ಬೆಂಗಳೂರು, (ಜುಲೈ 31): ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಕಾನೂನುಬಾಹಿರ ಡಿನೋಟಿಫಿಕೇಷನ್ಗಳ ಆರೋಪಗಳು ಬಂದಿದ್ದವು. ಈ ಆರೋಪಗಳ ಬಗ್ಗೆ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಲು ಮುಂದಾಗಿದ್ದ ವಕೀಲ ಸಿರಾಜಿನ್ ಬಾಷಾ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ 2011 ರಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು. ಇದಾದ ಮೇಲೆ ಇಕ್ಕಟ್ಟಿಗೆ ಸಿಲುಕಿದ ಬಿಎಸ್ವೈ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು. ಯಾಕಂದ್ರೆ ಪ್ರಾಸಿಕ್ಯೂಷನ್ಗೆ ಅನುಮತಿ ಪಡೆದ ನಂತರ ವಕೀಲ ಸಿರಾಜಿನ್ ಬಾಷಾ ಯಡಿಯೂರಪ್ಪ ವಿರುದ್ಧ 5 ಖಾಸಗಿ ದೂರುಗಳನ್ನು ಬೆಂಗಳೂರಿನ ಲೋಕಾಯುಕ್ತ ವಿಶೇಷ ಕೋರ್ಟ್ಗೆ ಸಲ್ಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಯಡಿಯೂರಪ್ಪಗೆ ಸಮನ್ಸ್ ಜಾರಿಗೊಳಿಸಿತ್ತು. ಕೋರ್ಟ್ಗೆ ಹಾಜರಾಗಿ ಬಿಎಸ್ವೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೆ, ಜಾಮಿನು ಅರ್ಜಿ ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ಕೋರ್ಟ್ ಯಡಿಯೂರಪ್ಪರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದಾದ ಬಳಿಕ ಮುಂದೆ ನಡೆದಿದ್ದೆಲ್ಲ ಒಂದು ಇತಿಹಾಸ. ಇದೀಗ ಮತ್ತದೇ ಇತಿಹಾಸ ಮರುಕಳಿಸುತ್ತದೆಯಾ ಎಂಬ ಪ್ರಶ್ನೆ ಮೂಡಿದೆ.
ಎಲ್ಲರ ಚಿತ್ತ ರಾಜಭವನದತ್ತ ಹರಿಯಲು ಒಂದು ಕಾರಣ ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ವರದಿ ಕೇಳಿರುವ ವಿಚಾರ. ಹೌದು, ಜುಲೈ 26 ರಂದು ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ ಸುದೀರ್ಘವಾದ ದೂರೊಂದನ್ನು ಹಿಡಿದು ರಾಜ್ಯಪಾಲರ ಬಾಗಿಲು ತಟ್ಟಿದ್ದರು. ಸಿಎಂ ಸಿದ್ದರಾಮಯ್ಯ ವಿರುದ್ಧದ ಟಿಜೆ ಅಬ್ರಹಾಂರ ದೂರನ್ನು ಮುಂದಿಟ್ಟುಕೊಂಡು ರಾಜ್ಯಪಾಲರು ಸುದೀರ್ಘ ಒಂದೂವರೆ ಗಂಟೆಗಳ ಕಾಲ ಮಾಹಿತಿ ಪಡೆದುಕೊಂಡಿದ್ದಾರೆ. ದೂರಿನಲ್ಲಿ ಪ್ರಸ್ತಾಪವಾದ ಅಂಶ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯುಷನ್ಗೆ ಅನುಮತಿ ನೀಡಬೇಕು ಎಂಬುದು. ಇದೇ ಪ್ರಾಸಿಕ್ಯುಷನ್ಗೆ ಅನುಮತಿ ನೀಡಬೇಕು ಎಂಬ ಅಂಶ ರಾಜ್ಯಪಾಲರ ನಿರ್ಧಾರದ ಕಡೆ ಎಲ್ಲರೂ ಗಮನ ಹರಿಸುವಂತೆ ಮಾಡಿದೆ.
ದೂರಿನ ಮೇಲೆ ಗಂಭೀರವಾಗಿ ಕಣ್ಣಾಡಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣಾ ಅನುಮತಿ ಬಗ್ಗೆ ಕಾನೂನು ತಜ್ಞರಿಂದ ವರದಿ ಪಡೆದಿದ್ದಾರೆ. ಟಿ.ಜೆ.ಅಬ್ರಾಹಂ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ವರದಿ ರಾಜ್ಯಪಾಲರ ಕೈ ಸೇರಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪ್ರಮುಖ ಪ್ರಕರಣಗಳನ್ನ ಉಲ್ಲೇಖಿಸಿ ಕಾನೂನು ತಜ್ಞರಿಂದ ವರದಿ ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿ ಸಂತೋಷ್ ಹೆಗಡೆ ನೀಡಿದ್ದ ತೀರ್ಪುನ್ನೂ ಉಲ್ಲೇಖಿಸಲಾಗಿದೆ. ಈ ಬಗ್ಗೆ ಟಿವಿನೈನ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು ಮಹತ್ವದ ಬೆಳವಣಿಗೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.
ಸದ್ಯ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೂ ವಿಷಯವನ್ನು ಮನದಟ್ಟು ಮಾಡಿ ಕೊಟ್ಟಿರುವ ಸಿದ್ದರಾಮಯ್ಯಗೆ ರಾಜಭವನದ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿಯೇ ಮುಂದಿನ ತಮ್ಮ ನಡೆ ಏನಾಗಿರಬೇಕು ಎಂಬ ಬಗ್ಗೆಯೂ ಸಿದ್ದರಾಮಯ್ಯ ಗಂಭೀರವಾಗಿ ಪ್ಲ್ಯಾನ್ ಮಾಡಿದ್ದಾರೆ. ನಾಳೆ (ಆಗಸ್ಟ್ 01) ಸಿಎಂ ನಿವಾಸ ಕಾವೇರಿಯಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಉಪಾಹಾರಕೂಟ ಆಯೋಜನೆ ಮಾಡಿದ್ದಾರೆ. ಬಳಿಕ ಸಚಿವ ಸಂಪುಟ ಸಭೆಯನ್ನೂ ಕರೆದಿರುವ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್ ಮೀಟಿಂಗ್ನಲ್ಲಿ ಮಹತ್ವದ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣಾ ಅನುಮತಿ ನೀಡದಂತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗಿಕರಿಸಲು ಚರ್ಚಿಸಲಾಗುತ್ತಿದೆ. ಒಂದು ಸಾಲಿನ ನಿರ್ಣಯ ಅಂಗೀಕರಿಸಲಿರುವ ಸಂಪುಟ ರಾಜಭವನದೊಂದಿಗೆ ಸಂಘರ್ಷಕ್ಕೆ ಇಳಿದರೂ ಆಶ್ಚರ್ಯವಿಲ್ಲ. ಈಗಾಗಲೇ ಕಾನೂನು ತಜ್ಞರಿಂದಲೂ ಅಭಿಪ್ರಾಯ ಸಂಗ್ರಹಿಸಿರುವ ಸಿದ್ದರಾಮಯ್ಯ, ಮೊನ್ನೆ ಶನಿವಾರ ಸುಪ್ರಿಂಕೋರ್ಟ್ನ ನ್ಯಾಯವಾದಿಗಳ ಜೊತೆಗೇ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದುಕೊಂಡೇ ತಮ್ಮ ಪರವಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಪಡೆದಿದ್ದರು. ಅಲ್ಲದೇ ಸಂಪುಟ ಸಭೆಯಲ್ಲಿ ಸ್ವತಃ ಯಡಿಯೂರಪ್ಪ ಭಾಗಿಯಾಗಿದ್ದರು. ಬಳಿಕ ಇದನ್ನು ಹೈಕೋರ್ಟ್ ಪ್ರಶ್ನಿಸಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯ ನಾಳಿನ ಸಂಪುಟ ನಿರ್ಣಯದಿಂದ ಹೊರಗುಳಿಯಲಿದ್ದಾರೆ. ಆದಾಯಮೀರಿ ಆಸಕ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಹಿಂಪಡೆಯುವ ನಿರ್ಣಯ ಕೈಗೊಳ್ಳುವ ಡಿಕೆ ಶಿವಕುಮಾರ್ ಅವರು ಸಹ ಸಚಿವ ಸಂಪುಟದಿಂದ ಹೊರಗಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಬಿಜೆಪಿ ಅಧ್ಯಕ್ಷ, ಎಚ್ಡಿ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಚದುರಂಗದ ಆನೆ, ಕುದುರೆ, ಒಂಟೆ, ಮಂತ್ರಿಗಳೆಲ್ಲ ಏಕಕಾಲದಲ್ಲಿ ಒಂದೇ ಕಾರಣಕ್ಕೆ ಅನೇಕ ವ್ಯಕ್ತಿಗಳನ್ನ ದೆಹಲಿಯಲ್ಲೇ ಭೇಟಿಯಾಗುತ್ತಿರುವುದು ರಾಜ್ಯ ರಾಜಕೀಯದಲ್ಲೇ ಮೊದಲು ಎನ್ನಬಹುದೇನೋ. ಹೀಗಾಗಿ ಈ ಆಟ ಖಂಡಿತ ಸಣ್ಣದಲ್ಲ. ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯುಷನ್ಗೆ ಅನುಮತಿ ನೀಡಿದ್ದೇ ಆದರೆ ರಾಜಕೀಯ ಸಂಚಲನ ಸೃಷ್ಟಿಸುವುದು ನಿಶ್ಚಿತ. ಒಂದು ಹಂತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದರೂ ಅಚ್ಚರಿ ಪಡಬೇಕಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:19 pm, Wed, 31 July 24