AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಕ್ಕೆ ಲಸಿಕೆ ಪೂರೈಕೆ ಆಗಿಲ್ಲ; ಯಾವುದಾದರೂ ಕಂಪೆನಿ ಉತ್ಪಾದಿಸಲು ಮುಂದೆ ಬಂದರೆ ಸಹಕರಿಸುತ್ತೇವೆ: ರವಿಕುಮಾರ್

ಸದ್ಯದಲ್ಲೇ ಸ್ಪುಟ್ನಿಕ್ ಲಭ್ಯವಾಗಲಿದೆ. ರಾಜ್ಯದಲ್ಲಿ ಲಸಿಕೆ ಉತ್ಪಾದನೆಗೆ ಯಾವುದೇ ಕಂಪನಿ ಮುಂದೆ ಬಂದಿಲ್ಲ. ಲಸಿಕೆ ತಯಾರಿಸಲು ಯಾವುದಾದರೂ ಕಂಪನಿ ಮುಂದೆ ಬಂದರೆ ಅಂತಹ ಕಂಪನಿಗಳಿಗೆ ಸಹಾಯ ಮಾಡಲಾಗುವುದು: ಮುಖ್ಯ ಕಾರ್ಯದರ್ಶಿ ರವಿಕುಮಾರ್

ರಾಜ್ಯಕ್ಕೆ ಲಸಿಕೆ ಪೂರೈಕೆ ಆಗಿಲ್ಲ; ಯಾವುದಾದರೂ ಕಂಪೆನಿ ಉತ್ಪಾದಿಸಲು ಮುಂದೆ ಬಂದರೆ ಸಹಕರಿಸುತ್ತೇವೆ: ರವಿಕುಮಾರ್
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ (ಸಂಗ್ರಹ ಚಿತ್ರ)
Skanda
|

Updated on: May 12, 2021 | 11:55 AM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಇನ್ನೊಂದೆಡೆ ಕೊರೊನಾ ಲಸಿಕೆ ಅಭಾವ ಸೃಷ್ಟಿಯಾಗಿದೆ. ರಾಜ್ಯದ ಅನೇಕ ಲಸಿಕಾ ಕೇಂದ್ರಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಬಂದವರನ್ನೂ ವಾಪಾಸು ಕಳುಹಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಲಸಿಕೆ ಲಭ್ಯತೆ ಬಗ್ಗೆ ಮಾತನಾಡಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸ್ಪುಟ್ನಿಕ್ ಲಸಿಕೆ ನೀಡುವಂತೆ ಮಾತುಕತೆ ನಡೆಸಲಾಗಿದ್ದು, ಸದ್ಯದಲ್ಲೇ ಸ್ಪುಟ್ನಿಕ್ ಲಭ್ಯವಾಗಲಿದೆ. ರಾಜ್ಯದಲ್ಲಿ ಲಸಿಕೆ ಉತ್ಪಾದನೆಗೆ ಯಾವುದೇ ಕಂಪನಿ ಮುಂದೆ ಬಂದಿಲ್ಲ. ಲಸಿಕೆ ತಯಾರಿಸಲು ಯಾವುದಾದರೂ ಕಂಪನಿ ಮುಂದೆ ಬಂದರೆ ಅಂತಹ ಕಂಪನಿಗಳಿಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಯನ್ನೂ ಪೂರೈಸುವಂತೆ ಕೇಳಿದ್ದೇವೆ. ನಮಗೆ ಪೂರೈಕೆ ಆದಂತೆ ನಾವು ಲಸಿಕೆಯನ್ನು ನೀಡುತ್ತೇವೆ. ಕೇಂದ್ರ ಸರ್ಕಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ 15 ಲಕ್ಷ ಡೋಸ್ ಲಸಿಕೆ ಪೂರೈಕೆಯಾಗುತ್ತಿದ್ದು, ಈಗ ನಮಗೆ 8 ಲಕ್ಷ ಡೋಸ್ ಲಸಿಕೆ ಪೂರೈಕೆ ಮಾಡಿದ್ದಾರೆ. ನಮಗೆ ಲಸಿಕೆ ಬಂದಂತೆ ನಾವು ಜನರಿಗೆ ಕೊಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎರಡನೇ ಡೋಸ್​ ಲಸಿಕೆ ಮಾತ್ರ ನೀಡಲಾಗುತ್ತಿದೆ ಈಗ 2ನೇ ಡೋಸ್ ಮಾತ್ರ ಕೊಡುತ್ತಿದ್ದೇವೆ, ಹೊಸದಾಗಿ ಯಾರಿಗೂ ಲಸಿಕೆಯನ್ನು ಕೊಡುತ್ತಿಲ್ಲ. ಕೇವಲ ಕರ್ನಾಟಕದಲ್ಲಿ ಮಾತ್ರ ಇಂಥ ಸಮಸ್ಯೆ ಇಲ್ಲ. ದೇಶದ ಎಲ್ಲ ರಾಜ್ಯಗಳಲ್ಲಿಯೂ ಸಮಸ್ಯೆ ಆಗಿದೆ. ನಾವು 3 ಕೋಟಿ ಡೋಸ್‌ಗೆ ಬೇಡಿಕೆಯನ್ನು ಇಟ್ಟಿದ್ದೇವೆ. ಆದರೆ ರಾಜ್ಯಕ್ಕೆ ಈಗ 7 ಲಕ್ಷ ಡೋಸ್‌ ಮಾತ್ರ ಬಂದಿದೆ. ರಾಜ್ಯದ 200 ಕಡೆ ಲಸಿಕೆಯನ್ನು ಸಂಗ್ರಹ ಮಾಡಿದ್ದೇವೆ. ರಾಜ್ಯಕ್ಕೆ 6 ಕೋಟಿ ಡೋಸ್ ಬೇಕಾಗಿದೆ. 45 ವರ್ಷಕ್ಕಿಂತ ಕೆಳಗಿನವರಿಗೆ ರಾಜ್ಯ ಸರ್ಕಾರದಿಂದ ಲಸಿಕೆ ಕೊಡಬೇಕಾಗಿದ್ದು, ನಮಗೆ ಲಸಿಕೆ ಕೊಡುವುದಕ್ಕೆ ಸಮಯ ಬೇಕಾಗುತ್ತದೆ ಎಂದು ರವಿಕುಮಾರ್​ ತಿಳಿಸಿದ್ದಾರೆ.

ನಾವು ಕೇಂದ್ರ ಸರ್ಕಾರದ ಅನುಮತಿ ಪಡೆದು ಲಸಿಕೆ ನೀಡಬೇಕು. ಕಂಪನಿಗಳು ರಾಜ್ಯಕ್ಕೂ ಲಸಿಕೆಯನ್ನು ಪೂರೈಸಬೇಕಾಗಿದೆ. ಉತ್ಪಾದನೆಯಾಗುವ ಲಸಿಕೆಯಲ್ಲಿ ಶೇ.50ರಷ್ಟು ಮಾರಾಟ ಮಾಡಿ ಉಳಿದ ಶೇ.50ರಷ್ಟು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗಿದೆ. ಹೀಗಾಗಿ ಶೇ.50ರಷ್ಟು ಲಸಿಕೆ ಉತ್ಪಾದನೆಯಲ್ಲಿ ರಾಜ್ಯ ಸರ್ಕಾರಗಳು ನಿಭಾಯಿಸಬೇಕಾಗುತ್ತದೆ. ನಮ್ಮ ಬಳಿ ವ್ಯಾಕ್ಸಿನ್ ಇದ್ದಿದ್ದರೆ ಹಾಕುತ್ತಿದ್ದೆವು. ಆದರೆ, ಏಪ್ರಿಲ್ 2ನೇ ವಾರದಲ್ಲಿ ಲಸಿಕೆಗೆ ಆರ್ಡರ್ ನೀಡಿದ್ದು, ಮೇ 1ರಿಂದ ನಮಗೆ ಪೂರೈಕೆ ಮಾಡುತ್ತಿದ್ದಾರೆ. ಸದ್ಯ ಬೇರೆ ದೇಶಗಳಲ್ಲಿ ಉತ್ಪಾದಿಸುವ ಲಸಿಕೆ ಆಮದಿಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜತೆಗೆ, 1 ಕೋಟಿ ಡೋಸ್ ನೀಡಲು ಭಾರತ್ ಬಯೋಟೆಕ್‌ಗೆ ಹಾಗೂ 2 ಕೋಟಿ ಡೋಸ್ ನೀಡಲು ಸೆರಮ್‌ಗೆ ಬೇಡಿಕೆ ಇಟ್ಟಿದ್ದೇವೆ. ಲಸಿಕೆ ತರಿಸಿಕೊಳ್ಳುವುದಕ್ಕೆ ಸಕಲ ಪ್ರಯತ್ನವನ್ನೂ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇನ್ನೂ 3 ದಿನ ರಾಜ್ಯದಲ್ಲಿ ಕೊರೊನಾ ಲಸಿಕೆ ಸಿಗೋದು ಅನುಮಾನ; ಕೇಂದ್ರ ಸರ್ಕಾರ ಹೇಳಿದಷ್ಟೇ ಪೂರೈಕೆ ಸಾಧ್ಯ ಎನ್ನುತ್ತಿವೆ ಸಂಸ್ಥೆಗಳು