ಬೆಂಗಳೂರು, (ಮಾರ್ಚ್ 09): ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಬಂಧನ ಹಾಗೂ ದುಬೈನಿಂದ (Dubai) ಚಿನ್ನ ಕಳ್ಳ ಸಾಗಣೆ (gold smuggling case) ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಚಿನ್ನ ಕಳ್ಳ ಸಾಗಣೆ ಮಾಡಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಪ್ರಕರಣವನ್ನು ಡಿಆರ್‌ಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಬಗೆದಷ್ಟು ಹಲವು ಕುತೂಹಲಕಾರಿ ಮಾಹಿತಿ ಹೊರಬರುತ್ತಿವೆ. ನಟಿ ರನ್ಯಾ ಚಿನ್ನ ಕಳ್ಳಸಾಗಣೆ ಮಾಡುವ ಹಿಂದೆ ಗ್ಯಾಂಗ್ ಇದೆಯೆಂಬ ಅನುಮಾನದ ಶಂಕೆ ಮೇರೆಗೆ ತನಿಖೆ ನಡೆಸಿದಾಗ ಈ ಕೃತ್ಯದ ಹಿಂದೆ ಹಲವು ಪ್ರಭಾವಿ ವ್ಯಕ್ತಿಗಳು ಇರುವ ಸುಳಿವು ಪತ್ತೆಯಾಗಿದ್ದು, ರನ್ಯಾ ರಾವ್‌ಗೆ ರಾಜಕೀಯ ವ್ಯಕ್ತಿಗಳಿಗೂ ಇದೆ ದೊಡ್ಡ ನಂಟು ಇರುವುದರಿಂದ ಅವರ ಕಂಪನಿಗೆ ಸರ್ಕಾರದಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ.
ಹೌದು…. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರನ್ಯಾ ರಾವ್ ಅವರನ್ನ ಬಂಧಿಸಿ DRI ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯ ವೇಳೆ ಆರೋಪಿಯ ಈ ಕೃತ್ಯದ ಹಿಂದೆ ಹಲವು ಪ್ರಭಾವಿ ವ್ಯಕ್ತಿಗಳು ಇರುವ ಸುಳಿವು ಪತ್ತೆಯಾಗಿದೆ. ಆರೋಪಿತೆ ನಟಿ ರನ್ಯಾ ರಾವ್‌ಗೆ ಹಲವು ರಾಜಕೀಯ ನಾಯಕರ ಜೊತೆ ಸಂಪರ್ಕ ಇದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಪ್ರಭಾವಿ ರಾಜಕಾರಣಿಯ ಹೆಸರು ಕೂಡ ಇದರಲ್ಲಿ ಕೇಳಿ ಬಂದಿದೆ.
ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಕರ್ನಾಟಕ ಸರ್ಕಾರದಿಂದ 12 ಎಕರೆ ಜಮೀನು ಮಂಜೂರಾಗಿದೆ. ರನ್ಯಾ ಅವರು ksiroda India private limited ಎಂಬ ಕಂಪನಿ ನಿರ್ದೇಶಕಿಯಾಗಿದ್ದು, ಈ ಕಂಪನಿಗೆ 2023ರಲ್ಲಿ KIADB ಯಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸರ್ಕಾರ ಜಮೀನು ಮಂಜೂರು ಮಾಡಿರುವ ದಾಖಲೆ ಟಿವಿ9ಗೆ ಲಭ್ಯವಾಗಿದೆ. ಒಬ್ಬ ನಟಿ ನಿರ್ದೇಶಕಿಯಾಗಿರುವ ಕಂಪನಿಗೆ 12 ಎಕರೆ ಜಮೀನು ಮಂಜೂರಾಗಿದ್ದು ಹೇಗೆ? ಎಂಬ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.
ಸಚಿವ ಹುದ್ದೆ ಅಲಂಕರಿಸಿರುವ ಆ ರಾಜಕಾರಣಿಗೂ ರನ್ಯಾ ರಾವ್ ಪ್ರಕರಣದಲ್ಲಿ ಸಂಕಷ್ಟ ಎದುರಾಗುವ ಭೀತಿ ಇದೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಲ್ಲಿ ರನ್ಯಾ ರಾವ್ ಅದ್ಧೂರಿ ವಿವಾಹ ಮಹೋತ್ಸವ ನಡೆದಿತ್ತು. ಆ ಮದ್ವೆಯಲ್ಲಿ ಪ್ರಭಾವಿ ಸಚಿವರು ಭಾಗಿಯಾಗಿದ್ದರು. ಇದೀಗ ನಟಿ ರನ್ಯಾ ರಾವ್ ಬಂಧನವಾಗುತ್ತಿದ್ದಂತೆ ಆ ಸಚಿವರು ತಬ್ಬಿಬ್ಬಾಗಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂಧನವಾಗುತ್ತಿದ್ದಂತೆ ಪ್ರಭಾವಿ ಸಚಿವರು ಈ ಕೇಸ್ ಅನ್ನು ಮ್ಯಾನೇಜ್ ಮಾಡಲು ತೆರೆಮರೆಯಲ್ಲಿ ಕಸರತ್ತು ಮಾಡಿದ್ದಾರೆ. ಆದರೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಈ ಕೇಸ್ ತನಿಖೆ ಮುಂದುವರಿಸಿದ್ದಾರೆ. ರನ್ಯಾ ರಾವ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಆರ್‌ಐ ಅಧಿಕಾರಿಗಳು ಈ ಪ್ರಕರಣದ ಹಿಂದೆ ಇರುವ ಪ್ರಭಾವಿ ಕೈಗಳ ಜಾಡು ಪತ್ತೆ ಮಾಡುತ್ತಿದ್ದಾರೆ. ಒಂದು ವೇಳೆ ಮಹತ್ವದ ಸಾಕ್ಷಿಗಳು ಪತ್ತೆಯಾದ್ರೆ ಪ್ರಭಾವಿ ರಾಜಕಾರಣಿಯ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.
ಹೀಗಾಗಿ ಆ ಪ್ರಭಾವಿ ಸಚಿವ ಯಾರು? ಆ ಸಚಿವ ಈ ನಟಿ ರನ್ಯಾ ರಾವ್‌ಗೆ ಹೇಗೆ ಲಿಂಕ್? ರನ್ಯಾ ರಾವ್ ಅವರಿಂದ ಸಚಿವ ಚಿನ್ನ ಏನಾದರೂ ಕೊಂಡುಕೊಂಡಿದ್ದಾರಾ? ಅಂತೆಲ್ಲಾ ಕುತೂಹಲ ಮೂಡಿಸಿದ್ದು, ಈ ಬಗ್ಗೆ ತನಿಖೆಯಿಂದ ಆಚೆ ಬರಬೇಕಿದೆ.
ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾ.3ರ ಸೋಮವಾರ ರಾತ್ರಿ 7ಗಂಟೆ ಸುಮಾರಿಗೆ ಬಂದಿಳಿದ ರನ್ಯಾರವರನ್ನು ಡಿಆರ್‌ಇ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ತಪಾಸಣೆಗೊಳಪಡಿಸಿದಾಗ 12 ಕೋಟಿ ರು. ಮೌಲ್ಯದ 14.8 ಕೆ.ಜಿ. ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ತರುವಾಯ ರನ್ಯಾ ಮನೆ ಮೇಲೆ ದಾಳಿ ನಡೆಸಿ ಡಿಆರ್‌ಐ ಪರಿಶೀಲಿಸಿದಾಗ 2.06 ಕೋಟಿ ಮೌಲ್ಯದ ಚಿನ್ನ ಹಾಗೂ 2.16 ಕೋಟಿ ನಗದು ಪತ್ತೆಯಾಗಿತ್ತು. ಒಟ್ಟಾರೆ ನಟಿ ರನ್ಯಾ ಅವರಿಂದ 17.16 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದವು. ಪ್ರಕರಣದ ತನಿಖೆಯನ್ನು ಡಿಆರ್‌ಐ ಅಧಿಕಾರಿಗಳು ಮುಂದುವರೆಸಿದ್ದಾರೆ. ಅಲ್ಲದೇ ಇದೀಗ ಈ ಪ್ರಕರಣದಲ್ಲಿ ಸಿಬಿಐ ಸಹ ಎಂಟ್ರಿಯಾಗಿದೆ.
Published On - 11:41 am, Sun, 9 March 25