Covid BF.7 ಸೋಂಕು ಪತ್ತೆಯಾದ ರೋಗಿಗಳಿಗೆ ರಾಜ್ಯದಲ್ಲಿ ಉಚಿತ ಚಿಕಿತ್ಸೆ: ಆರ್ ಅಶೋಕ್
ಕೊರೊನಾ ರೂಪಾಂತರ ತಳಿ ಬಿಎಫ್.7 ಸೋಂಕು ಪತ್ತೆಯಾದ ರೋಗಿಗಳಿಗೆ ರಾಜ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ

ಬೆಂಗಳೂರು: ದೇಶದಲ್ಲಿ ಕೊರೊನಾ ರೂಪಾಂತರ ತಳಿ ಬಿಎಫ್.7 ಸೋಂಕು ಪತ್ತೆಯಾಗಿದ್ದು, ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ (Mock Drill) ಮಾಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಬೆನ್ನಲ್ಲೇ ಕೊರೊನಾ ರೂಪಾಂತರ ತಳಿ ಬಿಎಫ್.7 (BF. 7 Variant)ಸೋಂಕು ಪತ್ತೆಯಾದ ರೋಗಿಗಳಿಗೆ ರಾಜ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ (R Ashok) ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್ ನೌ ವರದಿ ಮಾಡಿದೆ.
ಇನ್ನೂ ಬಿಎಫ್.7 ಸೋಂಕು ಪತ್ತೆಯಾದ ರೋಗಿಗಳನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಾಗೇ ನಗರದಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದರು.
ಇದನ್ನ ಓದಿ: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ; ಕೋರ್ಬಿವ್ಯಾಕ್ಸ್ ಪಡೆಯಲು ಜನರ ನಕಾರ
ನಗರದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದರೆ, ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಕೂಡ ಆಸ್ಪತ್ರೆಯಲ್ಲಿನ ಹಾಸಿಗೆ ಲಭ್ಯತೆ ಕರಿತು ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಬೇಕು. ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆ ಲಭ್ಯತೆ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಆರೋಗ್ಯ ಇಲಾಖೆ ನಿನ್ನೆ (ಡಿ.27) ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಿದೆ. ಈ ಮೂಲಕ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಮಾನಿಟರ್ ಮತ್ತು ಆಕ್ಸಿಜನ್ ಬೆಡ್ಗಳ ಕುರಿತು ಮಾಹಿತಿ ಸಂಗ್ರಹಿಸಿದೆ. ಹಾಗೇ ಬಿಬಿಎಂಪಿ ಕೂಡ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಆಕ್ಸಿಜನ್ ಶೇಖರಣಾ ಸಾಮರ್ಥ್ಯದ ಬಗ್ಗೆ ವರದಿ ಪಡೆದುಕೊಂಡಿದೆ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Wed, 28 December 22




