್‌ನ ಪಟ್ಟದ ಆಟಕ್ಕೆ ಟ್ವಿಸ್ಟ್ ನೀಡಿದ್ದಾರೆ. ಸಿದ್ದರಾಮಯ್ಯನೇ ನಮ್ಮ ನಾಯಕ, ಅವರ ಹೆಸರು ದುರುಪಯೋಗ ಬೇಡ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ಯಾರಿಗೆ? ವಿವರಗಳಿಗೆ ಮುಂದೆ ಓದಿ.

ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಕಾಂಗ್ರೆಸ್ನಲ್ಲಿ ಇತ್ತೀಚೆಗೆ ಸಿಎಂ ಕುರ್ಚಿ ಹಾಗೂ ಕೆಪಿಸಿಸಿ ಪಟ್ಟದಾಟ ಜೋರಾಗಿಯೇ ನಡೆಯುತ್ತಲೇ ಇದೆ. ಇದರ ಜತೆಗೆ ಸಚಿವರ ದೆಹಲಿ ದಂಡಯಾತ್ರೆ ಕೂಡ ರಾಜಕೀಯ ಬೆಳವಣಿಗೆಗಳ ಭವಿಷ್ಯನ್ನೂ ನುಡಿದಿವೆ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಆಪ್ತ ಬಳಗ ಎಂದೇ ಗುರುತಿಸಿಕೊಂಡಿರುವ, ಡಾ. ಜಿ ಪರಮೇಶ್ವರ್ ಆದಿಯಾಗಿ ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ, ಹೆಚ್ಸಿ ಮಹದೇವಪ್ಪ ಎಲ್ಲರೂ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿರಬೇಕು ಎಂದು ಹೆಜ್ಜೆ ಹೆಜ್ಜೆಗೂ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಇಷ್ಟು ದಿನ ಮಾರ್ಮಿಕ ಮಾತುಗಳ ಮೂಲಕ ಸಂದೇಶ ನೀಡುತ್ತಿದ್ದರೇಹೊರತು, ಎಲ್ಲೂ ಕೂಡ ಸಚಿವರ ಹೇಳಿಕೆಗಳಿಗೆ ನೇರವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇಂದು ಸಿದ್ದು ಆಪ್ತ ಸಚಿವರ ಹೇಳಿಕೆಗಳಿಗೆ ಡಿಕೆ ಶಿವಕುಮಾರ್ ದೊಡ್ಡ ಮಟ್ಟಿನ ತಿರುಗೇಟು ಕೊಟ್ಟಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಕೊಟ್ಟಂತಹ ಹೇಳಿಕೆ ದೊಡ್ಡ ಸಂಚಲನ ಮೂಡಿಸಿತ್ತು. ನಮಗೆ ಸಿದ್ದರಾಮಯ್ಯ ಬೇಕು. ಅವರೇ ಇರಬೇಕು. ಹೊಸ ನಾಯಕ ತಯಾರಾಗುವ ತನಕ ಅವರ ಅವಶ್ಯಕತೆ ಮುಖ್ಯ ಎಂದು ಸ್ಫೋಟಕವಾಗಿ ಮಾತನಾಡಿದ್ದರು. ಸಿದ್ದು ಆಪ್ತರ ಪ್ರತಿ ಮಾತಿಗೂ ತಿರುಗೇಟು ಎಂಬಂತೆ ಡಿಕೆಶಿ ಇದೀಗ ಸೈಲೆಂಟಾಗಿಯೇ ಉತ್ತರ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರು ನಮ್ಮ ನಾಯಕ. ಅವರು ಎಲ್ಲ ಚುನಾವಣೆಗೂ ಬೇಕು. ಜಿಲ್ಲಾ ಪಂಚಾಯಿತಿಗೂ ಬೇಕು, ತಾಲೂಕು ಪಂಚಾಯಿತಿಗೂ ಬೇಕು, ಅಸೆಂಬ್ಲಿಗೂ ಬೇಕು, ಪಾರ್ಲಿಮೆಂಟಿಗೂ ಬೇಕು. ಅವರು ಕಾಂಗ್ರೆಸ್‌ನ ನಾಯಕ. ಅವರನ್ನು ಕಾಂಗ್ರೆಸ್ ಪಕ್ಷ 2 ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ದಿನಾ ಬೆಳಗ್ಗೆದ್ದು ಅವರ ಹೆಸರು ಹೇಳಿಕೊಂಡು ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಅದರ ಅವಶ್ಯಕತೆನೂ ಇಲ್ಲ. ಅವರು ನಮ್ಮ ಪ್ರಶ್ನಾತೀತ ನಾಯಕ ಎಂದು ಹೇಳಿದರು.
ಡಿಕೆ ಶಿವಕುಮಾರ್ ಹೀಗೆ ಮಾತನಾಡಲು ಏನು ಕಾರಣ?
ಡಿಕೆ ಶಿವಕುಮಾರ್ ಇಂದು ಹೀಗೆ ಮಾತನಾಡಲು ಹಲವು ಕಾರಣಗಳು ಇವೆ ಎಂಬುದು ಮೂಲಗಳ ಅಭಿಪ್ರಾಯ. ಸಿದ್ದರಾಮಯ್ಯ ಹೆಸರ ಮೇಲೆ ಒಂದಿಷ್ಟು ಸಚಿವರು ಬಂದೂಕಿಟ್ಟು ಸಿಎಂ ಕುರ್ಚಿಗೆ ಗುರಿಯಿಟ್ಟಿದ್ದರು. ಹೀಗಾಗಿಯೇ ಇಂದು ಡಿಕೆ ಶಿವಕುಮಾರ್ ಈ ಹೇಳಿಕೆ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಇಷ್ಟೇ ಅಲ್ಲ ಸಚಿವರ ಹೇಳಿಕೆಗೆ ವಿರೋಧವಾಗಿ ಉತ್ತರಿಸಿದೇ, ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ನಮ್ಮ ನಾಯಕ ಅಂತ ಹೇಳುವ ಮೂಲಕ ದಾಳ ಉರುಳಿಸಿದ್ದಾರೆ. ಯಾಕೆಂದರೆ, ಒಂದು ವೇಳೆ ವ್ಯತಿರಿಕ್ತ ಹೇಳಿಕೆ ನೀಡಿದರೆ ಮೂರನೇಯವರಿಗೆ ಲಾಭ ಆಗುತ್ತದೆ. ಇದರಿಂದ ರಾಜಕೀಯ ಬೆಳವಣಿಗೆಗಳ ಮೇಲೂ ಪರಿಣಾಮ ಆಗಬಹುದು. ಹೀಗಾಗಿ ಗೊಂದಲ ಏನು ಇಲ್ಲ ಎನ್ನುವ ಮೂಲಕವೇ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಒಂದೆಡೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರೆ ಮತ್ತೊಂದೆಡೆ ಬಿಕೆ ಹರಿಪ್ರಸಾದ್ ಹೈಕಮಾಂಡ್ನತ್ತ ಬೊಟ್ಟು ಮಾಡುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಅವರೇ ಹೇಳಬೇಕು. ಕನಸು, ನನಸು ಎಲ್ಲವೂ ಹೈಕಮಾಂಡ್ ಕೈಯಲ್ಲಿರುತ್ತದೆ ಎಂದಿದ್ದಾರೆ.
ಕುರ್ಚಿ ಕಾಳಗದ ನಡುವೆ ಡಿಸಿಎಂ ಡಿಕೆ ‘ಸಂಘಟನಾ’ ತಂತ್ರ!
ಈ ರಾಜಕೀಯ ಬೆಳವಣಿಗೆಗಳ ನಡುವೆ ಇಂದು ಡಿಸಿಎಂ ಡಿಕೆ ಶಿವಕುಮಾರ್, ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಡಿಕೆಶಿ ಸಮ್ಮುಖದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಪುತ್ರ ಮಂಜೇಗೌಡ, ಬ್ರಿಜೇಶ್ ಕಾಳಪ್ಪ, ಎಲ್.ಎಸ್.ಚೇತನ್ ಗೌಡ ‘ಕೈ’ ಹಿಡಿದರು. ಈ ಮೂಲಕ ತಮ್ಮ ಪಕ್ಷ ಸಂಘಟನೆ ಕಾರ್ಯ ನಿರಂತರ ಎಂಬ ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಮೊಳಗಿದ ಮುಂದಿನ ಸಿಎಂ ಡಿಕೆ ಎಂಬ ಘೋಷಣೆ
ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಮಾಡಿದರು. ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಅಭಿಮಾನಿಗಳು, ‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’ ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ: KPCC ಅಧ್ಯಕ್ಷರ ಬದಲಾವಣೆ ಅಷ್ಟು ಸುಲಭವಲ್ಲ: ಡಿಕೆಶಿ ಬದಲಾವಣೆಗಿರುವ ತೊಡಕೇನು?
ಏನೇ ಇದ್ದರೂ ಪಟ್ಟದಾಟದಲ್ಲಿ ಸೈಲೆಂಟಾಗಿಯೇ ಡಿಕೆಶಿ ದಾಳ ಉರುಳಿಸುವ ತಂತ್ರ ಮಾಡುತ್ತಿದ್ದಾರೆ. ಸಚಿವರ ಮಾತಿಗೆ ಇಷ್ಟು ದಿನ ನೇರ ಪ್ರತಿಕ್ರಿಯಿಸದೇ ಇದ್ದ ಡಿಕೆ ಶಿವಕುಮಾರ್, ಇಂದು ಸಚಿವರು ಹೇಳಿದ್ದ ಮಾತನ್ನು ಅವರಿಗೇ ತಿರುಗುಬಾಣವನ್ನಾಗಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ